ಮಗನ ಸುಟ್ಟ ಕೈ ನೋಡಿ, ಕೊರಗುತ್ತಿದ್ರು.. ಆತ ಅಗಲಿದ ಮೇಲೆ ನಲುಗಿಹೋಗಿದ್ರು ನರಸಿಂಹರಾಜು
ಬಹಳ ಕಡಿಮೆ ಅವಧಿಯಲ್ಲಿ ನೂರಾರು ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರು ರಂಜಿಸಿದ ಕಲಾವಿದ ನರಸಿಂಹರಾಜು. ಸಣಕಲು ದೇಹ, ಕೋಲು ಮುಖ, ಉಬ್ಬು ಹಲ್ಲು, ಅವರ ಬಾಡಿ ಲಾಂಗ್ವೇಜ್ ನೋಡುತ್ತಿದ್ದರೆ ಎಂತಹವರು ನಗುತ್ತಿದ್ದರು. ಇನ್ನು ತಮ್ಮ ಕಾಮಿಡಿ ಟೈಮಿಂಗ್‌ನಿಂದ ನರಸಿಂಹರಾಜು ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಿದ್ದರು. ತಮ್ಮ ಅದ್ಭುತ ನಟನೆಯಿಂದ ಹಾಸ್ಯ ಚಕ್ರವರ್ತಿ ಬಿರುದು ಪಡೆದುಕೊಂಡರು.
ಇಂದು ನರಸಿಂಹರಾಜು ಅವರ 100ನೇ ವರ್ಷದ ಹುಟ್ಟುಹಬ್ಬ. 50, 60, 70ರ ದಶಕದಲ್ಲಿ ಅವರು ಬಹು ಬೇಡಿಕೆಯ ಹಾಸ್ಯ ಕಲಾವಿದರೆಸಿದ್ದರು. ನಾಯಕ ನಟರ ಕಾಲ್‌ಶೀಟ್ ಸಿಕ್ಕರೂ ನರಸಿಂಹರಾಜು ಕಾಲ್‌ಶೀಟ್ ಸಿಗುವುದು ಕಷ್ಟ ಎನ್ನುವ ಕಾಲ ಅದು. ನಾಯಕ-ನಾಯಕಿಗೆ ಡ್ಯುಯೆಟ್ ಸಾಂಗ್ ಇದ್ದಂತೆ ಹಾಸ್ಯ ಪಾತ್ರದಲ್ಲಿ ನಟಿಸುತ್ತಿದ್ದ ಇವರಿಗೂ ಹಾಡುಗಳು ಇರುತ್ತಿತ್ತು. ಡಾ. ರಾಜ್‌ಕುಮಾರ್ ಹಾಗೂ ನರಸಿಂಹ ರಾಜು ಜೋಡಿ ಸೂಪರ್ ಹಿಟ್ ಆಗಿತ್ತು. ಬಹಳ ಕಡಿಮೆ ಸಮಯದಲ್ಲಿ ಕನ್ನಡ ಸಿನಿರಸಿಕರ ಮನಸ್ಸಿನಲ್ಲಿ ಅವರು ಶಾಶ್ವತ ಹೆಸರು ಸಂಪಾದಿಸಿದ್ದಾರೆ.

ನರಸಿಂಹರಾಜು 1979ರ ಜುಲೈ 20ರಂದು ಹೃದಯಾಘಾತದಿಂದ ನಿಧರಾದರು. 56 ವರ್ಷಕ್ಕೆ ಬಾರದಲೋಕಕ್ಕೆ ಪಯಣ ಬೆಳೆಸಿಬಿಟ್ಟರು. ಅದು ಸಾಯುವ ವಯಸ್ಸೇನು ಆಗಿರಲಿಲ್ಲ. ಬಾಲನಟರಾಗಿ ರಂಗಭೂಮಿ ಪ್ರವೇಶಿಸಿದ ಅವರು ಮುಂದೆ ಚಿತ್ರರಂಗಕ್ಕೂ ಬಂದು ಯಶಸ್ವಿ ಆಗಿದ್ದರು. 26 ವರ್ಷಗಳ ಚಿತ್ರಜೀವನದಲ್ಲಿ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು. ನಿರ್ಮಾಪಕರು ಆಗಿದ್ದರು. ಚಿತ್ರರಂಗಕ್ಕೆ ಬಂದಮೇಲೂ ನಾಟಗಳಲ್ಲಿ ನಟಿಸುತ್ತಿದ್ದರು.
ನಿಜ ಜೀವನದಲ್ಲಿ ನೋವಿನ ಘಟನೆಗಳು
ತಮ್ಮ ಕಾಮಿಡಿಯಿಂದ ಇಡೀ ಪ್ರಪಂಚವನ್ನು ನಗಿಸುತ್ತಿದ್ದ ಚಾರ್ಲಿ ಚಾಪ್ಲಿನ್ ನಿಜ ಜೀವನದಲ್ಲಿ ಸಾಕಷ್ಟು ನೊಂದಿದ್ದರು. ಆ ನೋವನ್ನೆಲ್ಲಾ ಸಹಿಸಿಕೊಂಡು ತೆರೆಮೇಲೆ ಎಲ್ಲರನ್ನು ನಗಿಸುತ್ತಿದ್ದರು. ಸಾಕಷ್ಟು ಹಾಸ್ಯನಟರ ನಿಜ ಜೀವನ ಹೀಗೆಯೇ ಇರುತ್ತದೆ. ಆದರೆ ಅದು ಯಾರಿಗೂ ಅರ್ಥವಾಗುವುದಿಲ್ಲ. ಕನ್ನಡದ ಚಾರ್ಲಿ ಚಾಪ್ಲಿನ್ ಎಂದೇ ಖ್ಯಾತರಾಗಿದ್ದ ನರಸಿಂಹರಾಜು ಅವರ ಜೀವನದಲ್ಲೂ ಸಾಕಷ್ಟು ನೋವಿನ ಸಂಗತಿಗಳಿದ್ದವು. ಮಗ ರಸ್ತೆ ಅಪಘಾತದಲ್ಲಿ ತೀರಿಕೊಂಡ ಮೇಲೆ ಕುಸಿದುಬಿಟ್ಟಿದ್ದರು.

ಮಗನ ಸಾವಿನ ಆಘಾತ
ಪುತ್ರ ಶೋಕ ನಿರಂತರಂ ಎನ್ನುವ ಮಾತಿದೆ. ಅಂದರೆ ಮಗ ಅಥವಾ ಮಗುವನ್ನು ಕಳೆದುಕೊಂಡು ಆ ನೋವು ತಂದೆಗೆ ಜೀವನ ಪರ್ಯಂತ ಇರುತ್ತದೆ. ನರಸಿಂಹ ರಾಜು ಮುದ್ದಿನ ಮಗ ಶ್ರೀಕಾಂತ್ ನಿಧನದ ನೋವಿನಿಂದ ಕೊನೆಯವರೆಗೂ ಹೊರಬರಲೇ ಇಲ್ಲ. "ಮಗ ತೀರಿಕೊಂಡ ಮೇಲೆ ಅವರ ಬುದ್ದಿನೇ ಸ್ವಲ್ಪ ಸ್ಥಿಮಿತದಲ್ಲಿ ಇರಲಿಲ್ಲ. ಮಾತಾಡ್ತಾ ಮಾತಾಡ್ತಾ ಶ್ರೀಕಾಂತಾ ಅಂತಿದ್ರು. ಅಷ್ಟೊಂದು ಹುಚ್ಚು ಹಿಡಿದು ಬಿಟ್ಟಿತ್ತು ಅವರಿಗೆ" ಎಂದು ಸಂದರ್ಶನವೊಂದರಲ್ಲಿ ಸ್ವತಃ ಡಾ. ರಾಜ್‌ಕುಮಾರ್ ಹೇಳಿದ್ದರು.
ಚಿಕ್ಕಂದಿನಲ್ಲಿ ಕೈ ಸುಟ್ಟುಕೊಂಡಿದ್ದ ಮಗ
ನರಸಿಂಹರಾಜು ಅವರಿಗೆ ಹಿರಿಮಗ ಶ್ರೀಕಾಂತ್ ಅಂದರೆ ಅಪಾರ ಪ್ರೀತಿ. ಸಾಗರದಲ್ಲಿ ಒಮ್ಮೆ ಎಲ್ಲರೂ ನಾಟಕ ಮಾಡಲು ಹೋಗಿದ್ದರಂತೆ. ಕುಟುಂಬ ಸಮೇತ ಆಗ ವಾರಗಳಗಟ್ಟಲೆ ನಾಟಕಗಳನ್ನು ಮಾಡಲು ಕಲಾವಿದರು ಹೋಗುತ್ತಿದ್ದರು. ಸಾಗರದಲ್ಲಿ ಕ್ಯಾಂಪ್ ಹಾಕಿದ್ದಾಗ ಅಲ್ಲೇ ಒಂದು ಛತ್ರದಲ್ಲಿ ಉಳಿದುಕೊಳ್ಳಲು ಎಲ್ಲರಿಗೂ ವ್ಯವಸ್ಥೆ ಆಗಿತ್ತು. 9 ರಿಂದ 10 ವರ್ಷದ ಶ್ರೀಕಾಂತ ಆಟವಾಡುತ್ತಾ ಬೂದಿ ಮುಚ್ಚಿದ ಕೆಂಡದಲ್ಲಿ ಕೈ ಇಟ್ಟು ಎರಡೂ ಕೈಗಳನ್ನು ಸುಟ್ಟುಕೊಂಡಿದ್ದ. ನರಸಿಂಹ ರಾಜು ದುಡಿದ ಹಣವನ್ನೆಲ್ಲಾ ಚಿಕಿತ್ಸೆಗೆ ಬಳಸಿದರೂ ಎಡಗೈ ಮೊದಲಿನಂತೆ ಆಗಲಿಲ್ಲವಂತೆ. ಆ ಕೈ ನೋಡಿದಾಗಲೆಲ್ಲಾ ನರಸಿಂಹರಾಜು ಕೊರಗುತ್ತಿದ್ದರಂತೆ. ಈ ವಿಚಾರವನ್ನು ಸಂದರ್ಶನವೊಂದರಲ್ಲಿ ನಿರ್ದೇಶಕ ಭಗವಾನ್ ಹೇಳಿದ್ದರು.
ಮಗನ ಹೆಸರಿನಲ್ಲಿ ಚಿತ್ರ ನಿರ್ಮಾಣ ಸಂಸ್ಥೆ
ನರಸಿಂಹ ರಾಜು ಪುತ್ರ ಶ್ರೀಕಾಂತ್ 1971ರ ಫೆಬ್ರವರಿ 28ರಂದು ರಸ್ತೆ ಅಪಘಾತ ಕೊನೆಯುಸಿರೆಳೆದಿದ್ದ. ಮಗನ ಹೆಸರಿನಲ್ಲೇ ಚಿತ್ರ ನಿರ್ಮಾಣ ಸಂಸ್ಥೆ ಸ್ಥಾಪಿಸಿದ್ದ ನರಸಿಂಹರಾಜು 'ಪ್ರೊ. ಹುಚ್ಚುರಾಯ' ಚಿತ್ರವನ್ನು ನಿರ್ಮಿಸಿ ನಟಿಸಿದ್ದರು. ಆದರೆ ಮಗನ ಸಾವಿನ ಆಘಾತದಿಂದ ಹೊರ ಬರಲೇಯಿಲ್ಲ. ಆತ ಅಗಲಿದ 8 ವರ್ಷಗಳ ಬಳಿಕ 1979ರ ಜುಲೈ 20ರ ಮುಂಜಾನೆ 4.30ರ ಸುಮಾರಿಗೆ ತೀವ್ರ ಹೃದಯಾಘಾತದಿಂದ ನರಸಿಂಹರಾಜು ನಿಧನರಾದರು.


Click it and Unblock the Notifications











