70 ವರ್ಷಗಳ ಹಿಂದಿನ ಕಲ್ಯಾಣ್ ಕುಮಾರ್ ಹಾಡು ದಿಢೀರ್ ವೈರಲ್; ಕಾರಣವೇನು?
ಸೋಶಿಯಲ್ ಮೀಡಿಯಾದಲ್ಲಿ ಯಾವಾಗ, ಯಾವ ವಿಚಾರ ವೈರಲ್ ಆಗುತ್ತದೆ ಎಂದು ಹೇಳೋಕೆ ಸಾಧ್ಯವಿಲ್ಲ. 25 ವರ್ಷಗಳ ಹಿಂದಿನ ಉಪೇಂದ್ರ ಚಿತ್ರದ 'ಏನಿಲ್ಲ ಏನಿಲ್ಲ' ಗೀತೆ ಕಳೆದ ವರ್ಷ ಭಾರೀ ಸದ್ದು ಮಾಡಿದ್ದು ಗೊತ್ತೇಯಿದೆ. ಇದೀಗ ಅದೇ ರೀತಿ 70 ವರ್ಷಗಳ ಹಿಂದಿನ ಕನ್ನಡ ಚಿತ್ರಗೀತೆಯೊಂದು ಸಖತ್ ಸದ್ದು ಮಾಡ್ತಿದೆ.
ಟಿಕ್‌ಟಾಕ್, ರೀಲ್ಸ್‌ಗಳಲ್ಲಿ ಏನೇನೋ ವೈರಲ್ ಆಗುತ್ತದೆ. ಸಿನಿಮಾಗಳ ಡೈಲಾಗ್, ಸಾಂಗ್ಸ್ ಎಲ್ಲದ್ದಕ್ಕೂ ರೀಲ್ಸ್ ಮಾಡಿ ಹಾಕುವವರ ಸಂಖ್ಯೆ ಹೆಚ್ಚುತ್ತಿದೆ. ಏನಾದರೂ ಇಂಟ್ರೆಸ್ಟಿಂಗ್ ಆಗಿ ಕಂಡರೆ ಇಂಟ್ರೆಸ್ಟಿಂಗ್ ಆಗಿ ಕಿವಿ ಮೇಲೆ ಬಿದ್ದರೆ ಅದು ಕೂಡಲೇ ರೀಲ್ಸ್ ಆಗಿಬಿಡುತ್ತದೆ. ಜನ ಮರಳೋ ಜಾತ್ರೆ ಮರುಳೋ ಎಂದು ಒಬ್ಬರನ್ನೊಬ್ಬರು ನೋಡಿ ಅದನ್ನೇ ಎಲ್ಲರೂ ಟ್ರೆಂಡ್ ಮಾಡಿ ಫೇಮಸ್ ಮಾಡಿಬಿಡುತ್ತಾರೆ.

ಕೆಲವೊಮ್ಮೆ ಬೇಡದ ವಿಚಾರಗಳೆಲ್ಲಾ ರೀಲ್ಸ್ ರೂಪದಲ್ಲಿ ವೈರಲ್ ಆಗುತ್ತದೆ. ಬೆಳ್ಳುಳ್ಳಿ ಕಬಾಬ್, ರಾಹುಲ್ಲಾ ಜೊತೆಗೆ 'ಏನಿಲ್ಲ ಏನಿಲ್ಲ' ಹಾಡನ್ನು ಸೇರಿಸಿ ಸಿಕ್ಕಾಪಟ್ಟೆ ಟ್ರೆಂಡ್ ಮಾಡಿಬಿಟ್ಟರು. 1956ರಲ್ಲಿ ಬಂದಿದ್ದ ಕಲ್ಯಾಣ್ ಕುಮಾರ್ ಅಭಿನಯದ ಸಿನಿಮಾ ಗೀತೆ ಇದೀಗ ಟ್ರೆಂಡ್ ಹುಟ್ಟಿಹಾಕುತ್ತಿದೆ. ರೀಲ್ಸ್ ಪ್ರಿಯರು ಇದಕ್ಕೆ ವೀಡಿಯೋಗಳನ್ನು ಮಾಡಿ ತೇಲಿಬಿಡುತ್ತಿದ್ದಾರೆ. ಆ ರೀಲ್ಸ್ ನೋಡಿದವರು ಯೂಟ್ಯೂಬ್‌ಗೆ ಹೋಗಿ ಅದ್ಯಾವ ಗೀತೆ ಎಂದು ಹುಡುಕಾಡುತ್ತಿದ್ದಾರೆ.
1956ರಲ್ಲಿ ಕಲ್ಯಾಣ್ ಕುಮಾರ್ ಹಾಗೂ ಮೈನಾವತಿ ನಟನೆಯ 'ಮುತ್ತೈದೆ ಭಾಗ್ಯ' ಸಿನಿಮಾ ಮೂಡಿ ಬಂದಿತ್ತು. ಕಪ್ಪು ಬಿಳುಪಿನ ಸಿನಿಮಾ ಅವತ್ತಿನ ಕಾಲಕ್ಕೆ ಪ್ರೇಕ್ಷಕರನ್ನು ರಂಜಿಸಿತ್ತು. ವಿಠಲಚಾರ್ಯ ನಿರ್ಮಿಸಿ ನಿರ್ದೇಶನ ಮಾಡಿದ್ದ ಸಿನಿಮಾ ಅದು. ಚಿತ್ರಕ್ಕೆ ರಾಜನ್- ನಾಗೇಂದ್ರ ಸಂಗೀತ ಸಂಯೋಜನೆ ಮಾಡಿದ್ದರು. 'ನಾನೊಂದು ಮದುವೆಯ ಮಾಡಿಕೊಂಡೆ ಮನದಾನಂದವನ್ನು ನಾ ಕಳೆದುಕೊಂಡೆ' ಎಂದು ಕಲ್ಯಾನ್ ಕುಮಾರ್ ಹಾಡಿ ಕುಣಿಯುವ ಹಾಡು ಸದ್ದು ಮಾಡಿತ್ತು.
ಇದೀಗ ದಿಢೀರನೆ ಈ ಹಾಡು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಗಮನ ಸೆಳೆದಿದೆ. ಕೆಲವರು ರೀಲ್ಸ್ ಮಾಡಿ ಎಂಜಾಯ್ ಮಾಡುತ್ತಿದ್ದಾರೆ. ಹಠಮಾರಿ ಹುಡುಗಿಯನ್ನು ಮದುವೆಯಾದ ಪತಿಯ ಗೋಳನ್ನು ಹೇಳುವ ಹಾಡಿದು. ಮದುವೆಯಾದ ಕೆಲವರ ವ್ಯಥೆಯ ಬಗ್ಗೆ 7 ದಶಕಗಳ ಹಿಂದೆಯೇ ಎಷ್ಟು ಒಳ್ಳೆ ಹಾಡು ಮಾಡಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.
ಕನ್ನಡ ಚಿತ್ರರಂಗದ ಜನಪ್ರಿಯ ಕಲಾವಿದರಲ್ಲಿ ಕಲ್ಯಾಣ್‌ಕುಮಾರ್ ಸಹ ಒಬ್ಬರು. ಅಣ್ಣಾವ್ರ ಜೊತೆ ಜೊತೆ ಚಿತ್ರರಂಗಕ್ಕೆ ಬಂದವರು. ಕುಮಾತ್ರಯರಲ್ಲಿ ಒಬ್ಬರೆನಿಸಿಕೊಂಡವರು. ಕೆಲ ಸೂಪರ್ ಹಿಟ್ ಸಿನಿಮಾಗಳಲ್ಲಿ ಅವರು ನಟಿಸಿದ್ದರು. ತಮ್ಮ ಅದ್ಭುತ ನಟನೆಯಿಂದ ಪ್ರೇಕ್ಷಕರ ಮನ ಗೆದ್ದಿದ್ದರು. ಬಳಿಕ ಪೋಷಕ ಪಾತ್ರಗಳತ್ತ ಮುಖ ಮಾಡಿದ್ದರು.
ರೀಲ್ಸ್ ಕಾರಣಕ್ಕೆ ಒಂದೊಳ್ಳೆ ಹಾಡನ್ನು ಮತೆತ ಕೇಳುವಂತಾಯಿತು, ಸಿನಿಮಾ ನೋಡುವಂತಾಯಿತು ಎಂದು ಕೆಲವರು ಹೇಳುತ್ತಿದ್ದಾರೆ. ಒಟ್ಟಾರೆ 'ತಕ್ಕ ಥೈಯಾ ದಿಕ್ಕ ಥೈಯಾ' ಎಂದು ಗುನುಗಲು ಆರಂಭಿಸಿದ್ದಾರೆ. 'ಮುತ್ತೈದೆ ಭಾಗ್ಯ' ಚಿತ್ರದಲ್ಲಿ ಮೈನಾವತಿ ಹಾಗೂ ಎಂ. ಜಯಶ್ರೀ ಲೀಡ್ ರೋಲ್‌ಗಳಲ್ಲಿ ನಟಿಸಿದ್ದರು. ಹುಣಸೂರು ಕೃಷ್ಣಮೂರ್ತಿ, ಬಾಲಕೃಷ್ಣ ಹಾಗೂ ಮಾಸ್ಟರ್ ಹಿರಣ್ಣಯ್ಯ ಸಹ ತಾರಾಗಣದಲ್ಲಿದ್ದರು.
ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಸ್ತ್ರೀ ಸ್ವಾತಂತ್ರ್ಯ ಅಗತ್ಯ. ಹೆಣ್ಣು ಯಾರಿಗಿಂತ ಕಮ್ಮಿ ಇಲ್ಲ, ಗಂಡು ತನ್ನ ಅಡಿ ಆಳಾಗಿ ಇರಬೇಕು, ನಾನು ಹೇಳಿದ್ದತೆ ಕೇಳಬೇಕು ಎಂದು ವಾದಿಸುವ ನಾಯಕಿ. ಸಂಗೀತದ ಮೇಷ್ಟ್ರಾಗಿ ಬಂದು ಆಕೆಯನ್ನು ಮದುವೆಯಾಗಿ ಆಕೆಗೆ ಸರಿ ತಪ್ಪುಗಳ ಪಾಠ ಮಾಡುವ ನಾಯಕನಾಗಿ ಕಲ್ಯಾಣ್ ಕುಮಾರ್ ನಟಿಸಿದ್ದರು.


Click it and Unblock the Notifications











