ಹೀಗೆ ಬದುಕಿದ್ದರು ಮಿಂಚಿ ಮರೆಯಾದ ಸಂಚಾರಿ ವಿಜಯ್..!

ಬದುಕಿದ್ದರೆ ಇವತ್ತು ಸಂಚಾರಿ ವಿಜಯ್ ನಮ್ಮ-ನಿಮ್ಮ ನಡುವೆ ಅಥವಾ ಯಾವುದಾದರೂ ಹಾಡಿಯ ಮಕ್ಕಳೊಟ್ಟಿಗೊ, ನಿರ್ಲಕ್ಷಿತ ಸಮುದಾಯದ ಜನರೊಟ್ಟಿಗೊ ತಮ್ಮ 41ನೇ ಹುಟ್ಟುಹಬ್ಬವನ್ನೂ ಆಚರಿಸಿಕೊಳ್ಳುತ್ತಿದ್ದರು. ಆದರೆ, ವಿಧಿ ಅದಕ್ಕೆ ಅವಕಾಶವನ್ನೂ ನೀಡಲಿಲ್ಲ.

ನಿಮಗೆ ಗೊತ್ತಾ.. 1983ರಲ್ಲಿ ಇದೇ ದಿನದಂದು ಚಿಕ್ಕಮಗಳೂರು ಜಿಲ್ಲೆಯ, ಕಡೂರು ತಾಲೂಕಿನ, ಪಂಚನಹಳ್ಳಿಯಲ್ಲಿ ಜನ್ಮ ಪಡೆದಿದ್ದರು. ಬಡ ಕುಟುಂಬದಲ್ಲಿ ಹುಟ್ಟಿದರೂ ಶಾಲಾ ದಿನಗಳಲ್ಲೇ ನೃತ್ಯ, ನಾಟಕದ ಗೀಳು ಅಂಟಿಕೊಂಡು ಬಂದಿತ್ತು. ತಂದೆ ಬಸವರಾಜಯ್ಯ ಸಂಗೀತ ವಾದ್ಯ ನುಡಿಸುತ್ತಿದ್ದರು, ತಾಯಿಯೂ ಜಾನಪದ ಕಲಾವಿದರಾಗಿದ್ದರು. ಅದರಂತೆ ಕಲೆಯತ್ತ ಆಸಕ್ತಿ ತಳೆದು, ನಟನೆಯತ್ತ ವಾಲುತ್ತಲೇ ಬೆಳೆದು ಬಂದರು ಸಂಚಾರಿ ವಿಜಯ್. ಆದರೆ ದುರ್ದೈವ ತಾಯಿ ಖಾಯಿಲೆಗೆ ತುತ್ತಾಗಿ ಚಿಕಿತ್ಸೆಗೆ ಹಣ ಹೊಂದಿಸಲಾಗದೆ ನೋಡ ನೋಡುತ್ತಲೇ ಬಾರದ ಲೋಕಕ್ಕೆ ಹೋದರು.

on-sanchri-vijays-birth-anniversary-here-is-the-story-of-his-journey

ಈ ಸಾವಿನ ನೋವು ಮಾಸುವ ಮೊದಲೇ, ಕೆಲವೇ ತಿಂಗಳಲ್ಲಿ ತಂದೆಯೂ ಅಸುನೀಗುತ್ತಾರೆ. ವಿಜಯ್ ಪಾಲಿಗೆ ಉಳಿದದ್ದು ಅಣ್ಣ ಮಾತ್ರ. ಮುಂದೆ ಜೀವನ ನರಕದ ದರ್ಶನ ತೋರ ತೊಡಗಿತು. ಓದಿನಲ್ಲಿ ಚುರುಕಾಗಿದ್ದ ಅಣ್ಣನನ್ನು ಓದಲು ಬಿಟ್ಟು, ತಾನು ಬೆಂಗಳೂರಿಗೆ ಬಂದು ರಾಜಾಜಿನಗರದ ಹೋಟೆಲ್ ಒಂದರಲ್ಲಿ ಕ್ಲೀನಿಂಗ್ ಕೆಲಸಕ್ಕೆ ಸೇರಿದ್ದರು ಸಂಚಾರಿ ವಿಜಯ್.

ಅಣ್ಣನ ಓದಿಗೆ‌ ಹಣ ಹೊಂದಿಸುತ್ತಾ ಬದುಕು ದೂಡುತ್ತಾ ಇದ್ದರೂ, ನಾಟಕ ಇವರನ್ನು ಆ ಕಷ್ಟದ ದಿನಗಳಲ್ಲೂ ಸೆಳೆಯುತ್ತಲೇ ಇತ್ತು. ಹೀಗಾಗಿಯೇ ಹೋಟೆಲ್ ಕೆಲಸದ ಬಿಡುವಿನ ವೇಳೆಯಲ್ಲಿ ರವೀಂದ್ರ ಕಲಾಕ್ಷೇತ್ರಕ್ಕೆ ಹೋಗಿ ನಾಟಕ ನೋಡುತ್ತಾ, ಅವರುಗಳ ಪ್ರಾಕ್ಟೀಸು ನೋಡುತ್ತಾ, ತಾನೂ ಒಂದು ದಿನ ಅವರಂತೆಯೇ ಬಣ್ಣ ಹಚ್ಚಿ ವೇದಿಕೆಯಲ್ಲಿ ಮಿಂಚುವ ಕನಸನ್ನೂ ಸಂಚಾರಿ ವಿಜಯ್ ಕಾಣುತ್ತಿದ್ದರು.

on-sanchri-vijays-birth-anniversary-here-is-the-story-of-his-journey

ಆ ನಂತರ ಅಣ್ಣ ಕಾಲೇಜು ಮುಗಿಸಿ ಕೆಲಸ ಗಿಟ್ಟಿಸಿಕೊಂಡಾಗ, ವಿಜಯ್ ತಾನು ಬಿಎಂಎಸ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಸೀಟು ಗಿಟ್ಟಿಸಿಕೊಂಡು ಓದು ಮುಗಿಸಿಕೊಂಡರು. ಇಲ್ಲಿ ಕಷ್ಟಪಟ್ಟು ಓದು ಮುಗಿಸಿ ಇಂಜಿನಿಯರ್ ಆಗಿ ಲೆಕ್ಚರರ್ ಆಗಿ ಕೆಲಸಕ್ಕೆ ಸೇರಿಕೊಂಡರೂ ಕೂಡ ಅದ್ಯಾಕೋ ವಿಜಯ್ ಮನಸ್ಸು ಮಾತ್ರ ನಟನೆಯತ್ತಲೇ ವಾಲುತ್ತಿತ್ತು. ಎರಡೇ ವರ್ಷದಲ್ಲಿ ಲೆಕ್ಚರರ್ ಪೋಸ್ಟಿಗೆ ಫುಲ್ಲಿಸ್ಟಾಪ್ ಇಟ್ಟು, ರಂಗಭೂಮಿಗೆ ಮರಳಿ ಬಂದರು‌. ಅದರಂತೆ ಸಂಚಾರಿ ರಂಗ ತಂಡ ಸೇರಿಕೊಂಡು ನಾಟಕಗಳಲ್ಲಿ ತೊಡಗಿಸಿಕೊಂಡರು.

ಸಂಚಾರಿ ರಂಗತಂಡದಲ್ಲಿದ್ದುಕೊಂಡೇ ಶೂದ್ರ ತಪಸ್ವಿ, ಸತ್ಯಾಗ್ರಹ, ಸಂತೆಯೊಳಗೊಂದು ಮನೆಯ ಮಾಡಿ, ಸಾವಿರದವಳು, ನರಗಳಿಗೇಕೆ ಕೋಡಿಲ್ಲ, ಮಾರ್ಗೋಸಾ ಮಹಲ್ ಸೇರಿದಂತೆ‌ ಹತ್ತು ಹಲವು ನಾಟಕಗಳಲ್ಲಿ ಅಭಿನಯಿಸಿ ನಟನೆಯಲ್ಲಿ ಸೈ ಅನಿಸಿಕೊಂಡ ಸಂಚಾರಿ ವಿಜಯ್, ಆ ನಂತರ ಕೆಲವು ದಾರಾವಾಹಿಗಳಲ್ಲಿ ಸಣ್ಣ ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಂಢಿದ್ದರು.

On Sanchri Vijay s birth anniversary here is the story of his journey

ಹೀಗೆ ರಂಗಭೂಮಿಯಲ್ಲಿ ಮಿಂಚುತ್ತಿದ್ದ ಸಂಚಾರಿ ವಿಜಯ್ ಹಾಗೂ ಹೀಗೂ 2011ರಲ್ಲಿ ತೆರಕಂಡಿದ್ದ, ನಟ ರಮಶ್ ಅರವಿಂದ್ ನಟನೆಯ "ರಂಗಪ್ಪ ಹೋಗ್ಬಿಟ್ನಾ" ಚಿತ್ರದ ಮೂಲಕ ಸಿನಿಮಾಲೋಕಕ್ಕೆ ಬಂದರು. ಇಲ್ಲಿ ಸಿಕ್ಕ ಪಾತ್ರದಲ್ಲೇ ತನ್ನೊಳಗೊಬ್ಬ ಅದ್ಭುತ ಕಲಾವಿದ ಇದ್ದಾನೆ ಎನ್ನುವುದರ ಪರಿಚಯ ಮಾಡಿಸಿದಂತಿತ್ತು, ಆ ಚಿತ್ರದಲ್ಲಿನ ವಿಜಯ್ ಅಭಿನಯ.

ಅಲ್ಲಿಂದಾಚೆಗೆ ನಾಲ್ಕಾರು ಸಿನಿಮಾಗಳು ಅರಸಿ ಬಂದವಾದರೂ ಅಲ್ಲಿ ಇವರ ಸಾಮರ್ಥ್ಯಕ್ಕೆ ತಕ್ಕ ಪಾತ್ರಗಳು ಸಿಗಲಿಲ್ಲ. ಹೀಗಾಗಿಯೇ ಮತ್ತೆ ನಾಟಕಗಳಲ್ಲೇ ಹೆಚ್ಚಾಗಿ ತೊಡಗಿಸಿಕೊಂಡು ನಟನೆಗೆ ಸಾಣೆ ಹಿಡಿಯುತ್ತಾ ಬಂದರು. ಆಗ ಜೊತೆ ಸೇರಿ ಸಾತ್ ಕೊಟ್ಟಿದ್ದು ರಂಗಭೂಮಿ ಗೆಳೆಯ, ನಿರ್ದೇಶಕ ಮಂಸೋರೆ. ಸಂಚಾರಿ ವಿಜಯ್ ಮಂಸೋರೆ ತಂಡ ಕಟ್ಟಿಕೊಂಡು ಮಾಡಿದ ಪ್ರಯತ್ನವೇ "ಹರಿವು".

on-sanchri-vijays-birth-anniversary-here-is-the-story-of-his-journey

ಆಸೆ ಕನಸು ಹೊತ್ತ ಮಾಡಿದ್ದ ''ಹರಿವು'' ಸೋತಿದ್ದರೇ, ಖಂಡಿತಾ ನಾನು ಸಿನಿಮಾ ನಟನೆಗೆ ಸಲಾಮ್ ಹೊಡೆದು ವಾಪಸ್ಸು ಹೋಗುತ್ತಿದ್ದೆ" ಎಂದು ಸ್ವತ: ವಿಜಿಯೇ ಹೇಳಿಕೊಂಡಿದ್ದರು. ಆದರೆ ಹಾಗಾಗಲಿಲ್ಲ ಕಷ್ಟಪಟ್ಟು ಸಾಲಸೂಲ ಮಾಡಿ ತಯಾರಿಸಿದ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ದೊರೆಯಿತು. ಆ ನಂತರ ಪಾತ್ರ ಯಾವುದೇ ಇರಲಿ ತನ್ನಿಂದ ಆದಷ್ಟು ನ್ಯಾಯ ಒದಗಿಸಬೇಕು ಎಂಬ ಪಾಠದ ಅರಿವಲ್ಲಿ ಅಭಿನಯಿಸುತ್ತಿದ್ದರು ವಿಜಯ್. ಇದಕ್ಕೆ ಕೈಗನ್ನಡಿ ಎಂಬಂತೆ 2013ರಲ್ಲಿ ತೆರೆಕಂಡ ಪ್ರಕಾಶ್ ರಾಜ್ ಅಭಿನಯದ 'ಒಗ್ಗರಣೆ' ಎಂಬ ಚಿತ್ರದಲ್ಲಿ ಸಣ್ಣದೊಂದು ಪಾತ್ರ ಇವರ ವೃತ್ತಿ ಜೀವನವನ್ನೇ ಬದಲಿಸಿತ್ತು. ಈ ಚಿತ್ರದಲ್ಲಿ ಮಂಗಳಮುಖಿಯಾಗಿ ಕಾಣಿಸಿಕೊಂಡಿದ್ದ ವಿಜಯ್ ನಿರ್ದೇಶಕ ಲಿಂಗದೇವರು ಕಣ್ಣಿಗೆ ಬಿದ್ದರು. ಆ ನಂತರ ಸಂಚಾರಿ ವಿಜಯ್ "ನಾನು ಅವನಲ್ಲ.‌. ಅವಳು‌" ಚಿತ್ರದ ಪಾತ್ರದ ಪರಕಾಯ ಪ್ರವೇಶ ಮಾಡಿದರು. . ಮುಂದಿನದ್ದೆಲ್ಲಾ ಇತಿಹಾಸ.

ರಾಷ್ಟ್ರಪ್ರಶಸ್ತಿ ಬಳಿಕವೂ ಅವರ ನಟನಾ ಪ್ರತಿಭೆಗೆ ಸವಾಲಾಗಬಲ್ಲ ಪಾತ್ರಗಳು ಸಿಗಲಿಲ್ಲವೆನ್ನುವುದು ಸತ್ಯ. ಆದರೆ ಭರವಸೆ ಕಳೆದುಕೊಳ್ಳಲಿಲ್ಲ ಸಂಚಾರಿ ವಿಜಯ್.ನಾಯಕನ ಪಾತ್ರವನ್ನೇ ನಿರ್ವಹಿಸುತ್ತೇನೆ ಎಂದು ಸಂಚಾರಿ ವಿಜಯ್ ಪಟ್ಟು ಹಿಡಿಯಲಿಲ್ಲ. ಬದಲಿಗೆ ಒಂದಿನಿತೂ ಅಹಂಕಾರ ತಲೆಗೇರಿಸಿಕೊಳ್ಳದೆ, ಅವಕಾಶ ಬಂದಂತೆ ಸ್ವೀಕರಿಸಿದರು. ಶಿವರಾಜ್ ಕುಮಾರ್ ನಟನೆಯ ಕಿಲ್ಲಿಂಗ್ ವೀರಪ್ಪನ್, ಗೌರೀಶ್ ಅಕ್ಕಿ ನಿರ್ದೇಶನದ ಸಿನಿಮಾ ಮೈ ಡಾರ್ಲಿಂಗ್, ಗೋದಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾಗಳಲ್ಲಿ ನಟಿಸಿದರು. ಮಾರಿಕೊಂಡವರು, ರಿಕ್ತ, ನನ್ ಮಗಳೇ ಹೀರೋಯಿನ್, ಕೃಷ್ಣ ತುಳಸಿ, ಪಾದರಸ, ಆರನೇ ಮೈಲಿ ಚಿತ್ರಗಳಲ್ಲಿ ನಾಯಕನಾಗಿ ಅಭಿನಯಿಸಿದರು. ಆ ನಂತರ "ಆಕ್ಟ್ 1978″ ಹಾಗು *ಜಂಟಲ್ ಮ್ಯಾನ್" ಸಿನಿಮಾದಲ್ಲೂ ಕೂಡ ವಿಶೇಷ ಪಾತ್ರದಲ್ಲಿ ಮಿಂಚಿದ್ದರು ಸಂಚಾರಿ ವಿಜಯ್.

on-sanchri-vijays-birth-anniversary-here-is-the-story-of-his-journey

ಇಂಥಾ ವಿಜಯ್ ಮೇಲೊಬ್ಬ ಮಾಯಾವಿ, ಆಟಕ್ಕುಂಟು ಲೆಕ್ಕಕ್ಕಿಲ್ಲ, ತಲೆದಂಡ ಸೇರಿದಂತೆ ಕೆಲ ವಿಶಿಷ್ಟ ಬಗೆಯ ಸಿನಿಮಾಗಳು ತಯಾರಾಗಿ ಬಿಡುಗಡೆಗೆ ಸಿದ್ಧವಾದ ಸಮಯದಲ್ಲಿಯೇ ಉಸಿರು ಚೆಲ್ಲಿದರು. ಈ ನಡುವೆ ಅನ್ಯರ ಕಷ್ಟಗಳಿಗೆ ಸದಾ ಸ್ಪಂದಿಸುವ ಸಹೃದಯೀ ಮನುಷ್ಯನಾಗಿದ್ದ ವಿಜಯ್ ಕೊರೋನ ಹೊಡೆತಕ್ಕೆ ತತ್ತರಿಸಿ ಕುಳಿತ ಅದೆಷ್ಟೋ ಜೀವಗಳಿಗೆ ತನ್ನ ಕೈಲಾದಷ್ಟು ಸಹಾಯ ಹಸ್ತ ಚಾಚುತ್ತಾ ಮಾನವೀಯತೆ ಮೆರೆದಿದ್ದರು. ಹಸಿದವರಿಗೆ ಅನ್ನ, ಆಹಾರ ಪೂರೈಸಿದ್ದರು. ಆಕ್ಸಿಜನ್ ಕೊರತೆಯಾದಾಗ ಸುತ್ತಾಡಿ ಆಕ್ಸಿಜನ್ ಹುಡುಕಿ-ಹುಡುಕಿ ತಂದು ಸರಬರಾಜು ಮಾಡಿದ್ದರು ಈ ಸಂಚಾರಿ ವಿಜಯ್.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X