"15 ಸಾವಿರ ಅಂದಾಗ್ಲೆ ಭಯವಾಗಿತ್ತು.. ಕುಚು ಕುಚು ಎನ್ನುವ ಶಬ್ಧ ಬಂದಿದ್ದು ಕೇಳಿ ಅವಕ್ಕಾಗಿದ್ದೆ"; ಪ್ರೇಮಾ
ವಿಭಿನ್ನ ರೀತಿಯ ಆಲೋಚನೆ, ವಿಭಿನ್ನ ರೀತಿಯ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದವರು ಉಪೇಂದ್ರ. ಕೆಲವರು ರಿಯಲ್ ಸ್ಟಾರ್ ಆಲೋಚನೆಯನ್ನು ಒಪ್ಪಿಕೊಂಡರೆ ಮತ್ತೆ ಕೆಲವರು ಒಪ್ಪುತ್ತಿರಲಿಲ್ಲ. 'ಓಂ', 'A' ಹಾಗೂ 'ಉಪೇಂದ್ರ' ಸಿನಿಮಾಗಳು ಇದೇ ಕಾರಣಕ್ಕೆ ಆ ಕಾಲದಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿದ್ದವು.
ಉಪೇಂದ್ರ ಸಿನಿಮಾಗಳನ್ನು ಬ್ಯಾನ್ ಮಾಡಬೇಕು ಎನ್ನುವ ಆಕ್ರೋಶ ವ್ಯಕ್ತವಾಗುತ್ತಿತ್ತು. ಚಿತ್ರಗಳಲ್ಲಿ ವಿಚಿತ್ರ ರೀತಿಯ ಶಬ್ಧಗಳು, ಚಿತ್ರ ವಿಚಿತ್ರ ಪದಗಳು, ರಿಯಲ್ಲು ರಿಯಲ್ಲು ಎಂದು ಉಪೇಂದ್ರ ಪ್ರದರ್ಶಿಸಿದ ಧೈರ್ಯವನ್ನು ಮೆಚ್ಚಿಕೊಳ್ಳಲೇಬೇಕು. ಗಣೇಶನಿಗೆ ಗನ್ ತೋರಿಸುವುದು, ಗಣೇಶನನ್ನು ಬಾವಿಗೆ ಎತ್ತಿ ಹಾಕಿ ಐಯಾಮ್ ಗಾಡ್ ಎಂದು ಸುತ್ತಾಡುವುದು ಹೀಗೆ 'ಎ' ಸಿನಿಮಾದಲ್ಲಿ ಸದ್ದು ಮಾಡಿದ್ದರು.

ಬಳಿಕ ಬಂದ ಉಪೇಂದ್ರ ಕೂಡ ಪಕ್ಕಾ ರಿಯಲ್ ಸ್ಟಾರ್ ಶೈಲಿಯ ಸಿನಿಮಾ ಆಗಿತ್ತು. ಬೇಸಿಗೆಕಾಲ, ಮಳೆಗಾಲ, ಚಳಿಗಾಲ ಹೀಗೆ 3 ಕಾಲಗಳನ್ನು ಪ್ರತಿನಿಧಿಸುವ ರೀತಿ ಮೂವರು ನಾಯಕಿಯರು ಕಾಣಿಸಿಕೊಂಡಿದ್ದರು. ದಾಮಿನಿ, ರವೀನಾ ಟಂಡನ್ ಜೊತೆ ಪ್ರೇಮಾ ಮಿಂಚಿದ್ದರು. ಅದರಲ್ಲೂ ಪ್ರೇಮಾ ಪಾತ್ರ ಬಹಳ ಹೈಲೆಟ್ ಆಗಿತ್ತು. ಅದರಲ್ಲೂ ಒಂದು ಸನ್ನಿವೇಶದ ಬಗ್ಗೆ ಖುದ್ದು ಪ್ರೇಮಾ ಅವರಿಗೂ ಬೇಸವಿದೆ. ಆದರೆ ಅಂದು ಧೈರ್ಯವಾಗಿ ನಟಿಸಿದ್ದರು.
ಸದ್ಯ ರಾಜೇಶ್ ಗೌಡ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ನಟಿ ಪ್ರೇಮಾ, 'ಉಪೇಂದ್ರ' ಸಿನಿಮಾ ಚಿತ್ರೀಕರಣದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಆ ಚಿತ್ರದಲ್ಲಿ ಪ್ರೇಮಾ ವೇಶ್ಯೆಯ ಪಾತ್ರ ಮಾಡಿದ್ದರು. ಈ ಬಗ್ಗೆ ಮಾತನಾಡುತ್ತಾ "ನನಗೆ ಉಪೇಂದ್ರ ಅವರು ಕಥೆ ಹೇಳಿದಾಗ ಹೋಮ್ಲಿ ಕ್ಯಾರೆಕ್ಟರ್ ಎಂದು ಹೇಳಿದ್ದರು. ಆದರೆ ಡಿಟೈಲ್ ಆಗಿ ಕಥೆಯನ್ನು ವಿವರಿಸಿರಲಿಲ್ಲ. ಉಪೇಂದ್ರ ಅವರು ಹೇಳುತ್ತಿದ್ದಾರೆ ಅಂದ್ರೆ ಏನೋ ವಿಶೇಷತೆ ಇರುತ್ತದೆ ಆ ಕ್ಯಾರೆಕ್ಟರ್‌ನಲ್ಲಿ ಎಂದುಕೊಂಡೆ"
"ಅದನ್ನು ನಾನು ವೇಶ್ಯೆಯ ಪಾತ್ರ ಎಂದು ಹೇಳಲ್ಲ. ಅದೊಂದು ಪಾತ್ರ. ಹಿಂದಿನ ಎಲ್ಲಾ ಸಿನಿಮಾಗಳನ್ನು ನೋಡಿದಾಗ ಇದೊಂದು ವಿಭಿನ್ನ ಸಿನಿಮಾ, ಪಾತ್ರ ಆಗಿತ್ತು. ಕೆಲವರು ಬೈಯ್ಯಬಹುದು, ಕೆಲವರು ಹೊಗಳಬಹುದು, ಕೆಲವರು ಇನ್ನೊಂದು ರೀತಿ ಆಡಿಕೊಳ್ಳಬಹುದು. ಚಿತ್ರೀಕರಣದಲ್ಲಿ 15 ಸಾವಿರ ಎಂದಾಗ್ಲೇ ನಾನು ಹೆದರಿಕೊಂಡೆ ನಟಿಸಿದ್ದೆ. ಯಾಕಂದ್ರೆ ಇದನ್ನು ಜನ ಒಪ್ತಾರಾ ಎನ್ನುವ ಆಲೋಚನೆ ನನಗಿತ್ತು. ಯಾಕಂದ್ರೆ ಅಲ್ಲಿವರೆಗೂ ನಾನು ಮಾಡಿದ್ದ ಪಾತ್ರಗಳೇ ಬೇರೆ. ಇದು ಸಂಪೂರ್ಣ ವಿಭಿನ್ನ"
"15 ಸಾವಿರ ಎಂದಾಗ್ಲೇ ನಾನು ಬೆವತ್ತಿದ್ದೆ. ಆದರೂ ಒಂದು ಸವಾಲಾಗಿ ಸ್ವೀಕರಿಸಿದೆ. ಈ ಪಾತ್ರದಲ್ಲಿ ಏನೋ ಇದೆ ಎನಿಸಿತು. ಮಾಡ್ತಾ ಮಾಡ್ತಾ ಅನ್ನಿಸಿತು. ಒಂದು ಹೆಣ್ಣು ಎಷ್ಟು ಕಷ್ಟಪಡಬೇಕು, ಆಕೆ ಎಲ್ಲೇ ಹೋದರೂ ಮೇಲಿಂದ ಕೆಳಗಿನವರೆಗೆ ನೋಡ್ತಾರೆ, ಅದು ರಿಯಾಲಿಟಿ. ಹಾಗಾಗಿ ಈ ಪಾತ್ರದಲ್ಲಿ ಏನೋ ಇದೆ ಅಂತ ಮಾಡ್ದೆ. ಆದರೆ ಪಾತ್ರ ಮಾಡುವಾಗ ಹಿನ್ನೆಲೆಯಲ್ಲಿ ಕುಚು ಕುಚು ಎನ್ನುವ ಶಬ್ಧ ಇದೆಯಲ್ಲಾ, ಅದು ಕೇಳಿ ಅವಕ್ಕಾಗಿದ್ದೆ"

"ಉಪೇಂದ್ರ ಸಿನಿಮಾ ಬಂದಮೇಲೆ ತುಂಬಾ ಜನ ಬೈದವರು ಇದ್ದಾರೆ. ತುಂಬಾ ಹೊಗಳಿದವರು ಇದ್ದಾರೆ. ಕೆಲವೊಮ್ಮೆ ಗೊಂದಲದಲ್ಲಿ ತೆಗೆದುಕೊಳ್ಳುವ ನಿರ್ಧಾರ ಪ್ಲಸ್ ಆಗುತ್ತದೆ. ನನಗೆ ರಿಗ್ರೆಟ್ ಇಲ್ಲ. 'ಚಾಂದಿನಿ ಬಾರ್' ಚಿತ್ರದಲ್ಲಿ ಟಬು ನಟಿಸಿದಾಗ ಅದು ಬಹಳ ಚಾಲೆಂಜಿಂಗ್ ಆಗಿತ್ತು. 'ಉಪೇಂದ್ರ' ಸಿನಿಮಾದಿಂದ ನನ್ನ ಕರಿಯರ್‌ಗೂ ಎಫೆಕ್ಟ್ ಆಗಿತ್ತು. ಖ್ಯಾತ ನಿರ್ದೇಶಕರು ಸಿನಿಮಾದಿಂದ ರಿಜೆಕ್ಟ್ ಮಾಡಿದ್ದರು. ನಾನು ಪರವಾಗಿಲ್ಲ ಎಂದು ಕಾಯುತ್ತಿದ್ದೆ. ಅದೇ ಸಮಯದಲ್ಲಿ 'ಯಜಮಾನ' ಚಿತ್ರ ಸಿಕ್ತು"
ಬಳಿಕ 'ರಕ್ತಕಣ್ಣೀರು', 'ಅನಾಥರು' ಸಿನಿಮಾಗಳ ಆಫರ್ ಬಂದಾಗ ನಾನು ಒಪ್ಪಿರಲಿಲ್ಲ. ಕಾರಣ ನನಗೆ ಚಾಲೆಂಜಿಂಗ್ ಪಾತ್ರಗಳು ಬೇಕಿತ್ತು. ನಾನು ಹೊಸ ತರಹದ ಪಾತ್ರಗಳ ಅನ್ವೇಷಣೆಯಲ್ಲಿದ್ದೆ. ಹಾಗಾಗಿ ಒಪ್ಪಲಿಲ್ಲ ಎಂದು ನಟಿ ಪ್ರೇಮಾ ವಿವರಿಸಿದ್ದಾರೆ.


Click it and Unblock the Notifications











