Kannappa: ಅಣ್ಣಾವ್ರು, ಶಿವಣ್ಣ ಮಾತ್ರವಲ್ಲ ಅಪ್ಪು ಕೂಡ 'ಕಣ್ಣಪ್ಪ' ಆಗಿದ್ರು: ದೊಡ್ಮನೆ ಕಣ್ಣಪ್ಪನ ನಂಟು ಎಂಥದ್ದು?
ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ 'ಬೇಡರ ಕಣ್ಣಪ್ಪ' ಸಿನಿಮಾ ಬಗ್ಗೆ ಚರ್ಚೆ ನಡೀತಿದೆ. ಅದಕ್ಕೆ ಕಾರಣ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ತೆಲುಗಿನ 'ಕಣ್ಣಪ್ಪ' ಚಿತ್ರದಲ್ಲಿ ನಟಿಸೋಕೆ ಒಪ್ಪಿರುವುದು. ಹೌದು ಮಂಚು ವಿಷ್ಣು ನಟನೆಯ 'ಕಣ್ಣಪ್ಪ' ಚಿತ್ರದಲ್ಲಿ ಹ್ಯಾಟ್ರಿಕ್ ಹೀರೊ ನಟಿಸೋಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
'ಕಣ್ಣಪ್ಪ' ಕನ್ನಡದಲ್ಲಿ ಡಾ. ರಾಜ್‌ಕುಮಾರ್ ನಟಿಸಿದ 'ಬೇಡರ ಕಣ್ಣಪ್ಪ' ರೀಮೇಕ್. ಈ ಕತೆ ಆಧರಿಸಿ ಈಗಾಗಲೇ ಸಾಕಷ್ಟು ಸಿನಿಮಾಗಳು ಬಂದಿದೆ. ಆದರೆ ಮೊದಲಿಗೆ ಇಂತಾದೊಂದು ಪ್ರಯತ್ನ ನಡೆದಿದ್ದು ಕನ್ನಡದಲ್ಲಿ ಅನ್ನೋದು ವಿಶೇಷ. ವೀರಶೈವರು ಆರಾಧಿಸುವ 63 ಪುರಾತನರಲ್ಲಿ ಕಣ್ಣಪ್ಪ ಬಹಳ ಪ್ರಸಿದ್ಧಿ ಪಡೆದವರು. ತನ್ನ ಮುಗ್ಧ ಭಕ್ತಿಯಿಂದ ಶಿವನಿಗೆ ತನ್ನ ಕಣ್ಣುಗಳನ್ನೇ ಅರ್ಪಿಸಿ ಶಿವಸಾನ್ನಿಧ್ಯವನ್ನು ಪಡೆದ ಮಹಾನ್ ಭಕ್ತ. ಇದೇ ಕತೆಯನ್ನು ಆಧರಿಸಿ ದಶಕಗಳ ಹಿಂದೆ ಡಾ. ರಾಜ್‌ಕುಮಾರ್ 'ಬೇಡರ ಕಣ್ಣಪ್ಪ' ಚಿತ್ರದಲ್ಲಿ ನಟಿಸಿದ್ದರು.

'ಬೇಡರ ಕಣ್ಣಪ್ಪ' ಚಿತ್ರದ ಮೂಲಕ ಅಣ್ಣಾವ್ರು ಚಿತ್ರರಂಗಕ್ಕೆ ಹೀರೊ ಆಗಿ ಬಂದರು. ಆ ಶಿವನ ಅನುಗ್ರಹದಿಂದಲೇ ಆ ಸಿನಿಮಾ ಯಶಸ್ಸು ಪಡೆಯಿತು ಎಂದು ಅಣ್ಣಾವ್ರು ನಂಬಿದ್ದರು. ಸಿನಿಮಾ ಸೂಪರ್ ಹಿಟ್ ಆಗಿತ್ತು. ಚಿತ್ರರಂಗಕ್ಕೆ ಡಾ. ರಾಜ್‌ಕುಮಾರ್‌ಗೆ ಭದ್ರ ಬುನಾದಿಯಾಯಿತು. 1988ರಲ್ಲಿ ಹೆಚ್ಚು ಕಡಿಮೆ ಇದೇ ಕತೆಯನ್ನು ಆಧರಿಸಿ ಶಿವಣ್ಣ ಹೀರೊ ಆಗಿ 'ಶಿವಮೆಚ್ಚಿದ ಕಣ್ಣಪ್ಪ' ಸಿನಿಮಾ ಬಂದಿತ್ತು.
ಬೇಡನಾಗಿದ್ದ ದಿಣ್ಣ ಶಿವನಿಗೆ ಕಣ್ಣುಗಳನ್ನು ಅರ್ಪಿಸಿ 'ಬೇಡರ ಕಣ್ಣಪ್ಪ' ಎಂದು ಹೆಸರಾಗುತ್ತಾನೆ. ಅಚ್ಚರಿ ಎಂದರೆ ದಿಣ್ಣನ ಪಾತ್ರದಲ್ಲಿ ಡಾ. ರಾಜ್‌ಕುಮಾರ್, ಶಿವಣ್ಣ ಮಾತ್ರವಲ್ಲ ಪುನೀತ್ ರಾಜ್‌ಕುಮಾರ್ ಸಹ ನಟಿಸಿದ್ದರು. ಇದು ಅಚ್ಚರಿ ಎನಿಸಿದರೂ ನಿಜ. 'ಶಿವ ಮೆಚ್ಚಿದ ಕಣ್ಣಪ್ಪ' ಚಿತ್ರದಲ್ಲಿ ಶಿವಣ್ಣ ದಿಣ್ಣನ ಪಾತ್ರ ಮಾಡಿದ್ದರು. ಆದರೆ ದಿಣ್ಣನ ಬಾಲ್ಯದ ದಿನಗಳ ಸನ್ನಿವೇಶಗಳಲ್ಲಿ ಅಪ್ಪು ನಟಿಸಿದ್ದರು.
ಪುನೀತ್ ರಾಜ್‌ಕುಮಾರ್ ಸಾಕಷ್ಟು ಸಿನಿಮಾಗಳಲ್ಲಿ ಬಾಲ ನಟನಾಗಿ ನಟಿಸಿದ್ದರು. 'ಬೆಟ್ಟದ ಹೂವು' 'ಶಿವ ಮೆಚ್ಚಿದ ಕಣ್ಣಪ್ಪ' ಚಿತ್ರದಲ್ಲಿ ಅಪ್ಪು ನಟಿಸಿದ್ದರು. ಆ ಬಳಿಕ ಪರಶುರಾಮ್ ಸಿನಿಮಾದಲ್ಲಿ ಕೊನೆಯದಾಗಿ ಅಪ್ಪು ಬಾಲನಟನಾಗಿ ಕಾಣಿಸಿಕೊಂಡರು. 13 ವರ್ಷಗಳ ನಂತರ 'ಅಪ್ಪು' ಚಿತ್ರದ ಮೂಲಕ ಹೀರೊ ಆಗಿ ಬೆಳ್ಳಿಪರದೆಗೆ ರೀಎಂಟ್ರಿ ಕೊಟ್ಟರು.

'ಬೇಡರ ಕಣ್ಣಪ್ಪ' ಸಿನಿಮಾ 'ಶಿವಪ್ಪ ಕಾಯೋ ತಂದೆ' ಹಾಡನ್ನು ಕನ್ನಡ ಸಿನಿರಸಿಕರು ಎಂದೂ ಮರೆಯುವುದಿಲ್ಲ. ಸಿನಿರಸಿಕರು ತಮ್ಮನ್ನು ಹೀರೊ ಆಗಿ ಒಪ್ಪಿಕೊಳ್ಳುತ್ತಾರೋ ಇಲ್ಲವೋ ಎಂದುಕೊಂಡಿದ್ದ ಮುತ್ತುರಾಜನಿಗೆ ಶಿವನ ಆಶೀರ್ವಾದಕ್ಕೆ ಸಿಕ್ಕಿತ್ತು ಎನಿಸುತ್ತದೆ. ಕಣ್ಣಪ್ಪನ ಪಾತ್ರ ವರವಾಗಿ ಬಂದಿತ್ತು. ಅದೇ ಕಾರಣಕ್ಕೋ ಏನೋ ದೊಡ್ಮನೆಯ ಮೂವರು ಕಲಾವಿದರು ಆ ಪಾತ್ರದಲ್ಲಿ ನಟಿಸುವಂತಾಯಿತು.
'ಬೇಡರ ಕಣ್ಣಪ್ಪ' ಚಿತ್ರ 'ಕಾಳಹಸ್ತಿ ಮಹಾತ್ಯಂ' ಹೆಸರಿನಲ್ಲಿ ರೀಮೆಕ್ ಆಗಿತ್ತು. ಡಾ. ರಾಜ್‌ಕುಮಾರ್ ಚಿತ್ರದಲ್ಲಿ ಹೀರೊ ಆಗಿ ನಟಿಸಿದ್ದರು. ಕನ್ನಡ ಬಿಟ್ಟು ಪರಭಾಷೆಯಲ್ಲಿ ಅಣ್ಣಾವ್ರು ನಟಿಸಿದ ಏಕೈಕ ಸಿನಿಮಾ ಇದು. ಆಂಧ್ರದಲ್ಲಿ ಸಿನಿಮಾ 100 ದಿನ ಪ್ರದರ್ಶನ ಕಂಡಿತ್ತು. ಅಂದರೆ ಡಾ. ರಾಜ್‌ಕುಮಾರ್ ಒಂದು ಬಾರಿಯಲ್ಲ 2 ಬಾರಿ ಕಣ್ಣಪ್ಪನ ಪಾತ್ರ ಮಾಡಿದ್ದರು. ಅದಕ್ಕೆ ಹೇಳಿದ್ದರೂ ದೊಡ್ಮನೆಗೂ ಕಣ್ಣಪ್ಪನಿಗೆ ನಂಟು ಅಂತಿಂಥದಲ್ಲ ಎಂದು.
'ಕಾಳಹಸ್ತಿ ಮಹಾತ್ಯಂ' ಚಿತ್ರವನ್ನು ಆ ನಂತರ ಕೃಷ್ಣಂರಾಜು 'ಭಕ್ತ ಕನ್ನಪ್ಪ' ಹೆಸರಿನಲ್ಲಿ ರೀಮೇಕ್ ಮಾಡಿದ್ದರು. ಪ್ರಭಾಸ್ ಈ ಚಿತ್ರವನ್ನು ಮಾಡಬೇಕು ಎಂದುಕೊಂಡಿದ್ದರು. ಆದರೆ ಸಾಧ್ಯವಾಗಲಿಲ್ಲ. ಇದೀಗ ಮೋಹನ್ ಬಾಬು ಇದೇ ಕಣ್ಣಪ್ಪನ ಕತೆಯನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ತರುತ್ತಿದ್ದಾರೆ. ತಮ್ಮ ಮಗ ಮಂಚು ವಿಷ್ಣುನ ಹೀರೊ ಮಾಡಿದ್ದಾರೆ.
ಮಂಚು ವಿಷ್ಣು 'ಕಣ್ಣಪ್ಪ'ನ ಪಾತ್ರದಲ್ಲಿ ನಟಿಸುತ್ತಿದ್ದರೆ ಪ್ರಭಾಸ್, ಮೋಹನ್ ಲಾಲ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸೋದು ಖಚಿತವಾಗಿತ್ತು. ಇದೀಗ ಶಿವಣ್ಣ ತಂಡವನ್ನು ಸೇರಿಕೊಂಡಿದ್ದಾರೆ. ಬಾಲಿವುಡ್‌ನ ಮುಖೇಶ್ ಕುಮಾರ್ ಸಿಂಗ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮುಂದಿನ ವರ್ಷ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ.


Click it and Unblock the Notifications











