"ದೊಡ್ಡ ಬ್ಯಾನರ್, ಹೆಸರು ಹೇಳಲು ಭಯ, ದಾಂಡಿಗರನ್ನು ಕಳಿಸಿ ತೊಂದ್ರೆ ಕೊಟ್ಟಿದ್ರು"; ಪ್ರಕಾಶ್ ಬೆಳವಾಡಿ
ಎಲ್ಲಾ ಕಡೆ ಎಲ್ಲರೂ ಒಳ್ಳೆಯವರು ಇರಲ್ಲ. ಎಲ್ಲರೂ ಕೆಟ್ಟವರು ಎನ್ನುವುದಕ್ಕೂ ಆಗಲ್ಲ. ಚಿತ್ರರಂಗದಲ್ಲಿ ಕೂಡ ಕೆಟ್ಟದಾಗಿ ನಡೆದುಕೊಳ್ಳುವವರು ಇರ್ತಾರೆ. ಕೆಲ ನಟ, ನಟಿಯರು ತಮಗಾದ ಕಹಿ ಅನುಭವಗಳನ್ನು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಹಿರಿಯ ನಟ ಪ್ರಕಾಶ್ ಬೆಳವಾಡಿ ತಮಗೆ ಎದುರಾಗಿದ್ದ ಕೆಟ್ಟ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
ರಂಗಭೂಮಿ ಹಾಗೂ ಸಿನಿಮಾ ಹಿನ್ನೆಲೆಯ ಕುಟುಂಬದಲ್ಲಿ ಹುಟ್ಟಿದವರು ಪ್ರಕಾಶ್ ಬೆಳವಾಡಿ. ತಾಯಿ ಭಾರ್ಗವಿ ನಾರಾಯಣ್, ಸಹೋದರಿ ಸುಧಾ ಬೆಳವಾಡಿ ಕೂಡ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದಾರೆ. ಕನ್ನಡ ಮಾತ್ರವಲ್ಲದೇ ಪರಭಾಷಾ ಸಿನಿಮಾಗಳಲ್ಲಿ ಕೂಡ ಪ್ರಕಾಶ್ ಬೆಳವಾಡಿ ಮಿಂಚಿದ್ದಾರೆ. ಬಾಲಿವುಡ್ ಸೂಪರ್ ಹಿಟ್ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ.

ಪರಭಾಷಾ ಸಿನಿಮಾಗಳಲ್ಲಿ ನಟಿಸಿ ಬಂದರೂ ಕನ್ನಡ ಚಿತ್ರರಂಗದಲ್ಲಿ ಕೆಲವರ ಬಗ್ಗೆ ಪ್ರಕಾಶ್ ಬೆಳವಾಡಿ ಅವರಿಗ ಬೇಸರವಿದೆ. ಅದಕ್ಕೆ ಕಾರಣ ತಮಗೆ ಎದುರಾದ ಕೆಲ ಕಹಿ ಘಟನೆಗಳು. ರಾಪಿಡ್ ರಶ್ಮಿ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಈ ಬಗ್ಗೆ ಅವರು ಮಾತನಾಡಿದ್ದಾರೆ. ಅದರಲ್ಲೂ ಒಂದು ಚಿತ್ರದಲ್ಲಿ ನಟಿಸುವಾಗ ಬಹಳ ಕೆಟ್ಟದಾಗಿ ನಡೆಸಿಕೊಂಡರು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ದಕ್ಷಿಣದ ಚಿತ್ರರಂಗಕ್ಕೂ ಬಾಲಿವುಡ್‌ಗೂ ಇರುವ ವ್ಯತ್ಯಾಸದ ಬಗ್ಗೆಯೂ ಮಾತನಾಡಿದ್ದಾರೆ.
"ಕನ್ನಡ ಚಿತ್ರರಂಗದಲ್ಲಿ ಕೆಲವರು ಒರಟಾಗಿ ನಡೆದುಕೊಳ್ಳುತ್ತಾರೆ. ಪರಭಾಷೆಗಳಲ್ಲಿ ಉತ್ತಮ ರೀತಿಯಲ್ಲಿ ವರ್ತಿಸುತ್ತಾರೆ. ನಮ್ಮನ್ನು ಕೊಂಡಾಡುತ್ತಾರೆ. ನನಗೆ ಒಂದು ಕನ್ನಡ ಚಿತ್ರದಲ್ಲಿ ಕಹಿ ಅನುಭವ ಆಗಿತ್ತು. ಅದು ದೊಡ್ಡ ಬ್ಯಾನರ್ ಸಿನಿಮಾ. ನಾನು ಯಾವ ಸಿನಿಮಾ ಎಂದು ಹೇಳಲ್ಲ, ಕಾರಣ ನನಗೆ ಅವರ ಬಗ್ಗೆ ಭಯ ಇದೆ. ಕನ್ನಡ ಇಂಡಸ್ಟ್ರಿ ಆ ರೀತಿ ಇದೆ" ಎಂದು ಪ್ರಕಾಶ್ ಬೆಳವಾಡಿ ಬೇಸರ ವ್ಯಕ್ತಪಡಿಸಿದ್ದಾರೆ.
ಮಾತು ಮುಂದುವರೆಸಿದ ಹಿರಿಯ ನಟ "ನನಗೆ ಅವರು ಮುಂದೆ ಅವಕಾಶ ಕೊಡುವುದಿಲ್ಲ ಎನ್ನುವ ಭಯ ಇಲ್ಲ. ಅವರು ಅವಕಾಶ ಕೊಟ್ಟರೂ ನಾನು ನಟಿಸಲ್ಲ. ದಿನಕ್ಕೆ 10 ಲಕ್ಷ ರೂ. ಕೊಡ್ತೀನಿ ಎಂದರೂ ಬೇಡ. ನಾನು ಆ ಚಿತ್ರದಲ್ಲಿ ನಟಿಸ್ತಿದ್ದೆ. ಸಂಭಾವನೆ ಕಮ್ಮಿ ಮಾಡಲು ಒಪ್ಪಲಿಲ್ಲ. ನಿರ್ದೇಶಕರು ನಾನೇ ಬೇಕು ಎಂದಿದ್ದಕ್ಕೆ ಅವಕಾಶ ಕೊಟ್ಟರು. 4 ಕಂತುಗಳಲ್ಲಿ ನನಗೆ ಸಂಭಾವನೆ ಕೊಡ್ತೀವಿ ಎಂದಿದ್ದರು. ಕೊನೆ ಕಂತು ಕೊಡಲಿಲ್ಲ. ಕೊನೆ ದಿನದ ಚಿತ್ರೀಕರಣದ ವೇಳೆ ಅವ್ರು 4 ಜನರನ್ನು ನನ್ನ ಕ್ಯಾರವಾನ್‌ಗೆ ಕಳುಹಿಸಿದ್ದರು. ಅವರು ಬಂದು ಮಾಂಸ ತಿಂದು ಎಸೆದು ಹೋಗಿದ್ದರು. ಟಾಯ್ಲೆಟ್ ನೀರು ಬರದಂತೆ ಖಾಲಿ ಮಾಡಿದ್ದರು. ನನಗೆ ಕಸಿವಿಸಿ ಉಂಟು ಮಾಡಿದ್ದರು" ಎಂದು ಪ್ರಕಾಶ್ ಬೆಳವಾಡಿ ಆ ಘಟನೆ ನೆನಪಿಸಿಕೊಂಡಿದ್ದಾರೆ.
ಎಲ್ಲರೂ ಈ ರೀತಿ ನಡೆದುಕೊಳ್ಳಲ್ಲ. ಕೆಲವರು ಹೀಗೆ ಮಾಡುತ್ತಾರೆ. ನಿಮಗೆ ಗೊತ್ತಾ ಕನ್ನಡ ಸಿನಿಮಾಗಳಲ್ಲಿ ಕಾಂಟ್ರ್ಯಾಕ್ಟ್ ಎನ್ನುವುದೇ ಇರುವುದಿಲ್ಲ. ಯಾವುದೇ ಒಪ್ಪಂದಕ್ಕೆ ಸಹಿ ಹಾಕಿಸಿಕೊಳ್ಳಲ್ಲ. ಕನ್ನಡ ಚಿತ್ರರಂಗದಲ್ಲಿ ಮಾತ್ರ ಹೀಗೆ. ನಾವು ಬಹಳ ಹಿಂದೆ ಉಳಿದಿದ್ದೇವೆ. ಕನ್ನಡಿಗರು ಸುಸಂಸ್ಕೃತರು. ಆದರೆ ಚಿತ್ರರಂಗದಲ್ಲಿ ಹಾಗೆ ಕಾಣಲ್ಲ, ಕಾರಣ ಇಲ್ಲಿ ಬಹುತೇಕರು ಮೂಲತಃ ಕನ್ನಡಿಗರಾಗಿ ಇರುವುದಿಲ್ಲ.
ಡಾ. ರಾಜ್‌ಕುಮಾರ್ ಫ್ಯಾಮಿಲಿ ಕಲಾವಿದರ ಸಿನಿಮಾಗಳಲ್ಲಿ ಈ ರೀತಿ ಆಗಲ್ಲ. ನಾನು ಶಿವಣ್ಣ ಹಾಗೂ ಅಪ್ಪು ಜೊತೆ ತಲಾ ಎರಡು ಸಿನಿಮಾಗಳಲ್ಲಿ ನಟಿಸಿದ್ದೀನಿ. ಅವರೆಲ್ಲಾ ಬಹಳ ಸರಳ, ಸಜ್ಜನ ವ್ಯಕ್ತಿತ್ವದವರು. ಅವರ ಸಿನಿಮಾ ಸೆಟ್‌ಗಳಲ್ಲಿ ಅದೇ ರೀತಿ ಇರುತ್ತದೆ. ಕಾರಣ ಅವರ ಹಿನ್ನೆಲೆ ಅಂಥಾದ್ದು. ಯೋಗೇಶ್ ದ್ವಾರಕೀಶ್ ಬ್ಯಾನರ್‌ನಲ್ಲಿ ಕೆಲಸ ಮಾಡಿದ್ದೀನಿ. ಒಳ್ಳೆ ಅನುಭವ ಆಗಿತ್ತು. ಎಲ್ಲರೂ ಆ ರೀತಿ ಕೆಟ್ಟದಾಗಿ ನಡೆದುಕೊಳ್ಳಲ್ಲ. ಕೆಲವರು ಹೀಗೆ ಮಾಡುತ್ತಾರೆ ಎಂದು ಪ್ರಕಾಶ್ ವಿವರಿಸಿದ್ದಾರೆ.


Click it and Unblock the Notifications











