45 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಈ ಚಿತ್ರ ಗಳಿಸಿದ್ದು ಕೇವಲ ₹60,000. ಸೇಲಾದ ಟಿಕೆಟ್ ಸಂಖ್ಯೆ 500 ಮಾತ್ರ..!
ಸಿನಿಮಾ ಮಾಡುವುದು ಸುಲಭ ಅಲ್ಲ. ಅದೊಂದು ತಪಸ್ಸು. ಆದರೆ ಇದನ್ನರಿಯದ ಅನೇಕರು ಎಲ್ಲರ ಮುಂದೆ ಅಕಿರಾ ಕುರಸೋವಾನ ಶಿಷ್ಯರೆಂಬಂತೆ ಪೋಸು ಕೊಡುತ್ತಾರೆ. ಸಂತೆಯ ಹೊತ್ತಿಗೆ ಮೂರು ಮೊಳ ನೇಯ್ದಂತೆ ರೀಲು ಸುತ್ತಿ ಬಿಸಾಕುತ್ತಾರೆ. ಹೀಗೆ ಮಾಡುವ ಕೆಲ ಚಿತ್ರಗಳು ಯಾವ ಮಟ್ಟಿಗೆ ಖರಾಬಾಗಿರುತ್ತಾವೆ ಎಂದರೆ ಪ್ರೇಕ್ಷಕರ ಪಾಡು ಹೇಳತೀರದು. ಇನ್ನೂ ನಿರ್ಮಾಪಕರ ಕಥೆ ದೇವರಿಗೆ ಗೊತ್ತು. ಇದಕ್ಕೆ ಒಂದು ಉದಾಹರಣೆ ' ದಿ ಲೇಡಿ ಕಿಲ್ಲರ್' ಚಿತ್ರ
ಹೌದು, ಲೇಡಿ ಕಿಲ್ಲರ್ .. 2023ರಲ್ಲಿ ಬಂದ ಚಿತ್ರ. ಹಾಲಿವುಡ್‌ನಲ್ಲಿ ಇರಬೇಕಾಗಿದ್ದ ಬಾಲಿವುಡ್ ಹೀರೋ ಅರ್ಜುನ್ ಕಪೂರ್ ಅಭಿನಯದ ಚಿತ್ರ ಇದು. ಒಂದ್ಕಾಲದಲ್ಲಿ ಗಜಗಾಮಿನಿಯಂತೆ ಇದ್ದ ಭೂಮಿ ಫೆಡ್ನೇಕರ್ ಈ ಚಿತ್ರದ ನಾಯಕಿ. ಅಜಯ್ ಬಹ್ಲ್ ನಿರ್ದೇಶನದ ಈ ಅದ್ಭುತ ಕೃತಿಗೆ ನಿರ್ಮಾಪಕ ಭೂಷಣ್ ಕುಮಾರ್ ಹತ್ತು .. ಇಪ್ಪತ್ತಲ್ಲ .. ನಲವತ್ತೈದು ಕೋಟಿ ಹಣವನ್ನು ನೀರಿನಂತೆ ಸುರಿದಿದ್ದರು.

ಆದರೆ, ದೌರ್ಭಾಗ್ಯ ನಲವತ್ತೈದು ಕೋಟಿ ಹಣ ಹೂಡಿದ ನಿರ್ಮಾಪಕ ಭೂಷಣ್ ಕುಮಾರ್ ಕೈಗೆ ಒಂದು ಲಕ್ಷ ಕೂಡ ಮರಳಿ ಬರಲಿಲ್ಲ. ಹೌದು, ಇದು ನಿಮಗೆ ಅಚ್ಚರಿ ಅನಸಿದರೂ ಇದು ನಿಜಾ. ನಲವತ್ತೈದು ಕೋಟಿ ಹಣದಲ್ಲಿ ನಿರ್ಮಾಣವಾದ ಈ ಕ್ರೈಮ್ ಥ್ರಿಲ್ಲರ್ ಚಿತ್ರ ದಿ ಲೇಡಿ ಕಿಲ್ಲರ್ ಮೊದಲ ದಿನ ಒಂದು ಲಕ್ಷವನ್ನು ಕೂಡ ಗಳಿಸಲಿಲ್ಲ. ಬದಲಿಗೆ ಗಳಿಸಿದ್ದು ಕೇವಲ ಅರವತ್ತು ಸಾವಿರ ಮಾತ್ರ. ಇನ್ನೂ.. ಮೊದಲ ದಿನ ಈ ಚಿತ್ರವನ್ನು ಭಾರತದೆಲ್ಲೆಡೆ ಕೇವಲ 293 ಜನ ನೋಡಿದ್ದರು. ಚಿತ್ರ ಚಿತ್ರಮಂದಿರದಿಂದ ಎತ್ತಂಗಡಿಯಾಗುವ ಮುನ್ನ ಸೇಲಾದ ಟಿಕೆಟ್‌ಗಳ ಸಂಖ್ಯೆ ಕೇವಲ 500 ಮಾತ್ರ.
ಹೀಗೆ ಬಾಲಿವುಡ್ ಇತಿಹಾಸದಲ್ಲಿಯೇ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗದಲ್ಲಿಯೇ ಕಳಪೆ ಪ್ರದರ್ಶನ ಕಂಡ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾದ ಈ ಚಿತ್ರದ ಈ ಸೋಲಿಗೆ ನಿರ್ಮಾಪಕ ಮತ್ತು ನಿರ್ದೇಶಕರೇ ಪರೋಕ್ಷ ಕಾರಣ ಎನ್ನುವುದು ಇನ್ನೊಂದು ದುರಂತ. ಹೌದು, ಅಸಲಿಗೆ ಭೂಷಣ್ ಕುಮಾರ್ ಓಟಿಟಿಯ ದೈತ್ಯ ನೆಟ್‌ಪ್ಲಿಕ್ಸ್ ಜೊತೆ ಒಪ್ಪಂದ ಮಾಡಿಕೊಂಡಿದ್ದರು. ಈ ಒಪ್ಪಂದದ ಪ್ರಕಾರ ಡಿಸೆಂಬರ್‌ನಲ್ಲಿ ಚಿತ್ರವನ್ನು ಪ್ರಸಾರ ಮಾಡಲು ನೆಟ್‌ಪ್ಲಿಕ್ಸ್ ಸಂಸ್ಥೆ ಒಪ್ಪಿಕೊಂಡಿತ್ತು. ಆದರೆ ಅದಕ್ಕೆ ನಿಮ್ಮ ಚಿತ್ರವನ್ನು ನೀವು ನವೆಂಬರ್‌ನಲ್ಲಿ ಬಿಡುಗಡೆ ಮಾಡಬೇಕೆಂಬ ಷರತ್ತನ್ನು ಹಾಕಿತ್ತು.
ಈ ಷರತ್ತನ್ನೇನೋ ಭೂಷಣ್ ಕುಮಾರ್ ಒಪ್ಪಿಕೊಂಡಿದ್ದರು. ಆದರೆ ನಿರ್ದೇಶಕ ಅಜಯ್ ಬಹ್ಲ್ ಚಿತ್ರದ ಚಿತ್ರೀಕರಣವನ್ನೇ ಮುಗಿಸಿರಲಿಲ್ಲ. ಚಿತ್ರದ ಕ್ಲೈಮ್ಯಾಕ್ಸ್ ಸೆರೆ ಹಿಡಿದಿರಲಿಲ್ಲ. ಈ ಕಾರಣಕ್ಕೆ ಆತುರಾತುರವಾಗಿ ಚಿತ್ರವನ್ನು ಮುಗಿಸಿದ ಭೂಷಣ್ ಕುಮಾರ್ ಮತ್ತು ಅಜಯ್ ಬಹ್ಲ್ ಚಿತ್ರವನ್ನು ಬಿಡುಗಡೆ ಮಾಡಿದ್ದರು. ಅರ್ಜುನ್ ಕಪೂರ್ ಮತ್ತು ಭೂಮಿ ಫೆಡ್ನೇಕರ್ ಅವರಿಗೆ ಪ್ರಚಾರ ಮಾಡಲು ಕೂಡ ಅವಕಾಶ ನೀಡದೇ ರಿಲೀಸ್ ಮಾಡಿದ್ದರು.
ಆದರೆ, ಚಿತ್ರಕ್ಕೆ ಚಿತ್ರಮಂದಿರದಲ್ಲಿ ಸಿಕ್ಕ ಪ್ರತಿಕ್ರಿಯೆ ಮತ್ತು ಸೇಲಾದ ಟಿಕೆಟ್‌ಗಳ ಸಂಖ್ಯೆ ನೋಡಿ ಬೆಚ್ಚಿ ಬಿದ್ದ ನೆಟ್‌ಪ್ಲಿಕ್ಸ್ ಆ ನಂತರ ಭೂಷಣ್ ಕುಮಾರ್ ಜೊತೆ ಮಾಡಿಕೊಂಡಿದ್ದ ಒಪ್ಪಂದವನ್ನು ಮುರಿದುಕೊಂಡಿದೆ. ಚಿತ್ರವನ್ನು ಕೊಂಡುಕೊಳ್ಳಲು ನಿರಾಕರಿಸಿದೆ. ಇದ್ರಿಂದ ಕಂಗಾಲಾದ ನಿರ್ಮಾಪಕ ಭೂಷಣ್ ಕುಮಾರ್ ಆ ನಂತರ ಬೇರೆ ಕಡೆ ಚಿತ್ರವನ್ನು ಮಾರುವ ಪ್ರಯತ್ನ ಮಾಡಿದ್ದಾರೆ. ಆ ಪ್ರಯತ್ನದಲ್ಲಿ ಇವತ್ತು ಕೂಡ ಭೂಷಣ್ ಕುಮಾರ್‌ಗೆ ಯಶಸ್ಸು ಸಿಗಲಿಲ್ಲ. ಹೀಗಾಗಿಯೇ ಹರುಷದ ಕೂಳಿಗೆ ವರುಷದ ಕೂಳು ಕಳೆದುಕೊಂಡ ಬೇಸರ ಮತ್ತು ನೋವಲ್ಲಿಯೇ ಭೂಷಣ್ ಕುಮಾರ್ ಚಿತ್ರವನ್ನು ಯೂಟ್ಯೂಬ್‌ನಲ್ಲಿ ಉಚಿತವಾಗಿ ಬಿಡುಗಡೆ ಮಾಡಿದ್ದಾರೆ. ಇಲ್ಲಿ ಹೆಚ್ಚು ಕಡಿಮೆ 2.5 ಮಿಲಿಯನ್ ವೀಕ್ಷಣೆಯನ್ನು ಚಿತ್ರ ಕಂಡಿದೆ ಆದರೂ ಅನೇಕರು ಈ ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡದೇ ಇದ್ದಿದ್ದೇ ಒಳ್ಳೆಯದಾಯಿತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


Click it and Unblock the Notifications











