ಒಳ್ಳೆ ಸಿನಿಮಾಗಳ ಬರ ಎದುರಿಸುತ್ತಿರುವ ಚಿತ್ರಮಂದಿರಗಳು: ಮಲ್ಟಿಪ್ಲೆಕ್ಸ್‌ಗಳಿಗೂ ಉಳಿಗಾಲ ಇಲ್ಲ!
ಒಂದ್ಕಾಲದಲ್ಲಿ ಪ್ರೇಕ್ಷಕರು ಥಿಯೇಟರ್‌ಗಳ ಮುಂದೆ ಗಂಟೆಗಟ್ಟಲೆ ಕ್ಯೂ ನಿಂತು ಟಿಕೆಟ್ ತಗೊಂಡು ಸಿನಿಮಾ ನೋಡುತ್ತಿದ್ದರು. ಟಿಕೆಟ್ ಸಿಗದಿದ್ದರೆ 10 ಪಟ್ಟು ಹೆಚ್ಚು ಹಣ ಕೊಟ್ಟು ಬ್ಲಾಕ್‌ನಲ್ಲಿ ಟಿಕೆಟ್ ಖರೀದಿಸುತ್ತಿದ್ದರು. ಈಗ ಅದೆಲ್ಲ ನೆನಪು ಮಾತ್ರ. ಇವತ್ತು ಬೆರಳ ತುದಿಯಲ್ಲಿ ಎಲ್ಲವೂ ಇದೆ. ಥಿಯೇಟರ್‌ಗಳಂತೂ ದಿನದಿಂದ ದಿನಕ್ಕೆ ಕಮ್ಮಿ ಆಗುತ್ತಲೇ ಇವೆ.
ಮಲ್ಟಿಪ್ಲೆಕ್ಸ್‌ಗಳ ಆರ್ಭಟದ ನಡುವೆ ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳು ಕಳೆಗುಂದಿವೆ. ಹಳೇ ಥಿಯೇಟರ್ ಮಾಲೀಕರು ಬಿಗುಮಾನ ಬಿಡದೇ ಥಿಯೇಟರ್‌ಗಳನ್ನು ನೂಕುತ್ತಿದ್ದಾರೆ. ದೊಡ್ಡ ದೊಡ್ಡ ಸಿನಿಮಾಗಳು ಬರದೇ ಥಿಯೇಟರ್‌ಗಳು ಖಾಲಿ ಹೊಡೆಯುತ್ತಿವೆ. ಹೊಸಬರ ಸಿನಿಮಾಗಳನ್ನು ಪ್ರೇಕ್ಷಕರು ಕ್ಯಾರೆ ಅನ್ನುತ್ತಿಲ್ಲ. ಬೇರೆ ದಾರಿ ಕಾಣದೇ ನಷ್ಟ ಭರಿಸಲಾಗದೇ ಥಿಯೇಟರ್‌ಗಳನ್ನು ಮುಚ್ಚುವಂತಾಗಿದೆ. ಥಿಯೇಟರ್ ನಡೆಸುವುದರಿಂದ ಲಾಭ ಇಲ್ಲ ಎನ್ನುವವರು ಶಾಪಿಂಗ್ ಮಾಲ್, ಕಮರ್ಷಿಯಲ್ ಕಾಂಪ್ಲೆಕ್ಸ್ ನಿರ್ಮಾಣ ಮಾಡುತ್ತಿದ್ದಾರೆ.

ಕೆಲವೇ ವರ್ಷಗಳ ಹಿಂದೆ ಬೆಂಗಳೂರಿನ ಕೆಜಿ ರಸ್ತೆ ಸುತ್ತಾಮುತ್ತ 15 ಥಿಯೇಟರ್‌ಗಳಿದ್ದವು. ಈಗ ಆ ಸಂಖ್ಯೆ 5ಕ್ಕೆ ಇಳಿದಿದೆ. ಮುಂದೆ ಅವು ಕೂಡ ನೆಲಸಮವಾಗುವ ಭೀತಿ ಇದೆ. ಟಿವಿ, ಮೊಬೈಲ್, ಓಟಿಟಿ ಇಲ್ಲದ ಕಾಲದಲ್ಲಿ ಜನರಿಗೆ ಮನರಂಜನೆ ಅಂದರೆ ಸಿನಿಮಾ ಎನ್ನುವಂತಾಗಿತ್ತು. ಅದಕ್ಕಾಗಿ ಜನ ಥಿಯೇಟರ್‌ಗೆ ಹೋಗಬೇಕಿತ್ತು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಜನರಿಗೆ ಮನರಂಜನೆ ಮಾಧ್ಯಮಗಳು ಅಧಿಕವಾಗಿವೆ. ಅದನ್ನೆಲ್ಲಾ ಬಿಟ್ಟು ಜನರನ್ನು ಚಿತ್ರಮಂದಿರಗಳಿಗೆ ಸೆಳೆಯುವುದು ತಮಾಷೆಯ ಮಾತಲ್ಲ.
ದಶಕಗಳ ಹಿಂದೆ ಕನ್ನಡ ಸಿನಿಮಾಗಳು ವರ್ಷಗಳ ಕಾಲ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದ್ದವು. ಆದರೆ ಈಗ ಒಂದೇ ವಾರಕ್ಕೆ ಎತ್ತಂಗಡಿಯಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಟಾರ್ ನಟರ ದೊಡ್ಡ ಸಿನಿಮಾಗಳ ಬ್ಯುಸಿನೆಸ್ ಕೂಡ ಒಂದೆರಡು ವಾರಕ್ಕೆ ಮುಗಿದುಹೋಗುತ್ತದೆ. 20 ವರ್ಷಗಳ ಹಿಂದೆ ಬೆಂಗಳೂರಿನಲ್ಲೇ 200ಕ್ಕೂ ಅಧಿಕ ಚಿತ್ರಮಂದಿರಗಳಿದ್ದವು. ಆದರೆ ಮಲ್ಟಿಪ್ಲೆಕ್ಸ್‌ಗಳ ಭರಾಟೆ ಶುರುವಾದ ಬಳಿಕ ಆ ಸಂಖ್ಯೆ ಇಳಿಕೆಯಾಯಿತು. ಜನ ಒಂದೇ ಜಾಗದಲ್ಲಿ ಶಾಪಿಂಗ್, ಎಂಟರ್‌ಟೈನ್‌ಮೆಂಟ್ ಕೇಳುತ್ತಾರೆ ಎಂದು ಮಾಲ್‌ಗಳ ಸಂಸ್ಕೃತಿ ಆರಂಭವಾಯಿತು. ಇದು ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳಿಹೆ ಪೆಟ್ಟು ಕೊಟ್ಟಿದ್ದು ಸುಳ್ಳಲ್ಲ.

70, 80, 90ರ ದಶಕದಲ್ಲಿ ಮೆಜೆಸ್ಟಿಕ್ ಸುತ್ತಾಮುತ್ತಾ ಎತ್ತ ನೋಡಿದರು ಸಿನಿಮಾ ಪೋಸ್ಟರ್‌ಗಳು ರಾರಾಜಿಸುತ್ತಿದ್ದವು. ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಚಿರಂಜೀವಿ, ಅಮಿತಾಬ್ ಬಚ್ಚನ್ ಹೀಗೆ ಸ್ಟಾರ್ ನಟರ ಸಿನಿಮಾಗಳು ಪ್ರದರ್ಶನವಾಗುತ್ತಿದ್ದವು. ಕಾಸ್ಮೋಪಾಲಿಟನ್ ಸಿಟಿಯಾಗಿ ಬೆಳೆದ ಬೆಂಗಳೂರಿನಲ್ಲಿ ದೇಶದ ಎಲ್ಲಾ ಭಾಷೆಯ ಜನರು ಬಂದು ನೆಲೆಸುವಂತಾಯಿತು. ಹಾಗಾಗಿ ಪರಭಾಷೆಯ ಸಿನಿಮಾಗಳನ್ನು ಥಿಯೇಟರ್‌ಗೆ ಹೋಗಿ ನೋಡುವವರ ಸಂಖ್ಯೆ ಹೆಚ್ಚಾಗಿತ್ತು. ಹಾಗಾಗಿ ಎಲ್ಲಾ ಭಾಷೆಯ ಸಿನಿಮಾಗಳು ಥಿಯೇಟರ್‌ಗಳಲ್ಲಿ ಪ್ರದರ್ಶನವಾಗುತ್ತಿತ್ತು.
ಟಿವಿ ಬಂದಾಗಲೇ ಜನ ಥಿಯೇಟರ್‌ಗೆ ಬರುವುದು ಕಮ್ಮಿ ಆಯಿತು. 24 ಗಂಟೆ ಮನೆಯಲ್ಲೇ ಮನರಂಜನೆ ಸಿಗುವಂತಾಯಿತು. ಮೊಬೈಲ್ ಬಂದಮೇಲೆ ಆ ಸಂಖ್ಯೆ ಮತ್ತಷ್ಟು ಕಮ್ಮಿ ಆಗಿತ್ತು. ಇದೀಗ ಓಟಿಟಿ ಜಮಾನ ಶುರುವಾಗಿದ್ದು ಜನ ಹೊಸ ಸಿನಿಮಾ ನೋಡುವುದಕ್ಕೂ ಥಿಯೇಟರ್‌ಗೆ ಹೋಗಲು ಹಿಂದುಮುಂದು ನೋಡುತ್ತಿದ್ದಾರೆ. ಒಂದೆರಡು ವಾರಕ್ಕೆ ಓಟಿಟಿಗೆ ಬರುತ್ತೆ ಬಿಡು ಎನ್ನುತ್ತಿದ್ದಾರೆ. ಆಂಧ್ರ, ತೆಲಂಗಾಣ, ತಮಿಳುನಾಡಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಚಿತ್ರಮಂದಿರಗಳ ಸಂಖ್ಯೆ ಕಮ್ಮಿ ಇದೆ. ಆದರೂ ಸಹ ದಿನದಿಂದ ದಿನಕ್ಕೆ ಒಂದೊಂದೇ ಥಿಯೇಟರ್ ಕಣ್ಮರೆ ಆಗುತ್ತಿದೆ.
ಮಲ್ಟಿಪ್ಲೆಕ್ಸ್‌ಗಳ ವಾತಾವರಣಕ್ಕೂ ಜನ ಮಾರು ಹೋಗಿದ್ದಾರೆ. ಹಾಗಾಗಿ ಸಿಂಗಲ್ ಸ್ಕ್ರೀನ್ ಥಿಯೇಟರ್‌ಗೆ ಬರೋಕೆ ಹಿಂದೇಟು ಹಾಕುತ್ತಿದ್ದಾರೆ. ಹಾಗಂತ ಮಲ್ಟಿಪ್ಲೆಕ್ಸ್‌ಗಳಿಗೆ ಜನ ಹೆಚ್ಚು ಬರುತ್ತಿದ್ದಾರಾ? ಅಂದ್ರೆ ಅದು ಇಲ್ಲ. ನಾಲ್ಕೈದು ಕಿಲೋ ಮೀಟರ್ ಪ್ರಯಾಣಿಸಿ ಬೈಕ್, ಕಾರ್ ಪಾರ್ಕಿಂಗ್ ಹುಡುಕಿ, ಸಿನಿಮಾ ಟಿಕೆಟ್ ಖರೀದಿಸಿ, ದುಬಾರಿ ಬೆಲೆಗೆ ಅಲ್ಲಿ ಸಮೋಸ, ಪಾಪ್‌ಕಾರ್ನ್ ಕೊಂಡುಕೊಂಡು ಸಿನಿಮಾ ನೋಡಲು ಎಲ್ಲರೂ ಸಿದ್ಧರಿಲ್ಲ. ಇದೇ ಕಾರಣಕ್ಕೆ ಜನ ಈಗ ಮಲ್ಟಿಪ್ಲೆಕ್ಸ್‌ಗಳಿಗೆ ಬರೋದಕ್ಕೂ ಹಿಂದೇಟು ಹಾಕುತ್ತಿದ್ದಾರೆ.
ಕೆಲ ವರ್ಷಗಳ ಗಾಂಧಿನಗರದಲ್ಲಿ ಅಲಂಕಾರ್, ಕೆಂಪೇಗೌಡ, ಪ್ರಭಾತ್, ಸಂಗಮ್, ಮೆಜೆಸ್ಟಿಕ್, ಕಲ್ಪನಾ, ಹಿಮಾಲಯ, ಕಿನೊ, ಸ್ವಸ್ತಿಕ್, ಸೆಂಟ್ರಲ್, ಸಾಗರ್, ಕೈಲಾಶ್, ಸಾಗರ್, ತ್ರಿಭುವನ್, ಕಪಾಲಿ ಹೀಗೆ ಸಾಕಷ್ಟು ಚಿತ್ರಮಂದಿರಗಳಿದ್ದವು. ಆದರೆ ಈಗ ಸಂತೋಷ್, ನರ್ತಕಿ, ತ್ರಿವೇಣಿ, ಅಭಿನಯ, ಭೂಮಿಕಾ ಮಾತ್ರ ಉಳಿದುಕೊಂಡಿದೆ. ಕೆಂಪೇಗೌಡ, ಹಿಮಾಲಯ, ಕಲ್ಪನಾ, ಅಲಂಕಾರ್, ಪ್ರಭಾಸ್ ಚಿತ್ರಮಂದಿರಗಳಿದ್ದ ಜಾಗದಲ್ಲಿ ಈಗ ಶಾಪಿಂಗ್ ಕಾಂಪ್ಲೆಕ್ಸ್ ಎದ್ದು ನಿಂತಿದೆ.
ಸಾಗರ್ ಚಿತ್ರಮಂದಿರ ಇದ್ದ ಜಾಗದಲ್ಲೂ ಮಾಲ್ ನಿರ್ಮಾಣವಾಗಿದೆ. ಕಪಾಲಿ ಥಿಯೇಟರ್ ನೆಲಸಮ ಮಾಡಿ ಅಲ್ಲಿ ಮಾಲ್ ತಲೆ ಎತ್ತುತ್ತಿದೆ. ತೆಲುಗು ನಟ ಮಹೇಶ್ ಬಾಬು ಒಡೆತನದ ಎಎಂಬಿ ಸಿನಿಮಾಸ್ ಮಲ್ಟಿಪ್ಲೆಕ್ಸ್ ಅಲ್ಲಿಗೆ ಬರಲಿದೆ. ಇದು ಬರೀ ಗಾಂಧಿನಗರದ ಸುತ್ತಾಮುತ್ತಲಿನ ಥಿಯೇಟರ್‌ಗಳ ಕತೆಯಲ್ಲ. ನಗರದ ಹಲವೆಡೆ ಥಿಯೇಟರ್‌ಗಳು ಕಣ್ಮರೆ ಆಗಿದೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲೂ ಇದನ್ನು ನೋಡಬಹುದು. ಥಿಯೇಟರ್ ಮಾಲೀಕರಂತೂ ನಷ್ಟದ ಭೀತಿಯಲ್ಲಿದ್ದಾರೆ. ಸಿಂಗಲ್ ಸ್ಕ್ರೀನ್ ಥಿಯೇಟರ್ ಕೆಡವಿ ಮಲ್ಟಿಪ್ಲೆಕ್ಸ್ ನಿರ್ಮಾಣ ಮಾಡುವ ಧೈರ್ಯ ಮಾಡುತ್ತಿಲ್ಲ. ಯಾಕಂದರೆ ಮಲ್ಟಿಪ್ಲೆಕ್ಸ್‌ಗೂ ಈಗ ಪ್ರೇಕ್ಷಕರು ಬರ್ತಿಲ್ಲ.
ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳ ಸ್ಥಿತಿಗತಿ ಬಗ್ಗೆ ವೀರೇಶ್ ಥಿಯೇಟರ್ ಮಾಲೀಕರಾದ ಕೆ. ವಿ ಚಂದ್ರಶೇಖರ್ ಫಿಲ್ಮಿಬೀಟ್‌ಗೆ ಪ್ರತಿಕ್ರಿಯಿಸಿದ್ದಾರೆ. "ಸ್ಟಾರ್ ನಟರು ಹೆಚ್ಚು ಹೆಚ್ಚು ಸಿನಿಮಾಗಳನ್ನು ಮಾಡುತ್ತಿಲ್ಲ. ಒಳ್ಳೆ ಸಿನಿಮಾಗಳು ಬರುತ್ತಿಲ್ಲ. ಹಾಗಾಗಿ ಪ್ರೇಕ್ಷಕರ ಅಭಾವ ಹೆಚ್ಚಾಗುತ್ತಿದೆ. ಹಳೇ ಥಿಯೇಟರ್‌ಗಳ ಮಾಲೀಕರು ನಷ್ಟದ ನಡುವೆಯೂ ಥಿಯೇಟರ್‌ಗಳನ್ನು ನಡೆಸುತ್ತಿದ್ದಾರೆ. ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳನ್ನು ಮಲ್ಟಿಪ್ಲೆಕ್ಸ್ ಆಗಿ ಬದಲಿಸೋದು ಕಷ್ಟ. ಯಾಕಂದರೆ ಬೆಂಗಳೂರಿನಲ್ಲಿ ಈಗ ಮಲ್ಟಿಪ್ಲೆಕ್ಸ್‌ಗಳನ್ನೇ ಮುಚ್ಚುವಂತಹ ಸ್ಥಿತಿ ನಿರ್ಮಾಣವಾಗುತ್ತಿದೆ. ಜನ ಲೈವ್ ಮನರಂಜನೆ ನೋಡಲು ಬಯಸುತ್ತಿದ್ದಾರೆ. ಹಾಗಾಗಿ ಸಿನಿಮಾಗಳನ್ನು ನೋಡುವ ಗೀಳು ಕಮ್ಮಿಯಾಗ್ತಿದೆ" ಎನ್ನುತ್ತಾರೆ.
ಕನಸುಗಳನ್ನು ಮಾರುವ ಚಿತ್ರಮಂದಿರ ಎನ್ನುವ ಕತ್ತಲ ಕಾರ್ಖಾನೆಗಳು ಒಂದೊಂದಾಗಿ ತೆರೆ ಎಳೆದುಕೊಳ್ಳುತ್ತಿವೆ. ಏನೇ ಓಟಿಟಿ, ಟಿವಿ, ಮೊಬೈಲ್ ಇದ್ದರೂ ದೊಡ್ಡ ಪರದೆಯಲ್ಲಿ ಸಿನಿಮಾ ನೋಡುವ ಅನುಭವವೇ ಬೇರೆ. ಅದೇ ಕಾರಣಕ್ಕೆ ಇವತ್ತಿಗೂ ಜನ ಥಿಯೇಟರ್‌ಗೆ ಹೋಗುತ್ತಿದ್ದಾರೆ. ಆದರೆ ಇನ್ನು 5-10 ವರ್ಷಗಳಲ್ಲಿ ಸಂಪೂರ್ಣವಾಗಿ ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳು ಕಣ್ಮರೆ ಆದರೂ ಅಚ್ಚರಿ ಪಡಬೇಕಿಲ್ಲ.


Click it and Unblock the Notifications











