"ನಾನು ಮಾಡ್ದಂಗೆ ಯಾರೂ ಸಿನ್ಮಾ ಮಾಡೋಕೆ ಹೋಗ್ಬೇಡಿ.. ಅದು ದೊಡ್ಡ ಟಾರ್ಚರ್": ಪ್ರಶಾಂತ್ ನೀಲ್
ಕನ್ನಡ ಸಿನಿಮಾ ನಿರ್ದೇಶಕ ಪ್ರಶಾಂತ್ ನೀಲ್ ಈಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರ್ತಿಸಿಕೊಂಡಿದ್ದಾರೆ. 'KGF' ಸಾರಥಿ ಜೊತೆ ನೂರಾರು ಕೋಟಿ ಸುರಿದು ನಿರ್ಮಾಣ ಮಾಡಲು ನಿರ್ಮಾಪಕರು ಕ್ಯೂ ನಿಂತಿದ್ದಾರೆ. ಬಾಲಿವುಡ್ ಸೂಪರ್ ಸ್ಟಾರ್ಸ್ ಕೂಡ ಕಾಲ್‌ಶೀಟ್ ಕೊಡುವುದಕ್ಕೆ ರೆಡಿ ಇದ್ದಾರೆ. ಆದರೆ 10 ವರ್ಷಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ.
ಶ್ರೀಮುರಳಿ ನಟನೆಯ 'ಉಗ್ರಂ' ಸಿನಿಮಾ ಮೂಲಕ ಪ್ರಶಾಂತ್ ನೀಲ್ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದರು. ತಾವೇ ಸಿನಿಮಾ ನಿರ್ಮಿಸಿ ನಿರ್ದೇಶನ ಮಾಡಿದ್ದರು. ಆ ಚಿತ್ರವನ್ನು ತೆರೆಗೆ ತರಲು 4 ವರ್ಷ ಶ್ರಮಿಸಿದ್ದರು. ಆದರೆ ಕಷ್ಟಪಟ್ಟು ಮಾಡಿದ ಸಿನಿಮಾವನ್ನು ಕೊಂಡುಕೊಳ್ಳಲು ನಿರ್ಮಾಪಕರು ಮುಂದೆ ಬರಲಿಲ್ಲ. 'ಉಗ್ರಂ' ತೆರೆಕಂಡ 15 ದಿನಕ್ಕೆ ಪೈರಸಿ ಮಾಡಿಬಿಟ್ಟರು. ಬಹುತೇಕರು ಮೊಬೈಲ್‌ನಲ್ಲಿ ಸಿನಿಮಾ ನೋಡಿ ಮೆಚ್ಚಿಕೊಂಡರು ಎಂದು ನೀಲ್ ಬೇಸರ ವ್ಯಕ್ತಪಡಿಸುತ್ತಲೇ ಇದ್ದಾರೆ.

ನಾನು ಬಹಳ ಇಷ್ಟಪಟ್ಟ ಕಥೆ, ಬಹಳ ಕಷ್ಟಪಟ್ಟು ಮಾಡಿದ ಸಿನಿಮಾವನ್ನು ಜನ ಮೊಬೈಲ್‌ನಲ್ಲಿ, ಯೂಟ್ಯೂಬ್‌ನಲ್ಲಿ ನೋಡಿ ಚೆನ್ನಾಗಿದೆ ಎಂದರು. ಥಿಯೇಟರ್‌ಗಾಗಿ ಮಾಡಿದ ಸಿನಿಮಾ ಅದು. ಆ ಕಥೆಯನ್ನು ಥಿಯೇಟರ್‌ನಲ್ಲಿ ಜನ ನೋಡಬೇಕು ಎನ್ನುವ ಆಸೆಯಿಂದಲೇ ಅದೇ ಕಥೆಯನ್ನು 'ಸಲಾರ್' ಸಿನಿಮಾ ಮಾಡಿದ್ದಾಗಿಯೂ ಪ್ರಶಾಂತ್ ನೀಲ್ ಹೇಳಿಕೊಂಡಿದ್ದಾರೆ.
ನಿರ್ದೇಶನ, ಸಿನಿಮಾ ಮೇಕಿಂಗ್ ಬಗ್ಗೆ ಯಾವುದೇ ಅನುಭವ ಇಲ್ಲದೇ ಬರೀ ಸಿನಿಮಾಗಳನ್ನು ನೋಡಿ ಸಿನಿಮಾ ಮಾಡಬೇಕು ಎಂದು ಹಠಕ್ಕೆ ಬಿದ್ದವರು ಪ್ರಶಾಂತ್ ನೀಲ್. ಯಾವುದೇ ಸಿನಿಮಾದಲ್ಲಿ ಸಹಾಯಕರಾಗಿ ಕೆಲಸ ಮಾಡದೇ, ಶಾರ್ಟ್ ಮೂವಿ ಕೂಡ ಕಟ್ಟಿಕೊಡದೇ 'ಉಗ್ರಂ' ಸಿನಿಮಾ ಮಾಡುವ ದುಸ್ಸಾಹಸಕ್ಕೆ ಕೈ ಹಾಕಿದ್ದರು. ಅದಕ್ಕಾಗಿ ಸಾಕಷ್ಟು ಹಣ, ಸಮಯ ವ್ಯರ್ಥ ಮಾಡಿದ್ದರು.
ಸಾಕಷ್ಟು ರೀಶೂಟ್ ಮಾಡಿ 4 ವರ್ಷಗಳ ಬಳಿಕ ಸಿನಿಮಾ ತೆರೆಕಂಡಿತ್ತು. ಈ ಚಿತ್ರದಿಂದ ಶ್ರೀಮುರಳಿಗೆ ದೊಡ್ಡ ಬ್ರೇಕ್ ಸಿಕ್ಕಿತ್ತು. ನೀಲ್, ರವಿ ಬಸ್ರೂರು, ಭುವನ್ ಗೌಡ ಎಲ್ಲರ ಸಿನಿ ಕರಿಯರ್‌ಗೂ 'ಉಗ್ರಂ' ಭದ್ರ ಬುನಾದಿ ಆಗಿತ್ತು. ಆದರೆ ನಾನು ಮಾಡಿದಂತೆ ಬೇರೆ ಯಾರು ಸಿನಿಮಾ ಮಾಡುವ ಪ್ರಯತ್ನ ಮಾಡಬೇಡಿ ಎಂದು ಪ್ರಶಾಂತ್ ನೀಲ್ ಕಿವಿಮಾತು ಹೇಳಿದ್ದಾರೆ.

'ಉಗ್ರಂ' ದಶಕದ ಸಂಭ್ರಮದಲ್ಲಿ ಅನುಶ್ರೀ ಯುಟ್ಯೂಬ್ ಚಾನಲ್‌ಗೆ ಚಿತ್ರತಂಡ ವಿಶೇಷ ಸಂದರ್ಶನ ನೀಡಿದೆ. ಅದರ 2ನೇ ಎಪಿಸೋಡ್ ಇದೀಗ ರಿಲೀಸ್ ಆಗಿದೆ. ಅಭಿಮಾನಿಗಳು ಚಿತ್ರತಂಡಕ್ಕೆ ಒಂದಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ. ಅದರಲ್ಲಿ ಒಬ್ಬರು "ನಿಮ್ಮಂತೆ ಯಾರ ಬಳಿಯೂ ಕಲಿಯದೇ, ಯಾವುದೇ ಚಿತ್ರಕ್ಕೆ ಸಹಾಯಕರಾಗಿ ಕೆಲಸ ಮಾಡದೇ ದಿಢೀರ್ ಸಿನಿಮಾ ಮಾಡಲು ಬರುವವರಿಗೆ ಏನು ಹೇಳುತ್ತೀರಾ? ಎನ್ನುವ ಪ್ರಶ್ನೆಗೆ ಪ್ರಶಾಂತ್ ನೀಲ್ ಉತ್ತರಿಸಿದ್ದಾರೆ. ನನ್ನ ತರ ಯಾರು ಸಿನಿಮಾ ಮಾಡಬೇಡಿ ಎಂದಿದ್ದಾರೆ.
"ಖಂಡಿತ ಆ ರೀತಿ ಸಿನ್ಮಾ ಮಾಡುವ ಪ್ರಯತ್ನ ಮಾಡಬೇಡಿ. ಅದಕ್ಕೆ 4 ವರ್ಷ ಹಿಡಿಯಿತು ಉಗ್ರಂ ಸಿನ್ಮಾ. ಅದು ನನ್ನೊಬ್ಬನಿಗೆ ಟಾರ್ಚರ್ ಅಲ್ಲ. ಮುರಳಿಗೆ ನನ್ನ ಫ್ಯಾಮಿಲಿಗೆ ಎಲ್ಲರಿಗೂ ಟಾರ್ಚರ್ ಅದು. 6 ತಿಂಗಳಲ್ಲಿ ತೆಗೆಯುವಂತಹ ಸಿನ್ಮಾ. ನಾನು 4 ವರ್ಷ ತಗೊಂಡೆ. ನಾನು ಅದಕ್ಕೆ ನನ್ನ ವಿಚಾರವನ್ನು ಉದಾಹರಣೆ ಕೊಡಲ್ಲ ಅಂದಿದ್ದು" ಎಂದಿದ್ದಾರೆ.
ಇದಕ್ಕೂ ಮುನ್ನ ಮಾತನಾಡಿದ್ದ ನೀಲ್ "ಅದು ಕೆಟ್ಟ ಉದಾಹರಣೆ. ಹಾಗಾಗಿ ಆ ಬಗ್ಗೆ ನಾನು ಜಾಸ್ತಿ ಮಾತಾಡಲ್ಲ. ಆ ಸಿನ್ಮಾ ಸಕ್ಸಸ್ ಆಗಿದೆಯೆಂದು ತುಂಬಾ ಜನ ಹಳ್ಳಕ್ಕೆ ಬೀಳುತ್ತಾರೆ. ಅದು ಸಿನಿಮಾ ಮಾಡುವ ಕೆಟ್ಟ ಹಾದಿ. ನಾವೇ ಸಿನಿಮಾ ಮಾಡಬೇಕು ಎಂದು ಹೊರಟಾಗ ಏನು ಸರಿ ಮಾಡಬೇಕು ಎಂದು ನೋಡುತ್ತೇವೆ. ಮತ್ತೊಬ್ಬರ ಬಳಿ ಕಲಿತಾಗ ಏನು ಮಾಡಬಾರದು ಎನ್ನುವುದು ಗೊತ್ತಾಗುತ್ತದೆ. ಎಲ್ಲರೂ ತಪ್ಪು ಮಾಡುತ್ತೀವಿ. ಅದನ್ನು ಕಮ್ಮಿ ಮಾಡಬೇಕು. ಏನು ಮಾಡಬಾರದು ಎನ್ನುವುದನ್ನು ಎಲ್ಲರೂ ಕಲಿಯುವುದು ಮುಖ್ಯ" ಎಂದಿದ್ದರು.
"ಉಗ್ರಂ ಫಸ್ಟ್ ಶಾಟ್ ತೆಗೆದಾಗ ನನ್ನ ಮೀಟರ್ ಆಫ್ ಆಗಿತ್ತು. ನಾನು ಬಹಳ ಕೆಟ್ಟ ಸಿನ್ಮಾ ಮಾಡ್ತಿದ್ದೀನಿ ಎನಿಸಿತ್ತು. ನಿಜವಾಗಿ ಹೇಗೆ ಚಿತ್ರೀಕರಣ ಮಾಡುವುದು ಎನ್ನುವುದನ್ನು ಗೊತ್ತಾಗುವ ವೇಳೆಗೆ 2 ವರ್ಷ ಆಗಿತ್ತು" ಎಂದಿದ್ದರು.


Click it and Unblock the Notifications











