ವಿಷ್ಣು- ಪ್ರೇಮಾ ಜೋಡಿಯ 'ಪರ್ವ' ಚಿತ್ರದ ಬಜೆಟ್ ಎಷ್ಟು? ಕಲೆಕ್ಷನ್ ಎಷ್ಟಾಗಿತ್ತು?
20 ವರ್ಷಗಳ ಹಿಂದೆ ಸಾಹಸಸಿಂಹ ವಿಷ್ಣುವರ್ಧನ್ ಸಿನಿಮಾಗಳ ಕ್ರೇಜ್ ಉತ್ತುಂಗಕ್ಕೆ ಏರಿತ್ತು. 'ಯಜಮಾನ', 'ಕೋಟಿಗೊಬ್ಬ' ರೀತಿಯ ಬ್ಲಾಕ್‌ಬಸ್ಟರ್ ಸಿನಿಮಾಗಳು ಬಂದಿದ್ದ ಸಮಯ ಅದು. ಆಗ 'ಪರ್ವ' ಸಿನಿಮಾ ಕೂಡ ಬಂದಿತ್ತು. ಮ್ಯೂಸಿಕಲಿ ಸಖತ್ ಸದ್ದು ಮಾಡಿದ್ದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು.
'ತರ್ಕ', 'ಉತ್ಕರ್ಷ', 'ಬೆಳದಿಂಗಳ ಬಾಲೆ', 'ನಮ್ಮೂರ ಮಂದಾರ ಹೂವೆ' ಹಾಗೂ 'ಸ್ಪರ್ಶ' ರೀತಿಯ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿದ್ದ ಸುನೀಲ್ ಕುಮಾರ್ ದೇಸಾಯಿ 'ಪರ್ವ' ಚಿತ್ರದ ಸಾರಥಿ. ಹಂಸಲೇಖ ಸಂಗೀತ ಹಾಗೂ ಸಾಹಿತ್ಯ ಈ ಚಿತ್ರಕ್ಕಿತ್ತು. 'ನಮ್ಮೂರ ಮಂದಾರ ಹೂವೆ' ಬಳಿಕ ದೇಸಾಯಿ ಅವರ ಮತ್ತೊಂದು ಮ್ಯೂಸಿಕಲ್ ಎಕ್ಸ್‌ಪೆರಿಮೆಂಟ್ ಇದಾಗಿತ್ತು. ಭಾರೀ ಕ್ರೇಜ್ ಹುಟ್ಟಾಕ್ಕಿದ್ದ ಸಿನಿಮಾ ನಿರಾಸೆ ಮೂಡಿಸಿತ್ತು.

ಶಿಲ್ಪಾ ಶ್ರೀನಿವಾಸ್ 'ಪರ್ವ' ಚಿತ್ರವನ್ನು ನಿರ್ಮಾಣ ಮಾಡಿದ್ದರು. ವಿಷ್ಣವರ್ಧನ್ ಜೋಡಿಯಾಗಿ ಪ್ರೇಮಾ ನಟಿಸಿದ್ದರು. ಇನ್ನು ರೋಜಾ, ರಮೇಶ್ ಭಟ್, ರಾಧಾ ರವಿ, ಭಾವನಾ, ನವೀನ್ ಮಯೂರ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿತ್ತು. ಬಾಲನಟಿಯಾಗಿ ಅಮೂಲ್ಯ ನಟಿ ಮಿಂಚಿದ್ದರು. 'ಪರ್ವ' ಚಿತ್ರದ ಫಲಿತಾಂಶದ ಬಗ್ಗೆ ಡೈಲಿ ಮಾಧ್ಯಮ ಯೂಟ್ಯೂಬ್ ಸಂದರ್ಶನದಲ್ಲಿ ನಿರ್ಮಾಪಕ ಶಿಲ್ಪಾ ಶ್ರೀನಿವಾಸ್ ಮಾತನಾಡಿದ್ದಾರೆ.
"ಪರ್ವ ಸಿನಿಮಾ ನನಗೆ ಸೂಟ್ ಆಗುತ್ತಾ ಅಂತ ಸ್ವತಃ ವಿಷ್ಣುವರ್ಧನ್ ಹೇಳುತ್ತಿದ್ರು. 'ಯಜಮಾನ' ಹಾಗೂ 'ಕೋಟಿಗೊಬ್ಬ' ರೀತಿಯ ಸಿನಿಮಾಗಳಲ್ಲಿ ನನ್ನನ್ನು ಜನ ನೋಡಿದ್ದಾರೆ. ಇದು ಆಗುತ್ತಾ ಎಂದಿದ್ದರು. ಇದು 'ದಿಲ್ ತೋ ಪಾಗಲ್ ಹೈ' ರೀತಿಯ ಸಿನಿಮಾ ಎಂದು ದೇಸಾಯಿ ಅವರು ಹೇಳಿದ್ದರು. ಒಳ್ಳೆ ಕಾಂಬಿನೇಷನ್ ಸಿನಿಮಾ, ಚೆನ್ನಾಗಿ ಆಗುತ್ತದೆ ಎಂದು ಧೈರ್ಯದಿಂದ ನಾವು ಸಿನಿಮಾ ಮಾಡಿದ್ದೆವು" ಎಂದು ಶಿಲ್ಪಾ ಶ್ರೀನಿವಾಸ್ ನೆನಪಿಸಿಕೊಂಡಿದ್ದಾರೆ.
ಬಹಳ ಅದ್ಧೂರಿಯಾಗಿಯೇ 'ಪರ್ವ' ಸಿನಿಮಾ ಮಾಡಿದ್ದೆವು. ಆದರೆ ಜನರಿಗೆ ಇಷ್ಟವಾಗಲಿಲ್ಲ ಎಂದು ನಿರ್ಮಾಪಕರು ತಿಳಿಸಿದ್ದಾರೆ. "ಬಹಳ ಶ್ರೀಮಂತವಾಗಿ ಸಿನಿಮಾ ಕಟ್ಟಿಕೊಟ್ಟಿದ್ದೆವು. ವಿಷ್ಣುವರ್ಧನ್ ಅವರನ್ನು ಸೊಗಸಾಗಿ ತೋರಿಸಿದ್ದೆವು. ಕ್ರೇಜ್ ಚೆನ್ನಾಗಿ ಇತ್ತು. 'ಯಜಮಾನ' ರೈಟ್ಸ್ ಕೇಳಿದ್ದವರೇ ಈ ಚಿತ್ರದ ರೈಟ್ಸ್ ಕೇಳಿದ್ದರು. ಆದರೆ ನಾನೇ ವಿತರಣೆ ಮಾಡಿದ್ದೆ. ಆದರೆ ಆವರೇಜ್ ಆಯಿತು" ಎಂದು ಶ್ರೀನಿವಾಸ್ ತಿಳಿಸಿದ್ದಾರೆ.

'ಪರ್ವ' ಸಿನಿಮಾ ಸದ್ದು ಮಾಡದೇ ಇದ್ದರೂ ಹೇಗೋ ದೊಡ್ಡ ನಷ್ಟದಿಂದ ಪಾರಾಗಿದ್ದಾಗಿಯೂ ಶ್ರೀನಿವಾಸ್ ಹೇಳಿದ್ದಾರೆ. "ಆಡಿಯೋ ರೈಟ್ಸ್ ಒಳ್ಳೆ ಮೊತ್ತಕ್ಕೆ ಮಾರಾಟವಾಗಿತ್ತು. ಹಾಗಾಗಿ ಹೇಗೋ ಸಿನಿಮಾ ಪರವಾಗಿಲ್ಲ ಎನಿಸಿಕೊಳ್ತು. ಆ ಕಾಲಕ್ಕೆ ಐದೂವರೆಯಿಂದ ಆರು ಕೋಟಿ ರೂ. ಬಜೆಟ್ ಸಿನಿಮಾ. ಮೂರು ಕೋಟಿ ವಾಪಸ್ ಬಂತು. ಆಡಿಯೋ ರೈಟ್ಸ್ ಜೊತೆ ಕೆಲ ಏರಿಯಾಗಳ ರೈಟ್ಸ್ ಮಾರಿದ್ದೆ. ಆದರೆ ನಮ್ಮ ನೆಚ್ಚಿನ ನಟ ವಿಷ್ಣುವರ್ಧನ್ ಜೊತೆ ಸಿನಿಮಾ ಮಾಡಿದ ಆಸೆ ಈಡೇರಿದಂತಾಯಿತು" ಎಂದು ವಿವರಿಸಿದ್ದಾರೆ.
ಹೆಚ್ಚು ಕಮ್ಮಿ 23 ವರ್ಷಗಳ ಹಿಂದೆ(ಜನವರಿ 18, 2002) 'ಪರ್ವ' ಸಿನಿಮಾ ಬಿಡುಗಡೆ ಆಗಿತ್ತು. ಹೆಚ್. ಸಿ ವೇಣು ಛಾಯಾಗ್ರಹಣ ಚಿತ್ರಕ್ಕಿತ್ತು. ಗಾಯಕ ಸಾಗರ್ ಪಾತ್ರದಲ್ಲಿ ವಿಷ್ಣುದಾದಾ ಮಿಂಚಿದ್ದರು. ಚಿತ್ರದಲ್ಲಿ ಒಟ್ಟು 8 ಹಾಡುಗಳು ಇದ್ದವು. ಇವತ್ತಿಗೂ ಈ ಹಾಡುಗಳು ಅಭಿಮಾನಿಗಳ ಫೇವರಿಟ್. ಇನ್ನು ಹಾಡಿನಿಂದಲೇ 'ಪರ್ವ' ಸಿನಿಮಾ ಆರಂಭವಾದರೆ ಹಾಡಿನಿಂದಲೇ ಸಿನಿಮಾ ಮುಕ್ತಾಯವಾಗುತ್ತದೆ. ಇದು ಹೊಸ ಪ್ರಯೋಗ ಆಗಿತ್ತು.
'ಪರ್ವ' ಚಿತ್ರ ಸೋತರೂ ಕೆಲವರಿಗೆ ಬಹಳ ಇಷ್ಟವಾಗಿತ್ತು. ಚಿತ್ರಮಂದಿರದಲ್ಲೇ ಎರಡ್ಮೂರು ಬಾರಿ ನೋಡಿದವರು ಇದ್ದಾರೆ. ವಿಷ್ಣು, ರೋಜಾ ನಟನೆ, ಹಂಸಲೇಖ ಸಂಗೀತ, ಎಸ್‌ಪಿಬಿ ಗಾಯನಕ್ಕೆ ಪ್ರೇಕ್ಷಕರ ಮನಸೋತಿದ್ದರು.


Click it and Unblock the Notifications











