"ಆ ಅವಮಾನದಿಂದ 'ಅಮೆರಿಕಾ ಅಮೆರಿಕಾ' ಕಥೆ ಬರೆದೆ.. ಸುದೀಪ್- ಪ್ರಕಾಶ್ ರೈ ನಟಿಸಬೇಕಿತ್ತು"; ನಾಗತಿಹಳ್ಳಿ ಚಂದ್ರಶೇಖರ್
90ರ ದಶಕದ ಕನ್ನಡದ ಸೂಪರ್ ಹಿಟ್ ಸಿನಿಮಾ 'ಅಮೆರಿಕಾ ಅಮೆರಿಕಾ'. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಈ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಹಾಗೂ ಹೇಮಾ ಪಂಚಮುಖಿ ಲೀಡ್ ರೋಲ್‌ಗಳಲ್ಲಿ ನಟಿಸಿದ್ದರು. 2 ವರ್ಷದ ಹಿಂದೆ ಸಿನಿಮಾ 25 ವರ್ಷ ಪೂರೈಸಿತ್ತು. ಇದೀಗ ಮೇಷ್ಟ್ರು 'ಅಮೆರಿಕಾ ಅಮೆರಿಕಾ'-2 ಸಿನಿಮಾ ಮಾಡುತ್ತಿದ್ದಾರೆ.
ದಶಕಗಳ ಹಿಂದೆ 'ಅಮೆರಿಕಾ ಅಮೆರಿಕಾ' ಸಿನಿಮಾ ಯಶಸ್ವಿಯಾಗಿ ಒಂದು ವರ್ಷ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡಿತ್ತು. ಅಮೆರಿಕಾದಲ್ಲಿ ಬಿಡುಗಡೆಯಾದ ಮೊದಲ ಕನ್ನಡ ಸಿನಿಮಾ ಎನ್ನುವ ಹೆಗ್ಗಳಿಕೆಗೂ ಚಿತ್ರ ಪಾತ್ರವಾಗಿತ್ತು. ಚಿತ್ರದಲ್ಲಿ ಸೂರ್ಯ ಆಗಿ ರಮೇಶ್ ಅರವಿಂದ್, ಶಶಾಂಕ್ ಆಗಿ ಅಕ್ಷಯ್ ಹಾಗೂ ಭೂಮಿ ಆಗಿ ಹೇಮಾ ನಟಿಸಿದ್ದರು. ಒಂದು ತ್ರಿಕೋನ ಪ್ರೇಮಕಥೆಯ ಜೊತೆ ಜೊತೆಗೆ ಭಾರತ ಹಾಗೂ ಅಮೆರಿಕಾದ ಸಾಂಸ್ಕೃತಿಕ ವ್ಯತ್ಯಾಸವನ್ನು ಚಿತ್ರದಲ್ಲಿ ತೆರೆದಿಡಲಾಗಿತ್ತು.

ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಮತ್ತೊಮ್ಮೆ 'ಅಮೆರಿಕಾ ಅಮೆರಿಕಾ' ಸಿನಿಮಾವನ್ನು ನೆನಪಿಸಿಕೊಂಡಿದ್ದಾರೆ. ಆ ಸಿನಿಮಾ ಶುರುವಾಗಿದ್ದು ಕಥೆಗೆ ಸ್ಫೂರ್ತಿ ಎಲ್ಲವನ್ನು ವಿವರಿಸಿದ್ದಾರೆ. ರ್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನಲ್ ಸಂದರ್ಶನಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಅಂದಹಾಗೆ ಸುದೀಪ್ ಹಾಗೂ ಪ್ರಕಾಶ್ ರೈ ಚಿತ್ರದಲ್ಲಿ ನಟಿಸಬೇಕಿತ್ತು. ಕೊನೆಗೆ ರಮೇಶ್- ಅಕ್ಷಯ್ ನಟಿಸುವಂತಾಯಿತು ಎಂದಿದ್ದಾರೆ.
"90ರ ದಶಕದಲ್ಲಿ ನಾನು ಅಮೆರಿಕಾಗೆ ಹೋದಾಗ ವಿಮಾನ ನಿಲ್ದಾಣದಲ್ಲಿ ನಡೆದ ಒಂದು ಅವಮಾನ ಆ ಕಥೆ ಬರೆಯಲು ಪ್ರೇರಣೆಯಾಯಿತು ಎನ್ನಬಹುದು. ಅದೇ ಮೊದಲ ಬಿಂದು ಎನಿಸುತ್ತದೆ. ನನ್ನ ಆಪ್ತನೊಬ್ಬ ನೀನು ಅಮೆರಿಕಾಬೇಕು, ಅಲ್ಲಿ ಎಲ್ಲಾ ಸುತ್ತಿ ನೋಡಬೇಕು ಎಂದು ಪದೇ ಪದೆ ಹೇಳುತ್ತಿದ್ದ. ಆತನ ಮಾತು ನಂಬಿ ಹೋಗಿದ್ದೆ. ಅಲ್ಲಿ ಹೋದರೆ ಆತ ನನ್ನ ಫೋನ್ ತೆಗೆಯಲಿಲ್ಲ. ಮಧ್ಯರಾತ್ರಿ ಎಲ್ಲಿಗೆ ಹೋಗಬೇಕು ಎಂದು ಗೊತ್ತಾಗದಂತಹ ಸ್ಥಿತಿ ಬಂದಿತ್ತು. ಆ ಘಟನೆಯಿಂದ ಅಮೆರಿಕಾ ಬಗ್ಗೆ ತಿಳಿಯಲು, ಸಿನಿಮಾ ಮಾಡಲು ಹಠಕ್ಕೆ ಬಿದ್ದೆ" ಎಂದಿದ್ದಾರೆ.
"ರಮೇಶ್ ಅರವಿಂದ್ ಆಗ ತಮಿಳು ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದರು. ಚಿತ್ರದ ಶಶಾಂಕ್ ಪಾತ್ರ ಪ್ರಕಾಶ್ ರೈ ಮಾಡಬೇಕಿತ್ತು. ಅದು ಕಾರಣಾಂತರಗಳಿಂದ ತಪ್ಪಿ ಹೋಯಿತು. ಸೂರ್ಯ, ಚಂದ್ರ, ಭೂಮಿ ಎನ್ನುವ ಮೂರು ಪ್ರತಿಮೆಗಳು ಹಾಗೂ 'ಯಾವ ಮೋಹನ ಮುರಳಿ ಕರೆಯಿತು' ಹಾಡು ನನ್ನನ್ನು ಸದಾ ಕಾಡುತ್ತಿತ್ತು. ಅದೆಲ್ಲವನ್ನು ಸೇರಿಸಿ 'ಅಮೆರಿಕಾ ಅಮೆರಿಕಾ' ಕಥೆ ಮಾಡಿದೆ."

"ಶಶಾಂಕ್ ಪಾತ್ರದಲ್ಲಿ ಪ್ರಕಾಶ್ ರೈ ನಟಿಸಲು ಸಾಧ್ಯವಾಗದೇ ಇದ್ದಾಗ ಸುದೀಪ್ ಹೆಸರು ಬಂತು. ಅಕ್ಷಯ್ ಮಾಡಿದ ಆ ಪಾತ್ರ ಸುದೀಪ್ ಮಾಡಬೇಕಿತ್ತು. ಕಾರಣಾಂತರಗಳಿಂದ ಇಬ್ಬರು ನಟಿಸಲು ಸಾಧ್ಯವಾಗಲಿಲ್ಲ. ಏನಾಯಿತೋ ಅದು ಒಳ್ಳೆಯದ್ದಕ್ಕೆ. ಯಾಕಂದರೆ ಇಬ್ಬರೂ ಈಗ ದೊಡ್ಡದಾಗಿ ಬೆಳೆದಿದ್ದಾರೆ. ಹಾಗಾಗಿ ನಮ್ಮ ಚಿತ್ರ ಬಿಟ್ಟಿದ್ದರಿಂದ ಅವರಿಗೆ ನಷ್ಟವಾಯಿತು ಅಂತ ಏನು ಇಲ್ಲ. ಆ ಸಂದರ್ಭ ಆ ರೀತಿ ಇತ್ತು" ಎಂದು ನಾಗತಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.
16 ಜನರ ತಂಡವನ್ನು ಕಟ್ಟಿಕೊಂಡು 45 ದಿನಗಳ ಕಾಲ ಅಮೆರಿಕಾದಲ್ಲಿ ಬೀಡುಬಿಟ್ಟು ಚಿತ್ರೀಕರಣ ನಡೆಸಿದೆವು. ಮನೋಮೂರ್ತಿ ಮೊದಲಿಗೆ ಸಂಗೀತ ನಿರ್ದೇಶನ ಮಾಡಿದ ಸಿನಿಮಾ ಅದು. ಅವರೂ ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದರೂ ಸಂಗೀತ ಬಗ್ಗೆ ಅಪಾರ ಆಸಕ್ತಿ ಇತ್ತು. ಹಾಗಾಗಿ ಅವರನ್ನು ಆಯ್ಕೆ ಮಾಡಿಕೊಂಡೆ. ಆಲ್ಬಮ್ ಹಿಟ್ ಆಗಿದ್ದಕ್ಕೆ ಮನೋಮೂರ್ತಿಗೆ ಕ್ರೆಡಿಟ್ ಸಲ್ಲಬೇಕು ಎಂದಿದ್ದಾರೆ.


Click it and Unblock the Notifications











