ಶಿವಣ್ಣನಿಗೆ ರಾಧಿಕಾ ಚಿನ್ನದ ರಾಖಿ; ನಿಜ ಜೀವನದ ಅಣ್ಣ-ತಂಗಿ ಎಂದುಕೊಂಡಿದ್ರು- ಸಾಯಿ ಪ್ರಕಾಶ್
ಸಹೋದರ -ಸಹೋದರಿಯರ ಪ್ರೀತಿ, ವಿಶ್ವಾಸ ಹಾಗೂ ರಕ್ಷಣೆಯ ಸಂಕೇತವಾದ ಹಬ್ಬ ರಕ್ಷಾ ಬಂಧನ. ಸಡಗರದಿಂದ ಆಚರಿಸಲಾಗುತ್ತದೆ. ಈ ವಿಶೇಷ ದಿನ ಸಹೋದರರಿಗೆ ಸಹೋದರಿಯರು ಬಲಗೈ ಮಣಿಕಟ್ಟಿಗೆ ರಾಖಿ ಕಟ್ಟಿ, ಅವರ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತಾರೆ. ಕನ್ನಡ ಚಿತ್ರರಂಗದಲ್ಲಿ ರಕ್ಷಾ ಬಂಧನ ಅಂದಾಕ್ಷಣ ಶಿವಣ್ಣ ಹಾಗೂ ರಾಧಿಕಾ ಕುಮಾರಸ್ವಾಮಿ ನೆನಪಾಗುತ್ತಾರೆ.
'ತವರಿಗೆ ಬಾ ತಂಗಿ' ಹಾಗೂ 'ಅಣ್ಣ-ತಂಗಿ' ಚಿತ್ರದಲ್ಲಿ ಶಿವರಾಜ್‌ಕುಮಾರ್ ಹಾಗೂ ರಾಧಿಕಾ ಅಣ್ಣ- ತಂಗಿ ಆಗಿ ನಟಿಸಿ ಮೋಡಿ ಮಾಡಿದ್ದರು. ನಿಜ ಜೀವನದ ಅಣ್ಣ-ತಂಗಿ ಎನ್ನುವಷ್ಟು ಚೆನ್ನಾಗಿ ನಟಿಸಿ ಸೈ ಎನಿಸಿಕೊಂಡಿದ್ದರು. ಎರಡೂ ಸಿನಿಮಾಗಳು ಸೂಪರ್ ಹಿಟ್ ಆಗಿತ್ತು. ಓಂ ಸಾಯಿ ಪ್ರಕಾಶ್ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದರು.

ಇದೇ ಕಾಂಬಿನೇಷನ್‌ನಲ್ಲಿ 'ದೇವರು ಕೊಟ್ಟ ತಂಗಿ' ಸಿನಿಮಾ ಬರಬೇಕಿತ್ತು. ಆದರೆ ರಾಧಿಕಾ ಕುಮಾರಸ್ವಾಮಿ ಕಾರಣಾಂತರಗಳಿಂದ ಆ ಚಿತ್ರದಲ್ಲಿ ನಟಿಸಲಿಲ್ಲ. ಆಕೆಯ ಬದಲು ಶಿವಣ್ಣ ತಂಗಿಯಾಗಿ ಮೀರಾ ಜಾಸ್ಮಿನ್ ನಟಿಸಿದ್ದರು. ಸ್ವತಃ ಓಂ ಸಾಯಿ ಪ್ರಕಾಶ್ ನಿರ್ಮಿಸಿದ್ದ ಸಿನಿಮಾ ಗೆಲ್ಲಲಿಲ್ಲ. ರಾಧಿಕಾ ನಟಿಸಿದ್ದರೆ ಸಿನಿಮಾ ಗೆಲ್ಲುತ್ತಿತ್ತು ಎಂದು ನಿರ್ದೇಶಕರು ಇವತ್ತಿಗೂ ಭಾವಿಸುತ್ತಾರೆ. ರಕ್ಷಾ ಬಂಧನ ಹಿನ್ನೆಲೆಯಲ್ಲಿ ಓಂ ಸಾಯಿ ಪ್ರಕಾಶ್ ಈ ಸಿನಿಮಾಗಳ ಬಗ್ಗೆ ಫಿಲ್ಮಿಬೀಟ್ ಕನ್ನಡ ಜೊತೆ ಮಾತನಾಡಿದ್ದಾರೆ.
"ಈ ಎರಡೂ ಸಿನಿಮಾಗಳು ನನ್ನ ಮನಸ್ಸಿಗೆ ಬಹಳ ಹತ್ತಿರವಾದವು. ನನಗೆ 13 ವರ್ಷ ವಯಸ್ಸಾಗುವವರೆ ತಮ್ಮ, ತಂಗಿ ಇರಲಿಲ್ಲ. ನನಗೆ ಒಬ್ಬ ತಮ್ಮನೋ ತಂಗಿನೋ ಬೇಕು ಎಂದು ದೇವರಲ್ಲಿ ಬೇಡಿಕೊಳ್ಳುತ್ತಿದ್ದೆ. ಆಗ ನನ್ನ ತಂಗಿ ಹುಟ್ಟಿದ್ದಳು. ಮೊದಲಿನಿಂದಲೂ ನನ್ನ ತಂಗಿ ಅಂದರೆ ಬಹಳ ಇಷ್ಟ. ಅವಳನ್ನು ಅಷ್ಟು ಪ್ರೀತಿಯಿಂದ ಸಾಕಿದ್ದೇನೆ. 'ತವರಿಗೆ ಬಾ ತಂಗಿ' ಬಳಿಕ ಅದೇ ಕಾಂಬಿನೇಷನ್ ಸಿನಿಮಾ ಅಂದಾಗ ರಕ್ಷಾಬಂಧನವನ್ನೇ ಕೇಂದ್ರವಾಗಿಟ್ಟುಕೊಂಡು 'ಅಣ್ಣ-ತಂಗಿ' ಕಥೆ ಮಾಡಿದ್ದೆ" ಎಂದು ಸಾಯಿ ಪ್ರಕಾಶ್ ಹೇಳಿದ್ದಾರೆ.

ಕೆಲ ವರ್ಷಗಳ ಹಿಂದೆ ರಕ್ಷಾ ಬಂಧನ ಸಮಯದಲ್ಲಿ ಶಿವಣ್ಣನಿಗೆ ರಾಧಿಕಾ ಕುಮಾರಸ್ವಾಮಿ ಚಿನ್ನದ ರಾಖಿ ಕಟ್ಟಿದ್ದು ಬಹಳ ಸುದ್ದಿ ಆಗಿತ್ತು. ಈ ಬಗ್ಗೆ ನೆನಪಿಸಿಕೊಂಡಿರುವ ಸಾಯಿ ಪ್ರಕಾಶ್ "ತವರಿಗೆ ಬಾ ತಂಗಿ ಹಾಗೂ ಅಣ್ಣ-ತಂಗಿ ಸಿನಿಮಾಗಳ ಬಳಿಕ ಶಿವಣ್ಣ-ರಾಧಿಕಾ ಇಬ್ಬರನ್ನು ನಿಜವಾದ ಅಣ್ಣ-ತಂಗಿ ಎಂದೇ ಜನ ಭಾವಿಸಿದ್ದಾರೆ. ರಾಧಿಕಾ ಹೋಗಿ ಶಿವಣ್ಣನಿಗೆ ಚಿನ್ನದ ರಾಖಿ ಕಟ್ಟಿದ್ದು ಗೊತ್ತೇಯಿದೆ. ನನ್ನ ತಂಗಿ ಜೊತೆಗಿನ ನನ್ನ ಅನುಬಂಧವೇ ಈ ಸಿನಿಮಾಗಳಲ್ಲಿ ಕೂಡ ಎದ್ದು ಕಾಣುತ್ತದೆ" ಎಂದಿದ್ದಾರೆ.
ನನ್ನ ತಂಗಿಯನ್ನು ಬಹಳ ಪ್ರೀತಿಸುತ್ತೇನೆ. ನಮ್ಮ ತಾಯಿಗೆ ಹೆರಿಗೆ ಮಾಡಿಸಲು ಸಮಸ್ಯೆ ಆಗಿದ್ದಾಗ ನಾನೇ ಆಕೆಯ ಮಾರ್ಗದರ್ಶನದಂತೆ ಹೆರಿಗೆ ಮಾಡಿಸಿದ್ದೆ. ಆ ರೀತಿ ಹುಟ್ಟಿದ ತಂಗಿ ಅಂದ್ರೆ ನನಗೆ ಪ್ರಾಣ. ಅದನ್ನೆಲ್ಲಾ ಮರೆಯೋಕೆ ಸಾಧ್ಯವಿಲ್ಲ. ನಾನು ಕೂಲಿ ಕೆಲಸಕ್ಕೆ ಹೋಗಿ ತಂಗಿದೆ ರಿಬ್ಬನ್, ಪೌಡರ್ ತಂದುಕೊಟ್ಟಿರುವ ದಿನಗಳಿವೆ. ದಕ್ಷಿಣ ಭಾರತದಲ್ಲಿ ಮೊದಲಿಲ್ಲಾ ರಕ್ಷಾಬಂಧನಕ್ಕೆ ಅಷ್ಟೊಂದು ಮಹತ್ವ ಇರಲಿಲ್ಲ. ಆದರೆ ನನ್ನ ಸಿನಿಮಾದಲ್ಲಿ ಅದನ್ನೇ ಹೈಲೆಟ್ ಮಾಡಿದ್ದೆ. 'ತವರಿಗೆ ಬಾ ತಂಗಿ' ಚಿತ್ರಕ್ಕೆ ಅಜಯ್ ಕುಮಾರ್ ಕಥೆ, ಚಿತ್ರಕಥೆ ಬರೆದಿದ್ದರು. ಅದನ್ನು ಅಣ್ಣಾವ್ರು, ವರದಪ್ಪ ಎಲ್ಲಾ ಒಪ್ಪಿ ಸಿನಿಮಾ ಆಗಿತ್ತು. ಬಳಿಕ 'ಅಣ್ಣ-ತಂಗಿ' ಚಿತ್ರಕ್ಕೆ ನಾನೇ ಕಥೆ ಮಾಡಿದ್ದೆ" ಎಂದು ಸಾಯಿಪ್ರಕಾಶ್ ಮೆಲುಕು ಹಾಕಿದ್ದಾರೆ.
ಮೊದಲೆಲ್ಲಾ ಡಾ. ರಾಜ್‌ಕುಮಾರ್ ಅವರನ್ನು ರಾಜಣ್ಣ ಎಂದು ಎಲ್ಲರೂ ಕರೆಯುತ್ತಿದ್ದರು. ಈ ಸಿನಿಮಾಗಳ ಬಳಿಕ ಶಿವರಾಜ್‌ಕುಮಾರ್ ಅವರನ್ನು ಶಿವಣ್ಣ ಎಂದು ಕರೆಯಲು ಆರಂಭಿಸಿದ್ದರು. ಶಿವಣ್ಣನಿಗೆ ಅಣ್ಣನ ಪಟ್ಟ ಈ ಚಿತ್ರದಿಂದ ಸಿಕ್ತು ಎಂದರೆ ತಪ್ಪಾಗಲ್ಲ ಎಂದು ಸಾಯಿಪ್ರಕಾಶ್ ವಿವರಿಸಿದ್ದಾರೆ.


Click it and Unblock the Notifications











