'ಅಮೃತಧಾರೆ'ಗೆ ರಮ್ಯಾ ಆಯ್ಕೆ ಆಗಿದ್ದೇಗೆ? ರಜಿನಿಕಾಂತ್ ಬಿಟ್ಟು ಬಿಗ್‌ಬಿ ಬಂದಿದ್ದೇಗೆ?; ನಾಗತಿಹಳ್ಳಿ ಚಂದ್ರಶೇಖರ್
'ಅಮೆರಿಕಾ ಅಮೆರಿಕಾ' ರೀತಿಯಲ್ಲೇ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದಲ್ಲಿ ಮೂಡಿ ಬಂದ ಮತ್ತೊಂದು ಸೂಪರ್ ಹಿಟ್ ಸಿನಿಮಾ 'ಅಮೃತಧಾರೆ'. ಧ್ಯಾನ್ ಹಾಗೂ ರಮ್ಯಾ ಲೀಡ್ ರೋಲ್‌ಗಳಲ್ಲಿ ನಟಿಸಿದ್ದ ಸಿನಿಮಾ ಅವತ್ತಿನ ಕಾಲಕ್ಕೆ ಭರ್ಜರಿ ಯಶಸ್ಸು ಕಂಡಿತ್ತು. ಮನೋಮೂರ್ತಿ ಸಂಗೀತದದಲ್ಲಿ ಆ ಚಿತ್ರದ ಹಾಡುಗಳು ಇವತ್ತಿಗೂ ಸಿನಿರಸಿಕರ ಹಾಟ್ ಫೇವರಿಟ್.
ಇದೇ ಸಿನಿಮಾ ಮೂಲಕ ಬಿಗ್‌ಬಿ ಅಮಿತಾಬ್ ಬಚ್ಚನ್ ಕನ್ನಡ ಚಿತ್ರರಂಗಕ್ಕೆ ಬಂದಿದ್ದರು. ಈಗ ಪ್ಯಾನ್ ಇಂಡಿಯಾ ಜಮಾನ. ಬಾಲಿವುಡ್ ಸೂಪರ್ ಸ್ಟಾರ್‌ಗಳು ದಕ್ಷಿಣದ ಸಿನಿಮಾಗಳಲ್ಲಿ ಸುಲಭವಾಗಿ ನಟಿಸುತ್ತಾರೆ. ಆದರೆ 20 ವರ್ಷಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ಆ ಕಾಲಕ್ಕೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಬಿಗ್‌ಬಿಯನ್ನು ಒಪ್ಪಿಸಿ 'ಅಮೃತಧಾರೆ' ಚಿತ್ರದಲ್ಲಿ ಅತಿಥಿ ಪಾತ್ರ ಮಾಡುವಂತೆ ಮಾಡಿದ್ದರು.

ನಾಗತಿಹಳ್ಳಿ ಚಂದ್ರಶೇಖರ್ ಇತ್ತೀಚೆಗೆ ರ್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ತಮ್ಮ ಸಿನಿಮಾಗಳ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. 'ಅಮೃತಧಾರೆ' ಚಿತ್ರಕ್ಕೆ ಕಲಾವಿದರ ಆಯ್ಕೆ ಆಗಿದ್ದೇಗೆ? ಅದರಲ್ಲೂ ಬಿಗ್‌ಬಿ ಎಂಟ್ರಿ ಹೇಗಾಯ್ತು ಎನ್ನುವುದನ್ನು ನೆನಪಿಸಿಕೊಂಡಿದ್ದಾರೆ. ಮುಂಬೈಗೆ ಹೋಗಿ ಅಮಿತಾಬ್ ಭೇಟಿ ಮಾಡಿ ಕಥೆ ಹೇಳಿ ಒಪ್ಪಿಸಿದ್ದನ್ನು ವಿವರಿಸಿದ್ದಾರೆ.
"ಪ್ಯಾರಿಸ್ ಪ್ರಣಯ ಚಿತ್ರದಲ್ಲಿ ರಮ್ಯಾ ನಾಯಕಿಯಾಗಿ ನಟಿಸಲು ಬಂದಿದ್ದರು. ಆದರೆ ಸಾಧ್ಯವಾಗಿರಲಿಲ್ಲ. ಬಳಿಕ ಆಕೆಗೆ ಒಂದು ಒಳ್ಳೆ ಪಾತ್ರ ಕೊಡಬೇಕು ಎಂದು ನಾನು ಅಂದುಕೊಂಡಿದ್ದೆ. 'ಅಮೃತಧಾರೆ' ಸಿನಿಮಾ ಮಾಡುವ ಹೊತ್ತಿಗೆ ಆಕೆ ಒಂದಷ್ಟು ಸಿನಿಮಾಗಳಲ್ಲಿ ನಟಿಸಿ ಗೆದ್ದಿದ್ದರು. ಬಳಿಕ 'ನನ್ನ ಪ್ರೀತಿಯ ಹುಡುಗಿ' ಚಿತ್ರದಲ್ಲಿ ನಟಿಸಿದ್ದ ಧ್ಯಾನ್ ಹೀರೋ ಆಗಿ ಆಯ್ಕೆ ಆಗಿದ್ದ"
"ಚಿತ್ರದಲ್ಲಿ ನಾಯಕಿ ಆರಾಧಿಸುವ ಒಬ್ಬ ವ್ಯಕ್ತಿ ಪಾತ್ರ ಬೇಕಿತ್ತು. ಆತ ಯಾವುದೇ ಕ್ಷೇತ್ರದ ವ್ಯಕ್ತಿ ಆಗಿರಬಹುದು. ನಾವು ಮೊದಲಿಗೆ ಅಬ್ದುಲ್ ಕಲಾಂ, ಮದರ್ ತೆರೆಸಾ ಹೀಗೆ ಹಲವರನ್ನು ಅಂದುಕೊಂಡಿದ್ದೆವು. ಬಳಿಕ ನಾವು ಮಾಡುತ್ತಿರುವುದು ಸಿನಿಮಾ. ಹಾಗಾಗಿ ಸಿನಿಮಾಗಳಿಗೆ ಸಂಬಂಧಪಟ್ಟವರು ಇದ್ದರೆ ಕಮರ್ಷಿಯಲಿ ಚೆನ್ನಾಗಿರುತ್ತದೆ ಎಂದು ನಿರ್ಧರಿಸಿದೆವು. ಮೊದಲಿಗೆ ರಜಿನಿಕಾಂತ್, ಬಳಿಕ ಅಮಿತಾಬ್ ಎಂದು ಫೈನಲ್ ಮಾಡಿದೆವು"

"ಬಿಗ್‌ಬಿ ನಮಗೆ ಕಾಲ್‌ಶೀಟ್ ಕೊಟ್ಟಿದ್ದಾರೆ ಎಂದುಕೊಂಡು ನಾನು ಅವರಿಲ್ಲದೇ ಇರುವ ಸನ್ನಿವೇಶಗಳನ್ನು ಮೊದಲೇ ಚಿತ್ರೀಕರಿಸಿದ್ದೆ. ನಾಯಕಿ ಮನೆಯಲ್ಲಿ ಬಿಗ್‌ಬಿ ಫೋಟೊ, ಆಕೆ ಅಮಿತಾಬ್ ನನ್ನ ಫಸ್ಟ್ ಹಸ್ಬೆಂಡ್ ಎಂದು ಹೇಳುವುದನ್ನು ಶೂಟ್ ಮಾಡಿಬಿಟ್ಟಿದ್ದೆ. ನನಗೆ ನನ್ನ ಕಥೆಯ ಬಗ್ಗೆ ಅಷ್ಟು ನಂಬಿಕೆ ಇತ್ತು. ಅವರನ್ನು ಭೇಟಿ ಮಾಡಿ ಕಥೆ ಹೇಳಿ ಒಪ್ಪಿಸುತ್ತೇನೆ ಎನ್ನುವ ಭರವಸೆ ಇತ್ತು"
"ಹಿಂದಿ ಪತ್ರಕರ್ತರೊಬ್ಬರ ಮೂಲಕ ಅಮಿತಾಬ್ ಬಚ್ಚನ್ ಅವರನ್ನು ಸಂಪರ್ಕಿಸಿದೆ. ಧ್ಯಾನ್ ಕೂಡ ಮುಂಬೈನವನು ಆಗಿದ್ದರಿಂದ ನನಗೆ ಸಹಾಯವಾಯಿತು. ಮುಂಬೈ ಮನೆಗೆ ಹೋಗಿ ಅಮಿತಾಬ್ ಅವರಿಗೆ ಸ್ಕ್ರಿಪ್ಟ್ ಕೊಟ್ಟು ಮಾತಿಗೆ ಕುಳಿತೆ. ಅವರು ಓದಿ ಏನು ಹೇಳುತ್ತಾರೋ ಎಂದು ಚಡಪಡಿಸುತ್ತಿದ್ದೆ. ಒಂದೇ ಮಾತಿನಲ್ಲಿ ನಾನು ಈ ಚಿತ್ರದಲ್ಲಿ ನಟಿಸುತ್ತೇನೆ" ಎಂದುಬಿಟ್ಟರು.
"ಅಮಿತಾಬ್ ಮಾತು ಕೇಳಿ ಖುಷಿಯಾಯಿತು. ಆದರೆ 'ಅಮೃತಧಾರೆ' ಸಿನಿಮಾ ನಾನೇ ನಿರ್ಮಾಣ ಮಾಡುತ್ತಿದ್ದೆ. ಆದ್ದರಿಂದ ಬಿಗ್‌ಬಿಗೆ ಸಂಭಾವನೆ ಕೊಡುವಷ್ಟು ಹಣ ನನ್ನ ಬಳಿ ಇರಲಿಲ್ಲ. ಅದನ್ನು ಆ ಕ್ಷಣದಲ್ಲೇ ಹೇಳಿಬಿಟ್ಟೆ. ಕೂಡಲೇ ಅವರು ಸಂಭಾವನೆ ಬೇಡ ಎಂದರು. ಆದರೆ ಒಂದು ಕಂಡೀಷನ್ ಹಾಕಿದರು. ತಮ್ಮ ಆರೋಗ್ಯ ಹಾಗೂ ಭದ್ರತೆ ದೃಷ್ಟಿಯಿಂದ ಮುಂಬೈನಲ್ಲೇ ಚಿತ್ರೀಕರಣ ಮಾಡಬೇಕು ಎಂದರು. ಅದಕ್ಕೆ ಒಪ್ಪಿಕೊಂಡೆ" ಎಂದು ನಾಗತಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
ಚಿತ್ರದಲ್ಲಿ ಪುರು ಹಾಗೂ ಅಮೃತಾ ಪಾತ್ರಗಳಲ್ಲಿ ಧ್ಯಾನ್-ರಮ್ಯಾ ನಟಿಸಿದ್ದರು. ಪ್ರೀತಿಸಿ ಮದುವೆ ಆಗುವ ಜೋಡಿಯ ಕನಸುಗಳು ಬೇರೆ ಬೇರೆ. ಪುರುಗೆ ಮನೆ ಕಟ್ಟಿಸುವ ಆಸೆ. ಅಮೃತಾಗೆ ಮಗು, ಬೇರೆ ಬೇಎ ಊರಿಗೆ ಹೋಗುವುದು, ತನ್ನ ಆರಾಧ್ಯದೈವ ಬಿಗ್‌ಬಿ ಭೇಟಿ ಮಾಡುವ ಕನಸು. ಪ್ರೀತಿಯ ಮಡದಿ ಬ್ರೈಮ್ ಕ್ಯಾನ್ಸರ್‌ಗೆ ತುತ್ತಾಗಿ ಬಹಳ ದಿನ ಬದುಕುವುದಿಲ್ಲ ಎನ್ನುವ ವಿಷಯ ಪುರುಗೆ ಗೊತ್ತಾಗುತ್ತದೆ. ಆಗ ಆತ ಪತ್ನಿಯನ್ನು ಇದ್ದಷ್ಟು ದಿನ ಸಂತೋಷವಾಗಿ ನೋಡಿಕೊಳ್ಳುವ ಕಥೆ ಚಿತ್ರದಲ್ಲಿದೆ.


Click it and Unblock the Notifications











