twitter
    For Quick Alerts
    ALLOW NOTIFICATIONS  
    For Daily Alerts

    ಒಂದೊಂದು ಸಿನಿಮಾ ಶೋನದ್ದು ಒಂದೊಂದು ವಿಶೇಷತೆ: ನೀವು ಯಾವ ಶೋಗೆ ಹೋಗ್ತಾ ಇದ್ರಿ?

    By ರವೀಂದ್ರ ಕೊಟಕಿ
    |

    ಪ್ರಸ್ತುತ ಸಮಯದಲ್ಲಿ ಅದೆಂತಹ ದೊಡ್ಡ ಹೀರೋ ಸಿನಿಮಾ ಆದರೂ ಮೂರು ದಿನದ ಅಬ್ಬರ- ಆಡಂಬರ ಅಷ್ಟೇ! ಶುಕ್ರವಾರ ಬೆಳಗ್ಗೆ 6 ಗಂಟೆಗೆ ಫ್ಯಾನ್ಸ್ ಶೋನಲ್ಲಿ ಅಭಿಮಾನಿಗಳ ಆರ್ಭಟ ಜೋರಾಗಿರುತ್ತದೆ. ಸಿನಿಮಾ ಚೆನ್ನಾಗಿದೆ ಅಂತ ಟಾಕ್ ಬಂದ್ರೆ ಮಾತ್ರ ಶನಿವಾರ-ಭಾನುವಾರದ ವರೆಗೂ ಚಿತ್ರಮಂದಿರ ಭರ್ತಿಯಾಗಿದೆ ಅಂತ ಬೋರ್ಡ್ ಕಾಣಸಿಗುತ್ತದೆ. ಇಲ್ಲವಾದರೆ ಶುಕ್ರವಾರದ ಮ್ಯಾಟ್ನಿ ಶೋಗೆ ಜನ ಇಲ್ಲದೆ ಥಿಯೇಟರ್ ಗಳು ಭಣಗುಡುತ್ತಿರುತ್ತದೆ. ಏನೇ ಆದರೂ, ಸೋಮವಾರದಿಂದ ಎಂತಹ ಸಿನಿಮಾ ತೆಗೆದುಕೊಂಡರು ಸಾದಾಸೀದಾ ಪ್ರದರ್ಶನ. ಹದಿನೈದು ದಿನಕ್ಕೆಲ್ಲಾ OTT ನಲ್ಲಿ, ತಿಂಗಳಿಗೆಲ್ಲಾ ಹೊಚ್ಚ ಹೊಸ ಚಲನಚಿತ್ರ ಅಂತ ಟಿವಿಗಳಲ್ಲಿ ಬಂದುಬಿಡುತ್ತದೆ. ಈಗಂತೂ ಅನೇಕರು ಥಿಯೇಟರ್ ಗಳಲ್ಲಿ ಸಿನಿಮಾ ರಿಲೀಸ್ ಮಾಡುವ ರಿಸ್ಕ್ ಬೇಡ ಅಂತ ಹೇಳಿ ನೇರವಾಗಿ OTT ನಲ್ಲೆ ರಿಲೀಸ್ ಮಾಡಿ ಬಿಡುತ್ತಿದ್ದಾರೆ. ದೊಡ್ಡ ಚಿತ್ರಗಳ ಕಥೆಯೇ ಹೀಗೆ ಇರಬೇಕಾದರೆ, ಇನ್ನು ಹೊಸಬರ ಚಿತ್ರಗಳ ಬಗ್ಗೆ ಹೇಳುವುದೇ ಬೇಡ. ಮೊದಲ ದಿನದ ಮಾರ್ನಿಂಗ್ ಶೋ ತುಂಬಿಸಲು ಅವರೇ ಹೊರಗೆ ನಿಂತು ಜನರನ್ನು ಕರೆದು ಕರೆದು ಟಿಕೆಟ್ ಉಚಿತವಾಗಿ ಹಂಚುತ್ತಾರೆ. ಒಟ್ಟಿನಲ್ಲಿ ರಿಲೀಸ್ ಆದ ಮೊದಲ ದಿನದ ಮಾರ್ನಿಂಗ್ ಶೋ ಹೌಸ್ ಫುಲ್ ಬೋರ್ಡ್ ಬೀಳಲೇಬೇಕು ಎಂಬ ಹಠ ಎಲ್ಲರಲ್ಲೂ ಇದೆ.

    ಯಾವುದೇ ಸಿನಿಮಾ ತೆಗೆದುಕೊಂಡರು ಬಿಡುಗಡೆಯಾದ ಮೂರೇ ದಿನಕ್ಕೆ ಚಿತ್ರತಂಡಗಳು ಪ್ರೆಸ್ ಮೀಟ್ ಮಾಡಿ ಸೂಪರ್ ಹಿಟ್ ಅಂತ ಸ್ಟೇಟ್ಮೆಂಟ್ ಕೊಡ್ತಾರೆ. ಕಲೆಕ್ಷನ್ ವಿಷಯ ಹೇಳುವಂತೆ ಇಲ್ಲ ಕೋಟಿ ಕೋಟಿ ಲೆಕ್ಕ. ಒಂದಷ್ಟು ದಿನ ಕಳೆದ ಮೇಲೆ ನಿಧಾನವಾಗಿ ಚಿತ್ರ ಮಾಡಿ ಸುಧಾರಿಸಿಕೊಂಡ ನಿರ್ಮಾಪಕ ನಷ್ಟದ ಲೆಕ್ಕ ಕೊಡುತ್ತಾನೆ. ಇದಕ್ಕೂ ತಮಗೂ ಸಂಬಂಧವೇ ಇಲ್ಲವೆಂಬಂತೆ ನಿರ್ದೇಶಕ ನಟ-ನಟಿಯರು ವರ್ತಿಸುತ್ತಾರೆ. ಇದು ಪ್ರಸ್ತುತ ಮೇಲ್ನೋಟಕ್ಕೆ ಕಂಡುಬರುವ ಪರಿಸ್ಥಿತಿ.

    ತೀರ 2000 ಇಸವಿವರೆಗೂ ನೀವು ಗಮನಿಸಿದಂತೆ 'ಕನ್ನಡಪ್ರಭ' 'ಉದಯವಾಣಿ' ದಿನಪತ್ರಿಕೆಗಳಲ್ಲಿ ಶುಕ್ರವಾರದ ಒಂದು ಇಡೀ ಪುಟ ತುಂಬಾ ಚಿತ್ರದ ಬಿಡುಗಡೆಯ ಜಾಹಿರಾತು ಕಾಣುತ್ತಿತ್ತು. ದೊಡ್ಡ ದೊಡ್ಡ ಅಕ್ಷರಗಳಲ್ಲಿ ಚಿತ್ರಮಂದಿರಗಳ ಹೆಸರುಗಳು ಆ ಇಡೀ ಜಾಹೀರಾತಿನ ತುಂಬಾ ಎದ್ದು ಕಾಣುತ್ತಿತ್ತು. ಪುಟಗಟ್ಟಲೆ ಸಿನಿಮಾದ ಜಾಹೀರಾತುಗಳು ಎದ್ದು ಕಾಣುತ್ತಿದ್ದವು. ಬಹುತೇಕ ನಾಲ್ಕು ವಾರದವರೆಗೂ ಹೆಚ್ಚುಕಡಿಮೆ ಅಷ್ಟೇ ಚಿತ್ರಮಂದಿರಗಳ ಜಾಹೀರಾತು ಮುಂದುವರಿಯುತ್ತಿತ್ತು. ನಂತರ ಕ್ರಮೇಣ ಚಿತ್ರಮಂದಿರಗಳ ಸಂಖ್ಯೆ ಕಡಿಮೆಯಾಗುತ್ತಿತ್ತು.ಬಹುತೇಕ 'ಬಿ' ಸೆಂಟರ್ ಗಳಲ್ಲಿ ಸಿನಿಮಾಗಳು ನಾಲ್ಕುವಾರದ ಮೇಲೆ ಓಡುತ್ತಿರಲಿಲ್ಲ. ನಾಲ್ಕು ವಾರ 'ಬಿ' ಸೆಂಟರ್ ಗಳಲ್ಲಿ ಸಿನಿಮಾ ಪ್ರದರ್ಶನಗೊಂಡರೆ ಅದು ಸೂಪರ್ ಹಿಟ್ ಅಂತಲೇ ಪರಿಗಣಿಸುತ್ತಿದ್ದರು. ಕೆಲವೊಮ್ಮೆ 'ಬಿ' ಸೆಂಟರ್ ಗಳಲ್ಲಿ ಕೂಡ ಚಿತ್ರಗಳು 50 ದಿನ ಪ್ರದರ್ಶನ ಕೆಲವೊಮ್ಮೆ 100 ದಿನ ಪ್ರದರ್ಶನ ಕಂಡಿದ್ದೂ ಇದೆ. ಬಹುತೇಕ ಯಾವ ಚಿತ್ರಮಂದಿರಗಳಲ್ಲಿ ನಾಲ್ಕು ವಾರ ಚಿತ್ರ ಪೂರೈಸಿದ ಮೇಲು ಪ್ರದರ್ಶನಗೊಳ್ಳುತ್ತಿದ್ದ ಚಿತ್ರಮಂದಿರಗಳಲ್ಲಿ 50 ದಿನ ವರೆಗೂ ಚಿತ್ರ ಪ್ರದರ್ಶನವಾಗುವುದು ಖಚಿತವಾಗಿರುತ್ತಿತ್ತು. ಅಭಿಮಾನಿಗಳು ಕೂಡ ಇಷ್ಟು ಕೇಂದ್ರಗಳಲ್ಲಿ 50 ದಿನ ಪ್ರದರ್ಶನಗೊಳ್ಳುತ್ತದೆ ಅಂತ ಆಗಲೇ ಲೆಕ್ಕಹಾಕಿ ಸಂಭ್ರಮಿಸಿ ಬಿಡೋರು. ಇನ್ನು 50 ದಿನ ಪೂರ್ಣಗೊಂಡರೆ ಅದೊಂದು ಹಬ್ಬ. ಅಭಿಮಾನಿಗಳ ಸಂಘಗಳು ಸಿಹಿ ಹಂಚಿ ಸಂಭ್ರಮಿಸುತ್ತಿದ್ದರು. ಇನ್ನು ಚಿತ್ರ 50 ದಿನಗಳ ನಂತರ ಬಹುತೇಕ ಚಿತ್ರಮಂದಿರಗಳಿಂದ ಮರೆಯಾಗುತ್ತಿತ್ತು. ಆದರೂ ಕೆಲವು ಚಿತ್ರಮಂದಿರಗಳಲ್ಲಿ ಚಿತ್ರದ ಯಶಸ್ವಿ ಪ್ರದರ್ಶನ ಮುಂದುವರಿಯುತ್ತಿತ್ತು 10 -11 ನೇ ವಾರ ಬಂದ ತಕ್ಷಣ ಚಿತ್ರ ಎಷ್ಟು ಕೇಂದ್ರಗಳಲ್ಲಿ ನೂರು ದಿನ ಪ್ರದರ್ಶನ ಕಾಣಬಹುದು? ಅಂತ ಆ ನಾಯಕ ನಟನ ಅಭಿಮಾನಿಗಳು ,ಅಷ್ಟೇ ಅಲ್ಲ ಆತನ ಪ್ರತಿಸ್ಪರ್ಧಿಗಳ ಸಂಘಗಳು ಕೂಡ ಆಲೋಚನೆ ಮಾಡುತ್ತಿದ್ದವು.

    100 ಡೇಸ್ ಓಡಿಸಲೇಬೇಕೆಂದು ಅಭಿಮಾನಿಗಳಿಂದ ಒತ್ತಡ

    100 ಡೇಸ್ ಓಡಿಸಲೇಬೇಕೆಂದು ಅಭಿಮಾನಿಗಳಿಂದ ಒತ್ತಡ

    ಕೆಲವೊಂದು ಸಂದರ್ಭಗಳಲ್ಲಿ 12-13 ವಾರಕ್ಕೆ ಚಿತ್ರ ಎತ್ತಂಗಡಿ ಮಾಡುವ ಸಂದರ್ಭಗಳು ಪ್ರದರ್ಶಕರಿಗೆ ಎದುರಾಗುತ್ತಿತ್ತು. ಆದರೆ ಇಂತಹ ಸಮಯದಲ್ಲಿ ಅಭಿಮಾನಿ ಸಂಘಗಳು ರೊಚ್ಚಿಗೆದ್ದು ನಿರ್ಮಾಪಕರಗಳ ಮೇಲೆ ಸಿನಿಮಾ ತೆಗೆಯದಂತೆ ಒತ್ತಡ ತರುತ್ತಿದ್ದರು. ಅಲ್ಲದೆ ಪ್ರತಿ ಹೀರೋಗೂ ಚಿತ್ರ 100 ದಿನ ಓಡುವುದು ಪ್ರತಿಷ್ಠೆಯ ವಿಷಯವಾಗಿ ಇರುತ್ತಿತ್ತು. ಹಾಗಾಗಿ ಕೆಲವೊಂದು ಸಂದರ್ಭದಲ್ಲಿ ನಿರ್ಮಾಪಕರು ಹೀರೋಗಳ ಕಾಲ್ ಶೀಟ್ ಅನ್ನು ಮುಂದೆ ಪಡೆಯಬೇಕಾದ ದೃಷ್ಟಿಯಿಂದಾದರೂ 100 ಡೇಸ್ ಪೂರೈಸುವಂತೆ ನೋಡಿ ಕೊಳ್ಳಬೇಕಾಗುತ್ತಿತ್ತು. ಅಂತಹ ಸಮಯದಲ್ಲಿ ದೊಡ್ಡ ಚಿತ್ರಮಂದಿರದಿಂದ ಸಣ್ಣ ಚಿತ್ರಮಂದಿರಕ್ಕೆ ಚಿತ್ರವನ್ನು ಶಿಫ್ಟ್ ಮಾಡ್ತಾ ಇದ್ರು. ಉದಾಹರಣೆಗೆ 'ಸಂತೋಷ್' ಚಿತ್ರಮಂದಿರದಲ್ಲಿ 12 ವಾರ ಪ್ರದರ್ಶನ ಕಂಡ ಚಿತ್ರ ಬೇರೆ ಚಿತ್ರಕ್ಕೆ ಬಿಟ್ಟುಕೊಡಬೇಕಾದ ಪ್ರಸಂಗ ಬಂದಾಗ ಪಕ್ಕದಲ್ಲಿದ್ದ 'ಸಪ್ನಾ' ಚಿತ್ರಮಂದಿರಕ್ಕೆ ಈ ಚಿತ್ರವನ್ನು ಶಿಫ್ಟ್ ಮಾಡಿ 100 ಡೇಸ್ ಪೂರ್ಣಗೊಳಿಸುತ್ತಿದ್ದರು. ಹಾಗಂತ ಎಲ್ಲಾ ಸಂದರ್ಭದಲ್ಲೂ ಚಲನಚಿತ್ರಗಳು ಹೀಗೆ ಒತ್ತಡದಿಂದ 100 ಡೇಸ್ ಪೂರೈಸುತ್ತಿತ್ತು ಅಂತಲ್ಲ. ನೇರವಾಗಿ ಒಂದೇ ಕೇಂದ್ರದಲ್ಲಿ 100ದಿನ ಪ್ರದರ್ಶನವು ಯಾವುದೇ ಅಡೆತಡೆಗಳಿಲ್ಲದೆ ನಡೆಯುತ್ತಿದ್ದವು. ಆದರೆ ಕೆಲವೊಂದು ಸಂದರ್ಭಗಳಲ್ಲಿ ಅನಿವಾರ್ಯ ಕಾರಣಗಳಿಗಾಗಿ ಇಂತಹ ಪ್ರಸಂಗಗಳು ಎದುರಾದಾಗ ನಿರ್ಮಾಪಕರ, ವಿತರಕರ ಮತ್ತು ಪ್ರದರ್ಶಕರ ಮೇಲೆ ಇಂತಹ ಒತ್ತಡಗಳು ಬರುತ್ತಿದ್ದವು.

    ಶತದಿನೋತ್ಸವ ಕೇಂದ್ರಗಳು ಮುಖ್ಯ

    ಶತದಿನೋತ್ಸವ ಕೇಂದ್ರಗಳು ಮುಖ್ಯ

    ಅಂದಿನ ದಿನಗಳಲ್ಲಿ ಯಾವ ಚಿತ್ರ ಎಷ್ಟು ಕೇಂದ್ರಗಳಲ್ಲಿ ಶತದಿನೋತ್ಸವ ಆಚರಿಸುತ್ತದೆ ಎಂಬುದರ ಮೇಲೆ ಅಷ್ಟೇ ಅದನ್ನು ಯಾವ ಮಟ್ಟದ ಸೂಪರ್ ಹಿಟ್ ಅಂತ ನಿರ್ಣಯಿಸಲಾಗುತ್ತಿತ್ತು. ಹೀಗಾಗಿ ಪ್ರತಿ ಅಭಿಮಾನಿಯೂ ತನ್ನ ನೆಚ್ಚಿನ ನಟನ ಚಿತ್ರ ಹೆಚ್ಚು ಚಿತ್ರಮಂದಿರಗಳಲ್ಲಿ ಶತದಿನೋತ್ಸವ ಕಾಣುವುದನ್ನು ಬಯಸುತ್ತಿದ್ದ. ಅಭಿಮಾನಿ ಸಂಘಗಳ ಮಧ್ಯೆ ಕೂಡ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ದೊಡ್ಡ ಮಟ್ಟದ ಗಲಾಟೆಗಳು ನಡೆಯುತ್ತಿದ್ದವು. ಅನೇಕ ಸಲ ಚಿತ್ರ 100 ದಿನ ಪ್ರದರ್ಶನ ಕಾಣದಂತೆ ತಡೆಯುವ ಪ್ರಯತ್ನಗಳು ಕೂಡ ತೆರೆಮರೆಯಲ್ಲಿ ನಡೆಸಲಾಗುತ್ತಿತ್ತು. ಅಂತೂ ಚಿತ್ರ ಶತದಿನ ಕಂಡ ಸಮಯದಲ್ಲಿ ಶತದಿನೋತ್ಸವಗಳ ಬ್ಯಾನರ್ ಜಾಹೀರಾತುಗಳು ಎಲ್ಲೆಡೆ ಮೊಳಗುತ್ತಿತ್ತು. ಅಭಿಮಾನಿಗಳ ನಿಜವಾದ ಸಂಭ್ರಮ ಶತದಿನೋತ್ಸವದ ಮೇಲೆ ನಿಂತಿರುತ್ತಿತ್ತು.

    ಇಂದು ಬಾಯ್ಬಿಟ್ಟರೆ 100ಕೋಟಿ ಕಲೆಕ್ಷನ್!

    ಇಂದು ಬಾಯ್ಬಿಟ್ಟರೆ 100ಕೋಟಿ ಕಲೆಕ್ಷನ್!

    100 ಡೇಸ್ ಚಿತ್ರ ಕಂಡರೆ ಅದೊಂದು ದೊಡ್ಡ ಪಂಕ್ಷನ್ ಮಾಡಿ ಚಿತ್ರದಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬ ಕಲಾವಿದನಿಗೂ, ತಾಂತ್ರಿಕ ವರ್ಗದವರು, ಕೆಲಸಗಾರರು ಸಹ ನೆನಪಿನ ಕಾಣಿಕೆ ಕೊಟ್ಟು ಗೌರವಿಸುತ್ತಿದ್ದರು. ಜೊತೆಗೆ ಕಾರ್ಮಿಕರಿಗೆ ಹೊಸ ಬಟ್ಟೆ ಮತ್ತು ಬೋನಸ್ ಹಣ ಕೂಡ ಸಿಗುತ್ತಿತ್ತು.ಇನ್ನು 25 ವಾರ ಚಿತ್ರ ಪ್ರದರ್ಶನಗೊಂಡರೆ ಅಭಿಮಾನಿಗಳ ಅಭಿಮಾನ ಎಲ್ಲೆ ಮೀರಿ ಹೋಗುತ್ತಿತ್ತು. 365 ದಿನ ಪ್ರದರ್ಶನಗೊಂಡರೆ ಅದರ ಬಗ್ಗೆ ಹೇಳುವುದೇ ಬೇಡ ಅದು ಅತ್ಯಂತ ದೊಡ್ಡ ಸಂಭ್ರಮ. ಆಗಿನ ಸಮಯದಲ್ಲಿ ಎಲ್ಲಾ ಸಂಭ್ರಮಗಳನ್ನು ನಾಯಕನಟ, ಕಲಾವಿದರು, ತಾಂತ್ರಿಕ ವರ್ಗದವರು, ನಿರ್ಮಾಪಕರು ವಿತರಕರು, ಪ್ರದರ್ಶಕರು ಅಭಿಮಾನಿಗಳು ಎಲ್ಲರೂ ಒಟ್ಟಿಗೆ ಆಚರಿಸುತ್ತಿದ್ದರು. ಇಷ್ಟೆಲ್ಲಾ ಸಂಭ್ರಮ ಹೊರತಾಗಿ ಎಂದು ಕೂಡ ನಿರ್ಮಾಪಕರು ಪ್ರೆಸ್ ಮುಂದೆ ಬಂದು ನಮ್ಮ ಚಿತ್ರ ಎಷ್ಟು ಕಲೆಕ್ಷನ್ ಮಾಡಿದೆ ಅಂತ ಲೆಕ್ಕಗಳನ್ನು ಕೊಡುತ್ತಿರಲಿಲ್ಲ. ಆದರೆ ಇವತ್ತು ಒಂದು ವಾರ ಪ್ರದರ್ಶನ ಕಾಣದ ಚಿತ್ರಕ್ಕೂ ಕೂಡ ವಾರದಲ್ಲಿ 3 ಪ್ರೆಸ್ ಮೀಟ್ ಮಾಡಿ ಕೋಟಿ- ಕೋಟಿ ಲೆಕ್ಕದಲ್ಲಿ ಕಲೆಕ್ಷನ್ ಗಳ ಬಗ್ಗೆ ಮಾತನಾಡಿ ಅದರ ಲೆಕ್ಕಗಳನ್ನು ಕೊಡುತ್ತಾರೆ. ಆ ಕಲೆಕ್ಷನ್ ಗಳ ಹಿಂದಿರುವ ಅಸಲಿ ಕತೆ ಪ್ರತಿಯೊಬ್ಬರಿಗೂ ಗೊತ್ತಿರುವುದೇ. ಒಬ್ಬ ಹೀರೋ ಸಿನಿಮಾದ ಬಗ್ಗೆ ನಿರ್ಮಾಪಕ 50ಕೋಟಿ ಹೇಳಿದರೆ ಮತ್ತೊಬ್ಬ ಹೀರೋ ಸಿನಿಮಾದ ನಿರ್ಮಾಪಕ 60ಕೋಟಿ ಹೇಳುತ್ತಾನೆ. ಇಷ್ಟೆಲ್ಲಾ ಲೆಕ್ಕ ಕೊಟ್ಟ ಮೇಲೂ ಕೂಡ ನಿರ್ಮಾಪಕ ಕೈಸುಟ್ಟು ಕೊಂಡಿರುತ್ತಾನೆ.

    ಯಾವ ವರ್ಗದವರು, ಯಾವ ಪ್ರದರ್ಶನಕ್ಕೆ ಚಿತ್ರಮಂದಿರಕ್ಕೆ ಹೋಗುತ್ತಿದ್ದರು?

    ಯಾವ ವರ್ಗದವರು, ಯಾವ ಪ್ರದರ್ಶನಕ್ಕೆ ಚಿತ್ರಮಂದಿರಕ್ಕೆ ಹೋಗುತ್ತಿದ್ದರು?

    ಹಿಂದಿನ ಸಿನಿಮಾಗಳು ಶತದಿನೋತ್ಸವ, 25 ವಾರ, 365 ದಿನ ಸತತವಾಗಿ ಪ್ರದರ್ಶನಗೊಳ್ಳಲು ಮುಖ್ಯ ಕಾರಣ ಹೆಚ್ಚಿನ ಪ್ರಮಾಣದಲ್ಲಿ ಜನಸಾಮಾನ್ಯರು ಚಿತ್ರಮಂದಿರಗಳಿಗೆ ಹೋಗಿ ಸಿನಿಮಾಗಳನ್ನು ನೋಡುತ್ತಿದ್ದರು. ಎಷ್ಟೋ ವರ್ಷಗಳ ಕಾಲ ಜನರಿಗೆ ಸಿನಿಮಾ ಒಂದೇ ಮನೋರಂಜನೆಯ ಮಾಧ್ಯಮವಾಗಿತ್ತು. ಆನಂತರ ದೂರದರ್ಶನದ ಆಗಮನವಾದರೂ ಸಿನಿಮಾಗಳ ಮೇಲಿನ ಆಸಕ್ತಿ ಜನರಲ್ಲಿ ಕಡಿಮೆಯಾಗಿರಲಿಲ್ಲ. ಜನರು ಹೆಚ್ಚಾಗಿ ಚಿತ್ರಮಂದಿರಗಳಿಗೆ ಹೋಗಿ ಸಿನಿಮಾಗಳನ್ನು ನೋಡುವ ಪರಿಪಾಠವನ್ನು ಹೊಂದಿದ್ದರು. ಹೀಗಾಗಿ ಸಹಜವಾಗಿ ಚಿತ್ರಮಂದಿರಗಳಲ್ಲಿ ಚಿತ್ರಗಳು ಹೆಚ್ಚಿನ ಕಾಲ ಪ್ರದರ್ಶನಗೊಳ್ಳುತ್ತಿದ್ದವು. ಜೊತೆಗೆ ಅಂದಿನ ಚಿತ್ರಗಳು ಜನಸಾಮಾನ್ಯನ ಅಭಿರುಚಿಗೆ ತಕ್ಕಂತೆ ಇರುತ್ತಿತ್ತು. ಮಾಸ್ ಅಥವಾ ಕ್ಲಾಸ್ ಎಂಬ ಭೇದಭಾವ ಇರುತ್ತಿರಲಿಲ್ಲ.ಎಲ್ಲಾ ಸಿನಿಮಾಗಳನ್ನು ಒಟ್ಟಿಗೆ ಕುಟುಂಬದ ಜೊತೆ ಕೂತು ನೋಡುವಂತೆ ತಯಾರಿಸಲಾಗುತ್ತಿತ್ತು.ಹೀಗಾಗಿ ನಮಗೆ ರಾಜಕುಮಾರ್, ವಿಷ್ಣುವರ್ಧನ್ ಅವರ ಚಿತ್ರಗಳನ್ನು ನೋಡಿದಾಗ ಅವು ಮಾಸ್, ಕ್ಲಾಸ್ ಗಳನ್ನು ಮೀರಿದ ಜನಸಾಮಾನ್ಯರ ಸಿನಿಮಾಗಳಾಗಿರುತ್ತವೆ.

    ಮಹಿಳೆಯರದ್ದು ಮಾರ್ನಿಂಗ್ ಶೋ!

    ಮಹಿಳೆಯರದ್ದು ಮಾರ್ನಿಂಗ್ ಶೋ!

    ಇನ್ನು ಸಿನಿಮಾಗಳ ಪ್ರದರ್ಶನದಲ್ಲಿ ಆಸಕ್ತಿದಾಯಕ ಒಂದು ವಿಷಯವನ್ನು ನಾವು ಗಮನಿಸಬಹುದು. ಆಗೆಲ್ಲಾ ಸಿನಿಮಾಗಳು ನಿತ್ಯ ನಾಲ್ಕು ಪ್ರದರ್ಶನಗಳನ್ನು ಕಾಣುತ್ತಿತ್ತು. 10:00, 2:00,6:00, 9:00 ಹೀಗೆ ನಾಲ್ಕು ಶೋಗಳು ಬಹುತೇಕ ನಗರ ಪ್ರದೇಶಗಳಲ್ಲಿ ಇರುತ್ತಿತ್ತು. ಕೆಲವು ಕಡೆ ಮಾರ್ನಿಂಗ್ ಶೋ 11ಗಂಟೆಗೆ ಶುರುವಾಗುತ್ತಿತ್ತು. ಮೆಜೆಸ್ಟಿಕ್ ಏರಿಯಾದ ಚಿತ್ರಮಂದಿರಗಳಿಗೆ ಮಾರ್ನಿಂಗ್ ಶೋ ಅಷ್ಟು ದೊಡ್ಡ ಕಲೆಕ್ಷನ್ ಆಗ್ತಾ ಇರಲಿಲ್ಲ. ಜನ ವ್ಯಾಪಾರ-ವಹಿವಾಟು ಅಂತ ಬಂದವರು ಮ್ಯಾಟ್ನಿ ಅಥವಾ ಫಸ್ಟ್ ಶೋಗೆ ಇಲ್ಲಿ ಹೆಚ್ಚಿನ ಜನ ಹೋಗುತ್ತಿದ್ದರು. ಮಧ್ಯಮ ವರ್ಗಗಳು ಹೆಚ್ಚಿಗೆ ನೆಲೆಗೊಂಡಿದ್ದ ಜಯನಗರ, ಚಾಮರಾಜಪೇಟೆ, ತ್ಯಾಗರಾಜನಗರ, ಎನ್.ಆರ್. ಕಾಲೋನಿ, ಬಸವನಗುಡಿ, ರಾಜಾಜಿನಗರ, ಮಲ್ಲೇಶ್ವರಂ ಮುಂತಾದ ಪ್ರದೇಶಗಳಲ್ಲಿದ್ದ ಉಮಾ, ಶಾಂತಿ, ನಂದಾ, ನಳಂದ, ನವರಂಗ್, ಸಂಪಿಗೆ, ಗೀತಾಂಜಲಿ (ಮೈಸೂರಿನ ಸರಸ್ವತಿಪುರಂ ಚಿತ್ರಮಂದಿರ)ಇಂತಹ ಚಿತ್ರಮಂದಿರಗಳ ಮಾರ್ನಿಂಗ್ ಶೋನಲ್ಲಿ ಬಹುತೇಕ ಮಹಿಳೆಯರೇ ಕಾಣುತ್ತಿದ್ದರು. ಅದಕ್ಕೆ ಕಾರಣವಿಲ್ಲದೇ ಇಲ್ಲ, ಇಲ್ಲೆಲ್ಲಾ ರಾಜಕುಮಾರ್ ವಿಷ್ಣುವರ್ಧನ್ ಅವರ ಚಿತ್ರಗಳು ಅದನ್ನು ಬಿಟ್ಟರೆ ಅನಂತನಾಗ್, ಶ್ರೀನಾಥ್ ಅಂತಹ ನಾಯಕನಟರ ಅಭಿನಯದ ಫ್ಯಾಮಿಲಿ ಕಥೆಗಳೇ ಹೆಚ್ಚಿಗೆ ಪ್ರದರ್ಶನಗೊಳ್ಳುತ್ತಿದ್ದವು. ರಾಜಕುಮಾರ್, ವಿಷ್ಣುವರ್ಧನ್ ಅವರ ಚಿತ್ರಗಳಿಗೆ ಇಡೀ ಕುಟುಂಬ ಒಟ್ಟಿಗೆ ಸೇರಿ ಹೋಗುತ್ತಿದ್ದವು. ಆದರೆ ಸಾಂಸಾರಿಕ ಚಿತ್ರಗಳೆಂದರೆ ಮಕ್ಕಳು ದೂರ ಉಳಿಯುತ್ತಿದ್ದರು. ಯಜಮಾನರಿಗೆ ಹೆಚ್ಚಿನ ಆಸಕ್ತಿ ಇರುತ್ತಿರಲಿಲ್ಲ. ಅದೇ ಮಧ್ಯಮವರ್ಗ ಹೆಣ್ಣುಮಕ್ಕಳು ಆ ಸಮಯದಲ್ಲಿ ಹೆಚ್ಚಿಗೆ ಕಾದಂಬರಿಗಳನ್ನು ಓದುತ್ತಿದ್ದರು. ಆ ಕಾದಂಬರಿಗಳೇ ಸಾಂಸಾರಿಕ ಚಿತ್ರಗಳಾಗಿ ಬಂದಾಗ ಸಹಜವಾಗಿ ಆ ಚಿತ್ರಗಳನ್ನು ನೋಡುವ ಆಸಕ್ತಿ ಅತೀವವಾಗಿರುತ್ತಿತ್ತು. ಮಕ್ಕಳು ಬರಲ್ಲ, ಯಜಮಾನ್ರು ನೋಡೋಣ ಅಂತಾರೆ ಹಾಗಾಗಿ ಇವರಿಗಿಲ್ಲ ಆಯ್ಕೆಯಾದರೂ ತಾವುಗಳೇ ಒಟ್ಟಿಗೆ ಹೋಗಿ ಸಿನಿಮಾ ನೋಡುವುದು. ಆಗ ಬಹುತೇಕ ಕೂಡು ಕುಟುಂಬಗಳು ಇರುತ್ತಿದ್ದ ಕಾರಣದಿಂದ ಮನೆಯಲ್ಲಿ ಸಾಧಾರಣವಾಗಿ ನಾಲ್ಕೈದು ಹೆಂಗಸರಗಳು ಇರುತ್ತಿದ್ದರು. ಇವರೆಲ್ಲ ಸೇರಿ ಸಿನಿಮಾ ನೋಡಲು ಹೋಗುತ್ತಿದ್ದರು. ಇಲ್ಲವಾದರೆ ಅಕ್ಕಪಕ್ಕದ ಮನೆಯವರೆಲ್ಲಾ ಮಾತನಾಡಿಕೊಂಡು ಸಿನಿಮಾ ನೋಡಲು ಹೋಗುತ್ತಿದ್ದರು.

    ಮಹಿಳೆಯರು ಮಾರ್ನಿಂಗ್ ಶೋಗೆ ಹೋಗಲು ಮುಖ್ಯವಾದ ಕಾರಣ ಏನು?

    ಮಹಿಳೆಯರು ಮಾರ್ನಿಂಗ್ ಶೋಗೆ ಹೋಗಲು ಮುಖ್ಯವಾದ ಕಾರಣ ಏನು?

    ಆಗಿನ ಸಂದರ್ಭದಲ್ಲಿ ಮಹಿಳೆಯರು ಹೆಚ್ಚಾಗಿ ಮಾರ್ನಿಂಗ್ ಶೋಗೆ ಹೋಗಲು ಮುಖ್ಯವಾದ ಕಾರಣವೆಂದರೆ, ಮಕ್ಕಳು ಶಾಲಾ-ಕಾಲೇಜುಗಳಿಗೆ, ಯಜಮಾನರು ಆಫೀಸ್ ಹೋಗಿರುತ್ತಿದ್ದರು. ಮ್ಯಾಟ್ನಿ ಶೋ ಅಂದರೆ ಎರಡು ಗಂಟೆ ಶುರುವಾಗುತ್ತೆ ಜೊತೆಗೆ ಅದು ಮುಗಿಯುವುದು 5.30, ಮನೆಗೆ ಬರಲು 6:00 ಆಗುತ್ತೆ. ಶಾಲೆಗೆ ಹೋದ ಮಕ್ಕಳು ಮೂರುವರೆ ನಾಲ್ಕು ಗಂಟೆಗೆಲ್ಲ ಮನೆಗೆ ಬರುತ್ತಿದ್ದರು, ಮಧ್ಯಾಹ್ನದ ಅಡುಗೆ ಕೆಲಸ ಬೇರೆ ಬ್ಯಾಲೆನ್ಸ್. ಹೀಗಾಗಿ ಮ್ಯಾಟ್ನಿ ಗೆ ಹೋಗಲು ಸಾಧ್ಯವಿರುತ್ತಿರಲಿಲ್ಲ. ಇನ್ನು ಫಸ್ಟು ಶೋಗೆ ಬಂದರೆ ಮಕ್ಕಳು ಯಜಮಾನರನ್ನು ಮನೆಯಲ್ಲಿ ಬಿಟ್ಟು ಹೆಣ್ಣುಮಕ್ಕಳು ಹೋಗಲು ಸಾಧ್ಯವೇ ಇರಲಿಲ್ಲ. ಹೀಗಾಗಿ ಸಹಜವಾಗಿಯೇ ಮನೆಯ ಹತ್ತಿರವೇ ಇರುತ್ತಿದ್ದ ಚಿತ್ರಮಂದಿರಕ್ಕೆ ಮಾರ್ನಿಂಗ್ ಶೋಗೆ ಅವರು ಮೊದಲೇ ಮಾತನಾಡಿಕೊಂಡು, ಮನೆಯವರ ಪರ್ಮಿಷನ್ ಅನ್ನು ತೆಗೆದುಕೊಂಡು ಹೋಗುತ್ತಿದ್ದರು. ಇನ್ನು ಸಿನಿಮಾ ಗೆ ಹೋಗುವುದು ನಿಶ್ಚಿತವಾದ ದಿನ ಬೆಳಗ್ಗೆ ಬೇಗ ಎದ್ದು ಒಬ್ಬೊಬ್ಬರು ಒಂದೊಂದು ಕೆಲಸ ಕೈಹಾಕಿ ಬಿಡೋರು. ಅಡುಗೆ, ಮನೆ ಕೆಲಸ, ಪಾತ್ರೆಪಗಡೆ, ಬಟ್ಟೆ ಎಲ್ಲಾ ಪಟಪಟಾಂತ ಮಾಡಿ ಮುಗಿಸುವರು. ಮುಗಿಸಿದ್ದೆ ತಡ ರೆಡಿಯಾಗುವುದು ಥಿಯೇಟರ್ ಕಡೆಗೆ ಹೊರಡುವರು. ಮನೆಯಲ್ಲಿ ತಿಂಡಿ ತಿಂತಾ ಕೂತ್ಕೊಂಡ್ರೆ ಟೈಮ್ ಆಗೋಗುತ್ತೆ ಅಂತ ಹೇಳಿ ಬಾಕ್ಸಿಗೆ ತಿಂಡಿ ಹಾಕಿಕೊಂಡು ಬಾಟಲಿನಲ್ಲಿ ನೀರು ತುಂಬಿಸಿಕೊಂಡು ಥಿಯೇಟರ್ ಗೆ ತೆಗೆದುಕೊಂಡು ಹೋಗಿ, ಸಿನಿಮಾ ನೋಡ್ತಾನೆ ತಿನ್ನೋರು.

    ಕಾಲೇಜು ಹುಡುಗರದ್ದು ಮ್ಯಾಟ್ನಿ ಶೋ

    ಕಾಲೇಜು ಹುಡುಗರದ್ದು ಮ್ಯಾಟ್ನಿ ಶೋ

    ಸಾಧಾರಣವಾಗಿ ಮ್ಯಾಟ್ನಿ ಶೋ ವಿಷಯಕ್ಕೆ ಬಂದರೆ ಅಲ್ಲಿ ಬಹುತೇಕ ಕಾಲೇಜು ಹುಡುಗ ಹುಡುಗಿಯರು ಕಾಣುತ್ತಿದ್ದರು. ಇವರುಗಳಿಗೆ ಮಾರ್ನಿಂಗ್ ಶೋಗೆ ಹೋಗಲು ಅವಕಾಶ ಇರುತ್ತಿರಲಿಲ್ಲ. ಬೆಳಗ್ಗೆ ಎರಡು ಕ್ಲಾಸ್ ಅಟೆಂಡ್ ಮಾಡಿ ಅಟೆಂಡೆನ್ಸ್ ತೆಗೆದುಕೊಂಡು ಆನಂತರ ಕಾಲೇಜಿಗೆ ಬಂಕ್ ಹಾಕಿ ಮಧ್ಯಾಹ್ನದ ಹೊತ್ತಿಗೆ ಅಂದರೆ ಮ್ಯಾಟ್ನಿ ಶೋಗೆ ಥಿಯೇಟರ್ ಗಳಿಗೆ ಹೋಗುತ್ತಿದ್ದರು. ಇನ್ನು ಮೆಜೆಸ್ಟಿಕ್ ಪ್ರಾಂತದಲ್ಲಿ ವ್ಯಾಪಾರ-ವಹಿವಾಟು ಅಂತ ಬಂದವರೆಲ್ಲ ಮಧ್ಯಾಹ್ನದ ಹೊತ್ತಿಗೆ ಒಂದು ಸಿನಿಮಾ ನೋಡುವುದಕ್ಕೆ ಹೋಗುತ್ತಿದ್ದರು.

    ಫಸ್ಟ್ ಶೋ -ಫ್ಯಾಮಿಲಿ ಶೋ

    ಫಸ್ಟ್ ಶೋ -ಫ್ಯಾಮಿಲಿ ಶೋ

    ಸಾಧಾರಣವಾಗಿ 6 ಗಂಟೆಯ ಶೋ ಅಂದರೆ ಫಸ್ಟ್ ಶೋ ಅನ್ನು ಫ್ಯಾಮಿಲಿ ಶೋ ಅಂತಲೇ ಕರೆಯುತ್ತಿದ್ದರು. ಗಂಡ-ಹೆಂಡತಿ ಮಕ್ಕಳು ಒಟ್ಟಿಗೆ ಸೇರಿ ಈ ಶೋಗೆ ಹೆಚ್ಚಿಗೆ ಹೋಗುತ್ತಿದ್ದರು. ಇನ್ನು ಆ ಸಮಯದಲ್ಲಿ ಹೊಸದಾಗಿ ಮದುವೆಯಾದ ನವದಂಪತಿಗಳು ಕೂಡ ಹೆಚ್ಚಾಗಿ ನಿಮಗೆ ಫಸ್ಟ್ ಶೋನಲ್ಲೇ ಕಾಣುತ್ತಿದ್ದರು. ಇನ್ನು ಸೆಕೆಂಡ್ ಶೋ ಅಂದರೆ 9:00 ಶೋಗೆ ಸಾಧಾರಣವಾಗಿ ಹೆಚ್ಚಿಗೆ ವ್ಯಾಪಾರ-ವಹಿವಾಟು ಮಾಡುತ್ತಿದ್ದಂತ ಜನರು ಹೋಗುತ್ತಿದ್ದರು. ಇದಕ್ಕೆ ಕಾರಣವಿಲ್ಲದೆ ಇಲ್ಲ,ಬಹುತೇಕ ಬೆಳಗ್ಗೆ ಮನೆ ಬಿಟ್ಟು ಹೋಗುತ್ತಿದ್ದ ಅವರು ಕೆಲಸ ಮುಗಿಸಿಕೊಂಡು ಮನೆಗೆ ಸೇರುವುದೇ 8 ಗಂಟೆ ಆಗುತ್ತಿತ್ತು. ಹೀಗಾಗಿ 8 ಗಂಟೆಯ ನಂತರ ಮನೆ ಸರಿ ಊಟ ಮಾಡಿ ಬೈಕ್ ತೆಗೆದುಕೊಂಡು ನೇರವಾಗಿ ಚಿತ್ರಮಂದಿರದ ಕಡೆ ಹೋಗುತ್ತಿದ್ದರು. ಏಕೆಂದರೆ ಇವರಿಗೆಲ್ಲಾ ಸಿನಿಮಾ ನೋಡಲು ಸಮಯ ಅಂತ ಸಿಗುತ್ತಿದ್ದೆ ರಾತ್ರಿಯ ವೇಳೆಯಲ್ಲಿ ಮಾತ್ರ.

    ಹಳ್ಳಿಗಳಲ್ಲಿ 9 ಗಂಟೆಯ 'ನಮೋ ವೆಂಕಟೇಶ'

    ಹಳ್ಳಿಗಳಲ್ಲಿ 9 ಗಂಟೆಯ 'ನಮೋ ವೆಂಕಟೇಶ'

    ಐವತ್ತರ ದಶಕದಿಂದ ಮೊದಲುಗೊಂಡು ಎಂಬತ್ತರ ದಶಕದವರೆಗೂ ಹಳ್ಳಿಗಳಲ್ಲಿ ಅದರಲ್ಲೂ ಪ್ರಮುಖವಾಗಿ ಒಂದು ವಾಣಿಜ್ಯ ಪ್ರದೇಶದಲ್ಲಿ ಟೆಂಟ್ ಚಿತ್ರಮಂದಿರಗಳನ್ನು ಕಾಣಬಹುದಾಗಿತ್ತು. ಇಲ್ಲೆಲ್ಲಾ 9ಗಂಟೆಯ ಒಂದೇ ಪ್ರದರ್ಶನ ಕಾಣುತ್ತಿತ್ತು.ಏಕೆಂದರೆ ಹಳ್ಳಿಗಾಡಿನ ಜನ ಬೆಳಗ್ಗಿನ ಹೊತ್ತು ಯಾವುದೇ ಸಿನಿಮಾ ನೋಡುವ ಪರಿಸ್ಥಿತಿಯಲ್ಲಿ ಇರುತ್ತಿರಲಿಲ್ಲ. ಸಹಜವಾಗಿ ರಾತ್ರಿಯ ಹೊತ್ತಿಗೆ ಅವರೆಲ್ಲ ಊಟ ಮಾಡಿ 9 ಗಂಟೆಯ ಶೋಗೆ ಹೋಗುತ್ತಿದ್ದರು. ಆ ಚಿತ್ರಮಂದಿರದ ಸುತ್ತಲಿನ ಹಳ್ಳಿಗಾಡಿನ ಜನ ರಾತ್ರಿಯ ಹೊತ್ತಿಗೆ ಒಟ್ಟಿಗೆ ಎಲ್ಲರೂ ಸೇರಿಕೊಂಡು ಒಂದು ಬಂಡಿ ಕಟ್ಟಿಕೊಂಡು ಸಿನಿಮಾ ನೋಡಲು ಹೋಗುತ್ತಿದ್ದರು. 7 ಗಂಟೆಯ ಹೊತ್ತಿಗೆಲ್ಲಾ ಚಿತ್ರಮಂದಿರದ ಮೈಕಿನಲ್ಲಿ ಹಾಡುಗಳು ಶುರುವಾಗುತ್ತಿತ್ತು. ಕೊನೆಯದಾಗಿ 'ನಮೋ ವೆಂಕಟೇಶ....' ಹಾಡು ಹಾಕಿದರು ಅಂದ್ರೆ ಚಿತ್ರ ಶುರುವಾಯಿತು ಅಂತಲೇ ಅರ್ಥ. ಹಾಗಾಗಿ ಚಿತ್ರಮಂದಿರದ ಹೊರಗೆ ನಿಂತವರೆಲ್ಲ ಅಲ್ಲಿಂದ ತಕ್ಷಣ ಹೊರಟು ಚಿತ್ರಮಂದಿರದ ಒಳಗಡೆ ಸೇರಿಕೊಳ್ಳುತ್ತಿದ್ದರು.

    ಸಿಂಗಲ್ ಥಿಯೇಟರ್‌ಗಳು ಮುಚ್ಚುವ ಸ್ಥಿತಿ ಯಾಕೆ ಬಂದಿದ್ದು?

    ಸಿಂಗಲ್ ಥಿಯೇಟರ್‌ಗಳು ಮುಚ್ಚುವ ಸ್ಥಿತಿ ಯಾಕೆ ಬಂದಿದ್ದು?

    ಹಿಂದೆ ಚಿತ್ರಗಳು 50,100 ದಿನ ಅಂತ ಅನೇಕ ದಿನಗಳ ಕಾಲ ಪ್ರದರ್ಶನಗೊಳ್ಳುತ್ತಿದ್ದವು. ಆದರೆ ಇಂದು ಚಿತ್ರಗಳು ಹೆಚ್ಚೆಂದರೆ ವಾರ, 10 ದಿನಗಳಿಗೆ ಚಿತ್ರಮಂದಿರಗಳಿಂದ ಮಾಯವಾಗುತ್ತವೆ. ಯಾರಾದರೂ ಥಿಯೇಟರ್ ಗೆ ಹೋಗಿ ಸಿನಿಮಾ ನೋಡಲ್ವಾ ಅಂತ ಕೇಳಿದರೆ ಅದಕ್ಕೆ 'ಮುಂದಿನವಾರ ಟಿವಿಯಲ್ಲಿ ಬಂದುಬಿಡುತ್ತೆ,ನೋಡಿದ್ರೆ ಆಯ್ತು. ಸುಮ್ಮನೆ ಯಾಕೆ ದುಡ್ಡು ಕೊಡಬೇಕು' ಅಂತಾರೆ. ಇನ್ನು OTT ಪ್ಲಾಟ್ ಫಾರ್ಮ್ ಗಳು ಬಂದಮೇಲೆ ತಮಗೆ ಇಷ್ಟ ಬಂದ ಸಮಯದಲ್ಲಿ ತಮ್ಮ ಇಷ್ಟವಾದ ಸಿನಿಮಾ ನೋಡುವ ಅವಕಾಶ ಕೂಡ ಇದೆ. ಸೋ ಹೀಗಾಗಿ ಹೆಚ್ಚಿನ ಜನ ಥಿಯೇಟರ್ ಕಡೆಗೆ ಬರುತ್ತಿಲ್ಲ. ಸ್ಟಾರ್ ನಟರ ಚಿತ್ರಗಳು ಮಾತ್ರ ಮೂರು ದಿನ ಅಬ್ಬರಿಸುತ್ತದೆ. ಆನಂತರ ಆ ಚಿತ್ರಗಳು ಪರಿಸ್ಥಿತಿ ಕೂಡ ಬೇರೆ ಚಿತ್ರಗಳಿಗಿಂತ ವಿಭಿನ್ನ ವಾಗಿರುವುದಿಲ್ಲ. ಹೀಗಾಗಿಯೇ ಬಹುತೇಕ ಸಿಂಗಲ್ ಸ್ಕ್ರೀನ್ ಥಿಯೇಟರ್ ಗಳು ಮುಚ್ಚುವ ಪರಿಸ್ಥಿತಿಗೆ ಬಂದಿದೆ ಅಥವಾ ಬಹುತೇಕ ಮುಚ್ಚಿಹೋಗಿವೆ. ಹಾಗಂತ ಸಿನಿಮಾ ನೋಡುವವರ ಸಂಖ್ಯೆ ಕಮ್ಮಿಯಾಗಿಲ್ಲ, ಆದರೆ ಸಿನಿಮಾ ನೋಡಲು ಬೇರೆ ಬೇರೆ ತರಹದ ಫ್ಲಾಟ್ ಫಾರ್ಮ್ ಗಳಿವೆ.

    ಥಿಯೇಟರ್ ನಲ್ಲಿ ಸಿನಿಮಾ ನೋಡುವ ಮಜಾನೇ ಬೇರೆ

    ಥಿಯೇಟರ್ ನಲ್ಲಿ ಸಿನಿಮಾ ನೋಡುವ ಮಜಾನೇ ಬೇರೆ

    ಎಷ್ಟೇ OTT ಫ್ಲಾಟ್ ಫಾರ್ಮ್ ಗಳು ಬಂದರು, ಮಲ್ಟಿಪ್ಲೆಕ್ಸುಗಳು, ಟಿವಿಯಲ್ಲಿ ನೋಡಿದರು ಸಿನಿಮಾದ ಅಸಲಿ ಮಜಾ ಇರುವುದು ಸಿಂಗಲ್ ಥಿಯೇಟರ್ ಗಳಲ್ಲಿ ಮಾತ್ರನೇ! ಮುಂದಿನ ದಿನಗಳಲ್ಲಿ ಆ ಮಜಾ ಉಳಿಯದೇ ಹೋಗಬಹುದು. ಸಿಂಗಲ್ ಥಿಯೇಟರ್ ಗಳು ಇರುವಾಗಲೇ ಆ ಮಜಾ ಅನುಭವಿಸಿ ಬಿಡಿ.ಇಷ್ಟಕ್ಕೂ ಹಿಂದೆ ನೀವು ಸಿಂಗಲ್ ಥಿಯೇಟರ್ ನಲ್ಲಿ ಸಿನಿಮಾ ನೋಡಲು ಹೆಚ್ಚಾಗಿ ಯಾವ ಶೋಗೆ ಹೋಗ್ತಾ ಇದ್ರಿ? ಅದರ ಅನುಭವ ಫಿಲ್ಮಿಬೀಟ್ ಕನ್ನಡ ಜೊತೆಗೆ ಹಂಚಿಕೊಳ್ಳಿ.

    English summary
    Movie theater shows have different timings all over Karnataka and India. Every shows have some specialties and some fixed set of viewers.
    Tuesday, October 26, 2021, 14:32
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X