ಪಾರ್ವತಮ್ಮನವರ ಈ ಸಾಧನೆ ಸರಿಗಟ್ಟುವ ಇನ್ನೊಬ್ಬ ನಿರ್ಮಾಪಕಿ ಭಾರತೀಯ ಚಿತ್ರರಂಗದಲ್ಲಿ ಇಲ್ಲ..!
ಡಾ.ರಾಜ್ ಕುಮಾರ್ ವ್ಯಕ್ತಿಯಾದರೆ ಅವರ ಶಕ್ತಿಯಾಗಿದ್ದವರು ಪಾರ್ವತಮ್ಮ ರಾಜ್ ಕುಮಾರ್. ಕೇವಲ ತಮ್ಮ ಹದಿಮೂರನೇ ಪ್ರಾಯದಲ್ಲಿಯೇ ಡಾ.ರಾಜ್ ಕುಮಾರ್ ಅವರನ್ನು ಮದುವೆಯಾದ ಪಾರ್ವತಮ್ಮ ವ್ಯವಹಾರದ ತಲೆನೋವು ಮತ್ತು ಸಂಸಾರದ ತಾಪತ್ರೆಗಳು ಡಾ.ರಾಜ್ ಕುಮಾರ್ ಅವರಿಗೆ ಸೋಕದಂತೆ ನೋಡಿಕೊಂಡರು.
ಇನ್ನೂ.. ಡಾ.ರಾಜ್ ಕುಮಾರ್ ಅವರ ಜನಪ್ರಿಯತೆಯನ್ನು ಬಳಿಸಿಕೊಂಡು ಆ ಕಾಲದಲ್ಲಿ ಅನೇಕರು ದುಡ್ಡು ಮಾಡುತ್ತಿದ್ದರು. ಚಿತ್ರಗಳನ್ನು ನಿರ್ಮಾಣ ಮಾಡಿ ಭರ್ಜರಿ ಲಾಭ ಮಾಡುತ್ತಿದ್ದರು. ಆದರೂ.. ಅಯ್ಯೋ, ಚಿತ್ರದಿಂದ ದಕ್ಕಿದ್ದೇನು ಇಲ್ಲ ಎಂದು ಹೇಳಿಕೊಂಡು ಓಡಾಡುತ್ತಿದ್ದರು. ತಾವು ಮಾತ್ರ ಲಕ್ಷ ಲಕ್ಷ ಹಣ ಸಂಪಾದಿಸಿಕೊಂಡು ಡಾ.ರಾಜ್ ಕುಮಾರ್ ಅವರಿಗೆ ಕಡಿಮೆ ಸಂಭಾವನೆಯನ್ನು ನೀಡುತ್ತಿದ್ದರು. ಹೀಗಾಗಿಯೇ ಕೆರಳಿದ ಪಾರ್ವತಮ್ಮ ತಾವೇ ಖುದ್ದು ಚಿತ್ರ ನಿರ್ಮಾಣಕ್ಕೆ ಧುಮುಕಿದರು. ಹುಬ್ಬಳ್ಳಿಯಲ್ಲಿ 1977ರಲ್ಲಿ ಚಂದ್ರಿಕಾ ಮೂವೀಸ್ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದರು. ಆ ನಂತರ ತ್ರಿಮೂರ್ತಿ ಚಿತ್ರವನ್ನು ನಿರ್ಮಾಣ ಮಾಡಿದರು.

ವಿಶೇಷ ಅಂದರೆ ಉತ್ತರ ಕರ್ನಾಟಕದಲ್ಲಿ ತ್ರಿಮೂರ್ತಿ ಚಿತ್ರದ ವಿತರಣೆಯ ಹಕ್ಕುಗಳನ್ನು ತುಂಬಾ ಕಡಿಮೆ ಹಣಕ್ಕೆ ಕೇಳಿದರು. ಪಾರ್ವತಮ್ಮನವರು ಅದನ್ನು ನಿರಾಕರಿಸಿ ತಾವೇ ಮುಂದೆ ನಿಂತು ಚಿತ್ರವನ್ನು ಬಿಡುಗಡೆ ಮಾಡಿದರು. ತ್ರಿಮೂರ್ತಿ ಅದ್ಭುತ ಗಳಿಕೆಯನ್ನು ಕಂಡಿತ್ತು. ಆ ನಂತರ ಶಂಕರ್ ಗುರು ಚಿತ್ರದ ನಿರ್ಮಾಪಕರು ಹಿಂದೆ ಸರಿದಾಗ ಕೆಲವರ ಸಹ ಪಾಲುದಾರಿಕೆಯಿಂದ ಪಾರ್ವತಮ್ಮ ವಜ್ರೇಶ್ವರಿ ಕಂಬೈನ್ಸ್ ನ ಶುರು ಮಾಡಿದರು. ಶಂಕರ್ ಗುರು ಅಭೂತಪೂರ್ವ ಮತ್ತು ಅದ್ವೀತಿಇಯ ಯಶಸ್ಸನ್ನು ಕಂಡಿತು. ದಾಖಲೆ ನಿರ್ಮಿಸಿತು.
ಹೀಗೆ ಡಾ.ರಾಜ್ ಕುಮಾರ್ ಚಿತ್ರಗಳ ಗಳಿಕೆ ಕಡಿಮೆ ಎಂಬ ಹಸಿ ಸುಳ್ಳನ್ನು ಬಯಲು ಮಾಡಿದ ಪಾರ್ವತಮ್ಮ ರಾಜ್ ಕುಮಾರ್ ತಮ್ಮ ಜೀವಿತಾವಧಿಯಲ್ಲಿ 83 ಚಿತ್ರಗಳನ್ನು ನಿರ್ಮಾಣ ಮಾಡಿದರು. ಆ ಪೈಕಿ ಶಂಕರ್ ಗುರು, ಅನುರಾಗ ಅರಳಿತು, ಜೀವನ ಚೈತ್ರ, ಜನುಮದ ಜೋಡಿ ಹಾಗೂ ನಂಜುಂಡಿ ಕಲ್ಯಾಣ ಸಿನಿಮಾಗಳು ಚಿತ್ರಮಂದಿರದಲ್ಲಿ ಒಂದು ವರ್ಷ ಪ್ರದರ್ಶನ ಕಂಡಿವೆ. ಇಷ್ಟೇ ಅಲ್ಲ ಪಾರ್ವತಮ್ಮನವರು ನಿರ್ಮಾಣ ಮಾಡಿದ 16 ಸಿನಿಮಾಗಳು 25 ವಾರ ಪ್ರದರ್ಶನ ಕಂಡಿದ್ದರೆ 33 ಸಿನಿಮಾಗಳು 100 ದಿನಗಳು ಹಾಗೂ 19 ಸಿನಿಮಾಗಳು 50 ದಿನ ಪ್ರದರ್ಶನ ಕಂಡಿವೆ. ಪಾರ್ವತಮ್ಮನವರ ಈ ಸಾಧನೆಯನ್ನು ಸರಿಗಟ್ಟುವ ಇನ್ನೊಬ್ಬ ನಿರ್ಮಾಪಕಿ ಭಾರತೀಯ ಚಿತ್ರರಂಗದಲ್ಲಿ ಇಲ್ಲ ಎನ್ನುವುದು ಕನ್ನಡಿಗರ ಹೆಮ್ಮೆ.

ಇನ್ನೂ.. ಕನ್ನಡ ಕಾದಂಬರಿಗಳನ್ನು ಓದುವ ಅಭಿರುಚಿಯಿದ್ದ ಪಾರ್ವತಮ್ಮನವರು ಸ್ವತಃ ಕೆಲವು ಕಾದಂಬರಿಯಾಧಾರಿತ ಚಿತ್ರಗಳನ್ನು ನಿರ್ಮಾಣ ಮಾಡಿದ್ದಲ್ಲದೆ ಬೇರೆಯವರಿಗೂ ಪ್ರೇರಣೆಯಾದರು. 'ಬಯಲು ದಾರಿ' ಚಿತ್ರವನ್ನು ಅನಂತನಾಗ್ ಅವರನ್ನು ಹಾಕಿಕೊಂಡು ಮಾಡಲು ಭಗವಾನ್ ಅವರಿಗೆ ಹೇಳಿದವರು ಪಾರ್ವತಮ್ಮ ಎಂಬ ಸತ್ಯವೇ ಅವರ ವಿಶಾಲ ಹೃದಯವಂತಿಕೆಗೆ ಒಂದು ಸಾಕ್ಷಿ.
ಇನ್ನೂ ಸಹಜವಾಗಿಯೇ ಪಾರ್ವತಮ್ಮ ರಾಜ್ ಕುಮಾರ್ ತಮ್ಮ ವ್ಯವಹಾರದಲ್ಲಿ ತುಂಬಾನೇ ಕಟ್ಟು ನಿಟ್ಟಾಗಿದ್ದರು. ಖಂಡತುಂಡ ಮಾತುಗಳಿಗೆ ಹೆಸರುವಾಸಿಯಾಗಿದ್ದರು. ಆದರೆ ಪಾರ್ವತಮ್ಮನವರು ತಮ್ಮನ್ನು ನಂಬಿಕೊಂಡ ಕಲಾವಿದರ ಕೈಯನ್ನು ಯಾವತ್ತು ಬಿಡಲಿಲ್ಲ. ಹೊಸ ತಂತ್ರಜ್ಞರಿಗೆ, ನಟ ನಟಿಯರಿಗೆ ತಮ್ಮ ನಿರ್ಮಾಣದ ಚಿತ್ರಗಳಲ್ಲಿ ಅವಕಾಶ ಕೊಡುವುದನ್ನು ಮರೆಯಲಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ವಜ್ರೇಶ್ವರಿ ಸಂಸ್ಥೆಯಿಂದ ಇಲ್ಲಿಯವರೆಗೆ ಅನೇಕರು ಚಿತ್ರರಂಗಕ್ಕೆ ಬಂದಿದ್ಧಾರೆ. ಅದರಲ್ಲಿಯೂ ಅನೇಕ ಕನ್ನಡತಿಯರನ್ನೂ ನಾಯಕಿಯನ್ನಾಗಿಸಿದ ಹೆಗ್ಗಳಿಕೆ ಪಾರ್ವತಮ್ಮ ರಾಜ್ ಕುಮಾರ್ ಅವರದ್ದು. ಆಶಾರಾಣಿ, ಶ್ರುತಿ, ಅನು ಪ್ರಭಾಕರ್, ಸುಧಾರಾಣಿ, ರಮ್ಯಾ, ರಕ್ಷಿತಾ, ಇವರೆಲ್ಲರು ವಜ್ರೇಶ್ವರಿ ಸಂಸ್ಥೆಯ ಮೂಲಕವೇ ಚಿತ್ರರಂಗಕ್ಕೆ ಬಂದವರು. ಆ ನಂತರ ಅಭಿಮಾನಿಗಳ ಹೃದಯವನ್ನು ಗೆದ್ದರು.

ಇಂಥಾ ಪಾರ್ವತಮ್ಮ ರಾಜ್ ಕುಮಾರ್ ಯಾವತ್ತೂ ತಮ್ಮ ಪ್ರಚಾರವನ್ನು ಬಯಸಲಿಲ್ಲ. ಪಾರ್ವತಮ್ಮ ರಾಜ್ ಕುಮಾರ್ ಪ್ರಚಾರದಿಂದ ಎಷ್ಟು ದೂರವಾಗಿದ್ದರು ಅಂದರೆ ಮೈಸೂರಿನಲ್ಲಿ ಆಶ್ರಯ ವಂಚಿತ ಹೆಣ್ಣು ಮಕ್ಕಳಿಗಾಗಿಯೇ ಪಾರ್ವತಮ್ಮ ಶಕ್ತಿಧಾಮ ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ ಎನ್ನುವ ವಿಚಾರವೇ ಅನೇಕ ವರ್ಷಗಳವರೆಗೆ ಬಹುತೇಕರಿಗೆ ಗೊತ್ತೇ ಇರಲಿಲ್ಲ.
ಒಟ್ನಲ್ಲಿ ಎಲ್ಲ ಯಶಸ್ವಿ ಪುರುಷರ ಹಿಂದೆ ಮಹಿಳೆಯ ಶಕ್ತಿ ಇರುತ್ತದೆ ಎಂಬ ಮಾತೊಂದಿದೆ. ಪಾರ್ವತಮ್ಮನವರು ರಾಜಕುಮಾರ್ ಅವರ ವ್ಯಾವಹಾರಿಕ-ಆರ್ಥಿಕ ಶಕ್ತಿಯಾಗಿದ್ದರು. ಕನ್ನಡ ಚಿತ್ರರಂಗದ ಆಧಾರಸ್ತಂಭವಾಗಿದ್ದರು.


Click it and Unblock the Notifications











