2022 ರ ಬಹುನಿರೀಕ್ಷಿತ ಕನ್ನಡ ಸಿನಿಮಾಗಳಿವು
2021 ಮುಗಿದಿದೆ. ಚಂದನವನಕ್ಕೆ ಈ ವರ್ಷ ಮಿಶ್ರ ಫಲದ ವರ್ಷವಾಗಿತ್ತು. 2020ರಷ್ಟು ಭೀಕರ ವರ್ಷ ಇದಾಗಿರಲಿಲ್ಲವಾದರೂ 2020ರ ಸಾಕಷ್ಟು ಸಮಸ್ಯೆಗಳು 2021ಕ್ಕೂ ಮುಂದುವರೆದವು. ಆದರೂ ಹಾಗೋ-ಹೀಗೋ ಏದುಸಿರು ಬಿಡುತ್ತಾ 2021ನ್ನು ಸ್ಯಾಂಡಲ್‌ವುಡ್ ಮುಗಿಸಿದೆ.
ಇದೀಗ 2022 ಬಂದಿದೆ. ಸಾಕಷ್ಟು ಕನಸು, ನಿರೀಕ್ಷೆ, ಉತ್ಸಾಹಗಳೊಂದಿಗೆ 2022ನ್ನು ಸ್ವಾಗತಿಸಲಾಗುತ್ತಿದೆ. ಚಂದನವನ ಸಹ ಈ ಕಳೆದ ಎರಡು ವರ್ಷಗಳಲ್ಲಿ ಆದ ಗಾಯಗಳೆಲ್ಲ ಮರೆಯುವಂಥಹಾ ಖುಷಿ 2022ಕ್ಕೆ ಪ್ರಾಪ್ತಿ ಆಗಲಿ ಎಂಬ ನಿರೀಕ್ಷೆಯಲ್ಲಿದೆ.
ಸಿನಿ ಪ್ರೇಮಿಗಳಿಗೂ 2022ರ ಸಾಕಷ್ಟು ನಿರೀಕ್ಷೆ ಇದೆ. 2022ರ ಆರಂಭದಲ್ಲಿ ಕೆಲವು ಒಳ್ಳೆಯ ಕನ್ನಡ ಸಿನಿಮಾಗಳು ತೆರೆಗೆ ಬರಲಿವೆ. ಹಾಗಾಗಿಯೇ 2022 ರ ಬಗ್ಗೆ ಸಿನಿ ಪ್ರೇಮಿಗಳಿಗೆ ನಿರೀಕ್ಷೆ ಇದೆ. 2022ರಲ್ಲಿ ನಿರೀಕ್ಷೆ ಹುಟ್ಟಿಸಿರುವ ಕನ್ನಡ ಸಿನಿಮಾಗಳ ಪಟ್ಟಿ ಇಲ್ಲಿದೆ ಗಮನಿಸಿ.

ಕನ್ನಡಿಗರು ಕಾಯುತ್ತಿರುವ ಸಿನಿಮಾ
2022ರಲ್ಲಿ ಬಹಳ ನಿರೀಕ್ಷಿತ ಸಿನಿಮಾ ಅಥವಾ ಕಂಟೆಂಟ್ ಎಂದರೆ ಅದು ಪುನೀತ್ ರಾಜ್‌ಕುಮಾರ್ ಅವರ ಕನಸಿನ ಪ್ರಾಜೆಕ್ಟ್ 'ಗಂಧದ ಗುಡಿ'. ಪುನೀತ್ ರಾಜ್‌ಕುಮಾರ್ ನಿಧನಕ್ಕೆ ಮುನ್ನ ಕರ್ನಾಟಕದ ಹಲವು ಪ್ರದೇಶಗಳನ್ನು ಸುತ್ತಿ, ಕಾಡು-ಮೇಡು ಅಲೆದು ಟ್ರಾವೆಲ್ ಸಿನಿಮಾ ಮಾಡಿಕೊಂಡು ಬಂದಿದ್ದರು. ಇದರ ಟ್ರೈಲರ್ ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿದ್ದು, ಪೂರ್ಣ ಸಿನಿಮಾ 2022ರ ಫೆಬ್ರವರಿ ಅಥವಾ ಏಪ್ರಿಲ್ ತಿಂಗಳಲ್ಲಿ ಬಿಡುಗಡೆ ಆಗಲಿದೆ. ಈ ಜರ್ನಿಯಲ್ಲಿ ಪುನೀತ್ ಜೊತೆಗೆ ಅಮೋಘ ವರ್ಷ ಸಹ ಜೊತೆಗಿದ್ದರು. ಇದು 2022ರ ಕನ್ನಡದ ಬಹು ನಿರೀಕ್ಷಿತ ಸಿನಿಮಾ ಎನಿಸಿಕೊಂಡಿದೆ. ಜೊತೆಗೆ ಪುನೀತ್ ನಟನೆಯ ಕೊನೆಯ ಸಿನಿಮಾ 'ಜೇಮ್ಸ್' ಸಹ ಇದೇ ವರ್ಷ ತೆರೆಗೆ ಬರುತ್ತಿದ್ದು ಅದರ ಬಗ್ಗೆಯೂ ನಿರೀಕ್ಷೆ ಹೆಚ್ಚಿದೆ.

ಭಾರತದೆಲ್ಲೆಡೆ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ 'ಕೆಜಿಎಫ್ 2'
ಯಶ್ ನಟನೆಯ 'ಕೆಜಿಎಫ್ 2' ಸಿನಿಮಾ ಕನ್ನಡದ ಮಾತ್ರವಲ್ಲ ದೇಶದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ಏಪ್ರಿಲ್ 14 ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. 2022ರ ದೇಶದ ಅತಿ ನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ 'ಕೆಜಿಎಫ್ 2' ಈಗಾಗಲೇ ಸ್ಥಾನ ಪಡೆದುಕೊಂಡಿದೆ. ಹಲವು ಬಿಡುಗಡೆ ದಿನಾಂಕಗಳನ್ನು ಮುಂದೂಡಿಕೊಂಡು ಇದೀಗ ಅಂತಿಮವಾಗಿ ಏಪ್ರಿಲ್ 14ಕ್ಕೆ ಬಿಡುಗಡೆ ಆಗಲಿದೆ 'ಕೆಜಿಎಫ್ 2'.

ಸುದೀಪ್ ನಟನೆಯ 'ವಿಕ್ರಾಂತ್ ರೋಣ'
ನಟ ಸುದೀಪ್ ನಟಿಸಿರುವ 'ವಿಕ್ರಾಂತ್ ರೋಣ' ಸಿನಿಮಾ ಸಹ ಬಹಳ ನಿರೀಕ್ಷೆ ಮೂಡಿಸಿದೆ. ನಿರೂಪ್ ಭಂಡಾರಿ ನಿರ್ದೇಶನದ ಈ ಸಿನಿಮಾದ ಟೀಸರ್, ಕೆಲವು ಪೋಸ್ಟರ್‌ಗಳು ಈಗಾಗಲೇ ಬಿಡುಗಡೆ ಆಗಿದ್ದು, ಅದ್ಧೂರಿ ಸೆಟ್, ಭಿನ್ನವಾದ ಕಾಸ್ಟೂಮ್, ಭಿನ್ನ ಕತೆಯನ್ನು ಸಿನಿಮಾ ಒಳಗೊಂಡಿದೆ. ಸುದೀಪ್ ಸಹ ಈ ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದು, ಪ್ಯಾನ್ ಇಂಡಿಯಾ ಸ್ಕೇಲ್‌ನಲ್ಲಿ ಸಿನಿಮಾವನ್ನು ಬಿಡುಗಡೆ ಮಾಡುತ್ತಿದ್ದಾರೆ ಹಾಗಾಗಿ ಸಿನಿಮಾದ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಈ ಸಿನಿಮಾ ಫೆಬ್ರವರಿ 24ಕ್ಕೆ ಬಿಡುಗಡೆ ಆಗಲಿದೆ.

ಶಿವಣ್ಣನ ಸಾಲು-ಸಾಲು ಸಿನಿಮಾಗಳು
ಶಿವರಾಜ್ ಕುಮಾರ್, ಡಾಲಿ ಧನಂಜಯ್ ಹಾಗೂ ಪೃಥ್ವಿ ಅಂಬರ್ ನಟಿಸಿರುವ 'ಭೈರಾಗಿ' ಸಿನಿಮಾ ಸಹ ಕುತೂಹಲ ಮೂಡಿಸಿದೆ. ಇದರ ಬಳಿಕ ಶಿವಣ್ಣ ಹಾಗೂ ರಿಷಬ್ ಶೆಟ್ಟಿ ಕಾಂಬಿನೇಶನ್ ಸಿನಿಮಾ ಸಹ ಕುತೂಹಲ ಕೆರಳಿಸಿದೆ. ತೆಲುಗಿನ ರಾಮ್ ಧುಲಿಪುಡಿ ನಿರ್ದೇಶನದ 'ನೀ ಸಿಗೊವರೆಗೆ' ಸಿನಿಮಾದಲ್ಲಿ ಶಿವಣ್ಣ ನಟಿಸುತ್ತಿದ್ದಾರೆ. ಅದರ ಬಳಿಕ ಹರ್ಷ ನಿರ್ದೇಶನದ 'ವೇದ' ಸಿನಿಮಾ ಸಹ ಸೆಟ್ಟೇರಲಿದೆ. ಇವುಗಳ ಜೊತೆಗೆ ಯೋಗರಾಜ್ ಭಟ್ ನಿರ್ದೇಶನದ ಸಿನಿಮಾದಲ್ಲಿ ಶಿವಣ್ಣ ನಟಿಸಲಿದ್ದಾರೆ. ಹಲವು ಸಿನಿಮಾಗಳಲ್ಲಿ ಶಿವರಾಜ್ ಕುಮಾರ್ ಈ ವರ್ಷ ತಮ್ಮನ್ನು ತೊಡಗಿಸಿಕೊಂಡಿದ್ದು ಶಿವರಾಜ್ ಕುಮಾರ್ ಅವರ ಎಲ್ಲ ಸಿನಿಮಾಗಳ ಬಗ್ಗೆಯೂ ಕುತೂಹಲ ಇದ್ದೇ ಇದೆ.

ಯೋಗರಾಜ್ ಭಟ್ಟರ 'ಗಾಳಿಪಟ-2'
ಯೋಗರಾಜ್ ಭಟ್ ನಿರ್ದೇಶನದ ಸೂಪರ್ ಹಿಟ್ ಸಿನಿಮಾ 'ಗಾಳಿಪಟ' ಮುಂದಿನ ಭಾಗ ನಿರ್ಮಾಣವಾಗಿದ್ದು, ಈ ಸಿನಿಮಾ ಸಹ 2022ರಲ್ಲಿ ಬಿಡುಗಡೆ ಆಗಲಿದೆ. 'ಗಾಳಿ ಪಟ2' ಸಿನಿಮಾದ ಬಗ್ಗೆ ಬಹಳಷ್ಟು ನಿರೀಕ್ಷೆ ಇದೆ. ಸಿನಿಮಾದಲ್ಲಿ ಗಣೇಶ್, ದಿಗಂತ್ ಹಾಗೂ ಲೂಸಿಯಾ ಪವನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದ ಚಿತ್ರಕತೆಯನ್ನು ಯೋಗರಾಜ್ ಭಟ್ ಮತ್ತು ಸಾಹಿತಿ ಜಯಂತ್ ಕಾಯ್ಕಿಣಿ ಒಟ್ಟಾಗಿ ಬರೆದಿದ್ದಾರೆ. ಸಿನಿಮಾದ ಕೆಲವು ಪೋಸ್ಟರ್‌ಗಳು ಬಿಡುಗಡೆ ಆಗಿದ್ದು, ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಆಗಬೇಕಿದೆ.

ರಕ್ಷಿತ್ ಶೆಟ್ಟಿಯ ಎರಡು ಸಿನಿಮಾಗಳು
ರಕ್ಷಿತ್ ಶೆಟ್ಟಿ ನಟಿಸಿರುವ '777 ಚಾರ್ಲಿ' ಹಾಗೂ ಅವರು ನಿರ್ದೇಶಿಸುತ್ತಿರುವ 'ರಿಚರ್ಡ್ ಆಂಟೊನಿ' ಸಿನಿಮಾ ಬಹಳ ಕುತೂಹಲ ಕೆರಳಿಸಿದೆ. '777 ಚಾರ್ಲಿ' ಸಿನಿಮಾ ಬಿಡುಗಡೆಗೆ ತಯಾರಾಗಿದ್ದರೆ, 'ರಿಚರ್ಡ್ ಆಂಟೊನಿ' ಸಿನಿಮಾ ಚಿತ್ರೀಕರಣ ಆಗಬೇಕಿದೆ. ಈ ಸಿನಿಮಾಕ್ಕೆ ಜನಪ್ರಿಯ ಹೊಂಬಾಳೆ ಪ್ರೊಡಕ್ಷನ್ ಹೌಸ್ ಬಂಡವಾಳ ಹೂಡಿದೆ.

ದರ್ಶನ್ ನಟನೆಯ 'ಕ್ರಾಂತಿ'
ದರ್ಶನ್ ನಟನೆಯ 'ಕ್ರಾಂತಿ' ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದ್ದು, ಸಿನಿಮಾವು ಆಕ್ಷನ್ ಥ್ರಿಲ್ಲರ್ ಕತೆಯನ್ನು ಒಳಗೊಂಡಿದೆ. ಸಿನಿಮಾದ ಕತೆಗೂ ಕನ್ನಡದ ಅಕ್ಷರಗಳಿಗೂ ಸಂಬಂಧ ಇದೆ ಎಂದು ನಿರ್ದೇಶಕ ವಿ.ಹರಿಕೃಷ್ಣ ಹೇಳಿದ್ದು ಕುತೂಹಲ ಹೆಚ್ಚಿಸಿದೆ. ಸಿನಿಮಾದಲ್ಲಿ ದರ್ಶನ್ ಜೊತೆಗೆ ರವಿಚಂದ್ರನ್ ಸಹ ನಟಿಸುತ್ತಿದ್ದಾರೆ. ಹಿಟ್ ಸಿನಿಮಾ 'ಯಜಮಾನ' ಚಿತ್ರತಂಡವೇ 'ಕ್ರಾಂತಿ' ಸಿನಿಮಾಕ್ಕೂ ಇದ್ದು, ಮತ್ತೊಮ್ಮೆ ಹಿಟ್ ನೀಡುವ ವಿಶ್ವಾಸದಲ್ಲಿ. ಈ ಸಿನಿಮಾದ ಬಗ್ಗೆ ನಿರೀಕ್ಷೆ ಇದ್ದು, ಇದರ ಜೊತೆಗೆ ದರ್ಶನ್ ನಟಿಸುತ್ತಿರುವ ಐತಿಹಾಸಿಕ ಕತೆಯುಳ್ಳ 'ರಾಜವೀರ ಮದಕರಿ' ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಆದರೆ ಈ ಸಿನಿಮಾದ ಚಿತ್ರೀಕರಣ ಸ್ಥಗಿತಗೊಂಡಿದೆ.

ನಿರೀಕ್ಷೆ ಹುಟ್ಟಿಸಿರುವ ಇನ್ನೂ ಕೆಲವು ಸಿನಿಮಾಗಳು
ದಯಾಳ್ ಪದ್ಮನಾಭ್ ನಿರ್ದೇಶಿಸಿರುವ 'ಒಂಬತ್ತನೇ ದಿಕ್ಕು' ಸಿನಿಮಾ ನಿರೀಕ್ಷೆ ಹುಟ್ಟಿಸಿದೆ. ಪುನೀತ್ ರಾಜ್‌ಕುಮಾರ್‌ಗಾಗಿ ಪವನ್ ಕುಮಾರ್ ನಿರ್ದೇಶಿಸಲಿದ್ದ 'ದ್ವಿತ್ವ' ಸಿನಿಮಾದ ಬಗ್ಗೆಯೂ ಕುತೂಹಲ ಇದೆ. ಪುನೀತ್ ನಟಿಸಬೇಕಿದ್ದ 'ದ್ವಿತ್ವ' ಸಿನಿಮಾದಲ್ಲಿ ಯಾವ ಕನ್ನಡದ ನಟ ನಟಿಸಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ. ಪುನೀತ್ ರಾಜ್‌ಕುಮಾರ್ ನಿರ್ಮಾಣ ಸಂಸ್ಥೆಯಿಂದ ಹೊರಬರಲಿರುವ 'ಮ್ಯಾನ್ ಆಫ್ ದಿ ಮ್ಯಾಚ್' ಹಾಗೂ 'ಓ2' ಸಿನಿಮಾಗಳು ಸಹ ಕುತೂಹಲ ಮೂಡಿಸಿವೆ. ಇದರ ಜೊತೆಗೆ 'ಕಲರ್ ಆಫ್ ಟೊಮೆಟೊ' ಹೆಸರಿನ ಹೊಸಬರ ಸಿನಿಮಾ ಸಹ ಕುತೂಹಲ ಹುಟ್ಟಿಸಿದೆ. ಪೂರ್ಣ ಚಂದ್ರ ತೇಜಸ್ವಿ ಕಾದಂಬರಿ ಆಧರಿಸಿದ 'ಡೇರ್‌ಡೆವಿಲ್ ಮುಸ್ತಫಾ' ಸಿನಿಮಾ ಸಹ ಗಮನ ಸೆಳೆದಿದ್ದು, ಅದೂ 2022ರಲ್ಲಿ ಬಿಡುಗಡೆ ಆಗಲಿದೆ.


Click it and Unblock the Notifications











