ಕನ್ನಡದಲ್ಲಿ ಮೋಹನ್ ಲಾಲ್ ಆ ಕನಸು ನನಸಾಗಲೇ ಇಲ್ಲ!
ಮಲಯಾಳಂ ನಟ ಮೋಹನ್ ಲಾಲ್ ಕನ್ನಡ ಸಿನಿರಸಿಕರಿಗೂ ಚಿರಪರಿಚಿತ ಹೆಸರು. ಪುನೀತ್ ರಾಜ್‌ಕುಮಾರ್ ಜೊತೆ 'ಮೈತ್ರಿ' ಚಿತ್ರದಲ್ಲಿ ಕೂಡ ನಟಿಸಿದ್ದರು. ಮಾಲಿವುಡ್ ಬಾಕ್ಸಾಫೀಸ್ ಕಿಂಗ್ ಆಗಿ ಮೋಹನ್ ಲಾಲ್ ಮೆರೆಯುತ್ತಿದ್ದಾರೆ. ಎರಡೇ ತಿಂಗಳ ಅಂತರದಲ್ಲಿ 'ಎಂಪುರಾನ್' ಹಾಗೂ 'ಥುಡರಂ' ರೀತಿಯ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ಕೊಟ್ಟಿದ್ದಾರೆ.
ನೂರಾರು ಸಿನಿಮಾಗಳಲ್ಲಿ ಮೋಹನ್ ಲಾಲ್ ನಟಿಸಿ ಗೆದ್ದಿದ್ದಾರೆ. ಅವಕಾಶ ಸಿಕ್ಕಾಗಲೆಲ್ಲಾ ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ವಯಸ್ಸು 60 ದಾಟಿದ್ರು ಇವತ್ತಿಗೂ ಯುವ ನಟಿರಿಗೂ ಸೆಡ್ಡು ಹೊಡೆಯುತ್ತಿದ್ದಾರೆ. ವರ್ಷಕ್ಕೆ ನಾಲ್ಕೈದು ಸಿನಿಮಾಗಳಲ್ಲಿ ನಟಿಸಿ ಹುಬ್ಬೇರಿಸುತ್ತಾರೆ. ಕೆಲ ನಟ ನಟರು ವರ್ಷಕ್ಕೆ ಒಂದು ಸಿನಿಮಾ ಮಾಡಲು ತಿಣುಕಾಡುತ್ತಾರೆ. ಅಂತಹವರು ಮೋಹನ್ ಲಾಲ್ ಹಾಗೂ ಮಮ್ಮುಟ್ಟಿ ಅವರಿಂದ ನೋಡಿ ಕಲಿಯಬೇಕಿದೆ.

1980ರಲ್ಲಿ ಚಿತ್ರರಂಗಕ್ಕೆ ಬಂದಿದ್ದ ಮೋಹನ್‌ಲಾಲ್ ಕೇವಲ 13 ವರ್ಷಗಳಲ್ಲಿ 200 ಸಿನಿಮಾಗಳಲ್ಲಿ ನಟಿಸಿದ್ದರು. ಈಗಾಗಲೇ 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಇವತ್ತಿಗೂ ಮಲಯಾಳಂನ ನಂಬರ್ 1 ನಟ ಎನಿಸಿಕೊಂಡಿದ್ದಾರೆ. ಮಾಲಿವುಡ್‌ನಲ್ಲಿ ಮೊದಲ 100 ಕೋಟಿ ರೂ. ಕಲೆಕ್ಷನ್ ಸಿನಿಮಾ(ಪುಲಿ ಮುರುಗನ್) ಕೊಟ್ಟುವರು ಮೋಹನ್ ಲಾಲ್. ಅಭಿಮಾನಿಗಳಿಂದ ಕಂಪ್ಲೀಟ್ ಆಕ್ಟರ್ ಎಂಬ ಬಿರುದು ಅವರಿಗೆ ಸಿಕ್ಕಿದೆ.
ಅಂದಹಾಗೆ 'ಮೈತ್ರಿ' ಚಿತ್ರದಲ್ಲಿ ನಟಿಸುವ ಮುನ್ನ ಆದಿತ್ಯಾ ಹಾಗೂ ರಕ್ಷಿತಾ ನಟಿಸಿದ 'ಲವ್' ಚಿತ್ರದಲ್ಲಿ ಮೋಹನ್ ಲಾಲ್ ಮಿಂಚಿದ್ದರು. ಅತಿಥಿ ಪಾತ್ರದಲ್ಲಿ ನಟಿಸಿ ಗಮನ ಸೆಳೆದಿದ್ದರು. ಇನ್ನು ಡಾ. ರಾಜ್‌ಕುಮಾರ್ ಅವರ ದೊಡ್ಡ ಅಭಿಮಾನಿ ಮೋಹನ್ ಲಾಲ್. ಅಣ್ಣಾವ್ರ ಜೊತೆ ಒಳ್ಳೆ ಒಡನಾಟ ಕೂಡ ಇತ್ತು. ಡಾ. ರಾಜ್ ಜೊತೆ ನಟಿಸುವ ಆಸೆ ಇತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಈಗ ಅವರ ಮಗ ಪುನೀತ್ ರಾಜ್‌ಕುಮಾರ್ ಜೊತೆ ನಟಿಸಿದ್ದೇನೆ ಎಂದು ಅವರು ಹೇಳಿದ್ದರು.

'ಮೈತ್ರಿ' ಚಿತ್ರದ ಸುದ್ದಿಗೋಷ್ಠಿಗೆ ಹಾಜರಾಗಲು ಸಾಧ್ಯವಾಗದೇ ಇದ್ದಾಗ ಮೋಹನ್ ಲಾಲ್ ಒಂದು ವೀಡಿಯೋ ಬೈಟ್ ಕಳುಹಿಸಿದ್ದರು. "ಕ್ಷಮಿಸಿ, ಸಿನಿಮಾ ಚಿತ್ರೀಕರಣದ ಬ್ಯುಸಿ ಶೆಡ್ಯೂಲ್‌ನಿಂದ ಬರಲು ಸಾಧ್ಯವಾಗಲಿಲ್ಲ. ಮೈತ್ರಿ ಚಿತ್ರದಲ್ಲಿ ನಾನು ವಿಜ್ಞಾನಿಯ ಪಾತ್ರದಲ್ಲಿ ನಟಿಸಿದ್ದೇನೆ. ಇಂತಹ ಅವಕಾಶ ಕೊಟ್ಟಿದ್ದಕ್ಕೆ ನಿರ್ದೇಶಕರು, ಪುನೀತ್ ರಾಜ್‌ಕುಮಾರ್ ಅವರಿಗೆ ಧನ್ಯವಾದ. ನಾನು ರಾಜ್‌ಕುಮಾರ್ ಸರ್ ಅವರಿಗೆ ಆತ್ಮೀಯನಾಗಿದ್ದೆ. ನನಗೆ ಅವರೊಟ್ಟಿಗೆ ನಟಿಸುವ ಆಸೆ ಇತ್ತು. ಅದು ಸಾಧ್ಯವಾಗಲಿಲ್ಲ. ಆದರೆ ಪುನೀತ್ ರಾಜ್‌ಕುಮಾರ್ ಜೊತೆ ನಟಿಸಿದ್ದು ಸಂತಸ ತಂದಿದೆ" ಎಂದಿದ್ದರು.
ಮೋಹನ್ ಲಾಲ್ ಒಮ್ಮೆ ಕನ್ನಡದ "ಎಂದೆಂದೂ ನಿನ್ನನು ಮರೆತು" ಹಾಡು ಹಾಡಿದ್ದ ವೀಡಿಯೋ ವೈರಲ್ ಆಗಿತ್ತು. 'ಎರಡು ಕನಸು' ಚಿತ್ರದ ಎವರ್‌ಗ್ರೀf ಸಾಂಗ್ ಇದು. ಅಣ್ಣಾವ್ರು ಹಾಗೂ ಮಂಜುಳ ಈ ಹಾಡಿನಲ್ಲಿ ಮಿಂಚಿದ್ದರು. ಈ ಹಾಡನ್ನು ಮೋಹನ್ ಲಾಲ್ ಗುನುಗಿದ್ದು ಕನ್ನಡ ಸಿನಿರಸಿಕರ ಗಮನ ಸೆಳೆದಿತ್ತು.
ಸದ್ಯ ತೆಲುಗಿನ 'ಕಣ್ಣಪ್ಪ' ಚಿತ್ರದಲ್ಲಿ ಮೋಹನ್ ಲಾಲ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ ಕನ್ನಡಕ್ಕೂ ಡಬ್ ಆಗಿ ತೆರೆಗೆ ಬರಲಿದೆ. ಆಗಸ್ಟ್ 28ಕ್ಕೆ ಅವರ 'ಹೃದಯಪೂರ್ವಂ' ಎಂಬ ಮಲಯಾಳಂ ಸಿನಿಮಾ ಬಿಡುಗಡೆ ಆಗಲಿದೆ. ಕನ್ನಡ ನಿರ್ದೇಶಕ ನಂದ ಕಿಶೋರ್ ಆಕ್ಷನ್ ಕಟ್ ಹೇಳಿರುವ 'ವೃಷಭ' ಚಿತ್ರದಲ್ಲಿ ಕೂಡ ಮೋಹನ್ ಲಾಲ್ ನಟಿಸಿದ್ದಾರೆ. ಜಿತು ಜೋಸೆಫ್ ನಿರ್ದೇಶನದಲ್ಲಿ 'ರಾಮ್' ಎಂಬ ಸಿನಿಮಾ ಕೂಡ ಘೋಷಣೆಯಾಗಿದೆ. ಮತ್ತಷ್ಟು ಕಥೆಗಳನ್ನು ಅವರು ಕೇಳುತ್ತಿದ್ದಾರೆ. ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications











