'ಕುರುಕ್ಷೇತ್ರ' ಬಳಿಕ ಮುನಿರತ್ನ, ದರ್ಶನ್, ಅಂಬರೀಶ್, ಮೇಘನಾ, ನಿಖಿಲ್ ಬಾಳಲ್ಲಿ ಅಲ್ಲೋಲ ಕಲ್ಲೋಲ? ಏನಿದು ಟ್ರೆಂಡಿಂಗ್ ಸ್ಟೋರಿ?
ಸಿನಿಮಾ ರಂಗದಲ್ಲಿ ಸಾಕಷ್ಟು ನಂಬಿಕೆಗಳಿವೆ. ಕೆಲವರು ಅದನ್ನು ಮೂಢನಂಬಿಕೆ ಅಂತ ಕರೆಯುತ್ತಾರೆ. ಮತ್ತೆ ಕೆಲವರು ನಂಬುತ್ತಾರೆ. ಇತ್ತೀಚೆಗಷ್ಟೇ ಕನ್ನಡ ಚಿತ್ರರಂಗದ ಕಲಾವಿದರ ಸಂಘದಲ್ಲಿ ಹೋಮ-ಹವನ ನಡೆದಿದ್ದು ಗೊತ್ತೇ ಇದೆ. ಚಿತ್ರರಂಗದ ಗಣ್ಯರು ಈ ಪೂಜೆಯಲ್ಲಿ ಭಾಗಿಯಾಗಿದ್ದರು.
ಸದ್ಯ ಕನ್ನಡ ಚಿತ್ರರಂಗ ಕೂಡ ಸಂಕಷ್ಟಕ್ಕೆ ಸಿಲುಕಿದೆ. ಒಂದೊಂದೇ ವಿವಾದಗಳು ಸಿನಿಮಾ ಮಂದಿಯನ್ನು ಸುತ್ತಿಕೊಳ್ಳುತ್ತಲೇ ಇದೆ. ಇತ್ತೀಚೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ನಿರ್ಮಾಪಕ ಮುನಿರತ್ನ ಮೇಲಿನ ಆರೋಪಗಳು ಸ್ಯಾಂಡಲ್‌ವುಡ್‌ಗೆ ಸಂಕಷ್ಟ ತಂದಿಷ್ಟೇ ಅಲ್ಲ. ಕನ್ನಡ ಚಿತ್ರರಂಗಕ್ಕೆ ಮುಜುಗರವನ್ನು ಉಂಟು ಮಾಡಿದೆ.

ಒಂದು ಕಡೆ ಇಷ್ಟೆಲ್ಲ ನಡೆಯುತ್ತಿರುವಾಗಲೇ, ಇನ್ನೊಂದು ಕಡೆ ಹೊಸದಂದು ಚರ್ಚೆ ಆರಂಭ ಆಗಿದೆ. ಮುನಿರತ್ನ ದೊಡ್ಡ ಬಜೆಟ್‌ನಲ್ಲಿ ನಿರ್ಮಾಣ ಮಾಡಿದ್ದ 'ಕುರುಕ್ಷೇತ್ರ' ಸಿನಿಮಾದಲ್ಲಿ ಹಲವು ಮಂದಿಗೆ ಕೆಡುಕು ಸಂಭವಿಸುತ್ತಿದೆ ಅನ್ನೋ ಚರ್ಚೆ ಶುರುವಾಗಿದೆ. ಅದಕ್ಕೆ ಕೆಲವು ಸಾಕ್ಷಿಗಳನ್ನು ನೀಡುತ್ತಿದ್ದಾರೆ. ಇಂತಹ ನಂಬಿಕೆಗಳನ್ನು ಪಕ್ಕಕ್ಕಿಟ್ಟು 'ಕುರುಕ್ಷೇತ್ರ' ಸಿನಿಮಾದ ಭಾಗವಾಗಿದ್ದ ಕೆಲವು ಮಂದಿಗೆ ಏನೇನಾಯ್ತು? ಅನ್ನೋದನ್ನು ನೋಡುವುದಾದರೆ..
ನಿರ್ಮಾಪಕ ಮುನಿರತ್ನ
2017ರಲ್ಲಿ 'ಕುರುಕ್ಷೇತ್ರ' ಸಿನಿಮಾದ ನಿರ್ಮಾಣಕ್ಕೆ ಕೈ ಹಾಕಿದ್ದರು. ಸುಮಾರು 230ಕ್ಕೂ ಹೆಚ್ಚು ದಿನ ಈ ಸಿನಿಮಾದ ಶೂಟಿಂಗ್ ಮಾಡಬೇಕಾಗಿ ಬಂದಿತ್ತು. ಈ ಸಿನಿಮಾ ಆರಂಭ ಆಗಿ ಮುಗಿಯುವುದರೊಳಗೆ ಈ ಸಿನಿಮಾದಲ್ಲಿ ನಟಿಸಿದ ಕಲಾವಿದರ ಬಾಳಲ್ಲಿ ಅಲ್ಲೋಲ ಕಲ್ಲೋಲ ಆಗಿತ್ತು. ಈಗ ನಿರ್ಮಾಪಕ ಮುನಿರತ್ನ ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಾತಿನಿಂದನೆ ಹಾಗೂ ಅತ್ಯಾಚಾರ ಆರೋಪದಲ್ಲಿ ನಿರ್ಮಾಪಕ ಮುನಿರತ್ನ ಸಿಕ್ಕಿಕೊಂಡಿದ್ದಾರೆ. ಸದ್ಯ ನ್ಯಾಯಾಂಗ ಬಂಧನದಲ್ಲಿದ್ದು, ರಾಜಕೀಯ ಜೀವನಕ್ಕೆ ಕುತ್ತು ಎದುರಾಗಿದೆ.

ದುರ್ಯೋಧನನಾಗಿದ್ದ ದರ್ಶನ್
ಮುನಿರತ್ನ 'ಕುರುಕ್ಷೇತ್ರ' ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ದುರ್ಯೋಧನನ ಪಾತ್ರದಲ್ಲಿ ನಟಿಸಿದ್ದ ದರ್ಶನ್ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಇಲ್ಲಿಂದ ಐದು ವರ್ಷಗಳ ಕಾಲ ದರ್ಶನ್ ಕೂಡ ವಿವಾದದ ಮೇಲೆ ವಿವಾದ ಎದುರಿಸಬೇಕಾಯಿತು. ಉಮಾಪತಿ ಜೊತೆ ಕಿತ್ತಾಟ, ಮಾಧ್ಯಮಗಳಿಂದ ಬ್ಯಾನ್ ಅಂತ ಘಟನೆಗಳು ನಡೆದವು. ಈಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಆರೋಪಿಯಾಗಿ ಜೈಲು ಸೇರಿದ್ದಾರೆ.
ಅಂಬರೀಶ್ ಅಗಲಿಕೆ
2017ರಲ್ಲಿ ಆರಂಭ ಆಗಿದ್ದ ಈ ಸಿನಿಮಾದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಭೀಷ್ಮನ ಪಾತ್ರದಲ್ಲಿ ನಟಿಸಿದ್ದರು. ಆದರೆ, ಈ ಸಿನಿಮಾ ಮುಗಿಯುವುದರೊಳಗೆ ಅಂಬರೀಶ್ ಅಪಾರ ಅಭಿಮಾನಿಗಳನ್ನು ಅಗಲಿದ್ದರು. ಈ ಘಟನೆ ಸಿನಿಮಾ ಬಿಡುಗಡೆಗೂ ಮುನ್ನವೇ ನಡೆದಿದ್ದರು. ಅಂಬರೀಶ್ ತಮ್ಮ ಪಾತ್ರವನ್ನು ಪೂರ್ಣಗೊಳಿಸಿದ್ದರು.
ಮೇಘನಾ ರಾಜ್
ಮುನಿರತ್ನ ಕುರುಕ್ಷೇತ್ರದಲ್ಲಿ ದುರ್ಯೋಧನನ ಪತ್ನಿ ಭಾನುಮತಿ ಪಾತ್ರದಲ್ಲಿ ಮೇಘನಾ ರಾಜ್ ನಟಿಸಿದ್ದರು. ಈ ಸಿನಿಮಾ ಬಿಡುಗಡೆಯಾದ ಕೇವಲ ಒಂದು ವರ್ಷದ ಅಂತರದಲ್ಲಿ ಮೇಘನಾ ರಾಜ್ ಪತಿ ಚಿರಂಜೀವಿ ಸರ್ಜಾರನ್ನು ಕಳೆದುಕೊಂಡರು.
ನಿಖಿಲ್‌ಗೆ ಸೋಲು
ಈ ಸಿನಿಮಾದಲ್ಲಿ ಅಭಿಮನ್ಯು ಪಾತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ನಟಿಸಿದ್ದರು. ಆದರೆ, ಇವರ ಚೊಚ್ಚಲ ಚುನಾವಣಾ ಸ್ಪರ್ಧೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲು ಕಂಡಿದ್ದರು. ಎರಡು ಬಾರಿ ಚುನಾವಣೆಗೆ ಸ್ಪರ್ಧಿಸಿದರೂ ಇನ್ನೂ ಅವರ ರಾಜಕೀಯ ಜೀವನದಲ್ಲಿ ಸಕ್ಸಸ್ ಸಿಕ್ಕಿಲ್ಲ.
ಅರ್ಜುನ್ ಸರ್ಜಾ
ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಈ ಸಿನಿಮಾದಲ್ಲಿ ಕರ್ಣನ ಪಾತ್ರ ಮಾಡಿದ್ದರು. 'ಕುರುಕ್ಷೇತ್ರ' ಸಿನಿಮಾ ಬಿಡುಗಡೆಗೂ ಮುನ್ನವೇ ಅರ್ಜುನ್ ಸರ್ಜಾ ಸಂಕಷ್ಟಕ್ಕೆ ಸಿಲುಕಿದ್ದರು. 2018ರಲ್ಲಿ ಅರ್ಜುನ್ ಸರ್ಜಾ ಮೇಲೆ ನಟಿ ಶ್ರುತಿ ಹರಿಹರನ್ ಮೀಟೂ ಆರೋಪ ಮಾಡಿದ್ದರು. ಈ ಘಟನೆ ಕನ್ನಡ ಚಿತ್ರರಂಗದ ಮೇಲೆ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿತ್ತು.
ಮುನಿರತ್ನ ಕುರುಕ್ಷೇತ್ರ ಸಿನಿಮಾದಲ್ಲಿ ನಟಿಸಿದ ಬಳಿಕ ಹೀಗೆಲ್ಲ ಆಯ್ತೋ..? ಇಲ್ಲ ಇದೆಲ್ಲವೂ ಕೇವಲ ಕಾಕತಾಳೀಯವೋ ಬೇರೆ ಮಾತು. ಆದರೆ, ಸಿನಿಮಾ ವಲಯದಲ್ಲಿ ಇಂಹದ್ದೊಂದು ವಿಷಯದ ಬಗ್ಗೆ ಚರ್ಚೆಯಾಗುತ್ತಿದೆ. ಅದನ್ನು ನಿಮ್ಮ ಮುಂದೆ ಇಟ್ಟಿದ್ದೇವೆ ಅಷ್ಟೇ. ಇಂತಹ ಹಲವು ನಂಬಿಕೆಗಳು ಚಿತ್ರರಂಗದಲ್ಲಿದೆ. ಆ ಬಗ್ಗೆ ಆಗಾಗ ಚರ್ಚೆಯಾಗುತ್ತಲೇ ಇರುತ್ತೆ.


Click it and Unblock the Notifications










