National cinema day: ಸಿನಿಮಾ ಉಗಮ, ಅಭಿವೃದ್ಧಿ ಹಾಗೂ ನಡೆದು ಬಂದ ಹಾದಿ
ದೇಶಾದ್ಯಂತ ರಾಷ್ಟ್ರೀಯ ಸಿನಿಮಾ ದಿನಾಚರಣೆ ಆಚರಿಸಲಾಗುತ್ತಿದೆ. ಈ ವಿಶೇಷ ಸಂದರ್ಭದಲ್ಲಿ ಮಲ್ಟಿಪ್ಲೆಕ್ಸ್‌ಗಳಲ್ಲಿ ಟಿಕೆಟ್‌ಗಳ ದರದಲ್ಲಿ ಭರ್ಜರಿ ಆಫರ್ ನೀಡಲಾಗುತ್ತಿದೆ. ಕಳೆದ ವರ್ಷ ಈ ದಿನ 75 ರೂ.ಗೆ ಟಿಕೆಟ್ ಮಾರಾಟ ಮಾಡಲಾಗಿತ್ತು. ಈ ಬಾರಿ 99 ರೂ.ಗೆ ಟಿಕೆಟ್ ದರ ನಿಗದಿಪಡಿಸಲಾಗಿದೆ.
ಎರಡು ವರ್ಷಗಳ ಹಿಂದೆ ಕೊರೊನ ಹಾವಳಿ ಲಾಡ್‌ಡೌನ್‌ನಿಂದ ಎಲ್ಲಾ ಕ್ಷೇತ್ರಗಳಿಗೂ ನಷ್ಟ ಎದುರಾಗಿತ್ತು. ಥಿಯೇಟರ್‌ಗಳು ಬಂದ್ ಆಗಿ ಸಿನಿಮಾ ಪ್ರದರ್ಶನ ನಿಂತು ಚಿತ್ರೋದ್ಯಮಕ್ಕೆ ಸಾವಿರಾರು ಕೋಟಿ ನಷ್ಟವಾಗಿತ್ತು. ಕೋವಿಡ್ ಹಾವಳಿ ಹಿನ್ನೆಲೆ ಮಲ್ಟಿಪ್ಲೆಕ್ಸ್‌ಗಳ ಬಾಗಿಲು ಬಂದ್ ಆಗಿತ್ತು. ಕೊವಿಡ್ ನಿಯಮ ಹಾಗೂ ಲಾಕ್‌ಡೌನ್ ತೆರವಾದ ಬಳಿಕ ಸಿನಿಮಾ ಪ್ರದರ್ಶನ ಮತ್ತೆ ಶುರುವಾಗಿತ್ತು. ಹಾಗಾಗಿ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಲು, ಮಲ್ಟಿಪ್ಲೆಕ್ಸ್‌ಗಳು ಪುನರಾರಂಭಗೊಂಡ ಸಂಭ್ರಮ ಆಚರಿಸಲು, ಎಲ್ಲಾ ವರ್ಗದ ಪ್ರೇಕ್ಷಕರು ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ನೋಡುವಂತಾಗಲಿ ಎಂದು ಒಂದು ದಿನದ ಮಟ್ಟಿಗೆ ಟಿಕೆಟ್ ದರದಲ್ಲಿ ರಿಯಾಯಿತಿ ನೀಡಲಾಗುತ್ತದೆ.

ಐನಾಕ್ಸ್, ಪಿವಿಆರ್, ಸಿನಿಪೊಲಿಸ್, ಸಿಟಿಪ್ರೈಡ್, ಮಿರಾಜ್, ಮೂವೀ ಟೈಮ್, ಏಷ್ಯನ್ ಸೇರಿದಂತೆ ಹಲವು ಮಲ್ಟಿಪ್ಲೆಕ್ಸ್ ಚೈನ್‌ಗಳು ರಾಷ್ಟ್ರೀಯ ಸಿನಿಮಾ ದಿನಾಚರಣೆಯಲ್ಲಿ ಭಾಗವಹಿಸುತ್ತಿವೆ. ಟಿಕೆಟ್ ದರ 99 ರೂಪಾಯಿಗೆ ಇಳಿಸಿರುವುದು ಪ್ರೇಕ್ಷಕರಿಗೂ ಸಂತಸ ತಂದಿದೆ. ಭಾರತದಲ್ಲಿ ಅತಿದೊಡ್ಡ ಮನರಂಜನಾ ಕ್ಷೇತ್ರವಾಗಿ ಸಿನಿಮಾ ಬೆಳೆದಿದೆ. ವರ್ಷಕ್ಕೆ ಸಾವಿರಾರು ಸಿನಿಮಾಗಳು ದೇಶದಲ್ಲಿ ನಿರ್ಮಾಣವಾಗುತ್ತವೆ. ಪ್ರೇಕ್ಷಕರನ್ನು ರಂಜಿಸುತ್ತಿವೆ. ಸಾವಿರಾರು ಜನ ಚಿತ್ರರಂಗವನ್ನು ನಂಬಿ ಬದುಕುತ್ತಿದ್ದಾರೆ.
ಸಿನಿಮಾ ಎನ್ನುವ ಪರಿಕಲ್ಪನೆ ಯಾವಾಗ ಶುರುವಾಯಿತು? ಸಿನಿಮಾದ ಹುಟ್ಟು ಹೇಗಾಯಿತು? ಸಿನಿಮಾ ಇತಿಹಾಸ ಏನು? ಎನ್ನುವುದನ್ನು ಈ ವಿಶೇಷ ದಿನದಂದು ತಿಳಿಯೋಣ. ಅಂದಹಾಗೆ ಸಿನಿಮಾ ಅನ್ನೋದನ್ನು ಯಾರೊ ಒಬ್ಬರು ಕಂಡುಹಿಡಿದಿದ್ದಲ್ಲ. ಮೂಕಿ, ಟಾಕಿ, ಬ್ಲ್ಯಾಕ್ ಅಂಡ್ ವೈಟ್, ಕಲರ್, ತ್ರಿಡೀ ಹೀಗೆ ಕಾಲಾನಂತರದಲ್ಲಿ ಸಿನಿಮಾ ಬಹಳ ಅಭಿವೃದ್ಧಿ ಹೊಂದಿದೆ. ಆದರೆ ಆರಂಭದಲ್ಲಿ ಸಿನಿಮಾ ಹೀಗಿರಲಿಲ್ಲ. ತಂತ್ರಜ್ಞಾನ ಬೆಳೆದಂತೆ ಸಿನಿಮಾ ಸಾಕಷ್ಟು ಬದಲಾವಣೆಯಾಗಿ ಇವತ್ತಿನ ರೂಪಕ್ಕೆ ಬಂದಿದೆ.
129 ವರ್ಷಗಳ ಹಿಂದೆ ಸಿನಿಮಾ ಪರಿಕಲ್ಪನೆಗೆ ಮೊದಲ ಬಾರಿಗೆ ಬುನಾದಿ ಬಿದ್ದಿತ್ತು. 1894 ರಲ್ಲಿ ಥಾಮಸ್ ಎಡಿಸನ್ 'ಕಿನೆಟೋಗ್ರಾಫ್' (ಕ್ಯಾಮೆರಾ) ಮತ್ತು "ಕಿನೆಟೋಸ್ಕೋಪ್" (ಪ್ರೊಜೆಕ್ಟರ್) ಎಂಬ ಎರಡು ಸಾಧನಗಳನ್ನು ಕಂಡುಹಿಡಿದರು. ನಂತರ ಬ್ರಿಟ್ಪಾಲ್ ಎಂಬ ಸಂಶೋಧಕ 1895ರಲ್ ಮೊದಲ ಬಾರಿಗೆ ಯುರೋಪ್‌ನಲ್ಲಿ 'ಫಿಲ್ಮ್ ಪ್ರೊಜೆಕ್ಟರ್'ಅನ್ವೇಷಿಸಿದರು. ಫ್ರಾನ್ಸ್‌ನಲ್ಲಿ, ಲೂಮಿಯೆರ್ ಸಹೋದರರು 1895 ರಲ್ಲಿ ಸೂಟ್‌ಕೇಸ್ ಗಾತ್ರದ ಸಿನಿಮಾಟೋಗ್ರಾಫ್ ಸಾಧನವನ್ನು ಅಭಿವೃದ್ಧಿಪಡಿಸಿದರು. ಅದರ ಮೂಲಕ ಕದಲುವ ಚಿತ್ರಗಳನ್ನು ಸೃಷ್ಟಿಸಿದರು.
ಮೊದಲಿಗೆ ಜನರಿಂದ ಹಣ ಸಂಗ್ರಹಿಸಿ ಹೀಗೆ ಕದಲುವ ಚಿತ್ರಗಳನ್ನು ಪ್ರದರ್ಶಿಸಲಾಯಿತು. ಸಿನಿಮಾ ಹುಟ್ಟು ಅಲ್ಲಿಂದಲೇ ಆರಂಭವಾಯಿತು ಎನ್ನಬಹುದು. ಅಲ್ಲಿಂದ ಮುಂದೆ ನಿಧಾನವಾಗಿ ಚಲಿಸುವ ಚಿತ್ರಗಳ ಬಗ್ಗೆ ಅಧ್ಯಯನ, ಅನ್ವೇಷಣೆ ಹೆಚ್ಚಾಯಿತು. ಕಾಲಾನಂತರ ಧ್ವನಿ ಇಲ್ಲದೇ ಗೊಂಬೆಗಳ ಸಿನಿಮಾ ಆರಂಭವಾಯಿತು. ನಿಧಾನವಾಗಿ ಚಲಿಸುವ ಚಿತ್ರಗಳಿಗೆ ಧ್ವನಿಯನ್ನು ಸೇರಿಸುವ ಕೆಲಸ ನಡೆಯಿತು. ಅದಕ್ಕೂ ಮುನ್ನ 30 ವರ್ಷಗಳ ಕಾಲ ಬರೀ ಮೂಕಿ ಚಿತ್ರಗಳು ಜನರನ್ನು ರಂಜಿಸಿದ್ದವು. 1922 ರಲ್ಲಿ, ಬರ್ಲಿನ್‌ನಲ್ಲಿ ಮೊದಲ ಬಾರಿಗೆ ಧ್ವನಿಯೊಂದಿಗೆ ಚಲನಚಿತ್ರ ಪ್ರದರ್ಶಿಸಲಾಯಿತು.
ನ್ಯೂಯಾರ್ಕ್‌ನಲ್ಲಿ 1923ರಲ್ಲಿ ಪ್ರೇಕ್ಷಕರು ಹಣ ಕೊಟ್ಟು ಸಿನಿಮಾಗಳನ್ನು ನೋಡಲು ಆರಂಭಿಸಿದರು. ಅಲ್ಲಿಂದ ನಿಧಾನವಾಗಿ ಜನರಲ್ಲಿ ಸಿನಿಮಾ ಬಗ್ಗೆ ಆಸಕ್ತಿ, ಕುತೂಹಲ ಶುರುವಾಯಿತು. 1928 ರಲ್ಲಿ 'ದಿ ಲೈಟ್ಸ್ ಆಫ್ ನ್ಯೂಯಾರ್ಕ್' ಎನ್ನುವ ಸಿನಿಮಾ ಸಂಪೂರ್ಣ ಧ್ವನಿಯೊಂದಿಗೆ ರಿಲೀಸ್ ಆಗಿತ್ತು. ಅಲ್ಲಿಂದ ಮುಂದೆ ನೋಡ ನೋಡುತ್ತ ಸಿನಿಮಾ ತಂತ್ರಜ್ಞಾನದಲ್ಲಿ ಹೆಚ್ಚು ಹೆಚ್ಚು ಹೆಚ್ಚು ಅಭಿವೃದ್ಧಿ ಆಯಿತು. ಭಾರತದಲ್ಲಿ ಮೊದಲಿಗೆ ಟಾಕಿ ಸಿನಿಮಾಗಳು ಬಂದವು.
'ಆಲಂ ಆರಾ' ಭಾರತದ ಮೊದಲ ಟಾಕಿ ಸಿನಿಮಾ ಎನಿಸಿಕೊಂಡಿತ್ತು. 1931ರಲ್ಲಿ ಈ ಸಿನಿಮಾ 40 ಸಾವಿರ ಬಜೆಟ್‌ನಲ್ಲಿ ನಿರ್ಮಾಣವಾಗಿತ್ತು. ಇದು ದೇಶದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿತ್ತು. ಅಲ್ಲಿವರೆಗೂ ಬರೀ ನಾಟಕಗಳನ್ನು ನೋಡುತ್ತಿದ್ದ ಭಾರತೀಯರು ಒಮ್ಮೆಲೆ ಪರದೆ ಮೇಲೆ ಚಿತ್ರಗಳನ್ನು ನೋಡಿ ಬೆರಗಾಗಿದ್ದರು. 1931ರಲ್ಲೇ ತೆಲುಗಿನಲ್ಲೂ ಸಿನಿಮಾ ನಿರ್ಮಾಣ ಶುರುವಾಯಿತು. 1934ರಲ್ಲಿ ಕನ್ನಡದಲ್ಲಿ 'ಸತಿ ಸುಲೋಚನ' ಸಿನಿಮಾ ಬಂದಿತ್ತು. ಇದು ಕನ್ನಡದ ಮೊದಲ ವಾಕ್ಚಿತ್ರ. ಅಲ್ಲಿಂದ ಮುಂದೆ ಸಿನಿಮಾ ಬೆಳೆದು ಬಂದ ಬಗೆ ಗೊತ್ತೇಯಿದೆ.
ಮೊದಲಿಗೆ ಕಪ್ಪು ಬಿಳುಪು ಸಿನಿಮಾಗಳು ಬಂದಿತ್ತು. ನಂತರ 1906ರಲ್ಲಿ, ಜಾರ್ಜ್ ಆಲ್ಬರ್ಟ್ ಸ್ಮಿತ್ 'ಕಿನೆಮಾಕಲರ್' ಹೆಸರಿನಲ್ಲಿ 2 ಬಣ್ಣಗಳ ಸಿನಿಮಾ ನಿರ್ಮಿಸಿದರು. 1932ರಲ್ಲಿ 'ಟೆಕ್ನಿಕಲರ್' ಎನ್ನುವ ಮೂರು ಬಣ್ಣದ ಸಿನಿಮಾ ನಿರ್ಮಿಸಲಾಯಿತು. ಭಾರತ ಸ್ವಾತಂತ್ರ್ಯ ಪಡೆದ ಬಳಿಕ ಸಿನಿಮಾ ಕ್ಷೇತ್ರದಲ್ಲೂ ಗಣನೀಯ ಬದಲಾವಣೆ ಆಯಿತು. ಕುಮಾರತ್ರಯರ ಆಗಮನದಿಂದ ಕನ್ನಡ ಚಿತ್ರರಂಗಕ್ಕೆ ಆನೆ ಬಲ ಬಂದಿತ್ತು. ಅಲ್ಲಿಂದ ಮುಂದೆ ಹೆಚ್ಚು ಹೆಚ್ಚು ಸಿನಿಮಾಗಳು ನಿರ್ಮಾಣವಾದವು.


Click it and Unblock the Notifications











