"ನಾನ್ ಸತ್ರೆ ನೋಡೊಕೆ ಬರ್ತೀಯಾ?" ಎಂದಿದ್ದ ಸಿಲ್ಕ್ ಸ್ಮಿತಾ: ಅಂತಿಮ ದರ್ಶನಕ್ಕೆ ಹೋಗಿದ್ದ ಏಕೈಕ ಕನ್ನಡ ನಟ ಯಾರು?
ಒಂದ್ಕಾಲದಲ್ಲಿ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದ ನಟಿ ಸಿಲ್ಕ್ ಸ್ಮಿತಾ ಸಾವು ಇಂದಿಗೂ ನಿಗೂಢವಾಗಿಯೇ ಇದೆ. 1996ರ ಸೆಪ್ಟೆಂಬರ್ 23ರಂದು ಆಕೆಯ ಮೃತ ದೇಹ ಚೆನ್ನೈನಲ್ಲಿದ್ದ ಅಪಾರ್ಟ್‌ಮೆಂಟ್‌ನಲ್ಲಿ ಪತ್ತೆ ಆಗಿತ್ತು. ಅಂದು ಚಿತ್ರರಂಗದ ಸ್ಟಾರ್ ನಟ- ನಟಿಯರು ಯಾರೊಬ್ಬರು ಕೂಡ ಆಕೆಯ ಅಂತಿಮ ದರ್ಶನಕ್ಕೆ ಬರಲಿಲ್ಲವಂತೆ. ಅನಾಥ ಶವದಂತೆ ಆಕೆಯ ಅಂತ್ಯಕ್ರಿಯೆ ನಡೆದಿತ್ತು.
ಸಿಲ್ಕ್ ಸ್ಮಿತಾ ನಟಿಯಾಗಿ ಮಿಂಚಿದ್ದಕ್ಕಿಂತ ಐಟಂ ಡ್ಯಾನ್ಸರ್ ಆಗಿ ಕುಣಿದಿದ್ದೇ ಹೆಚ್ಚು. ಮಾದಕ ಮೈಮಾಟದಿಂದ ತೆರೆಮೇಲೆ ಮೋಡಿ ಮಾಡಿದ ಸಿಲ್ಕ್ ಅಸಂಖ್ಯಾತ ಅಭಿಮಾನಿಗಳ ಹೃದಯ ಗೆದ್ದರು. ಈಕೆಯ ಜೀವನವನ್ನಾಧರಿಸಿ ಬಾಲಿವುಡ್‌ನಲ್ಲಿ 'ಡರ್ಟಿ ಪಿಕ್ಚರ್' ಸಿನಿಮಾ ಬಂದು ಸೂಪರ್ ಹಿಟ್ ಆಗಿತ್ತು. ಬಡ ಕುಟುಂಬದಿಂದ ಚಿತ್ರರಂಗಕ್ಕೆ ಬಂದು ಸ್ಟಾರ್ ಸ್ಟೇಟಸ್ ಗಳಿಸಿ ದುರಂತ ಅಂತ್ಯ ಕಾಣುವಂತಾಯಿತು. ಇತ್ತೀಚೆಗೆ ನಾನಿ ನಟನೆಯ 'ದಸರಾ' ಚಿತ್ರದಲ್ಲೂ ಆಕೆಯ ಪೋಸ್ಟರ್ ಬಳಸಿಕೊಳ್ಳಲಾಗಿತ್ತು.

ಕಲ್ಲು ಮುಳ್ಳಿನ ಹಾದಿಯಲ್ಲಿ ಸಿಲ್ಕ್ ಸ್ಮಿತಾ ಜೀವಿಸುವಂತಾಯಿತು. ತೆರೆಮೇಲೆ ಆಕೆಯ ಅಂದವನ್ನು ಎಲ್ಲರೂ ನೋಡಿದ್ರು, ತೆರೆಹಿಂದಿನ ಆಕೆಯ ಕಷ್ಟ ಯಾರಿಗೂ ಗೊತ್ತಾಗಲಿಲ್ಲ. ಸಾಕಷ್ಟು ಅವಮಾನಗಳನ್ನು ಎದುರಿಸಿ ಬಹಳ ಬೇಗ ಸ್ಟಾರ್‌ಡಮ್ ಸಂಪಾದಿಸಿಕೊಂಡ ಸಿಲ್ಕ್ ಅಷ್ಟೇ ಬೇಗ ತೆರೆಮರೆಗೆ ಸರಿದಿದ್ದು ವಿಪರ್ಯಾಸ. ಇನ್ನು ಆಕೆಯ ಆಪ್ತರೇ ಆಸ್ತಿಗಾಗಿ ಮೋಸ ಮಾಡಿದ್ರು ಎಂದು ಗೊತ್ತಾಗಿ ಆಕೆ ಖಿನ್ನತೆಗೆ ಒಳಗಾಗಿದ್ದರು. 1996ರಲ್ಲಿ ಆಕೆ ಬಾರದ ಲೋಕಕ್ಕೆ ಹೊರಟುಬಿಟ್ಟರು. ಆಕೆಯ ನಿಧನ ಆಗ ಚಿತ್ರರಂಗಕ್ಕೆ ಶಾಕ್ ತಂದಿತ್ತು.
ಸಿಲ್ಕ್ ಸ್ಮಿತಾ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಚಿತ್ರದಿಂದ ಯಾರೋಬ್ಬರು ಹೋಗಿರಲಿಲ್ಲ. ಕೆಲವರು ಮಾತ್ರ ಅಂತಿಮ ನಮನ ಸಲ್ಲಿಸಿದ್ದರು. ಕನ್ನಡದ ನಟ ಅರ್ಜುನ್ ಸರ್ಜಾ ಅದರಲ್ಲಿ ಒಬ್ಬರು. ಅಂದು ಆಕೆಯ ನಿವಾಸಕ್ಕೆ ಅಂತಿಮ ದರ್ಶನಕ್ಕೆ ಹೋಗಿದ್ದ ಸ್ಟಾರ್ ನಟ ಅಂದ್ರೆ ಅದು ಇವ್ರು ಮಾತ್ರ. ಸಿಲ್ಕ್ ಅಂತ್ಯಕ್ರಿಯೆಯಲ್ಲಿ ಭಾಗಿ ಆಗಿದ್ದ ಸಿನಿ ಪತ್ರಕರ್ತ ತೋಟ ಭಾವ ನಾರಾಯಣ್ ಸಂದರ್ಶನವೊಂದರಲ್ಲಿ ಈ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ಸ್ಟಾರ್ ನಟ-ನಟಿಯರು ಯಾರೊಬ್ಬರು ಬರದಿದ್ರು, ಅರ್ಜುನ್ ಸರ್ಜಾ ಬಂದಿದ್ದು ಕೆಲವರಿಗೆ ಅಚ್ಚರಿ ತಂದಿತ್ತಂತೆ.

ಅರ್ಜುನ್ ಸರ್ಜಾ - ಸಿಲ್ಕ್ ಸ್ಮಿತಾ ಆತ್ಮೀಯ ಸ್ನೇಹಿತರಾಗಿದ್ದರು. ಕೊನೆಯ ದಿನಗಳಲ್ಲಿ ಸಿಲ್ಕ್, ಅರ್ಜುನ್ ಜೊತೆ ಸಿನಿಮಾವೊಂದರಲ್ಲಿ ನಟಿಸಿದ್ದರು. ಚಿತ್ರೀಕರಣದ ಸಮಯದಲ್ಲಿ "ಒಂದು ವೇಳೆ ನಾನು ಸತ್ತರೆ ನೋಡೊಕೆ ಬರ್ತೀಯಾ ಅಲ್ವಾ?" ಎಂದು ಆಕೆ ಅರ್ಜುನ್ ಸರ್ಜಾನ ಕೇಳಿದ್ದರಂತೆ. ಅಂದು ಅರ್ಜುನ್ ಸರ್ಜಾ ಮಾತ್ರ ಬಂದಿದ್ದು ನೋಡಿ ಪತ್ರಕರ್ತ ಭಾವ ನಾರಾಯಣ್ ಈ ಬಗ್ಗೆ ಕೇಳಿದ್ದರಂತೆ. ಆಗ ಅರ್ಜುನ್ ಸರ್ಜಾ ಈ ವಿಚಾರವನ್ನು ಹಂಚಿಕೊಂಡಿದ್ದರು ಎಂದು ನೆನಪಿಸಿಕೊಂಡಿದ್ದಾರೆ.
ಹೊಟ್ಟೆಪಾಡಿಗಾಗಿ ಚಿತ್ರರಂಗಕ್ಕೆ ಬಂದ ಸಿಲ್ಕ್ ಬಹಳ ಕಡಿಮೆ ಅವಧಿಯಲ್ಲಿ ಸಾಕಷ್ಟು ಸಂಪಾದಿಸಿದ್ದರು. ಕೊನೆಗೆ ಸಿನಿಮಾ ನಿರ್ಮಾಪಕಿ ಕೂಡ ಆಗಿದ್ದರು. ಆದರೆ ಆ ಸಿನಿಮಾ ಹೀನಾಯವಾಗಿ ಸೋಲುಂಡಿತ್ತು. ಈ ಚಿತ್ರದಲ್ಲಿ ಸಾಕಷ್ಟು ನಷ್ಟ ಅನುಭವಿಸುವಂತಾಯಿತು. ಕೊನೆಗೆ ಆ ಸಾಲವನ್ನು ಕೂಡ ವಾಪಸ್ ಮರಳಿಸಿದ್ದರು. ಆದರೆ ಆಕೆಯ ಆತ್ಮಹತ್ಯೆಗೆ ನಿಜವಾದ ಕಾರಣ ಏನು ಅನ್ನುವುದು ಮಾತ್ರ ಇನ್ನು ನಿಗೂಢವಾಗಿಯೇ ಇದೆ.
ಸಿಲ್ಕ್ ಸ್ಮಿತಾ ಕನ್ನಡ ಸಿನಿಮಾಗಳಲ್ಲೂ ಬಣ್ಣ ಹಚ್ಚಿದ್ದರು. 'ಗೆದ್ದಮಗ' ಸಿನಿಮಾ ಮೂಲಕ ಚಂದನವನಕ್ಕೆ ಬಂದರು. 'ಹಳ್ಳಿಮೇಷ್ಟ್ರು', 'ಅಳಿಮಯ್ಯ', 'ಚಿನ್ನ', 'ಪ್ರಚಂಡ ಕುಳ್ಳ', 'ಕುಂಕುಮ ತಂದ ಸೌಭಾಗ್ಯ', 'ಟೈಗರ್', 'ಲಾಕಪ್ ಡೆತ್' ಸೇರಿದಂತೆ ಹಲವು ಕನ್ನಡ ಚಿತ್ರಗಳಲ್ಲಿ ಮಿಂಚಿದ್ದರು. ಆದರೆ ನಟಿಸಿದ್ದಕ್ಕಿಂತ ಹೆಚ್ಚು ಬಿಂದಾಸ್ ಹಾಡುಗಳಿಗೆ ಹೆಜ್ಜೆ ಹಾಕಿದ್ದರು.


Click it and Unblock the Notifications











