'ಎಕ್ಸ್‌ಕ್ಯೂಸ್ ಮಿ'ಗೂ ಮುನ್ನ ಸುದೀಪ್- ಪ್ರೇಮ್ ಮಾಡಬೇಕಿದ್ದ ಸಿನ್ಮಾ ನಿಂತಿದ್ದೇಕೆ? ಕಥೆ ಏನು?
ಮಂಡ್ಯ ಹಳ್ಳಿಯಿಂದ ಬಂದ ನಿರ್ದೇಶನ ಪ್ರೇಮ್ ಇವತ್ತು ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಿರ್ದೇಶಕರಾಗಿದ್ದಾರೆ. 'ಕರಿಯ', 'ಎಕ್ಸ್‌ಕ್ಯೂಸ್ ಮಿ', 'ಜೋಗಿ' ರೀತಿಯ ಹಿಟ್ ಸಿನಿಮಾಗಳನ್ನು ಅವರು ಕಟ್ಟಿಕೊಟ್ಟಿದ್ದಾರೆ. ಸದ್ಯ 'ಕೆಡಿ' ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದು ಈ ಚಿತ್ರದಲ್ಲಿ ಸುದೀಪ್ ಕೂಡ ನಟಿಸ್ತಾರೆ ಎನ್ನಲಾಗ್ತಿದೆ.
ಧ್ರುವ ಸರ್ಜಾ ನಟನೆಯ 'ಕೆಡಿ' ಸಿನಿಮಾ ಬಹಳ ನಿರೀಕ್ಷೆ ಹುಟ್ಟಾಕ್ಕಿದೆ. ಧ್ರುವ ಹಾಗೂ ಪ್ರೇಮ್ ಇಬ್ಬರಿಗೂ ದೊಡ್ಡದೊಂದು ಬ್ರೇಕ್ ಬೇಕಿದೆ. ಚಿತ್ರದಲ್ಲಿ ಸುದೀಪ್ ನಟಿಸಿದರೆ ಚೆನ್ನಾಗಿರುತ್ತದೆ ಎಂದು ಪ್ರೇಮ್ ನಿರ್ಧರಿಸಿದ್ದಾರೆ ಎನ್ನಲಾಗ್ತಿದೆ. ಈ ಹಿಂದೆ ಈ ಜೋಡಿ 'ದಿ ವಿಲನ್' ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿತ್ತು. ಅದಕ್ಕೂ ಮುನ್ನ 'ಕಲಿ' ಎಂಬ ಸಿನಿಮಾ ಘೋಷಣೆಯಾಗಿ ನಿಂತು ಹೋಗಿತ್ತು. ನಿಮಗೆ ಗೊತ್ತಾ 22 ವರ್ಷಗಳ ಹಿಂದೆಯೇ ಇವರಿಬ್ಬರು ಒಂದು ಚಿತ್ರದಲ್ಲಿ ಕೆಲಸ ಮಾಡಬೇಕಿತ್ತು.

'ಕರಿಯ' ಬಳಿಕ 'ಎಕ್ಸ್‌ಕ್ಯೂಸ್ ಮಿ' ಸಿನಿಮಾ ಮಾಡಿ ಪ್ರೇಮ್ ಸಕ್ಸಸ್ ಕಂಡಿದ್ದರು. ಅಜಯ್ ರಾವ್, ಸುನೀಲ್ ರಾವ್ ಹಾಗೂ ರಮ್ಯಾ ನಟನೆಯ ಸಿನಿಮಾವನ್ನು ಕನ್ನಡ ಸಿನಿರಸಿಕರು ಇನ್ನು ಮರೆತ್ತಿಲ್ಲ. ಆದರೆ ಅದಕ್ಕೂ ಮುನ್ನ ಸುದೀಪ್ ಜೊತೆ ಸಿನಿಮಾ ಮಾಡಲು ಪ್ರೇಮ್ ಮಾತುಕತೆ ನಡೆಸಿದ್ದರು. ಎನ್. ಎಂ ಸುರೇಶ್ ಚಿತ್ರ ನಿರ್ಮಾಣ ಮಾಡಬೇಕಿತ್ತು. ಕಥೆ ಕೇಳಿ ಸುದೀಪ್ ಅಡ್ವಾನ್ಸ್ ಸಹ ಪಡೆದಿದ್ದರು. ಬಳಿಕ ಬೇರೆ ಸಿನಿಮಾಗಳಲ್ಲಿ ಸುದೀಪ್ ಬ್ಯುಸಿಯಾಗಿ ಆ ಸಿನಿಮಾ ನಿಂತು ಹೋಯಿತು ಎಂದು ಡೈಲಿ ಮಾಧ್ಯಮ ಯೂಟ್ಯೂಬ್ ಸಂದರ್ಶನದಲ್ಲಿ ನಿರ್ಮಾಪಕ ಎನ್. ಎಂ ಸುರೇಶ್ ಹೇಳಿದ್ದಾರೆ.
"ನಾನು ಮೂಲತಃ ಉದ್ಯಮಿ. 'ಕರಿಯ' ಬಳಿಕ ಪ್ರೇಮ್ ನಿರ್ದೇಶನದಲ್ಲಿ ಸಿನ್ಮಾ ಮಾತುಕತೆ ಆಗಿತ್ತು. ಸುದೀಪ್ ಅವರಿಗೆ ಕಥೆ ಹೇಳಿ ಒಪ್ಪಿಗೆ ಆಗಿತ್ತು. ಆಗ ಸುದೀಪ್ ಟಾಪ್ ರೇಂಜ್‌ನಲ್ಲಿ ಇದ್ದರು. ಒಳ್ಳೆ ಸಂಭಾವನೆ ಮಾತನಾಡಿ ಅಡ್ವಾನ್ಸ್ ಕೊಟ್ಟಿದ್ದೆ. ಸರೋವರ್ ಹೋಟೆಲ್‌ನಲ್ಲಿ ಮಾತುಕತೆ ಆಗಿತ್ತು. ಪ್ರೇಮ್ ಗೊತ್ತಲ್ಲ ಯಾರಿಗೂ ಸ್ಟೋರಿ ಹೇಳಲ್ಲ. ನಂಗೂ ಹೇಳಲಿಲ್ಲ. ಆದರೆ ನಾನು ನಂಬಿಕೆಯಿಂದ ಸಿನ್ಮಾ ಮಾಡೋಣ ಎಂದೆ" ಎಂದು ಎನ್. ಎಂ ಸುರೇಶ್ ನೆನಪಿಸಿಕೊಂಡಿದ್ದಾರೆ.
ಮಾತುಕತೆ ಆಗಿದ್ದ ಸಿನ್ಮಾ ನಿಂತಿದ್ದು ಯಾಕೆ ಎಂದು ನಿರ್ಮಾಪಕರು ಹೇಳಿದ್ದಾರೆ. "ಒಮ್ಮೆ ಸುದೀಪ್ ಅವ್ರು ಕರೆ ಮಾಡಿ ಬರೋಕೆ ಹೇಳಿದ್ರು. ಸುರೇಶ್ ಅವ್ರೇ ಸದ್ಯಕ್ಕೆ ಈ ಸಿನ್ಮಾ ಮಾಡೋಕೆ ಆಗೊಲ್ಲ. ರಾಮು ಅವರಿಗೆ ಕಾಲ್‌ಶೀಟ್ ಕೊಟ್ಟಿದ್ದೀನಿ. ಅವರೊಟ್ಟಿಗೆ ಸಿನ್ಮಾ ಮಾಡ್ಬೇಕು. ಬಳಿಕ ನಿಮ್ಮ ಸಿನ್ಮಾ ಮಾಡೋಣ ಎಂದ್ರು. ಸುದೀಪ್ ಇದ್ದಿದ್ದನ್ನು ಇದ್ದಂತೆ ಹೇಳಿಬಿಟ್ರು. ಆ ಸಮಯದಲ್ಲೇ ಸಿನ್ಮಾ ಮಾಡಬೇಕು ಎನ್ನುವ ಹಠ ನನಗಿತ್ತು. ಆಗ ಪ್ರೇಮ್, ಸುದೀಪ್ ಸಿನ್ಮಾ ಮಾಡೋದು ಐದಾರು ತಿಂಗಳು ಲೇಟ್ ಆಗುತ್ತಂತೆ. ಬೇಡ ಬೇರೆ ಸಿನ್ಮಾ ಮಾಡೋಣ ಅಂದ್ರು. ಆಗ ಶುರುವಾಗಿದ್ದು 'ಎಕ್ಸ್‌ಕ್ಯೂಸ್ ಮಿ'" ಎಂದು ಎನ್. ಎಂ ಸುರೇಶ್ ವಿವರಿಸಿದ್ದಾರೆ.
ಆ ಬಳಿಕ 'ದಿ ವಿಲನ್' ಚಿತ್ರದಲ್ಲಿ ಶಿವಣ್ಣ ಹಾಗೂ ಸುದೀಪ್ ಇಬ್ಬರನ್ನು ಒಟ್ಟಿಗೆ ಸೇರಿಸುವ ಪ್ರಯತ್ನ ಮಾಡಿದ್ದರು. ಅವರ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಯಿತು. ಆದರೆ ಚಿತ್ರದಲ್ಲಿ ಶಿವಣ್ಣ ಪಾತ್ರಕ್ಕಿಂತ ಶಿವಣ್ಣನ ಪಾತ್ರಕ್ಕೆ ಕಮ್ಮಿ ಮಹತ್ವ ಇದೆ ಎನ್ನುವ ಚೆರ್ಚೆ ನಡೆದು ದೊಡ್ಮನೆ ಅಭಿಮಾನಿಗಳು ಬೇಸರಗೊಂಡಿದ್ದರು. ಇದೀಗ 'ಕೆಡಿ' ಚಿತ್ರದ ಕಿಚ್ಚನಿಗಾಗಿ ಪ್ರೇಮ್ ಒಂದೊಳ್ಳೆ ಪಾತ್ರ ಸಿದ್ಧಪಡಿಸುತ್ತಿದ್ದಾರೆ ಎನ್ನುಬ ಊಹಾಪೋಹ ಶುರುವಾಗಿದೆ. ಶೀಘ್ರದಲ್ಲೇ ಇದಕ್ಕೆ ಸ್ಪಷ್ಟನೆ ಸಿಗಲಿದೆ.


Click it and Unblock the Notifications











