ಆಜಾನುಬಾಹು 'ಸಿಂಧೂರ ಲಕ್ಷ್ಮಣ'ನ ಇಂಟ್ರಡಕ್ಷನ್ ಹೇಗಿರುತ್ತೆ ಗೊತ್ತಾ? ಕಣ್ಣಿಗೆ ಕಟ್ಟಿದಂತೆ ಹೇಳಿದ ನಂದ ಕಿಶೋರ್
ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಐತಿಹಾಸಿಕ ಚಿತ್ರಕ್ಕೆ ವೇದಿಕೆ ಸಿದ್ಧವಾಗ್ತಿದೆ. ತರುಣ್ ಸುಧೀರ್ ನಿರ್ದೇಶನದಲ್ಲಿ 'ಸಿಂಧೂರ ಲಕ್ಷ್ಮಣ' ಸಿನಿಮಾ ಘೋಷಣೆ ಆಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಧೀರ ಸಿಂಧೂರ ಲಕ್ಷ್ಮಣನಾಗಿ ನಟಿಸಲು ಮುಂದಾಗಿದ್ದಾರೆ. ಮೀಡಿಯಾ ಹೌಸ್ ಸ್ಟುಡಿಯೋ ಬ್ಯಾನರ್‌ನಲ್ಲಿ ಶೈಲಜಾ ನಾಗ್ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ.
ಸದ್ಯ ದರ್ಶನ್ 'ಡೆವಿಲ್' ಸಿನಿಮಾ ಕಡೆ ಮುಖ ಮಾಡಿದ್ದಾರೆ. ಬಳಿಕ ಜೋಗಿ ಪ್ರೇಮ್ ನಿರ್ದೇಶನದ ಚಿತ್ರದಲ್ಲಿ ನಟಿಸಬೇಕಿದೆ. ಆ ಬಳಿಕವೇ 'ಸಿಂಧೂರ ಲಕ್ಷ್ಮಣ'ನ ಅವತಾರ ತಾಳಲಿದ್ದಾರೆ. ಬ್ರಿಟೀಷರ ವಿರುದ್ಧ ಹೋರಾಡಿದ ಕ್ರಾಂತಿಕಾರಿ ಹೋರಾಟಗಾರ ಸಿಂಧೂರ ಲಕ್ಷ್ಮಣ. ಈತನನ್ನು ಸಿಂಧೂರ ಲಕ್ಷ್ಮಣ ಅವರನ್ನು ಭಾರತದ ರಾಬಿನ್ ಹುಡ್ ಎಂದೇ ಕರೆಯುತ್ತಾರೆ. ಈತನ ಶೌರ್ಯ ಪರಾಕ್ರಮದ ಬಗ್ಗೆ ಉತ್ತರ ಕರ್ನಾಟಕದಲ್ಲಿ ಜನ ಇಂದಿಗೂ ಮಾತನಾಡುತ್ತಾರೆ.

ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ತ ತಾಲೂಕಿನ ಸಿಂಧೂರ್ ಗ್ರಾಮದಲ್ಲಿ ಲಕ್ಷ್ಮಣ ಹುಟ್ಟಿ ಬೆಳೆದವನು. ಬಹಳ ಸಣ್ಣ ವಯಸ್ಸಿನಲ್ಲಿ ಆಂಗ್ಲರಿಗೆ ಸಿಂಹಸ್ವಪ್ನವಾಗಿ ಲಕ್ಷ್ಮಣ ಕಾಡಿದ್ದ. ಕೊನೆಗೆ ಆತನನ್ನು ಮೋಸದಿಂದ ಕೊಲ್ಲಲಾಯಿತು. ಸಿಂಧೂರ ಲಕ್ಷ್ಮಣ 6 ಅಡಿ 9 ಇಂಚು ಎತ್ತರದ ಅಜಾನುಬಾಹು, ಸ್ಪುರದ್ರೂಪಿ ಸುಂದರಕಾಯದವನಾಗಿದ್ದನಂತೆ. ಇದು ದರ್ಶನ್‌ಗೆ ಚೆನ್ನಾಗಿ ಹೊಂದುವಂತಹ ಪಾತ್ರ ಎನ್ನಲಾಗುತ್ತಿದೆ.
ಕರ್ನಾಟಕದಲ್ಲಿ ಸಿಂಧೂರ ಲಕ್ಷ್ಮಣನ ಕುರಿತು ನಾಟಕ ಬಹಳ ಪ್ರಸಿದ್ಧವಾಗಿದೆ. ಉತ್ತರ ಕರ್ನಾಟಕದಲ್ಲಿ ಈ ನಾಟಕ ಸಾವಿರಾರು ಪ್ರದರ್ಶನ ಕಂಡಿದೆ. 1977ರಲ್ಲಿ 'ವೀರ ಸಿಂಧೂರ ಲಕ್ಷ್ಮಣ' ಎನ್ನುವ ಸಿನಿಮಾ ಕೂಡ ಬಂದಿತ್ತು. ಇನ್ನು ವೀರ ಸಿಂಧೂರ ಲಕ್ಷ್ಮಣನ ನಾಟಕದಲ್ಲಿ ಖ್ಯಾತ ಖಳನಟ ಸುಧೀರ್ ನಟಿಸುತ್ತಿದ್ದರು. ಇದೇ ಕಾರಣಕ್ಕೆ ತರುಣ್ ಸುಧೀರ್ ಈ ಸಿನಿಮಾ ಮಾಡುತ್ತಿರುವುದು ಬಹಳ ಕುತೂಹಲ ಮೂಡಿಸಿದೆ. ಇನ್ನು ರಾಧಾಕೃಷ್ಣ ಪಲ್ಲಕ್ಕಿ ಬಹಳ ಹಿಂದೆಯೇ ಈ ಕಥೆಯನ್ನು ಸಿನಿಮಾ ಮಾಡಲು ಮುಂದಾಗಿದ್ದರು. ಕಿಶೋರ್ ಹೀರೊ ಆಗಿ ಸಿನಿಮಾ ಕೂಡ ಘೋಷಣೆ ಆಗಿತ್ತು. ಬಳಿಕ ನಿಂತು ಹೋಗಿತ್ತು.

ಸದ್ಯ ಸಿಂಧೂರ ಲಕ್ಷ್ಮಣನ ಜೀವನವನ್ನಾಧರಿಸಿ ತರುಣ್ ಸುಧೀರ್ ಸಿನಿಮಾ ಮಾಡಲು ಮುಂದಾಗಿದ್ದಾರೆ. ಅಂದಹಾಗೆ ತರುಣ್ ಸಹೋದರ ನಂದಕಿಶೋರ್ ಕೂಡ ಸಾಕಷ್ಟು ಸಿನಿಮಾಗಳನ್ನು ನಿರ್ದೇಶಿಸಿ ಗೆದ್ದಿದ್ದಾರೆ. ನಂದ ಕೂಡ ಸಿಂಧೂರ ಲಕ್ಷ್ಮಣನ ಕುರಿತು ಸಿನಿಮಾ ಮಾಡಲು ಬಯಸಿದ್ದರು. ಕಥೆ, ಚಿತ್ರಕಥೆ ಸಿದ್ಧಪಡಿಸಿಕೊಂಡಿದ್ದರು. ಹಳೇ ಸಂದರ್ಶನವೊಂದರಲ್ಲಿ ತಾವು ಬರೆದು ಕೊಂಡ ಕಥೆಯಲ್ಲಿ ಸಿಂಧೂರ ಲಕ್ಷ್ಮಣನ ಎಂಟ್ರಿ ಹೇಗಿರುತ್ತದೆ ಎಂದು ವಿವರಿಸಿದ್ದರು.
ಲಾಕ್‌ಡೌನ್ ಸಮಯದಲ್ಲಿ 'ಕ್ಲಾಪ್ ಟು ಕ್ಲಾಪ್ಸ್' ಎನ್ನುವ ಯೂಟ್ಯೂಬ್ ಸಂದರ್ಶನ ಸರಣಿ ಬಂದಿತ್ತು. ಕೆಆರ್‌ಜಿ ಕನೆಕ್ಟ್ ಯೂಟ್ಯೂಬ್ ಚಾನಲ್‌ನಲ್ಲಿ ಬಂದ ಈ ಸಂದರ್ಶನಗಳಲ್ಲಿ ನಂದ ಕಿಶೋರ್ ಹಾಗೂ ದಿನಕರ್ ತೂಗೂದೀಪ ಭಾಗಿ ಆಗಿದ್ದರು. ಕನ್ನಡ ಸಿನಿಮಾಗಳ ಬಗ್ಗೆ ಇಬ್ಬರೂ ಮಾತನಾಡಿದ್ದರು. ಈ ವೇಳೆ 'ಸಿಂಧೂರ ಲಕ್ಷ್ಮಣ' ಸಿನಿಮಾ ಟಾಪಿಕ್ ಬಂದಿತ್ತು.
"ಸಿಂಧೂರ ಲಕ್ಷ್ಮಣ ಡೈನಾಮಿಲ್ ಪರ್ಸನಾಲಿಟಿ. ನಾನು ಒಂದು ಸನ್ನಿವೇಶವನ್ನು ಸಿನಿಮಾ ಟ್ರೈಲರ್ ರೀತಿ ಮಾಡಬೇಕು ಎಂದುಕೊಂಡಿದ್ದೆ. ಒಂದು ಹೆಣ್ಣು ಮಗಳು ಓಡುತ್ತಿರುತ್ತಾಳೆ. ಹಿಂದೆ ಒಂದಷ್ಟು ಜೀಪ್‌ಗಳು ಆಕೆಯನ್ನು ಚೇಸ್ ಮಾಡುತ್ತಿರುತ್ತದೆ. ಆಕೆ ಓಡಿ ಓಡಿ ಒಂದು ಕಡೆ ಹೋಗಿ ಏದುಸಿರು ಬಿಡುತ್ತಾ ನಿಲ್ಲುತ್ತಾಳೆ. ಇದ್ದಕ್ಕಿಂದಂತೆ ಆಕೆಗೆ ಧೈರ್ಯ ಬರುತ್ತದೆ. ಕೂಡಲೇ ಜೀಪ್‌ಗಳ ವಿರುದ್ಧ ನಿಂತು ಕಚ್ಚೆ ಕಟ್ಟಿ ನಿಲ್ಲುತ್ತಾಳೆ. ಕೂಡಲೇ ಸಿಂಧೂರ ಲಕ್ಷ್ಮಣ ಅಲ್ಲಿಗೆ ಬಂದು ಆಕೆಯನ್ನು ಭುಜದ ಮೇಲೆ ಹೊತ್ತು ಓಡಲು ಆರಂಭಿಸುತ್ತಾನೆ. ಆತನ ಸಾಮರ್ಥ್ಯ ಅಂಥಾದ್ದು"
"ಸಿಂಧೂರ ಲಕ್ಷ್ಮಣ ಎಂತಹ ಆಜಾನುಬಾಹು ಅಂದ್ರೆ ಆತನ ರಭಸವಾಗಿ ಓಡುತ್ತಿದ್ದರೆ ಆತನ ಕಾಲ ಬೆರಳುಗಳಿಂದ ಸಿಡಿಯುತ್ತಿದ್ದ ಸಣ್ಣ ಸಣ್ಣ ಕಲ್ಲುಗಳು ಎದುರಾಳಿಗಳ ಮೇಲೆ ಹೋಗಿ ಬೀಳುತ್ತದೆ. ಒಬ್ಬ ಹುಡುಗಿನ್ನು ಭುಜದ ಮೇಲೆ ಕೂರಿಸುಕೊಂಡು ಅಷ್ಟು ಜೋರಾಗಿ ಓಡುವಂತಹ ಬಲ ಸಿಂಧೂರ ಲಕ್ಷ್ಮಣನಿಗಿತ್ತು" ಎಂದು ನಂದ ಕಿಶೋರ್ ವಿವರಿಸಿದ್ದರು.
ನಂದ ಮಾತನಾಡಿದ್ದ ಈ ಹಳೇ ವಿಡಿಯೋ ಈಗ ವೈರಲ್ ಆಗುತ್ತಿದೆ. ದರ್ಶನ್ ಅಭಿಮಾನಿಗಳು ನಂದ ಹೇಳಿದ ಸನ್ನಿವೇಶವನ್ನು ಊಹಿಸಿಕೊಂಡೇ ಥ್ರಿಲ್ಲಾಗಿದ್ದಾರೆ. ಇಂತಹ ಸನ್ನಿವೇಶದಲ್ಲಿ ದರ್ಶನ್ ನಟಿಸಿದ್ದರೆ ಕಣ್ಣಿಗೆ ಹಬ್ಬ ಎಂದು ಖುಷಿಪಡುತ್ತಿದ್ದಾರೆ.


Click it and Unblock the Notifications










