twitter
    For Quick Alerts
    ALLOW NOTIFICATIONS  
    For Daily Alerts

    ಹೀರೋಗಳಿಗೆ ಲಾಂಗು ಮಚ್ಚಿನ ಕತೆಗಳೇ ಬೇಕು

    |

    ಒಂದೆಡೆ 'ಕೆಜಿಎಫ್-2' ಚಿತ್ರ ಭಾರಿ ಯಶಸ್ಸನ್ನು ಕಾಣುವುದರ ಮೂಲಕ ಕನ್ನಡ ಸಿನಿಮಾರಂಗದ ಗತಿ ಬದಲಾಯಿಸಿದೆ. ಈಗ ಕನ್ನಡದಲ್ಲಿ ಕೂಡ ಪ್ಯಾನ್ ಇಂಡಿಯಾ ಸಿನಿಮಾಗಳ ದೊಡ್ಡ ಹವಾ ಪ್ರಾರಂಭವಾಗಿದೆ. ಐವತ್ತರಿಂದ ನೂರು ಕೋಟಿ ಬಂಡವಾಳ ಹೂಡಿ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ನಿರ್ಮಿಸಲು ಅನೇಕ ನಿರ್ಮಾಪಕರು ಸಿದ್ಧರಾಗಿದ್ದಾರೆ. ಹೊಸ ಬಗೆಯ ಕಥೆಗಳ ಹುಡುಕಾಟ ಕೂಡ ಈಗ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಈಗ ಎಲ್ಲಾ ಸ್ಟಾರ್ ನಟರು ಕೂಡ ತಮ್ಮ ಇಮೇಜ್ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಇರುವಂತೆ ನೋಡಿಕೊಳ್ಳಲು ಪ್ರಯತ್ನ ಆರಂಭಿಸಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಈಗ ನಟಿಸಲು ಅವರು ಮುಂದಾಗುತ್ತಿದ್ದಾರೆ. ಸ್ಟಾರ್ ನಟರ ಸ್ಟಾರ್ ಗಿರಿಯ ನಂತರ ಇನ್ಮುಂದೆ ಹೊಸ ಹುಡುಗರು ಹೊಸಪ್ರಯೋಗಗಳನ್ನು ಮಾಡಬಹುದೇ? ಎಂದು ಆಲೋಚಿಸಿದರೆ ಅದು ಕೂಡ ಅಪಾಯಕಾರಿಯಾಗಿ ಕಾಣುತ್ತಿದೆ. ಈಗ ಇಂಡಸ್ಟ್ರಿ ಕಡೆ ಮುಖ ಮಾಡುತ್ತಿರುವ ಬಹುತೇಕ ಹುಡುಗರು ಕೂಡ ಮಾಸ್ ಚಿತ್ರಗಳನ್ನೇ ಮಾಡಲು ಒಲವು ತೋರುತ್ತಿದ್ದಾರೆ.

    ಕನ್ನಡದಲ್ಲಿ ಇತ್ತೀಚೆಗೆ ಹೆಚ್ಚಾಗಿ ಒಂದೇ ತರದ ಚಿತ್ರಗಳು ಬರುತ್ತಿವೆ. ಸ್ಟಾರ್ ನಟರಿಂದ ಮೊದಲುಗೊಂಡು ಹೊಸದಾಗಿ ಪಾದಾರ್ಪಣೆ ಮಾಡುತ್ತಿರುವ ನಟರವರೆಗೆ ಎಲ್ಲರೂ ಕೂಡ ಈಗ ಮಾಸ್ ಚಿತ್ರಗಳ ಜಪ ಮಾಡುತ್ತಿದ್ದಾರೆ. ಜೊತೆಗೆ ಯಾವುದೇ ಚಿತ್ರದ ಪೋಸ್ಟರ್ ನೋಡಿದರೂ ಕೂಡ ಐದು ಭಾಷೆಗಳು (ಕನ್ನಡ- ತೆಲುಗು- ತಮಿಳು -ಮಲಯಾಳಂ -ಹಿಂದಿ) ಅದರ ಮೇಲೆ ಕಾಣುತ್ತದೆ. ಹಾಗಂತ ಎಲ್ಲಾ ಚಿತ್ರಗಳು ಅಷ್ಟು ಭಾಷೆಗಳಲ್ಲಿ ಬಿಡುಗಡೆ ಆಗುತ್ತದೆಯೇ ಅಂತ ಯೋಚಿಸಿ ನೋಡಿದರೆ, ಖಂಡಿತವಾಗಿಯೂ ಇಲ್ಲ ಅಂತಲೇ ಉತ್ತರ ಬರುತ್ತದೆ. ನಾಲ್ಕು ಭಾಷೆಗಳಿಗೆ ಸಿನಿಮಾ ಡಬ್ ಮಾಡುವುದರಿಂದ ಅದು ಪ್ಯಾನ್ ಇಂಡಿಯಾ ಸಿನಿಮಾ ಆಗುವುದಿಲ್ಲ. ಅದು ಎಲ್ಲಾ ಭಾಷೆಗಳಿಗೂ ರೀಚ್ ಆಗುವಂತ ಕಂಟೆಂಟ್ ಇರಬೇಕು. ಕೇವಲ ಡಬ್ ಮಾಡುವುದರಿಂದ ಅದನ್ನ ಪ್ಯಾನ್ ಇಂಡಿಯಾ ಸಿನಿಮಾ ಅಂತ ಹೇಳಲಾಗುವುದಿಲ್ಲ ಜೊತೆಗೆ ಡಬ್ ಮಾಡಿದ ತಕ್ಷಣಕ್ಕೆ ಆ ಚಿತ್ರಗಳು ಬೇರೆ ಭಾಷೆಯಲ್ಲಿ ಬಿಡುಗಡೆ ಆಗುತ್ತದೆ ಅಂತ ಖಾತ್ರಿ ಇಲ್ಲ.

    ಇತ್ತೀಚಿನ ದಿನಗಳಲ್ಲಿ ಸೆಟ್ಟೇರುತ್ತಿರುವ ಕನ್ನಡ ಚಿತ್ರಗಳನ್ನು ಸರಿಯಾಗಿ ಗಮನಿಸಿ ನೋಡಿ. ಹೊಸ ಹೀರೋಗಳು ಕೂಡ ನಿಮಗೆ rom-com ರೂಪದಲ್ಲಿ ಕಾಣುವುದಿಲ್ಲ. ರಗಡ್ ಲುಕ್, ಕೈಯಲ್ಲೊಂದು ಮಚ್ಚು ತುಂಬಾ ಕಾಮನ್. ಕೊನೆಗೆ ನೀವು ಯಾವುದಾದರೂ ಒಂದು ಲವ್ ಸ್ಟೋರಿಯ ಟ್ರೈಲರ್ ನೋಡಿದರೂ ಕೂಡ ಅಲ್ಲಿ ಅಬ್ಬರದ ಫೈಟ್ ಸೀನುಗಳು ಇದ್ದೇ ಇರುತ್ತದೆ. ಆಕ್ಷನ್ ಲೋಡೆಡ್ ಆಗಿದ್ದರೆ ಮಾತ್ರ ತಾನು ಹೀರೋ ಎಂಬ ಭಾವನೆ ಈಗ ಎಲ್ಲರೊಳಗೆ ಮನೆಮಾಡಿದೆ. ಸೊ ಈಗ ಕಂಟೆಂಟ್ ಗಿಂತ ಆಕ್ಷನ್ ಗೆ ಹೆಚ್ಚು ಆದ್ಯತೆ. ಮಾಸ್ ಸಿನಿಮಾಗಳು ಮಾಡಿದರೆ ಮಾತ್ರ ಹೀರೋ ಕಟೌಟ್ಗೆ ಬೆಲೆ. ಜೊತೆಗೆ ತಮ್ಮ ಚಿತ್ರಗಳನ್ನು ಡಬ್ ಮಾಡಿ ಇತರ ಭಾಷೆಗಳಲ್ಲಿ ಬಿಡುಗಡೆ ಮಾಡಲು ಅದು ಸಹಕಾರಿಯಾಗುತ್ತದೆಯೆ ಎಂಬ ಭಾವನೆ.

    Recommended Video

    'KGF 2' 14th Day Collection | ಭಾರತದ ಹೆಚ್ಚು ಗಳಿಕೆಯ ಸಿನಿಮಾ ಆಗತ್ತಾ KGF 2 ? | Yash | Prashanth Neel
    ಆಕ್ಷನ್ ಸಿನಿಮಾ ಆದರೆ ಡಬ್ಬಿಂಗ್ ರೈಟ್ಸ್ ಸಿಗುತ್ತದೆ!?

    ಆಕ್ಷನ್ ಸಿನಿಮಾ ಆದರೆ ಡಬ್ಬಿಂಗ್ ರೈಟ್ಸ್ ಸಿಗುತ್ತದೆ!?

    ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಆಕ್ಷನ್ ಚಿತ್ರಗಳಿಗೆ ಡಬ್ಬಿಂಗ್ ರೈಟ್ಸ್ ಚೆನ್ನಾಗಿ ಸಿಗುತ್ತದೆ ಎಂಬ ಭಾವನೆ. ಡಬ್ಬಿಂಗ್ ಅದರಲ್ಲೂ ವಿಶೇಷವಾಗಿ ಹಿಂದಿ ಸರ್ಕ್ಯೂಟ್ ನಲ್ಲಿ ಆಕ್ಷನ್ ಚಿತ್ರಗಳಿಗೆ ಒಳ್ಳೆ ಡಿಮ್ಯಾಂಡ್ ಇರುವುದರಿಂದ ಆಕ್ಷನ್ ಚಿತ್ರಗಳನ್ನು ಮಾಡಿದರೆ ಮಿನಿಮಮ್ ಗ್ಯಾರಂಟಿ ಎಂಬ ಭಾವನೆ ಕೂಡ ಎಲ್ಲರಲ್ಲೂ ಇದೆ. ಇದು ಒಂದಷ್ಟು ಕಾಲ ಸಹಜವಾಗಿಯೇ ನಡೆದಿದೆ. ಆದರೆ ಪ್ಯಾನ್ ಇಂಡಿಯಾ ಸಿನಿಮಾಗಳು ನೇರವಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವುದನ್ನು ನೋಡಿದ ಮೇಲೆ ಯೂಟ್ಯೂಬ್ ಗಳಲ್ಲಿ ಅದನ್ನ ವೀಕ್ಷಿಸುವವರ ಸಂಖ್ಯೆ ತುಂಬಾ ಕಡಿಮೆಯಾಗುತ್ತಿದೆ. ಹೀಗಾಗಿ ಹೊಸಬರ ಆಕ್ಷನ್ ಚಿತ್ರಗಳಿಗೆ ಕೂಡ ಈಗ ಹಿಂದಿ ಡಬ್ಬಿಂಗ್ ನಲ್ಲಿ ಅಂತಹ ಡಿಮ್ಯಾಂಡ್ ಕ್ರಿಯೇಟಿಂಗ್ ಆಗ್ತಾಇಲ್ಲ. ಸ್ಟಾರ್ ನಟರ ಚಿತ್ರಗಳಿಗೆ ಮಾತ್ರ ಈಗಲೂ ಕೂಡ ಒಳ್ಳೆಯ ಹಣ ಸಿಗುತ್ತಿದೆ. ಹೊಸಬರ ಚಿತ್ರಗಳಿಗೆ ಅಂತಹ ಡಿಮ್ಯಾಂಡ್ ಖಂಡಿತವಾಗಿಯೂ ಕೂಡ ಡಬ್ಬಿಂಗ್ ಮಾರ್ಕೆಟ್ನಲ್ಲಿ ಇಲ್ಲ. ಇದಕ್ಕೆ ಬಹುಮುಖ್ಯವಾದ ಕಾರಣ ಡಬ್ಬಿಂಗ್ ಜಗತ್ತಿನಲ್ಲಿ ಕೂಡ ಈಗಾಗಲೇ ದೊಡ್ಡಮಟ್ಟದಲ್ಲಿ ಸ್ಟಾರ್ ಹೀರೋಗಳ ದೊಡ್ಡಮಟ್ಟದ ಆಕ್ಷನ್ ಚಿತ್ರಗಳು ನಡೆಯುತ್ತಿರುವುದರಿಂದ, ಜೊತೆಗೆ ಹೊಸಬರ ಚಿತ್ರಗಳಲ್ಲಿನ ಬಂಡವಾಳ ಕಡಿಮೆಯಾಗಿರುತ್ತದೆ ಹೀಗಾಗಿ ಆಕ್ಷನ್ ದೃಶ್ಯಗಳು ಅಷ್ಟೊಂದು ಪರಿಣಾಮಕಾರಿಯಾಗಿ ಇಲ್ಲದೆ ಇರುವುದರಿಂದ ಆ ಚಿತ್ರಗಳು ಕೂಡ ಹೆಚ್ಚಿಗೆ ಗಮನ ಸೆಳೆಯುವುದಿಲ್ಲ.

    ಕ್ಲಾಸ್ ಸಿನಿಮಾ ರಿಸ್ಕ್ ಜಾಸ್ತಿ

    ಕ್ಲಾಸ್ ಸಿನಿಮಾ ರಿಸ್ಕ್ ಜಾಸ್ತಿ

    ಆಕ್ಷನ್ ಇಲ್ಲದ Rom-Com (ರೊಮ್ಯಾಂಟಿಕ್ ಕಾಮಿಡಿ) ಚಿತ್ರಗಳು ಕನ್ನಡದ ಮಟ್ಟಿಗೆ ದೊಡ್ಡ ರಿಸ್ಕ್ ಅಂತ ಭಾವನೆ ಹೊಸಬರಲ್ಲಿ ಮೂಡಿದೆ. ಕನ್ನಡದಲ್ಲಿ ಪ್ರತ್ಯೇಕವಾಗಿ ಕ್ಲಾಸ್ ಸಿನಿಮಾಗಳನ್ನೇ ನೋಡುವ ವರ್ಗ ಇಲ್ಲ. ಕ್ಲಾಸ್ ಸಿನಿಮಾಗಳನ್ನು ನೋಡುವಂತಹವರು ಇತರ ಭಾಷೆಯಲ್ಲಿನ ಕ್ಲಾಸ್ ಸಿನಿಮಾಗಳ ಜೊತೆ ಇದನ್ನು ಮೊದಲು ಕಂಪೇರ್ ಮಾಡುತ್ತಾರೆ. ಸಿಂಗಲ್ ಸ್ಕ್ರೀನ್ ಗಳಿಗೆ ಇಂತಹ ಸಿನಿಮಾಗಳನ್ನು ನೋಡಲು ಬರುವವರ ಸಂಖ್ಯೆ ತೀರಾ ಕಮ್ಮಿ. ಇನ್ನು ಮಲ್ಟಿಫ್ಲೆಕ್ಸ್ ಗಳಲ್ಲಿ ಮಾತ್ರ ಇಂತಹ ಸಿನಿಮಾಗಳನ್ನು ಹೆಚ್ಚಾಗಿ ಬಿಡುಗಡೆ ಮಾಡಬೇಕಾಗುತ್ತದೆ. ಇನ್ನ ಇಂತಹ ಸಿನಿಮಾ ಬಿಡುಗಡೆಯಾದ ತಕ್ಷಣ ಜನ ಬಂದು ನೋಡುವುದಿಲ್ಲ. ಜನರಿಂದ ಜನರಿಗೆ ಸಿನಿಮಾ ಚೆನ್ನಾಗಿದೆ ಎಂಬ ಪಬ್ಲಿಸಿಟಿ ಆಗಬೇಕು, ಆದರೆ ಅಲ್ಲಿವರೆಗೂ ಮಲ್ಟಿಪ್ಲೆಕ್ಸುಗಳು ಇಂತಹ ಚಿತ್ರಗಳನ್ನು ನಡೆಯಲು ಬಿಡುವುದಿಲ್ಲ. ಜೊತೆಗೆ ಅತಿ ಮುಖ್ಯವಾದ ಮತ್ತೊಂದು ಸಮಸ್ಯೆಯೆಂದರೆ ಕನ್ನಡ ಚಿತ್ರಗಳಿಗೆ ಇತ್ತೀಚಿನ ದಿನಗಳಲ್ಲಿ OTT ಪ್ಲಾಟ್ಫಾರ್ಮ್ ಅವರು ಬಹುತೇಕ ಬಾಗಿಲುಗಳನ್ನು ಮುಚ್ಚಿದೆ. ಹೌದು ಕನ್ನಡ ಚಿತ್ರಗಳಿಗೆ OTT ಫ್ಲಾಟ್ ಫಾರಂಗಳು ಅವಕಾಶಗಳನ್ನು ಕೊಡುತ್ತಿಲ್ಲ. ಕನಿಷ್ಠ ಮಾಸ್ ಸಿನಿಮಾ ಆದರೆ ಒಂದಷ್ಟು ಡಬ್ಬಿಂಗ್ ರೈಟ್ಸ್ ಮೂಲಕ ಹಣವಾದರೂ ಬರುತ್ತದೆ ಜೊತೆಗೆ ಸಿನಿಮಾ ಗೆದ್ದರೆ ಹೀರೋಗೆ ಒಂದು ದೊಡ್ಡ ಇಮೇಜ್ ಕೂಡ ದೊರೆಯುತ್ತದೆ.

    "ಹೊಸಬರ ಸಿನಿಮಾಗಳಿಗೆ ಅವರೇ ನಿರ್ಮಾಪಕರು"

    ಇದೇ ವಿಚಾರವಾಗಿ ಮಾತನಾಡಿರುವ ಒಬ್ಬ ಹಿರಿಯ ವಿಮರ್ಶಕರು ಹೀಗೆ ಹೇಳುತ್ತಾರೆ " ಸಿನಿಮಾ ಈಗ ತುಂಬಾ ರಿಸ್ಕ್ ಜಾಬ್ ಆಗಿದೆ. ಎಲ್ಲಾ ಹೀರೋಗಳು ಕೂಡ ಮಾಸ್ ಹೀರೋಗಳಾಗಿ ಮಿಂಚಲು ಸಾಧ್ಯವಿಲ್ಲ. ಆದರೆ ಒಂದು ಸಲ ಮಾಸ್ ಇಮೇಜ್ ಹೀರೋಗೆ ಸಿಕ್ಕಿದರೆ ಆತ ಕನಿಷ್ಠ ಹತ್ತರಿಂದ ಹದಿನೈದು ವರ್ಷ ಕಾಲ ಆರಾಮಾಗಿ ಸಿನಿಮಾಗಳನ್ನು ಮಾಡಿಕೊಳ್ಳಬಹುದು. ಅಲ್ಲದೆ ಈಗ ಹೊಸಬರ ಚಿತ್ರಗಳನ್ನು ಗಮನಿಸಿದರೆ ಬಹುತೇಕ ಆ ಚಿತ್ರದ ನಿರ್ಮಾಣ ಕೂಡ ಹೀರೋ ಅಥವಾ ಆತನ ಸಂಬಂಧಿಕರು ಅಥವಾ ಸ್ನೇಹಿತರು ಮಾಡುತ್ತಾರೆ. ಹೂಡಿಕೆ ಇಲ್ಲಿ ದೊಡ್ಡ ರಿಸ್ಕ್ ಫ್ಯಾಕ್ಟರ್ ಮತ್ತೆ ಅದನ್ನು ವಾಪಸ್ ಪಡೆಯುವುದು ಅದಕ್ಕಿಂತ ದೊಡ್ಡ ಪ್ರಾಬ್ಲಮ್ ಹೂಡಿದ ಹಣವನ್ನು ವಾಪಸ್ ಪಡೆಯುವುದು. ಹೂಡಿದ ಹಣ ವಾಪಸ್ ಬರದೆ ಹೋದರು ಪರವಾಗಿಲ್ಲ ಕನಿಷ್ಠ ಒಂದು ಮಾಸ್ ಇಮೇಜ್ ಸಿಕ್ಕಿದರೆ ಸಾಕು ಎಂಬ ಭಾವನೆ ಕೂಡ ಈಗ ಹೊಸದಾಗಿ ಬರುತ್ತಿರುವ ಹೀರೋಗಳಲ್ಲಿ ಮನೆಮಾಡಿದೆ. ಮಾಸ್ ಇಮೇಜ್ ಸಿಕ್ಕಿದರೆ ಮುಂದೆ ಅದರಿಂದ ಅವಕಾಶಗಳು ಹರಿದು ಬರುತ್ತದೆ ಎಂಬುದು ಅವರ ಬಲವಾದ ನಂಬಿಕೆ. ಈಗಲೂ ಕರಾವಳಿಯ ನಿರ್ದೇಶಕರು ಮತ್ತು ನಟರು ಮಾತ್ರ ಪ್ರಯೋಗಗಳ ಮೇಲೆ ಬಲವಾದ ನಂಬಿಕೆ ಇಟ್ಟುಕೊಂಡಿದ್ದಾರೆ ಮತ್ತು ಪ್ರಯೋಗಗಳ ಮೂಲಕ ಗೆದ್ದು ತೋರಿಸುತ್ತಿದ್ದಾರೆ. ಉಳಿದವರೆಲ್ಲರೂ ಕೂಡ ಮಾಸ್ ಜಪ ಮಾಡುತ್ತಿದ್ದಾರೆ."

    ಭವಿಷ್ಯದ ಕನ್ನಡ ಸಿನಿಮಾಗಳ ಕಥೆಯೇನು?

    ಭವಿಷ್ಯದ ಕನ್ನಡ ಸಿನಿಮಾಗಳ ಕಥೆಯೇನು?

    'ಕೆಜಿಎಫ್-2' ಚಿತ್ರದ ಯಶಸ್ಸು ಮತ್ತಷ್ಟು ಜನರಿಗೆ ದೊಡ್ಡ ಮಟ್ಟದಲ್ಲಿ ಹಣ ಹೂಡುವುದಕ್ಕೆ ಪ್ರೋತ್ಸಾಹ ಮತ್ತು ಪ್ರೇರಣೆ ಕೊಡುತ್ತಿದೆ. ಹೀಗಾಗಿ ಈಗ ಎಲ್ಲರೂ ಕೂಡ ಪ್ಯಾನ್ ಇಂಡಿಯಾ ಸಿನಿಮಾಗಳ ಜಪ ಮಾಡಲು ಆರಂಭ ಮಾಡಿದ್ದಾರೆ. ಅಲ್ಲಿಗೆ ಎಲ್ಲರೂ ಕೂಡ ಒಂದು ಅರ್ಥದಲ್ಲಿ ಮಾಸ್ ಸಿನಿಮಾಗಳ ಮೇಲೆ ಕಣ್ಣಿಟ್ಟಿದ್ದಾರೆ. ಮುಂದೆ ಯಾರೂ ಕೂಡ ಮುಂದೆ ಹೊಸತನದ ಸಿನಿಮಾಗಳನ್ನು ಮಾಡಲು ರಿಸ್ಕ್ ತೆಗೆದುಕೊಳ್ಳಲು ಮುಂದಾಗುವುದಿಲ್ಲ. ಹಳೆ ಅಥವಾ ಹೊಸ ಎಂಬ ಭಾವನೆಗಿಂತ ಹೆಚ್ಚಾಗಿ ಈಗ ಎಲ್ಲರೂ ಕೂಡ ಮಾಸ್ ಸಿನಿಮಾಗಳ ಮೂಲಕವೇ ಬೆಳಕಿಗೆ ಬರುವ ಪ್ರಯತ್ನದಲ್ಲಿದ್ದಾರೆ. ಹೀಗಾಗಿ ಭವಿಷ್ಯದಲ್ಲಿ ಖಂಡಿತ ಕನ್ನಡದಲ್ಲಿ ಪ್ರಯೋಗಾತ್ಮಕ ಚಿತ್ರಗಳ ಸಂಖ್ಯೆ ತೀರಾ ಕುಸಿಯುತ್ತದೆ. ಕ್ಯಾಂಪಸ್ ಲವ್ ಸ್ಟೋರಿಗಳು, Rom-Comಗಳು, ಫ್ಯಾಮಿಲಿ ಓರಿಯೆಂಟೆಡ್ ಕಾಮಿಡಿ ಚಿತ್ರಗಳ ನಿರ್ಮಾಣ ಮುಂದಿನ ದಿನಗಳಲ್ಲಿ ಕಡಿಮೆಯಾಗುತ್ತದೆ. ಮುಂಬರುವ ದಿನಗಳಲ್ಲಿ ಹೊಸ ಹೀರೋಗಳು ಕೂಡ 'ಕೆಜಿಎಫ್- 2' ಚಿತ್ರದ ಜನಪ್ರಿಯ ಡೈಲಾಗ್ ಈ ರೀತಿ ಹೇಳಬಹುದು...
    Mass...Mass...Mass...
    I don't like it, I avoid
    But Mass likes me, I can't avoid

    English summary
    New generation kannada heroes want mass stories only. They are not to ready for experiments.
    Friday, April 22, 2022, 18:06
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X