ಮಂಡ್ಯ ರಮೇಶ್ ಅವರಿಗೆ ದರ್ಶನ್ 136 ರೂಪಾಯಿ ಕೊಡಲು ಅವತ್ತು ಹೋಗಿದ್ದೇಕೆ..?
ದರ್ಶನ್ ತುಂಬಾನೇ ಕಷ್ಟ ಪಟ್ಟು ಮೇಲೆ ಬಂದ ನಾಯಕ. ತೂಗುದೀಪ್ ಶ್ರೀನಿವಾಸ್ ಅವರ ಮಗನಾದರೂ ದರ್ಶನ್ ಗಾಂಧಿನಗರದಲ್ಲಿ ಸೈಕಲ್ ಹೊಡೆದಿದ್ದಾರೆ. ಅವಕಾಶಕ್ಕಾಗಿ ಅಲೆದಾಡಿದ್ದಾರೆ.
ಇನ್ನೂ.. ದರ್ಶನ್ ನೇರಾನೇರ ಬೆಳ್ಳಿ ತೆರೆಗೆ ಬಂದವರಲ್ಲ. ನಾಯಕನಾಗಲಿಲ್ಲ. 'ಮಹಾಭಾರತ', ದೇವರ ಮಗ, ತಮಿಳಿನ ವಲ್ಲರಸು ಚಿತ್ರಗಳಲ್ಲಿ ಚಿಕ್ಕ-ಪುಟ್ಟ ಪಾತ್ರಗಳನ್ನ ಆರಂಭದಲ್ಲಿ ಮಾಡಿದವರು ದರ್ಶನ್. ದರ್ಶನ್ ಅವರ ಈ ದಿನಮಾನಗಳಲ್ಲಿ ಒಂದು ಹಂತದಲ್ಲಿ ದರ್ಶನ್ ದೇಖಾರೇಖಿಯನ್ನ ಮಾಡಿದ್ದು ಬೇರೆ ಯಾರು ಅಲ್ಲ ಬದಲಿಗೆ ಮಂಡ್ಯ ರಮೇಶ್. ಇಂತಹ ಮಂಡ್ಯ ರಮೇಶ್ ಯಜಮಾನ ಚಿತ್ರ ಗೆದ್ದಾಗ ಮಾಡಲಾಗಿದ್ದ ಸಂಭ್ರಮಾಚರಣೆಯಲ್ಲಿ ದರ್ಶನ್ ಕುರಿತು ಆಸಕ್ತಿಕರ ವಿಚಾರ ಹಂಚಿಕೊಂಡಿದ್ದರು. 136 ರೂಪಾಯಿ ಕಥೆ ಹೇಳಿದ್ದರು. ಈ 136 ರೂಪಾಯಿ ಕಥೆ ಕೇಳಿದರೆ ದರ್ಶನ್ ಮನಸ್ಥಿತಿ ಕೊಲೆ ಮಾಡುವಷ್ಟು ಬದಲಾಯಿತಾ ಎನ್ನುವ ಪ್ರಶ್ನೆ ಕಾಡದೇ ಇರದು.

ಹೌದು, ದರ್ಶನ್ ಮತ್ತು ಮಂಡ್ಯ ರಮೇಶ್ ಮಹಾಭಾರತದಲ್ಲಿ ಅಭಿನಯಿಸುವಾಗ ಒಂದೇ ರೂಮ್‌ನಲ್ಲಿ ವಾಸ ಮಾಡುತ್ತಿದ್ದರು. ಇನ್ನೂ ದರ್ಶನ್ ಅವರಿಗೆ ಹೊಡೆದಾಡುವುದು ಇವತ್ತಲ್ಲ, ಮೊದಲಿಂದ ಇಷ್ಟ. ಹೀಗಾಗಿಯೇ ಅದೊಂದು ದಿನ ದರ್ಶನ್ ಫೈಟಿಂಗ್ ಪ್ರಾಕ್ಟೀಸ್ ಮಾಡ್ತಿದ್ದರು. ಆದರೆ ಮಾರನೇ ದಿನ ನಡೆದ ಶೂಟಿಂಗ್‌ನ 'ಫೈಟಿಂಗ್ ಸೀನ್'ನಲ್ಲಿ ದರ್ಶನ್ ಕೈಗೆ ಪೆಟ್ಟಾಗಿತ್ತು. ಬಿದ್ದ ಏಟಿನಿಂದ ಆ ರಾತ್ರಿ ದರ್ಶನ್‌ಗೆ ಜ್ವರ ಬಂದಿತ್ತು.
ಇನ್ನೂ ಚಿತ್ರರಂಗ ಇರಲಿ, ಕಿರುತೆರೆ ಇರಲಿ.. ಕಲಾವಿದರಿಗೆ ಅನಾರೋಗ್ಯಕ್ಕೀಡಾದರೆ ನೋಡುವವರ ಸಂಖ್ಯೆ ಅವತ್ತು ಕಡಿಮೆ. ಇವತ್ತು ಕೂಡ ಕಡಿಮೆ. ಹೀಗಾಗಿಯೇ ದರ್ಶನ್ ಗೆ ಜ್ವರ ಬಂದಾಗ ಖುದ್ದು ಮಂಡ್ಯ ರಮೇಶ್ ಅವರೇ ದರ್ಶನ್ ಅವರನ್ನು ಕರೆದುಕೊಂಡು ಆಸ್ಪತ್ರೆಗೆ ಹೋಗಿದ್ದರು. ಇಂಜೆಕ್ಷನ್ ಕೊಡಿಸಿದ್ದರು. ದರ್ಶನ್ ಆಗ ಎಷ್ಟು ಸ್ವಾಭಿಮಾನಿ ಮತ್ತು ಮುಗ್ದರಾಗಿದ್ದರು ಎಂದರೆ ಆಸ್ಪತ್ರೆಗೆ ಖರ್ಚಾದ 136 ರೂಪಾಯಿಯನ್ನ ಚಿತ್ರೀಕರಣದಿಂದ ಬಂದಿದ್ದ ದುಡ್ಡಿನಲ್ಲಿ ಮಂಡ್ಯ ರಮೇಶ್ ಗೆ ಕೊಡಲು ಮುಂದಾಗಿದ್ದರು. ಆಗ 'ಹೋಗೋ ನನಗೆ ಹಣ ಕೊಡ್ತಿಯಾ?' ಎಂದು ದರ್ಶನ್‌ಗೆ ಕೇಳಿದ್ದರು ಮಂಡ್ಯ ರಮೇಶ್.

ಇನ್ನೂ ಅದೊಂದು ದಿನ ಕಪಾಲಿ ಚಿತ್ರಮಂದಿರದ ಮುಂದೆ ಕುಳಿತು ದರ್ಶನ್ ಮತ್ತು ಮಂಡ್ಯ ರಮೇಶ್ ಕಲ್ಲಂಗಡಿ ಹಣ್ಣು ತಿನ್ನುತ್ತಿದ್ದರು. ಆಗ ಕಪಾಲಿ ಎದುರು ರಾರಾಜಿಸುತ್ತಿದ್ದ ಸ್ಟಾರ್‌ವೊಬ್ಬರ ಕಟೌಟ್ ನೋಡಿದ ದರ್ಶನ್ ''ನೋಡಣ್ಣ ನಾವು ಇಲ್ಲಿ ತಿನ್ಕೊಂಡು ಬರೀ ಕಟೌಟ್ ನೋಡಬೇಕು ಅಷ್ಟೇ'' ಎಂದು ಮಂಡ್ಯ ರಮೇಶ್ ಅವರಿಗೆ ಹೇಳಿದ್ದರು. ಇದಕ್ಕೆ ಮಂಡ್ಯ ರಮೇಶ್ ''ಮಗನೇ ನಿನ್ನ ಕಟೌಟ್ ಕೂಡ ಹೀಗೆ ನಿಲ್ಲತ್ತೆ ಕಣೋ'' ಎಂದು ಹೇಳಿ ಧೈರ್ಯ ತುಂಬಿದ್ದರು. ಭವಿಷ್ಯವನ್ನೂ ನುಡಿದಿದ್ದರು.
ಮಂಡ್ಯ ರಮೇಶ್ ಅವತ್ತು ಹೇಳಿದ್ದ ಭವಿಷ್ಯ ಆ ನಂತರ ನಿಜವಾಯಿತು. ದರ್ಶನ್ ಅವರಿಗೆ ಸೂಪರ್ ಸ್ಟಾರ್ ಎಂಬ ಪಟ್ಟವೂ ಸಿಕ್ತು. ಹಣ-ಕೀರ್ತಿ-ಯಶಸ್ಸು ಎಲ್ಲವೂ ದಕ್ಕಿತು. ಆದರೆ.. ನೆಮ್ಮದಿ ಮಾತ್ರ ಸಿಗಲಿಲ್ಲ. ನಡೆದು ಬಂದ ದಾರಿಯನ್ನ ಒಮ್ಮೆ ಹಿಂದೆ ತಿರುಗಿ ನೋಡಿದ್ದರೆ, ದರ್ಶನ್ ಇವತ್ತು ಈ ಸ್ಥಿತಿಯಲ್ಲಿ ಇರುತ್ತಿರಲಿಲ್ಲ. ಅಕ್ಕ-ಪಕ್ಕ ನಾಲ್ಕು ಒಳ್ಳೇಯ ಸ್ನೇಹಿತರು ದರ್ಶನ್ ಗೆ ಇದ್ದಿದ್ದರೆ, ದಿನ ಬೆಳ್ಳಿಗ್ಗೆ ಆದರೆ ಎದ್ದ ತಕ್ಷಣ ಪೊಲೀಸರ ದರ್ಶನ ಮಾಡುವ ಪ್ರಮೇಯ ಬರುತ್ತಿರಲಿಲ್ಲ.


Click it and Unblock the Notifications











