ರಮ್ಯಾ ಕೈ ನೋಡಿ ಬಿಗ್ ಬಿ ಹೇಳಿದ್ದು ನಿಜವಾಯ್ತಾ? 'ಅಮೃತಧಾರೆ' ಸೆಟ್‌ನಲ್ಲೊಂದು ಸ್ವಾರಸ್ಯಕರ ಪ್ರಸಂಗ
ಬಿಗ್ ಬಿ ಅಮಿತಾಬ್ ಬಚ್ಚನ್ ಕನ್ನಡದ 'ಅಮೃತಧಾರೆ' ಚಿತ್ರದಲ್ಲಿ ನಟಿಸಿದ್ದರು. ಆ ಚಿತ್ರದಲ್ಲೂ ಅಮಿತಾಬ್ ಬಚ್ಚನ್ ಆಗಿಯೇ ಅವರು ಕಾಣಿಸಿಕೊಂಡಿದ್ದು ವಿಶೇಷ. ನಾಗತಿಹಳ್ಳಿ ಚಂದ್ರಶೇಖರ್ ಬಿಗ್‌ಬಿನ ಕನ್ನಡಕ್ಕೆ ಕರೆದುಕೊಂಡು ಬರುವಲ್ಲಿ ಸಕ್ಸಸ್ ಕಂಡಿದ್ದರು. 2005ರಲ್ಲಿ ತೆರೆಕಂಡಿದ್ದ ಸಿನಿಮಾ ಸೂಪರ್ ಹಿಟ್ ಆಗಿತ್ತು.
ದಶಕಗಳ ಹಿಂದೆ ಬಾಲಿವುಡ್ ಸ್ಟಾರ್‌ಗಳು ಸೌತ್ ಸಿನಿಮಾಗಳಲ್ಲಿ ನಟಿಸುವುದು ಅಂದರೆ ತಮಾಷೆ ಮಾತಲ್ಲ. ಆದರೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ತಮ್ಮ ಚಿತ್ರದ ಕಥೆಯಲ್ಲಿ ಬಿಗ್‌ಬಿಯನ್ನು ಕಲ್ಪಿಸಿಕೊಂಡು ಕಥೆ ಸಿದ್ಧಪಡಿಸಿಬಿಟ್ಟಿದ್ದರು. ಕೊನೆಗೆ ಅವರನ್ನು ನಟಿಸೋಕೆ ಒಪ್ಪಿಸಿದ್ದರು. ಕಥೆ ಕೇಳಿ ನಟಿಸಲು ಒಪ್ಪಿದ್ದ ಬಚ್ಚನ್ ಮುಂಬೈನಲ್ಲಿ ಶೂಟಿಂಗ್ ಮಾಡುವಂತೆ ಹೇಳಿದ್ದರು. ಇಡೀ ತಂಡ ಚಿತ್ರೀಕರಣಕ್ಕಾಗಿ ಅಲ್ಲಿಗೆ ಹೋಗಿತ್ತು. ಸುದ್ದಿ ಎಲ್ಲೂ ಸೋರಿಕೆ ಆಗದಂತೆ ಬಹಳ ಜಾಗರೂಕತೆಯಿಂದ ಸಿನಿಮಾ ಚಿತ್ರೀಕರಣ ಮಾಡಿ ಬಂದಿತ್ತು.
ಬಿಗ್ ಬಿ ನಟನೆಯ ಸನ್ನಿವೇಶಗಳ ಶೂಟಿಂಗ್ ವೇಳೆ ನಡೆದ ಘಟನೆಗಳನ್ನು ಕಲಾ ಮಾಧ್ಯಮ ಯೂಟ್ಯೂಬ್ ಚಾನಲ್‌ಗೆ ನೀಡಿದ ಸಂದರ್ಶನದಲ್ಲಿ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಹಂಚಿಕೊಂಡಿದ್ದರು. ಅದರಲ್ಲೂ ಅಮಿತಾಬ್ ಬಚ್ಚನ್ ನಟಿ ರಮ್ಯಾ ಕೈ ನೋಡಿ ಭವಿಷ್ಯ ಹೇಳಿದ್ದ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ.

ರಮ್ಯಾ ಕೈ ನೋಡಿ ಬಿಗ್‌ಬಿ ಹೇಳಿದ್ದೇನು?
ಕರ್ನಾಟಕದಿಂದ ಚಿತ್ರೀಕರಣಕ್ಕಾಗಿ ತಂಡ ಮುಂಬೈಗೆ ಬಂದಿದೆ. ನಮ್ಮ ಜೊತೆ ಕೆಲಸ ಮಾಡುವಾಗ ಯಾರು ನರ್ವಸ್ ಆಗುವುದು ಬೇಡ ಎಂದು ಬಿಗ್‌ಬಿ ಎಲ್ಲರೊಟ್ಟಿಗೂ ಮಾತನಾಡುತ್ತಾ ಕಾಲ ಕಳೆದಿದ್ದರಂತೆ. ಅದರಲ್ಲೂ ಶೂಟಿಂಗ್ ಬಿಡುವಿನ ವೇಳೆ ನಟಿ ರಮ್ಯಾ ಕೈ ಹಿಡಿದು ನಾನು ನಿನ್ನ ಭವಿಷ್ಯ ಹೇಳುತ್ತೇನೆ ಎಂದಿದ್ದಂತೆ. ಅದಕ್ಕೆ ಅಚ್ಚರಿಕೊಂಡ ರಮ್ಯಾ, ಸರ್ ನೀವು ಭವಿಷ್ಯ ಹೇಳುತ್ತೀರಾ? ನಿಮಗೆ ಗೊತ್ತಾ? ಎಂದು ಕೇಳಿದ್ದಂತೆ. ಹೌದು ಗೊತ್ತು ಕಾಲೇಜು ದಿನಗಳಿಂದ ಹೇಳುತ್ತಾ ಬರ್ತಿದ್ದೀನಿ ಎಂದರಂತೆ. ಹೇಳಿ ಸರ್ ಎಂದು ತಮ್ಮ ಕೈ ಕೊಟ್ಟರಂತೆ. ಕೆಲ ಹೊತ್ತು ರಮ್ಯಾ ಕೈ ನೋಡಿದ ಬಿಗ್‌ಬಿ ನಿನ್ನ ಬಗ್ಗೆ 3 ವಿಚಾರಗಳನ್ನು ಹೇಳುತ್ತೇನೆ ಕೇಳು ಎಂದರಂತೆ. ನಾನು ಹೇಳಿದ್ದು ಸರಿ ಇರುತ್ತೆ. ಆದರೆ ಬೇಸರ ಮಾಡಿಕೊಳ್ಳಬಾರದು ಎಂದು ಹೇಳಿದ್ದರಂತೆ.

ಬಿಗ್‌ಬಿ ಮಾತಿಗೆ ರಮ್ಯಾ ಅಚ್ಚರಿ
ಮೊದಲನೆಯದ್ದು "ನಿನಗೆ ಸದ್ಯ ಸಿಕ್ಕಿರುವುದಕ್ಕಿಂತ ಜಾಸ್ತಿ ಸಿಗಬೇಕಿತ್ತು ಎನ್ನುವ ಕೊರಗು ಇದೆ ಅಲ್ವಾ? ಎಂದು ಬಿಗ್ ಬಿ ಹೇಳಿದ್ದಕ್ಕೆ, ರಮ್ಯಾ ಎಸ್ ಸರ್, ಖಂಡಿತ ಸರ್, ನನಗಿಂತ ಸುಮಾರಾಗಿ ಇರುವವರು ಎಲ್ಲೆಲ್ಲೋ ಹೋಗಿಬಿಟ್ಟಿದ್ದಾರೆ. ನಾನು ಇನ್ನು ಬೆಳೆಯಬೇಕು. ಅದಕ್ಕೆ ಒಳ್ಳೆ ಅವಕಾಶ ಸಿಗುತ್ತಿಲ್ಲ. ನೀವು ಹೇಳಿದ್ದು ನಿಜ ಸರ್, ಎರಡನೇಯದ್ದು ಹೇಳಿ ಸರ್ ಎಂದರಂತೆ.

ಅಮಿತಾಬ್ ಮಾತು ನಂಬಿಬಿಟ್ಟ ರಮ್ಯಾ
ಎರಡನೇಯದ್ದು, ನಿನಗೆ ಪದೇ ಪದೇ ಹೊಟ್ಟೆ ನೋವು ಬರುತ್ತದೆ ಅಲ್ಲವೇ? ಎಂದು ಬಿಗ್‌ಬಿ ಹೇಳಿದ್ದಕ್ಕೆ ರಮ್ಯಾ, ಕರೆಕ್ಟ್ ಸರ್ ಎಂದು ಅಚ್ಚರಿ ವ್ಯಕ್ತಪಡಿಸಿದರಂತೆ. ಸರ್ ನೀವು ನಿಜಕ್ಕೂ ಗ್ರೇಟ್, ಅದು ಹೇಗೆ ನಿಮಗೆ ಇದೆಲ್ಲಾ ಗೊತ್ತಾಯಿತು ಎಂದು ರಮ್ಯಾ ಕೇಳಿದ್ದರಂತೆ. ಅದೇ ರೀತಿ ಮೂರನೇಯದ್ದು ಏನು ಎಂದಾಗ "ನಿನಗೆ ಆಗಿಂದಾಗ್ಗೆ ಕೋಪ ಬರುತ್ತೆ, ತಕ್ಷಣ ನೀನು ರಿಯಾಕ್ಟ್ ಆಗಿಬಿಡ್ತೀಯಾ, ಹಿಂದೆ ಮುಂದೆ ನೋಡಲ್ಲ, ಯೋಚನೆ ಮಾಡದೇ ದುಡುಕಿ ತಕ್ಷಣ ಕೋಪ ಮಾಡಿಕೊಳ್ಳುತ್ತೀಯಾ ಅಲ್ವಾ? ಎಂದಿದ್ದಕ್ಕೆ ರಮ್ಯಾ, ಕರೆಕ್ಟ್ ಸರ್ ಎಂದು ತಲೆ ಆಡಿಸಿದ್ದರಂತೆ. ಎಷ್ಟು ಕರಾರುವಕ್ಕಾಗಿ ಹೇಳಿದ್ರಿ ಸರ್ ನೀವು ಗ್ರೇಟ್ ಎಂದರಂತೆ.

ಅಮಿತಾಬ್ 3 ಪ್ರಿಡಿಕ್ಷನ್ ಸೀಕ್ರೆಟ್ ಏನು?
ಅಮಿತಾಬ್ ಬಚ್ಚನ್ ಹಾಗೂ ರಮ್ಯಾ ಸಂಭಾಷಣೆ ನೋಡಿ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರಿಗೂ ಅಚ್ಚರಿ ಆಗಿತ್ತಂತೆ. ಬಿಗ್ ಬಿ ಯಾವಾಗ ಹಸ್ತ ಸಾಮುದ್ರಿಕ ಕಲಿತ್ರು? ಕಲಿತ್ತಿದ್ರು ಕಲಿತಿರಬಹುದು. ನಾನು ಕೈ ಕೊಟ್ಟು ಭವಿಷ್ಯ ಕೇಳಬೇಕು ಎಂದುಕೊಂಡಿದ್ದರಂತೆ. ರಮ್ಯಾ ಎಲ್ಲಾ ನಂಬಿಬಿಟ್ಟಳು ಎಕ್ಸೈಟ್ ಆಗಿಬಿಟ್ಟಳು. ಬಿಗ್‌ಬಿನಾ ದೊಡ್ಡ ಜೋತಿಷ್ಯರ ತರ ರಮ್ಯಾ ನೋಡುತ್ತಿದ್ದಳು. ಆಗ ಅವ್ರು 3 ಪ್ರಿಡಿಕ್ಷನ್ ಸರಿ ಇದೆ ಅಲ್ವಾ? ಎಂದರಂತೆ. ಕಾಲೇಜು ದಿನಗಳಿಂದ ನಾನು ಇದೇ ರೀತಿ ಮಾಡ್ತಿದ್ದೀನಿ. ಈ ತರಹದ 3 ಪ್ರಿಡಿಕ್ಷನ್‌ನ ಪ್ರಪಂಚದ ಎಲ್ಲಾ ಸುಂದರವಾಗ ಹುಡುಗಿಯರಿಗೂ ಹೇಳಬಹುದು. ಯಾಕಂದರೆ ಅದು ನಿಜ ಆಗಿರುತ್ತದೆ ಎಂದು ನಕ್ಕರಂತೆ. ಇದನ್ನು ಕೇಳಿ ರಮ್ಯಾ ಶಾಕ್ ಆಗಿದ್ದರಂತೆ. ನಾನು ರೀತಿ ಸಿನಿಮಾ ಶೂಟಿಂಗ್ ಸೆಟ್‌ನಲ್ಲಿ ನಟಿಯರ ಪ್ರಿಡಿಕ್ಷನ್ ಹೇಳ್ತಿರ್ತೀನಿ. ಯಾಕಂದ್ರೆ ಹುಡುಗಿಯರ ಸುಂದರವಾದ ಕೈ ಮುಟ್ಟಬಹುದು ಎನ್ನುವ ಕಾರಣಕ್ಕೆ ಎಂದರಂತೆ. ಇದನ್ನು ಕೇಳಿ ನಾಗತೀಹಳ್ಳಿ ಚಂದ್ರಶೇಖರ್ ಕೂಡ ಬಿದ್ದು ಬಿದ್ದು ನಕ್ಕರಂತೆ.


Click it and Unblock the Notifications











