ಅಣ್ಣಾವ್ರು ಡಬ್ಬಿಂಗ್ ವಿರೋಧಿಸಿದಾಗ ಅವರ ವಿರುದ್ಧ ಮಾತನಾಡುವ ಧೈರ್ಯ ಯಾರಿಗೂ ಇರಲಿಲ್ಲ..!
ಡಾ.ರಾಜ್ ಕುಮಾರ್.. ಕನ್ನಡ ಚಲನಚಿತ್ರ ರಂಗದ ಶಿಖರ ಪ್ರಾಯ. ಅಭಿಮಾನಿಗಳಲ್ಲಿ ದೇವರನ್ನು ಕಂಡ ದೇವತಾ ಮನುಷ್ಯ. ಗೋಕಾಕ್ ಚಳುವಳಿಯನ್ನು ಒಳಗೊಂಡಂತೆ ಕನ್ನಡನಾಡು-ನುಡಿಗೆ ಧಕ್ಕೆ ಬಂದಾಗ ಬೀದಿಗೆ ಬಂದು ಪ್ರಜಾಸತ್ತಾತ್ಮಕ ಹೋರಾಟಕ್ಕೆ ಬೆಂಬಲವಾಗುತ್ತಲೇ ಕೇಂದ್ರ ಶಕ್ತಿಯಾದವರು ಡಾ.ರಾಜ್ ಕುಮಾರ್. ಇಂಥಾ ಡಾ.ರಾಜ್‌ಕುಮಾರ್ ತಾವು ಬದುಕಿರುವವರೆಗೆ ಇಂದು ದೇಶವ್ಯಾಪಿ ಹರಡಿರುವ ಡಬ್ಬಿಂಗನ್ನು ವಿರೋಧ ಮಾಡುತ್ತಲೇ ಬಂದಿದ್ದರು.
ಮೂಲ ಭಾಷೆಗಿಂತ ನಮ್ಮದೇ ಭಾಷೆಯಲ್ಲಿ ಚಿತ್ರ ಬಂದರೆ ಕನ್ನಡ ಮಾರುಕಟ್ಟೆ ವಿಸ್ತರಣೆಯಾಗಲ್ವೆ..? ಈ ಪ್ರಶ್ನೆಯನ್ನು ಅವತ್ತು ಅನೇಕರು ಕೇಳಿದ್ದರು. ಇವತ್ತು ಕೂಡ ಕೇಳಬಹುದು. ಆದರೆ .. ಡಬ್ಬಿಂಗ್ ಬಂದರೆ ಮುಂದೇನಾಗಬಹುದು ಎನ್ನುವ ಸ್ಪಷ್ಟವಾದ ಅರಿವು ಡಾ.ರಾಜ್ ಕುಮಾರ್ ಅವರಿಗೆ ಆಗಲೇ ಇತ್ತು.

ಇದಕ್ಕೆ ಕೈಗನ್ನಡಿ ಎಂಬಂತೆ ಇವತ್ತು ಆ ಭಾಷೆ ಈ ಭಾಷೆ ಎನ್ನದೇ ಎಲ್ಲ ಭಾಷೆಯ ಚಿತ್ರರಂಗದವರನ್ನು ಪ್ಯಾನ್ ಇಂಡಿಯಾ ಜ್ವರ ಆವರಿಸಿಕೊಂಡಿದೆ. ಈ ಜ್ವರದಿಂದ ತಮ್ಮ ಮಾತೃ ಭಾಷೆಯಲ್ಲಿ ಚಿತ್ರ ಮಾಡುವುದನ್ನೇ ಅನೇಕರು ಮರೆತಿದ್ದಾರೆ. ಯಾರನ್ನೇ ನೋಡಿ ಎಲ್ಲರಿಗೆ ಈಗ ಪ್ಯಾನ್ ಇಂಡಿಯಾ ಸ್ಟಾರ್ ಆಗುವ ಹಂಬಲ.
ಇನ್ನು ಈ ಡಬ್ಬಿಂಗ್‌ನಿಂದ ಕನ್ನಡದಲ್ಲಿ ಕೆಲಸ ಕಳೆದುಕೊಂಡವರ ಸಂಖ್ಯೆ ಲೆಕ್ಕಕ್ಕಿಲ್ಲ. ಅನೇಕ ಹಿರಿಯ ಕಲಾವಿದರು, ತಂತ್ರಜ್ಞರ ಕೆಲಸವನ್ನು ಈ ಡಬ್ಬಿಂಗ್ ಕಿತ್ತುಕೊಂಡಿದೆ. ಡಾ ರಾಜ್ ಕುಮಾರ್ ಅವರಿಗೆ ಇದ್ದ ಈ ಕಾಳಜಿಯ ಕುರಿತು ಅವರ ಕನ್ನಡದ ಪ್ರೀತಿಯ ಕುರಿತು ಮತ್ತು ಡಬ್ಬಿಂಗ್ ಚಳುವಳಿಯ ಕುರಿತು ನಟ, ನಿರ್ದೇಶಕ,ಸಾಹಿತಿ ಮತ್ತು ಡಾ.ರಾಜ್ ಕುಮಾರ್ ಅವರಿಗೆ ತುಂಬಾನೇ ಆಪ್ತವಾಗಿದ್ದ ಪ್ರಕಾಶರಾಜ್ ಮೇಹು ನಿಮ್ಮ ಫಿಲ್ಮಿಬೀಟ್ ಕನ್ನಡ ಜೊತೆ ಮಾತನಾಡಿದ್ದಾರೆ. ಪ್ರಕಾಶ್ ರಾಜ್ ಮೇಹು ಮಾತನಾಡಿದ್ದೇನು ಎಂದು ತಿಳಿಯಲು ಮುಂದೆ ಓದಿ.

ಅ.ನ.ಕೃಷ್ಣರಾಯರು ಶುರು ಮಾಡಿದ್ದ ಹೋರಾಟ
''ಅನಕೃ ಎಂದೆ ಹೆಸರಾದ ಅರಕಲಗೂಡು ನರಸಿಂಗರಾಯ ಕೃಷ್ಣರಾಯರು ಮೊದಲಿಗೆ ಡಬ್ಬಿಂಗ್ ವಿರೋಧಿ ಹೋರಾಟವನ್ನು ಶುರು ಮಾಡಿದ್ದರು. ಆಗ ಕನ್ನಡದಲ್ಲಿ ಬರೀ ತಮಿಳು, ತೆಲುಗು, ಹಿಂದಿ, ಎನ್.ಟಿ.ಆರ್ ಎಮ್‌ಜಿಆರ್ ಅವರದ್ದೇ ಪಾರುಪಥ್ಯ ಇದ್ದ ಕಾಲ ಅದು.
ಆ ಕಾಲದಲ್ಲಿ ಹೀಗೆ ಮುಂದುವರೆದರೆ ಕನ್ನಡ ಬೆಳೆಯಲು ಸಾಧ್ಯವಿಲ್ಲ ಎಂದು ಅನಕೃ ಅವರು ಡಬ್ಬಿಂಗ್ ವಿರೋಧಿ ಚಳುವಳಿಯನ್ನು ಶುರು ಮಾಡಿದ್ದರು. ಆ ನಂತರ ಅದಕ್ಕೆ ಡಾ.ರಾಜ್ ಕುಮಾರ್ ಅವರು ಕೂಡ ಧ್ವನಿಯಾದರು.
ಕೊನೆಗೆ ಅದೆಲ್ಲಿಯವರೆಗೆ ಆಯ್ತು ಅಂದರೆ ಡಬ್ಬಿಂಗ್ ನಿಂತೇ ಹೋಯ್ತು. ಆದರೆ ಆ ನಂತರ ಸಂಜಯ್ ಖಾನ್ ಟಿಪ್ಪು ಸುಲ್ತಾನ್ ಧಾರಾವಾಹಿಯನ್ನು ಮಾಡಿದ್ದರು. ಆ ಸಮಯದಲ್ಲಿ ಇದು ಕನ್ನಡದ ಕಥೆ.. ಕನ್ನಡದ ವೀರನ ಕಥೆ.. ಹೀಗಾಗಿ ಈ ಧಾರಾವಾಹಿಯನ್ನು ಕನ್ನಡಕ್ಕೆ ಡಬ್ ಮಾಡಲು ಮುಂದಾಗಿದ್ದರು. ಆದರೆ ಆಗ ಡಾ.ರಾಜ್ ಕುಮಾರ್ ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಆಗಲೆ ಶುರುವಾಗಬೇಕಿದ್ದ ಡಬ್ಬಿಂಗ್ ಆಗ ಶುರುವಾಗಲಿಲ್ಲ'' ಎಂದು ಹೇಳಿದ್ದಾರೆ ಪ್ರಕಾಶ್ ರಾಜ್ ಮೇಹು.
ಕನ್ನಡ ಚಿತ್ರರಂಗ ಐಸಿಯುನಲ್ಲಿದೆ
''ಪ್ಯಾನ್ ಇಂಡಿಯಾ ಹೆಸರಿನಲ್ಲಿ ಡಬ್ಬಿಂಗ್ ಇವತ್ತು ಎಲ್ಲ ಭಾಷೆಯನ್ನು ಆವರಿಸಿಕೊಂಡಿದೆ. ಕನ್ನಡ ಚಿತ್ರರಂಗ ಕೂಡ ಇದರಿಂದ ಹೊರತಾಗಿಲ್ಲ. ಕನ್ನಡ ಚಿತ್ರರಂಗ ಹೆಚ್ಚು ಕಡಿಮೆ ಇಂದು ಐಸಿಯುನಲ್ಲಿದೆ. ಕನ್ನಡದ ಪ್ರೇಕ್ಷಕರು ಇವತ್ತು ಚಿತ್ರಮಂದಿರಕ್ಕೆ ಬರುತ್ತಿಲ್ಲ. ಚಿತ್ರರಂಗಕ್ಕೆ ಏನು ಮಾಡಬೇಕೆಂದು ತಿಳಿಯದೇ ದಿಕ್ಕು ತೋಚದಂತಾಗಿದೆ.
ಇದೆಲ್ಲದಕ್ಕೂ ಡಾ.ರಾಜ್ ಕುಮಾರ್ ಅವರು ನಮ್ಮ ನಡುವೆ ಇಲ್ಲ ಎನ್ನುವುದೇ ಮೂಲ ಕಾರಣ. ಆಗಲೂ ಕಾನೂನು ಇತ್ತು, ಆಗಲೂ ಡಬ್ಬಿಂಗ್ ಬರಬಹುದಾಗಿತ್ತು, ಆದರೆ ಆಗ ಡಾ.ರಾಜ್ ಕುಮಾರ್ ಅವರ ವಿರುದ್ಧ ಮಾತನಾಡುವ ಧೈರ್ಯ ಯಾರಿಗೂ ಇರಲಿಲ್ಲ. ಅವರು ಹೋದ ನಂತರ ಆ ಶಕ್ತಿಗಳಿಗೆಲ್ಲ ಧೈರ್ಯ ಬಂದು ಬಿಡ್ತು'' ಎಂದು ಪ್ರಕಾಶ್ ರಾಜ್ ಮೇಹು ಫಿಲ್ಮಿಬೀಟ್ ಕನ್ನಡಗೆ ಹೇಳಿದ್ದಾರೆ.
ಸಾಹಿತ್ಯ ಮತ್ತು ಸಿನಿಮಾ ಆಗ ಜೊತೆಯಾಗಿತ್ತು
''ನಾಡು-ನುಡಿಗೆ ಧಕ್ಕೆ ಆದಾಗ ಸಾಹಿತಿಗಳು, ಚಳುವಳಿಗಾರರು ಮತ್ತು ಸಿನಿಮಾರಂಗದವರು ಆಗ ಹೋರಾಟದಲ್ಲಿ ಮುಂಚೂಣಿಯಲ್ಲಿರುತ್ತಿದ್ದರು. ಗೋಕಾಕ್ ಚಳುವಳಿಯಲ್ಲಿ ಕೂಡ ಅಷ್ಟೇ. ಸಾಹಿತಿಗಳು, ಡಾ ರಾಜ್ ಕುಮಾರ್ ಅವರ ನೇತೃತ್ವದಲ್ಲಿ ಚಿತ್ರರಂಗದವರು ಬೀದಿಗೆ ಇಳಿದಿದ್ದರು. ಆಗ ಪ್ರತಿ ಬಾರಿ ಸಾಹಿತಿಗಳು, ಕನ್ನಡ ಚಳುವಳಿಗಾರರು ಮತ್ತು ಸಿನಿಮಾರಂಗದವರು ಒಗ್ಗಟ್ಟಾಗಿ ಹೋರಾಟ ಮಾಡುತ್ತಿದ್ದರಿಂದ ಈ ತರಹದ್ದೆಲ್ಲ ವಿದ್ಯಮಾನಗಳು ನಡೆಯುತ್ತಿರಲಿಲ್ಲ.
ಆದರೆ ಈಗ ಸಿನಿಮಾ ಬೇರೆ ಸಾಹಿತ್ಯ ಬೇರೆಯಾಗಿದೆ. ಇನ್ನು ಡಾ.ರಾಜ್ ಕುಮಾರ್ ಅವರು ಬರೀ ಸಿನಿಮಾ ನಟರಾಗಿದ್ದರೂ ಕೂಡ ಅದನ್ನು ಮೀರಿದ ಒಂದು ಸಾಂಸ್ಕ್ರತಿಕ ವ್ಯಕ್ತಿತ್ವ ಅವರಿಗಿತ್ತು. ಆದರೆ ಈಗ ಸಿನಿಮಾ ಹೊರತು ಪಡಿಸಿ ಇರಬೇಕಾದ ಸಾಂಸ್ಕ್ರತಿಕ ವ್ಯಕ್ತಿತ್ವ ಚಿತ್ರರಂಗದಲ್ಲಿ ಯಾರಲ್ಲಿಯೂ ಇಲ್ಲ.
ಹೀಗಾಗಿ ಅವರಿದ್ದಾಗ ಸಿನಿಮಾ ಬೇರೆ ಇಲ್ಲ ಸಾಹಿತ್ಯ ಬೇರೆ ಅಲ್ಲ ಎನ್ನುವ ಮನೋಭಾವ ಇತ್ತು. ಸಾಹಿತಿಗಳು ಕೂಡ ಆಗ ಡಾ.ರಾಜ್ ಕುಮಾರ್ ಅವರನ್ನು ಪ್ರೀತಿಸುತ್ತಿದ್ದರು, ಗೌರವಿಸುತ್ತಿದ್ದರು, ಡಾ ರಾಜ್ ಕುಮಾರ್ ಕೂಡ ಸಾಹಿತಿಗಳೊಂದಿಗೆ ಅಪಾರವಾದ ಒಡನಾಟ ಹೊಂದಿದ್ದರು, ಇದೆಲ್ಲದರಿಂದ ಸಾಂಸ್ಕ್ರತಿಕ ವಾತಾವರಣ, ಕನ್ನಡದ ವಾತಾವರಣ ಇತ್ತು, ಆದರೆ ಈಗ ಸಂಸ್ಕ್ರತಿಯ ವಿಚಾರಕ್ಕೆ ಬಂದರೆ ಸಿನಿಮಾದವರು ಲೆಕ್ಕಕ್ಕೆ ಇಲ್ಲ, ಪ್ಯಾನ್ ಇಂಡಿಯಾ ಎಂಬ ರೋಗದಿಂದ ಭಾಷೆಗೆ ನಾಡು ನುಡಿಗೆ ಧಕ್ಕೆಯಾದಾಗ ಅನೇಕರು ಧ್ವನಿ ಎತ್ತುತ್ತಿಲ್ಲ'' ಎಂದು ಪ್ರಕಾಶ್ ರಾಜ್ ಮೇಹು ತಮ್ಮ ಬೇಸರವನ್ನು ಹೊರ ಹಾಕಿದ್ದಾರೆ.
ಅಂದ್ಹಾಗೇ ಕನ್ನಡದಲ್ಲಿ ಈಗ ಬೇರೆ ಭಾಷೆಯಿಂದ ಡಬ್ ಆಗಿ ಚಿತ್ರಗಳು ತೆರೆಗೆ ಬರುತ್ತಿವೆ. ಆದರೆ ಡಬ್ಬಿಂಗ್ ಕೇವಲ ನಾಮ್ ಕೇ ವಾಸ್ತೇ ಅಷ್ಟೇ ಎಂಬಂತಾಗಿದೆ. ಅಲ್ಲೊಂದು.. ಇಲ್ಲೊಂದು ಚಿತ್ರಗಳನ್ನು ಡಬ್ ಮಾಡಿ ಬಿಡುಗಡೆ ಮಾಡಿದರು ಕೂಡ ಆ ಚಿತ್ರಕ್ಕೆ ಸಿಗಬೇಕಾದ ಚಿತ್ರಮಂದಿರಗಳು ಸಿಗುವುದಿಲ್ಲ ಸರಿಯಾದ ಪ್ರದರ್ಶನದ ಸಮಯ ಕೂಡ ಸಿಗುವುದಿಲ್ಲ. ಬದಲಿಗೆ ಮೂಲ ಚಿತ್ರಕ್ಕೆನೇ ಚಿತ್ರಮಂದಿರದವರು ಮತ್ತು ವಿತರಕರು ಮಣೆ ಹಾಕುತ್ತಾ ಬಂದಿದ್ದಾರೆ. ಅಕ್ಕ ಪಕ್ಕದ ಇಂಡಸ್ಟ್ರಿಗಳ ಜೊತೆ ಚೆನ್ನಾಗಿ ಇರಬೇಕು, ಹಿಡಿತ ಇಟ್ಟುಕೊಳ್ಳಬೇಕು, ತಮ್ಮ ಬೇಳೆ ಬೇಯಿಸಿಕೊಳ್ಳಲು, ನಮ್ಮವರೇ ಪರಭಾಷೆಯ ಚಿತ್ರಗಳನ್ನು ಕನ್ನಡಿಗರಿಗೆ ಕನ್ನಡದಲ್ಲಿ ತೋರಿಸಲು ಹಿಂದೇಟು ಹಾಕುತ್ತಿದ್ದಾರೆ.


Click it and Unblock the Notifications











