'ಬೆಂಗಳೂರು ಡೇಸ್' ಜೋಡಿಯ ರಿಯಲ್ ಲವ್ ಸ್ಟೋರಿ: ನಜ್ರಿಯಾ-ಫಹಾದ್ ಪ್ರೀತಿ ಪ್ರಾರಂಭವಾಗಿದ್ದು ಹೇಗೆ?
ಮಲಯಾಳಂನ ಜನಪ್ರಿಯ ಜೋಡಿಗಳಲ್ಲಿ ನಜ್ರಿಯಾ ನಜೀಮ್ ಮತ್ತು ಫಹಾದ್ ಫಾಸಿಲ್ ಜೋಡಿ ಕೂಡ ಒಂದು. ಇವರಿಬ್ಬರದ್ದು ಲವ್ ಕಮ್ ಅರೇಂಜ್ ಮ್ಯಾರೇಜ್. ಪ್ರೀತಿ, ಸಂತೋಷ ತುಂಬಿದ ಜೀವನ ಇವರದಾಗಿದ್ದು, ಈ ಜೋಡಿ ಅನೇಕರಿಗೆ ಮಾದರಿಯಾಗಿದೆ.
Recommended Video
ಸೂಪರ್ ಹಿಟ್ 'ಬೆಂಗಳೂರು ಡೇಸ್' ಸಿನಿಮಾ ಮೂಲಕ ದಕ್ಷಿಣ ಭಾರತೀಯ ಸಿನಿಪ್ರಿಯರ ಮನಗೆದ್ದ ಈ ಜೋಡಿ, ನಿಜ ಜೀವನದಲ್ಲೂ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ದಕ್ಷಿಣ ಭಾರತೀಯ ಸಿನಿಪ್ರಿಯರ ಕನಸಿನ ರಾಣಿಯಾಗಿದ್ದ ನಜ್ರಿಯಾ ಬಹು ಬೇಡಿಕೆ ಇರುವಾಗಲೆ, ನಟ ಫಹಾದ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದರು. ನಜ್ರಿಯಾ ಮತ್ತು ಫಹಾದ್ ಇಬ್ಬರ ಇಂಟರಿಸ್ಟಿಂಗ್ ಲವ್ ಸ್ಟೋರಿ ಇಲ್ಲಿದೆ. ಮುಂದೆ ಓದಿ...

ಬಾಲಕಲಾವಿದರಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ನಜ್ರಿಯಾ-ಫಹಾದ್
ನಜ್ರಿಯಾ ನಜೀಮ್ ಚಿಕ್ಕ ವಯಸ್ಸಿನಲ್ಲೇ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ. ಬಾಲನಟಿಯಾಗಿ ಮೂರ್ನಾಲ್ಕು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಸಿನಿಮಾದಲ್ಲಿ ನಟಿಸುವ ಮೊದಲು ನಜ್ರಿಯಾ ಕಿರುತೆರೆಯಲ್ಲಿ ಖ್ಯಾತಿಗಳಿಸಿದ್ದರು. ನಟ ಫಹಾದ್ ಸಹ ಬಾಲನಟನಾಗಿ ಬಣ್ಣದ ಲೋಕದ ಪಯಣ ಪ್ರಾರಂಭಿಸಿದ್ದಾರೆ. ಇಬ್ಬರ ಸಿನಿ ಬದುಕಿಗೂ ದೊಡ್ಡ ಮಟ್ಟದ ಸಕ್ಸಸ್ ತಂದು ಕೊಟ್ಟ ಚಿತ್ರ 'ಬೆಂಗಳೂರು ಡೇಸ್'.

'ಬೆಂಗಳೂರು ಡೇಸ್' ಸೆಟ್ ನಲ್ಲಿ ಪರಿಚಯ
ನಜ್ರಿಯಾ ಮತ್ತು ಫಹಾದ್ ಜೋಡಿ ಖ್ಯಾತಿಗಳಿಸಿದ್ದು ಬೆಂಗಳೂರು ಡೇಸ್ ಸಿನಿಮಾ ಮೂಲಕ. ಈ ಸಿನಿಮಾ ಇಬ್ಬರ ಸಿನಿ ಜೀವನ ಮಾತ್ರವಲ್ಲದೆ, ವೈಯಕ್ತಿಕ ಬದುಕಿನ ದಿಕ್ಕನ್ನು ಬದಲಾಯಿಸಿದೆ. ಫಹಾದ್ ಮತ್ತು ನಜ್ರಿಯಾ ಮೊದಲು ಭೇಟಿಯಾಗಿದ್ದು, ಸೂಪರ್ ಹಿಟ್ ಬೆಂಗಳೂರು ಡೇಸ್ ಚಿತ್ರೀಕರಣ ಸೆಟ್ ನಲ್ಲಿ. ಈ ಚಿತ್ರದಲ್ಲಿ ಇಬ್ಬರು ಗಂಡ-ಹೆಂಡತಿಯಾಗಿ ಕಾಣಿಸಿಕೊಂಡಿದ್ದಾರೆ. ರೀಲ್ ನಲ್ಲಿ ಪತಿ-ಪತ್ನಿಯಾಗಿ ಖ್ಯಾತಿಗಳಿಸಿದ ಈ ಜೋಡಿ ನಂತರ ನಿಜ ಜೀವನದಲ್ಲೂ ಒಂದಾಗಿ ಅಚ್ಚರಿ ಮೂಡಿಸಿದ್ದಾರೆ.

ಮೊದಲು ಪ್ರಪೋಸ್ ಮಾಡಿದ್ದು ನಜ್ರಿಯಾ
ಬೆಂಗಳೂರು ಡೇಸ್ ಚಿತ್ರೀಕರಣ ಸಮಯದಲ್ಲಿ ಇಬ್ಬರ ಪ್ರೀತಿ ಪ್ರಾರಂಭವಾಗಿದೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ನಜ್ರಿಯಾ ಪ್ರಪೋಸ್ ಮಾಡಿರುವ ಬಗ್ಗೆ ಹೇಳಿದ್ದಾರೆ. ಇಬ್ಬರಲ್ಲಿ ಮೊದಲು ಪ್ರಪೋಸ್ ಮಾಡಿದ್ದೇ ನಜ್ರಿಯಾ. ಫಹಾದ್ ನೋಡಿ ಕ್ಲೀನ್ ಬೋಲ್ಡ್ ಆಗಿದ್ದ ನಜ್ರಿಯಾ ಯಾವುದೆ ಅಂಜಿಕೆ ಇಲ್ಲದೆ ನೇರವಾಗಿ ಪ್ರೀತಿಯ ವಿಚಾರ ಫಹಾದ್ ಬಳಿ ಹೇಳಿದ್ದಾರೆ.

ಮದುವೆ ಆಗುತ್ತೀರಾ? ಎಂದು ನೇರವಾಗಿ ಕೇಳಿದ ನಜ್ರಿಯಾ
ಬೆಂಗಳೂರು ಡೇಸ್ ಶೂಟಿಂಗ್ ಸಮಯದಲ್ಲಿ ಚಿತ್ರೀಕರಣ ಮುಗಿಸಿ ಪ್ಯಾಕ್ ಅಪ್ ಮಾಡುವ ಮೊದಲು, ಇಬ್ಬರು ಒಂದು ಕೋಣೆಯಲ್ಲಿ ಕುಳಿತ್ತಿದ್ದರಂತೆ, ಆ ಸಮಯದಲ್ಲಿ ನಜ್ರಿಯಾ ಪ್ರಪೋಸ್ ಮಾಡಿದ್ದಾರೆ. "ನಾವಿಬ್ಬರೆ ಒಂದು ರೂಮಿನಲ್ಲಿ ಕುಳಿತ್ತಿದ್ದೆವು. ಆ ಸಮಯದಲ್ಲಿ ನನ್ನನ್ನು ಮದುವೆ ಆಗುತ್ತೀರಾ? ಎಂದು ಕೇಳಿದೆ. ನಾನು ನಿಮ್ಮನ್ನು ತುಂಬ ಚೆನ್ನಾಗಿ ನೋಡಿಕೊಳ್ಳುತ್ತೇನೆ" ಎಂದು ಫಹಾದ್ ಬಳಿ ಮೊದಲು ಮದುವೆ ಪ್ರಪೋಸಲ್ ಇಟ್ಟರು ನಜ್ರಿಯಾ.

ಫಹಾದ್ ಪ್ರತಿಕ್ರಿಯೆ ಹೀಗಿತ್ತು
ಫಹಾದ್ ಗೆ ಆಗಲೆ ಪ್ರೀತಿಯ ಅನುಭವ ಆಗಿತ್ತು. ನಜ್ರಿಯಾ ಪ್ರೀತಿಯಲ್ಲಿ ಬೀಳುವ ಮೊದಲೆ ಫಹಾದ್ ಒಬ್ಬರನ್ನು ಪ್ರೀತಿಸುತ್ತಿದ್ದರಂತೆ. ಆದರೆ ಒಂದು ಹುಡುಗಿಯಿಂದ ಈ ರೀತಿಯ ನೇರವಾದ, ಪ್ರಾಮಾಣಿಕ ಪ್ರಶ್ನೆಯನ್ನು ಎದುರಿಸಿರಲಿಲ್ಲವಂತೆ. ನಜ್ರಿಯಾ ಪ್ರೊಪೋಸ್ ಗೆ ತಕ್ಷಣ ಗ್ರೀನ್ ಸಿಗ್ನಲ್ ನೀಡಿದ್ದಾರೆ ಫಹಾದ್.

ಪೋಷಕರ ಪಾತ್ರ ಮುಖ್ಯವಾಗಿದೆ
ಫಹಾದ್ ತಾಯಿ ನಜ್ರಿಯಾರನ್ನು ಮೊದಲ ಭೇಟಿಯಲ್ಲಿಯೇ ಇಂಪ್ರೆಸ್ ಆಗಿ, ಭಾವಿ ಸೊಸೆಯನ್ನು ಮನೆತುಂಬಿಸಿಕೊಳ್ಳಲು ಸಿದ್ದರಾಗಿದ್ದರು. ಇಬ್ಬರ ಪ್ರೀತಿಯ ವಿಚಾರ ಮನೆಯಲ್ಲಿ ಹೇಳಿದ ನಂತರ ನಜ್ರಿಯಾ ಮತ್ತು ಫಹಾದ್ ಪೋಷಕರು ಪ್ರೀತಿ ಒಪ್ಪಿಕೊಂಡು, ಇಬ್ಬರ ಮದುವೆ ಮಾಡಲು ನಿರ್ಧರಿಸಿದರು. 'ನಮ್ಮಿಬ್ಬರ ಮದುವೆಗೆ ಪೋಷಕರ ಪಾತ್ರ ಬಹುಮುಖ್ಯವಾಗಿದೆ' ಎಂದು ಫಹಾದ್ ಹೇಳಿದ್ದಾರೆ.

2014ರಲ್ಲಿ ಮದುವೆ
ಫಹಾದ್ ಮತ್ತು ನಜ್ರಿಯಾ ಇಬ್ಬರು 2014ರಲ್ಲಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಪ್ರೀತಿಯ ವಿಚಾರ ಬಹಿರಂಗವಾಗುತ್ತಿದ್ದಂತೆ 2014 ಜನವರಿಯಲ್ಲಿ ಇಬ್ಬರ ನಿಶ್ಚಿತಾರ್ಥ ಮಾಡಿಕೊಳ್ಳುತ್ತಾರೆ. ಅದೆ ವರ್ಷ ಆಗಸ್ಟ್ 21ರಂದು ಅದ್ದೂರಿಯಾಗಿ ಮದುವೆಯಾಗುತ್ತಾರೆ. ಇಬ್ಬರ ಮದುವೆಗೆ ಕುಟುಂಬದವರು, ಚಿತ್ರರಂಗದ ಗಣ್ಯರು ಮತ್ತು ಸ್ನೇಹಿತರು ಭಾಗಿಯಾಗಿ ನವ ಜೋಡಿಗೆ ಆಶೀರ್ವಾದ ಮಾಡುತ್ತಾರೆ.

ಪತ್ನಿ ಬಗ್ಗೆ ಫಹಾದ್ ಹೇಳಿಕೆ
"ಮುಂದಿನ ಜೀವನವನ್ನು ನಜ್ರಿಯಾ ಜೊತೆ ಕಳೆಯಲು ನಿರ್ಧರಿಸಿದೆ. ನಾನು ಈ ಹಿಂದೆ ಪ್ರೀತಿಸುತ್ತಿದ್ದರೂ, ನಜ್ರಿಯಾ ಹಾಗೆ ಬೇರೆ ಯಾವ ಹುಡುಗಿಯನ್ನು ನೋಡಿಲ್ಲ. ಡೆಸ್ಟಿನಿ ಬಗ್ಗೆ ನಂಬಿಕೆ ತೋರಿದವಳು. ಹಾಗಾಗಿ ಉಳಿದ ಜೀವನವನ್ನು ಒಟ್ಟಿಗೆ ಕಳೆಯಲು ನಿರ್ಧರಿಸಿದೆ" ಎಂದು ಹೇಳಿದ್ದಾರೆ.

ಸಿನಿಮಾದಿಂದ ಅಂತರ ಕಾಯ್ದುಕೊಂಡ ನಜ್ರಿಯಾ
ಮದುವೆ ನಂತರ ನಜ್ರಿಯಾ ಸಿನಿಮಾದಿಂದ ದೂರ ಉಳಿದಿದ್ದರು. ಸುಮಾರು 4 ವರ್ಷ ಸಿನಿಮಾದಿಂದ ಬ್ರೇಕ್ ಪಡೆದ ನಜ್ರಿಯಾ ನಂತರ 2018ರಲ್ಲಿ ಮತ್ತೆ ಬಣ್ಣದ ಲೋಕಕ್ಕೆ ವಾಪಸ್ ಆಗಿದ್ದಾರೆ. ಕೂಡೆ ಸಿನಿಮಾದಲ್ಲಿ ನಜ್ರಿಯಾ ಮತ್ತೆ ಕಾಣಿಸಿಕೊಂಡಿದ್ದಾರೆ. ಇನ್ನೂ ಫಹಾದ್ ಮತ್ತು ನಜ್ರಿಯಾ ಇಬ್ಬರು ಬೆಂಗಳೂರು ಡೇಸ್ ಸಿನಿಮಾ ನಂತರ ಮತ್ತೆ ಟ್ರಾನ್ಸ್ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.


Click it and Unblock the Notifications











