ದರ್ಶನ್ ನಟನೆಯ 'ಚಿಂಗಾರಿ' ಸಿನಿಮಾ ಬಜೆಟ್ ಎಷ್ಟಾಗಿತ್ತು? ನಿರ್ಮಾಪಕರಿಗೆ ಬಂದಿದ್ದ ಲಾಭ ಎಷ್ಟು?
ಚಿತ್ರರಂಗದಲ್ಲಿ ಕಲೆಕ್ಷನ್, ಬಜೆಟ್, ರೆಮ್ಯೂನರೇಷನ್ ವಿಚಾರಗಳೆಲ್ಲಾ ಗುಟ್ಟಾಗಿ ಇರುತ್ತದೆ. ಅಧಿಕೃತವಾಗಿ ಈ ಬಗ್ಗೆ ಯಾರು ಲೆಕ್ಕ ಕೊಡಲ್ಲ. ಒಂದು ವೇಳೆ ಬಜೆಟ್, ಕಲೆಕ್ಷನ್ ಬಗ್ಗೆ ಮಾತನಾಡಿದ್ರು ಬಂದ ಲಾಭದ ಬಗ್ಗೆ ನಿರ್ಮಾಪಕರು ಬಾಯಿಬಿಡಲ್ಲ. 13 ವರ್ಷಗಳ ಹಿಂದೆ ದರ್ಶನ್ ನಟನೆಯ 'ಚಿಂಗಾರಿ' ಸಿನಿಮಾ ಬಂದಿತ್ತು.
ಎ. ಹರ್ಷ ನಿರ್ದೇಶನದ 'ಚಿಂಗಾರಿ' ಸಿನಿಮಾ ಹಿಟ್ ಆಗಿತ್ತು. ದರ್ಶನ್ ಜೋಡಿಯಾಗಿ ದೀಪಿಕಾ ಕಾಮಯ್ಯ ನಟಿಸಿದ್ದರು. ಮಹಾಶೈಲ ಸಿನಿ ಸಂಕುಲ ಬ್ಯಾನರ್ ಅಡಿಯಲ್ಲಿ ಬಿ. ಮಹಾದೇವು ಎಂಬುವವರು ಸಿನಿಮಾ ನಿರ್ಮಾಣ ಮಾಡಿದ್ದರು. ಹಾಲಿವುಡ್ 'ಟೇಕನ್' ಚಿತ್ರದಿಂದ ಪ್ರೇರಣೆಗೊಂಡು ಚಿತ್ರ ಕಟ್ಟಿಕೊಟ್ಟಿದ್ದರು. ವಿ. ಹರಿಕೃಷ್ಣ ಸಂಗೀತದಲ್ಲಿ ಚಿತ್ರದ ಆಲ್ಬಮ್ ಹಿಟ್ ಆಗಿತ್ತು.

'ಸಾರಥಿ' ಸಕ್ಸಸ್ ಬೆನ್ನಲ್ಲೇ 'ಚಿಂಗಾರಿ' ಸಿನಿಮಾ ಬಂದು ಗೆದ್ದಿತ್ತು. ಎರಡನೇ 140ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡಿತ್ತು. ಮೊದಲ ವಾರವೇ 6 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿತ್ತು. ಅವತ್ತಿನ ಕಾಲಕ್ಕೆ ಅದು ದೊಡ್ಡ ಕಲೆಕ್ಷನ್ ಎನಿಸಿಕೊಂಡಿತ್ತು. ಸದ್ಯ ಅವತ್ತಿನ ಕಾಲಕ್ಕೆ 'ಚಿಂಗಾರಿ' ಸಿನಿಮಾ ಲಾಭ ತಂದುಕೊಟ್ಟಿತ್ತು ಎಂದು ನಿರ್ಮಾಪಕ ಮಹಾದೇವ್ ನೆನಪಿಸಿಕೊಂಡಿದ್ದಾರೆ. ಡೈಲಿ ಮಾಧ್ಯಮ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ.
'ಶಿಶಿರ' ಸಿನಿಮಾ ಮೂಲಕ ಮಹಾದೇವ್ ಚಿತ್ರರಂಗ ಪ್ರವೇಶಿಸಿದ್ದರು. 1 ಕೋಟಿ 80 ಲಕ್ಷ ಬಜೆಟ್‌ನಲ್ಲಿ ಈ ಸಿನಿಮಾ ಮಾಡಿ ಕೈಸುಟ್ಟುಕೊಂಡಿದ್ದಾಗಿ ಅವರು ಹೇಳಿದ್ದಾರೆ. ಬಳಿಕ 'ಚಿಂಗಾರಿ' ಸಿನಿಮಾ ಮಾಡಿದ್ದಾಗಿ ಮೆಲುಕು ಹಾಕಿದ್ದಾರೆ. ಅವತ್ತಿನ ಕಾಲಕ್ಕೆ 9 ಕೋಟಿ ರೂ. ಬಜೆಟ್‌ನಲ್ಲಿ 'ಚಿಂಗಾರಿ' ಸಿನಿಮಾ ನಿರ್ಮಾಣ ಮಾಡಿದ್ದೆವು. 3 ಕೋಟಿ ರೂ. ಲಾಭ ತಂದುಕೊಟ್ಟಿತ್ತು. ಎ. ಹರ್ಷ ಅಸೋಸಿಯೇಟ್ ಲಕ್ಷ್ಮಣ್ ನನ್ನ ಬಳಿಕೆ ಕರ್ಕೊಂಡ್ ಬಂದಿದ್ದು ಕಥೆ ಕೇಳಿದ ಮೇಲೆ ದರ್ಶನ್ ಒಪ್ಪಿದ್ದಾರೆ ಎಂದರು.

'ಶಿಶಿರ' ಚಿತ್ರಕ್ಕೆ ಬಹಳ ಅದ್ಧೂರಿಯಾಗಿ ಪ್ರಮೋಷನ್ ಮಾಡಿದ್ದೆ. ದೊಡ್ಡದಾಗಿ ಕಟೌಟ್ ಹಾಕಿದ್ದೆವು. ನಾಯಕಿಗೆ ಕಟೌಟ್ ಹಾಕುವುದು ಸುಲಭವಲ್ಲ. ಅದನ್ನು ನೋಡಿ ದರ್ಶನ್ ಕಾಲ್‌ಶೀಟ್ ಕೊಟ್ಟಿದ್ದರು. ಸ್ವಿಟ್ಜರ್‌ಲ್ಯಾಂಡ್ ಹಾಗೂ ಬ್ಯಾಂಕಾಕ್‌ನಲ್ಲಿ ಚಿತ್ರೀಕರಣ ನಡೆದಿತ್ತು ಎಂದು ಮಹಾದೇವ್ ಹೇಳಿದ್ದಾರೆ.
'ಶಿಶಿರ' ಹಾಗೂ 'ಚಿಂಗಾರಿ' ಬಳಿಕ ನಿರ್ಮಾಪಕ ಮಹಾದೇವ್ 'ಶ್ರೀಕಂಠ' ಸಿನಿಮಾ ನಿರ್ಮಿಸಿದ್ದರು. 3 ಸಿನಿಮಾಗಳ ಬಳಿಕ ಪುನೀತ್ ರಾಜ್‌ಕುಮಾರ್ ಜೊತೆ ಸಿನಿಮಾ ಮಾಡಲು ಬಯಸಿದ್ದರು. ಆ ಬಗ್ಗೆ ಚರ್ಚೆ ಕೂಡ ನಡೆಸಿದ್ದರು. ಆದರೆ ಸಿನಿಮಾ ಮಾಡುವ ಪ್ರಯತ್ನ ಕನಸಾಗಿಯೇ ಉಳಿಯಿತು. ಅಪ್ಪು ಬಹಳ ಸರಳ ಸಜ್ಜನ ವ್ಯಕ್ತಿತ್ವದವರು. ಸಿನಿಮಾ ಮಾಡೋಣ ಎನ್ನುತ್ತಿದ್ದರು. ಒಂದಿಬ್ಬರು ನಿರ್ದೇಶಕರ ಹೆಸರು ಹೇಳಿದ್ದರು. ಅವರು ಕಥೆ ಮಾಡಿಕೊಂಡು ಬಂದ್ರೆ ಕಂಡಿತ ಸಿನಿಮಾ ಮಾಡೋಣ ಅಂದಿದ್ರು ಎಂದು ಮಹಾದೇವ್ ವಿವರಿಸಿದ್ದಾರೆ.
ಶಿವರಾಜ್‌ಕುಮಾರ್ ನಟನೆಯ 'ಶ್ರೀಕಂಠ' ಸಿನಿಮಾ ಸೋಲಿನ ಬಗ್ಗೆ ಕೂಡ ಮಹಾದೇವ್ ಮಾತನಾಡಿದ್ದಾರೆ. ಸಿನಿಮಾ ನೋಡಿದಾಗಲೇ ಸ್ಲೋ ಅಂತ ನನಗೆ ಅನ್ನಿಸಿತ್ತು. ಗೆಲ್ಲಲ್ಲ ಎನ್ನುವ ಅನುಮಾನ ಇತ್ತು. ಚಿತ್ರೀಕರಣದ ವೇಳೆ ಶಿವಣ್ಣ ಸಹಕಾರ ಬಹಳ ಚೆನ್ನಾಗಿತ್ತು. ನಿರ್ಮಾಪಕರ ಡಾರ್ಲಿಂಗ್ ಅವರು. ಇವತ್ತಿಗೂ ಸಿನಿಮಾ ಮಾಡುವ ಆಸೆ ಇದೆ. ಒಳ್ಳೆ ಕಥೆ ಸಿಕ್ಕರೆ ಕಂಡಿತ ಸಿನಿಮಾ ನಿರ್ಮಾಣ ಮಾಡ್ತೀನಿ ಎಂದು ಮಹಾದೇವ್ ಹೇಳಿದ್ದಾರೆ.
ಕೋವಿಡ್ ಬಳಿ ಸಿನಿಮಾ ನೋಡುವ ರೀತಿ ಬದಲಾಗಿದೆ. ಜನ ಓಟಿಟಿಯಲ್ಲೇ ಹೆಚ್ಚು ಸಿನಿಮಾ ನೋಡಲು ಬಯಸುತ್ತಿದ್ದಾರೆ. ಜನರ ನಾಡಿಮಿಡಿತ ಅರಿಯುವುದು ಕಷ್ಟ. ಒಳ್ಳೆ ಸಿನಿಮಾಗಳು ಸೋಲಲ್ಲ. 'ದಿಯಾ' ಸಿನಿಮಾ ಚೆನ್ನಾಗಿತ್ತು. ಚಿತ್ರಮಂದಿರಗಳಲ್ಲಿ ಆ ಸಿನಿಮಾ ಗೆಲ್ಲಲಿಲ್ಲ. ಓಟಿಟಿಯಲ್ಲಿ ಚೆನ್ನಾಗಿ ಹೋಯಿತು ಎಂದು ಮಹಾದೇವ್ ವಿಶ್ಲೇಷಿಸಿದ್ದಾರೆ.


Click it and Unblock the Notifications











