ರಶ್ಮಿಕಾ ಜಾಗದಲ್ಲಿ ಸಾಯಿಪಲ್ಲವಿ ಇರಬೇಕಿತ್ತು; ಏನ್ ಎಡವಟ್ಟು ಮಾಡಿಬಿಟ್ಟೆ ಗುರು ಎಂದ ನೆಟ್ಟಿಗರು
'ಕಿರಿಕ್ ಪಾರ್ಟಿ' ಚಿತ್ರದಲ್ಲಿ ನಟಿಸಿ ಚಿತ್ರರಂಗಕ್ಕೆ ಬಂದ ರಶ್ಮಿಕಾ ಮಂದಣ್ಣ ಸದ್ಯ ಅಭಿಮಾನಿಗಳ ನ್ಯಾಷನಲ್ ಕ್ರಶ್ ಆಗಿಬಿಟ್ಟಿದ್ದಾರೆ. ಬಾಲಿವುಡ್ ನಟಿಯರಿಗೂ ಕೊಡಗಿನ ಕುವರಿ ಪೈಪೋಟಿ ಕೊಡುತ್ತಿದ್ದಾರೆ. ಹಿಂದಿ, ತೆಲುಗಿನ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆದರೆ 'ಕಿರಿಕ್ ಪಾರ್ಟಿ' ಚಿತ್ರದಲ್ಲಿ ಸಾನ್ವಿಯಾಗಿ ಸಾಯಿ ಪಲ್ಲವಿ ನಟಿಸಬೇಕಿತ್ತಂತೆ.
ಹೌದು. ಹಳೇ ಸಂದರ್ಶನವೊಂದರಲ್ಲಿ ಖುದ್ದು ರಕ್ಷಿತ್ ಶೆಟ್ಟಿ ಈ ಬಗ್ಗೆ ಮಾತನಾಡಿದ್ದಾರೆ. 'ಪ್ರೇಮಂ' ಚಿತ್ರದಲ್ಲಿ ಸಾಯಿ ಪಲ್ಲವಿ ಮಾಡಿದ್ದ ಮಲರ್ ಪಾತ್ರದಿಂದ ಪ್ರೇರಣೆಗೊಂಡು 'ಕಿರಿಕ್ ಪಾರ್ಟಿ' ಚಿತ್ರದಲ್ಲಿ ಸಾನ್ವಿ ಪಾತ್ರ ಬರೆದುಕೊಂಡಿದ್ದೆವು ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ. ಆದರೆ ಯಾಕೆ ಸಾಯಿ ಪಲ್ಲವಿ ಜಾಗಕ್ಕೆ ರಶ್ಮಿಕಾ ಬರುವಂತಾಯಿತು ಎನ್ನುವುದನ್ನು ವಿವರಿಸಿದ್ದಾರೆ. ರಕ್ಷಿತ್ ಶೆಟ್ಟಿ ಹಿಂದೆ ಮಾತನಾಡಿದ್ದ ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದೆ.

ರಿಷಬ್ ಶೆಟ್ಟಿ ನಿರ್ದೇಶನದಲ್ಲಿ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ ಹಾಗೂ ಸಂಯುಕ್ತಾ ಹೆಗ್ಡೆ ನಟನೆಯ 'ಕಿರಿಕ್ ಪಾರ್ಟಿ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. 40 ಕೋಟಿ ರೂ. ಬಜೆಟ್ ಸಿನಿಮಾ 50 ಕೋಟಿ ರೂ.ವರೆಗೆ ಗ್ರಾಸ್ ಕಲೆಕ್ಷನ್ ಮಾಡಿತ್ತು. ಆ ಚಿತ್ರದಲ್ಲಿ ಕೆಲಸ ಮಾಡಿದ ಎಲ್ಲರಿಗೂ ಒಳ್ಳೆ ಹೆಸರು ಬಂದಿತ್ತು. 'ಕಿರಿಕ್ ಪಾರ್ಟಿ' ಬಳಿಕ ಎರಡ್ಮೂರು ಸಿನಿಮಾಗಳಲ್ಲಿ ನಟಿಸಿದ ರಶ್ಮಿಕಾ ಬಳಿಕ ತೆಲುಗು ಚಿತ್ರರಂಗ ಪ್ರವೇಶಿಸಿದರು.
ತೆಲುಗಿನ ಮೊದಲ ಸಿನಿಮಾ ಅಷ್ಟಾಗಿ ಸದ್ದು ಮಾಡದಿದ್ದರೂ 'ಗೀತಾಗೋವಿಂದಂ' ಹಿಟ್ ಆಗಿ ಆಕೆಗೆ ಅಲ್ಲಿ ಒಳ್ಳೆ ಕ್ರೇಜ್ ಸೃಷ್ಟಿಯಾಯಿತು. ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ನಟಿಸೋಕೆ ಆರಂಭಿಸಿದರು. ಅಲ್ಲಿಂದ ಮುಂದೆ ಬಾಲಿವುಡ್ ಪ್ರವೇಶಿಸಿ ಗೆದ್ದರು. 'ಅನಿಮಲ್' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿ ಬಿಟೌನ್‌ನಲ್ಲೂ ರಶ್ಮಿಕಾ ಮಂದಣ್ಣ ಹವಾ ಶುರುವಾಗಿದೆ. 'ಪುಷ್ಪ' ರೀತಿಯ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಮೋಡಿ ಮಾಡುತ್ತಿದ್ದಾರೆ.
ರಶ್ಮಿಕಾ ಮಂದಣ್ಣ ನೀಡಿದ ಕೆಲ ಹೇಳಿಕೆಗಳು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಸಂದರ್ಶನವೊಂದರಲ್ಲಿ ತಮ್ಮ ಮೊದಲ ಸಿನಿಮಾ ನಿರ್ಮಿಸಿದ ಪರಂವಃ ಸ್ಟುಡಿಯೋ ಹೆಸರು ಹೇಳಲು ಹಿಂದು ಮುಂದು ನೋಡಿದ್ದು ಭಾರೀ ಬೇಸರಕ್ಕೆ ಕಾರಣವಾಗಿತ್ತು. ನಾನು ಚಿತ್ರದಲ್ಲಿ ನಟಿಸಬೇಕು ಎಂದು ಚಿತ್ರತಂಡ ದುಂಬಾಲು ಬಿದ್ದಿತ್ತು ಎಂದಿದ್ದರು. ಬಳಿಕ ಸಂದರ್ಶನವೊಂದರಲ್ಲಿ ರಿಷಬ್ ಶೆಟ್ಟಿ ಪರೋಕ್ಷವಾಗಿ ರಶ್ಮಿಕಾ ಮಂದಣ್ಣಗೆ ಆಕೆಯ ಸ್ಟೈಲ್‌ನಲ್ಲೇ ತಿರುಗೇಟು ಕೊಟ್ಟಿದ್ದಾರೆ ಎಂದು ಚರ್ಚೆ ಆಗಿತ್ತು.

"ಪ್ರೇಮಂ ಸಿನಿಮಾ ನೋಡಿದಾಗ ನಾನು ಸಾಯಿ ಪಲ್ಲವಿ ಅವರ ದೊಡ್ಡ ಅಭಿಮಾನಿ ಆಗಿದ್ದೆ. ನಾವು 'ಕಿರಿಕ್ ಪಾರ್ಟಿ' ಸಿನಿಮಾ ಮಾಡುವಾಗ ಪ್ರೇಕ್ಷಕರು ಸಾನ್ವಿ ಪಾತ್ರ ನೋಡಿ ಪ್ರೀತಿಲಿ ಬೀಳಬೇಕು. ಹಾಗಾಗಿ ಆ ಪಾತ್ರವನ್ನು ಅದೇ ರೀತಿ ಡಿಸೈನ್ ಮಾಡಿದ್ದೆವು. ಯಾರನ್ನು ಪಾತ್ರಕ್ಕೆ ಆಯ್ಕೆ ಮಾಡುವುದು ಎಂದಾಗ ಸಾಯಿ ಪಲ್ಲವಿ ಎಂದಿದ್ದ. ನನ್ನ ಮೇಲೆ ಒಂದೂವರೆ ಕೋಟಿ ಹಾಕೋಕೆ ನಿರ್ಮಾಪಕರು ಸಿದ್ಧರಿಲ್ಲ. ಅಂತಾದ್ರಲ್ಲಿ ನಮ್ಮ ಬಜೆಟ್ 3 ಕೋಟಿ ರೂ. ನೀನು ನೋಡಿದರೆ ಸಾಯಿ ಪಲ್ಲವಿ ಅಂತೀಯಾ? ಎಂದು ಹೇಳಿದ್ದಾಗಿ ರಕ್ಷಿತ್ ಶೆಟ್ಟಿ ಹೇಳಿದ್ದಾರೆ.
ರಕ್ಷಿತ್ ಶೆಟ್ಟಿ ಮಾತನಾಡಿರುವ ವಿಡಿಯೋ ವೈರಲ್ ಆಗುತ್ತಿದ್ದು ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. "ನೀವು ಆಗ ಹಣ ಹೂಡಿಕೆ ಮಾಡಿದಿದ್ದರೆ ಈಗ ಕಷ್ಟಪಡುವ ಅಗತ್ಯ ಇರಲಿಲ್ಲ" ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಛೇ, ಸಾಯಿ ಪಲ್ಲವಿ ಅವರನ್ನು ಸಾನ್ವಿ ಪಾತ್ರಕ್ಕೆ ಆಯ್ಕೆ ಮಾಡಬೇಕಿತ್ತು ಎಂದು ಮತ್ತೊಂದು ಬರೆದುಕೊಂಡಿದ್ದಾರೆ.
"ಸಾಯಿ ಪಲ್ಲವಿ ಆಯ್ಕೆ ಆಗಿದ್ದರೆ ಇವತ್ತು ರಶ್ಮಿಕಾ ಮಂದಣ್ಣ ಇಂಡಸ್ಟ್ರಿಯಲ್ಲೇ ಇರುತ್ತಿರಲಿಲ್ಲ" ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಕಾಲೇಜು ದಿನಗಳಲ್ಲಿ ನಾನು 'ಫ್ರೆಶ್ ಫೇಸ್' ಕಾಂಟೆಸ್ಟ್‌ನಲ್ಲಿ ಗೆದ್ದಿದ್ದೆ. ಪೇಪರ್‌ನಲ್ಲಿ ನನ್ನ ಫೋಟೊ ನೋಡಿ ಕಿರಿಕ್ ಪಾರ್ಟಿ ತಂಡ ಸಾನ್ವಿ ಪಾತ್ರಕ್ಕೆ ನನ್ನನ್ನು ಸಂಪರ್ಕಿಸಿತ್ತು. ನಟಿಸೋಕೆ ಇಷ್ಟವಿಲ್ಲ ಎಂದಿದ್ದೆ. ಬಳಿಕ ಎಲ್ಲರ ಒತ್ತಾಯಕ್ಕೆ ಮಣಿದು ನಟಿಸಿದೆ ಎಂದು ರಶ್ಮಿಕಾ ಮಂದಣ್ಣ ಹೇಳಿಕೊಂಡಿದ್ದರು.


Click it and Unblock the Notifications











