ಅಣ್ಣಾವ್ರು ಕೂರಲು ಹೋದಾಗ ಕುರ್ಚಿ ಎಳೆದು ಬೀಳಿಸಿ ನಕ್ಕಿದ್ದ ಖ್ಯಾತ ನಟ ಯಾರು?
ನಟಸಾರ್ವಭೌಮ ರಾಜ್‌ಕುಮಾರ್ ಕನ್ನಡ ಚಿತ್ರರಂಗದ ಅನಭಿಷಿಕ್ತ ದೊರೆಯಾಗಿದ್ದರು. ಕನ್ನಡ ಚಿತ್ರರಂಗದಲ್ಲಿ ಮುತ್ತುರಾಜನನ್ನು ಮೀರಿಸುವಂತಹ ಮತ್ತೊಬ್ಬ ನಟ ಬರಲೇಯಿಲ್ಲ. ಚಿತ್ರರಂಗಕ್ಕೆ ಬಂದ ಆರಂಭದಲ್ಲಿ ನಟ ರಾಜ್‌ಕುಮಾರ್ ಸಾಕಷ್ಟು ಅವಮಾನಗಳನ್ನು ಎದುರಿಸಿದ್ದರು.
ಉದ್ದ ಮೂಗಿನ ಕಾರಣಕ್ಕೆ 'ಬೇಡರ ಕಣ್ಣಪ್ಪ' ಚಿತ್ರಕ್ಕೆ ಆಯ್ಕೆ ಮಾಡಲು ನಿರ್ಮಾಪಕ ಮೇಯಪ್ಪನ್ ಹಿಂದು ಮುಂದು ನೋಡಿದ್ದರು. ಬಳಿಕ ನಾಟಕದ ಹಿನ್ನೆಲೆಯಿಂದ ಬಂದಿರುವ ಮುತ್ತುರಾಜ್ ಬರೀ ಪೌರಾಣಿಕ, ಐತಿಹಾಸಿಕ ಸಿನಿಮಾಗಳಿಗೆ ಮಾತ್ರ ಲಾಯಕ್ಕು ಎಂದು ಕೆಲವರು ಹೇಳಿದ್ದರು. ಆದರೆ ಅದನ್ನೆಲ್ಲಾ ಮೀರಿ ರಾಜ್‌ಕುಮಾರ್ ಬೆಳೆದರು. ಸಾಮಾಜಿಕ ಮಾತ್ರವಲ್ಲ ಬಾಂಡ್ ಸಿನಿಮಾಗಳಲ್ಲಿ ಕೂಡ ನಟಿಸಿ ಮೋಡಿ ಮಾಡಿದರು.

ಹೆಚ್ಚು ಕಡಿಮೆ ರಾಜ್‌ಕುಮಾರ್ ಜೊತೆ ಜೊತೆಗೆ ಉದಯ್ ಕುಮಾರ್ ಹಾಗೂ ಕಲ್ಯಾಣ್ ಕುಮಾರ್ ಕೂಡ ಚಿತ್ರರಂಗಕ್ಕೆ ಬಂದಿದ್ದರು. ಅವರಿಬ್ಬರೂ ಕೂಡ ಒಳ್ಳೆ ಪ್ರತಿಭೆಗಳೇ. ಆದರೆ ಹೆಚ್ಚು ದಿನ ಚಿತ್ರರಂಗದಲ್ಲಿ ಉಳಿಯಲು ಸಾಧ್ಯವಾಗಲಿಲ್ಲ. ಕುಮಾರತ್ರಯರಲ್ಲಿ ಕೊನೆಗೆ ಉಳಿದು ಬೆಳೆದು ಚಿತ್ರರಂಗವನ್ನು ರಾಜನಂತೆ ಆಳಿದವರು ರಾಜ್‌ಕುಮಾರ್ ಮಾತ್ರ. 200ಕ್ಕೂ ಅಧಿಕ ಸಿನಿಮಾಗಳಲ್ಲಿ ತರಹೇವಾರಿ ಪಾತ್ರಗಳಲ್ಲಿ ನಟಿಸಿ ಅಣ್ಣಾವ್ರು ಗೆದ್ದಿದ್ದರು.
ಎಷ್ಟೇ ಎತ್ತರಕ್ಕೆ ಏರಿದರೂ ನಾನು ಚಿಕ್ಕವನು ಎನ್ನುವಂತೆ ರಾಜ್‌ಕುಮಾರ್ ಇದ್ದುಬಿಟ್ಟರು. ತಮ್ಮ ಸರಳ ಸಜ್ಜನ ವ್ಯಕ್ತಿತ್ವದಿಂದ ಸೂಜಿಗಲ್ಲಿನಂತೆ ಎಲ್ಲರನ್ನು ಸೆಳೆಯುತ್ತಿದ್ದರು. ಪರಭಾಷೆಯ ಘಟಾನುಘಟಿ ಕಲಾವಿದರು ಕೂಡ ಅಣ್ಣಾವ್ರ ಸರಳತೆಗೆ ಮಾರು ಹೋಗಿದ್ದರು. ಕನ್ನಡ ಚಿತ್ರರಂಗ ಬಾಲ್ಯಾವಸ್ಥೆಯಲ್ಲಿ ಇದ್ದಾಗ ಬಂದು ತಾವು ಬೆಳೆದು ತಮ್ಮೊಡನೆ ಚಿತ್ರರಂಗವನ್ನು ರಾಜ್‌ಕುಮಾರ್ ಕಟ್ಟಿ ಬೆಳೆಸಿದರು.

ನಟನಾಗಿ ಮಾತ್ರವಲ್ಲದೇ ಗಾಯಕರಾಗಿಯೂ ಮುತ್ತುರಾಜ್ ಗೆದ್ದಿದ್ದರು. ಬೇರೆಯವರನ್ನು ಬೆಳೆಯಲು ಬಿಡಲಿಲ್ಲ, ಅದು ಇದು ಅಂತೆಲ್ಲಾ ಕೆಲವರು ಅಣ್ಣಾವ್ರು ಹಾಗೂ ಅವರ ಆಪ್ತರ ಮೇಲೆ ಆರೋಪ ಮಾಡುತ್ತಾರೆ. ಆದರೆ ಅದೆಲ್ಲ ಸುಳ್ಳು ಎಂದು ಅವರನ್ನು ಹತ್ತಿರದಿಂದ ಬಲ್ಲವರು ಹೇಳುತ್ತಾ ಬಂದಿದ್ದಾರೆ. ಸಾಕಷ್ಟು ಪಾತ್ರಗಳು ರಾಜ್‌ಕುಮಾರ್‌ಗೆ ಸಿಗದಂತೆ ಕೆಲವರು ಮಾಡಿದರು. ರಾಜ್- ವಿಷ್ಣು ನಡುವೆ ಕೆಲವರು ತಂದು ಹಾಕುವ ಕೆಲಸ ಮಾಡಿದರು. ಪುಟ್ಟಣ್ಣ ಕಣಗಾಲ್, ಸಿದ್ಧಲಿಂಗಯ್ಯ ಕೂಡ ಅಣ್ಣಾವ್ರ ಮೇಲೆ ಮುನಿಸಿಕೊಂಡಿದ್ದರು.
ಒಮ್ಮೆ ಸಿನಿಮಾ ಶೂಟಿಂಗ್ ಸೆಟ್‌ನಲ್ಲಿ ರಾಜ್‌ಕುಮಾರ್ ಕೂರಲು ಹೋದಾಗ ಕುರ್ಚಿಯನ್ನು ಎಳೆದು ಅವರು ಕೆಳಗೆ ಬೀಳುವಂತೆ ಮಾಡಿ ನಕ್ಕಿದ್ದರು. ಈ ವಿಚಾರವನ್ನು ಖುದ್ದು ರಾಜ್‌ಕುಮಾರ್ ತಮ್ಮ ಬಳಿ ಹೇಳಿಕೊಂಡಿದ್ದರು ಎಂದು ಹಿರಿಯ ನಟ ಸುಂದರ್ ರಾಜ್ ಹಳೇ ಸಂದರ್ಶನವೊಂದರಲ್ಲಿ ನೆನಪು ಮಾಡಿಕೊಂಡಿದ್ದರು. ಟೋಟಲ್ ಕನ್ನಡ ಯೂಟ್ಯೂಬ್ ವಾಹಿನಿ ಸಂದರ್ಶನದಲ್ಲಿ ಅವರು ರಾಜ್‌ಕುಮಾರ್ ಜೊತೆಗಿನ ಒಡನಾಟವನ್ನು ನೆನಪು ಮಾಡಿಕೊಂಡಿದ್ದರು.
ರಾಜ್‌ಕುಮಾರ್ ಜೊತೆಗೆ ಕೆಲಸ ಮಾಡಿದ ಅನುಭವದ ಬಗ್ಗೆ ಸುಂದರ್ ರಾಜ್ ಮಾತನಾಡಿದ್ದರು. "ಕನ್ನಡಕ್ಕೊಬ್ಬರೇ ಕೈಲಾಸಂ ಎನ್ನುವಂತೆ ಕನ್ನಡ ಚಿತ್ರರಂಗಕ್ಕೆ ರಾಜ್‌ಕುಮಾರ್ ಒಬ್ಬರೇ. ರಾಜ್‌ಕುಮಾರ್ ಅಂದರೆ ಕನ್ನಡ, ಬೇರೇನು ಹೇಳವುದು ಬೇಡ. ಸ್ಪಷ್ಟ ಕನ್ನಡ ಕೇಳಬೇಕು ಅಂದರೆ ಅಣ್ಣಾವ್ರ ಬಾಯಲ್ಲೇ ಕೇಳಬೇಕು. ರಾಜ್‌ಕುಮಾರ್ ಎಂದು ಕರೆನ್ಸಿ ನೋಡಿದವರಲ್ಲ. ಇವತ್ತಿನ ಕಲಾವರಿದರು ಕಾರು, ಬಂಗಲೆ ಅಂತೆಲ್ಲಾ ಏನೇನೋ ಸಂಪಾದಿಸಿದ್ದಾರೆ. ಆದರೆ ಅವರು ಬಹಳ ಸಿಂಪಲ್. ಬಿಳಿ ಪಂಚೆ, ಬಿಳಿ ಶರ್ಟ್‌ನಲ್ಲಿ ಸದಾ ಇರುತ್ತಿದ್ದರು. ಅವರಿಗೆ ಬಹಳ ಇಷ್ಟವಾಗಿದ್ದಿದ್ದು ಒಳ್ಳೆ ಊಟ ಮತ್ತು ಒಳ್ಳೆ ಸ್ನೇಹ ಮಾತ್ರ" ಎಂದು ಹೇಳಿದ್ದರು.
"ರಾಜ್‌ಕುಮಾರ್ ನಮ್ಮ ಜೊತೆಗೆ ಚೆನ್ನಾಗಿ ಬೆರೆಯುತ್ತಿದ್ದರು. ಒಟ್ಟಿಗೆ ಕೂತು ಮಾತನಾಡುತ್ತಿದ್ದರು. ಅವರ ಅನುಭವ ಹಂಚಿಕೊಳ್ಳುತ್ತಿದ್ದರು. ತಾವು ಚಿತ್ರರಂಗಕ್ಕೆ ಬಂದ ಆರಂಭದಲ್ಲಿ ಏನೆಲ್ಲಾ ಆಯಿತು ಎಂದು ಹೇಳುತ್ತಿದ್ದರು. ಆರಂಭದ ದಿನಗಳಲ್ಲಿ ಬಹಳ ಕಡಿಮೆ ಸಂಭಾವನೆ ಬರ್ತಿತ್ತು. ಒಂದು ಚಿತ್ರದಲ್ಲಿ ನಟಿಸಿದರೆ 2 ಇಡ್ಲಿ, ಮತ್ತೊಂದು ಚಿತ್ರದಲ್ಲಿ ನಟಿಸಿದರೆ 3 ಇಡ್ಲಿ, ಚಿತ್ರಾನ್ನ ಅಷ್ಟೆ, ಅದು ಬಿಟ್ಟು ದುಡ್ಡ ಯಾರು ಕೊಡುತ್ತಿರಲಿಲ್ಲ ಎಂದು ಹೇಳುತ್ತಿದ್ದರು. ಬಹುಶಃ 60ರ ದಶಕದ ಬಳಿಕ ಅವರು ಚಿತ್ರರಂಗದಲ್ಲಿ ಹಣ ನೋಡಿದರು, ಅನ್ನಿಸುತ್ತೆ. 'ಬಂಗಾರದ ಮನುಷ್ಯ' ಆದ ಬಳಿಕ 5 ಸಾವಿರ ಸಂಭಾವನೆ ಏರಿತ್ತು ಅನ್ನಿಸುತ್ತೆ" ಎಂದು ಸುಂದರ್ ರಾಜ್ ಅಣ್ಣಾವ್ರ ಮಾತುಗಳನ್ನು ಮೆಲುಕು ಹಾಕಿದ್ದರು.
'ಒಂದು ಮುತ್ತಿನ ಕಥೆ' ಸಿನಿಮಾ ಚಿತ್ರೀಕರಣದ ವೇಳೆ ನಡೆದ ಘಟನೆಯನ್ನು ಕೂಡ ಸುಂದರ್ ರಾಜ್ ನೆನಪು ಮಾಡಿಕೊಂಡಿದ್ದರು. ಶಂಕರ್ ನಾಗ್ ನಿರ್ದೇಶನದ ಆ ಚಿತ್ರದಲ್ಲಿ ಐತು(ರಾಜ್‌ಕುಮಾರ್) ಸ್ನೇಹಿತ ಧೂಮ(ಸುಂದರ್ ರಾಜ್) ಆಗಿ ನಟಿಸಿದ್ದರು. 1987ರಲ್ಲಿ ಈ ಸಿನಿಮಾ ತೆರೆಗೆ ಬಂದಿತ್ತು. ಬಾಕ್ಸಾಫೀಸ್‌ನಲ್ಲಿ ಸೋತರೂ ಸಿನಿಮಾ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಸಾಕಷ್ಟು ಮೊದಲುಗಳಿಗೆ ಆ ಸಿನಿಮಾ ಸಾಕ್ಷಿ ಆಗಿತ್ತು. ಆ ಚಿತ್ರದ ಚಿತ್ರೀಕರಣದ ವೇಳೆ ನಡೆದ ಘಟನೆಯನ್ನು ಸುಂದರ್ ರಾಜ್ ಹೇಳಿದ್ದರು.
"ಅಣ್ಣಾವ್ರದ್ದು ಹಿತ್ತಾಳೆ ಕಿವಿ ಅಲ್ಲ. ಯಾರಾದರೂ ಏನಾದರೂ ಹೇಳಿದರೆ ನಂಬುತ್ತಿರಲಿಲ್ಲ. ಒಮ್ಮೆ ಒಂದು ಸನ್ನಿವೇಶದ ಚಿತ್ರೀಕರಣ ನಡೀಬೇಕಿತ್ತು. ಹಿಂದಿನ ದಿನ ಅಣ್ಣಾವ್ರಿಗೆ ಸೀನ್ ಹೇಳಿದ್ದರು. ಮರುದಿನ ಅದು ಬಿಟ್ಟು ಬೇರೆ ದೃಶ್ಯ ತೆಗೆಯಲು ಮುಂದಾದರು. ಯಾಕೆ ಎಂದಾಗ ಸುಂದರ್ ರಾಜ್ ಬಂದಿಲ್ಲ. ಹುಷಾರಿಲ್ಲ ಅಂತ ಯಾರೋ ಹೇಳಿದ್ದಾರೆ. ಅಲ್ಲೇ ಪಕ್ಕದಲ್ಲಿದ್ದವರು ರಾತ್ರಿ ಕುಡಿದಿದ್ದು ಹೆಚ್ಚಾಗಿ ಮಲಗಿರಬೇಕು ಎಂದು ನನ್ನ ಬಗ್ಗೆ ಅಣ್ಣಾವ್ರ ಬಳಿ ಹೇಳಿದ್ದರು. ಅದನ್ನು ಕೇಳಿ ರಾಜ್‌ಕುಮಾರ್ ಸುಮ್ಮನಾಗಿದ್ದರು" ಎಂದು ಸುಂದರ್ ರಾಜ್ ತಿಳಿಸಿದ್ದರು.
ಮಾತು ಮುಂದುವರೆಸಿದ ಸುಂದರ್ ರಾಜ್ "ನನಗೆ ಚಿತ್ರೀಕರಣದ ವೇಳೆ ಕಬ್ಬಿಣದ ತುಂಡು ಕಾಲಿಗೆ ಚುಚ್ಚಿ ಪೆಟ್ಟಾಗಿ ಕೀವು ತುಂಬಿ ವೈದ್ಯರು ವಿಶ್ರಾಂತಿ ಪಡೆಯಲು ಹೇಳಿದರು. ಮರುದಿನ ನಾವೆಲ್ಲರೂ ಒಟ್ಟಿಗೆ ಕೂತು ಊಟ ಮಾಡುತ್ತಿದ್ದೆವು. ಅಣ್ಣಾವ್ರು ನನ್ನನ್ನು ನೋಡಿ ಸ್ವಲ್ಪ ಆರೋಗ್ಯದ ಕಡೆ ಗಮನ ಕೊಡಿ ಎಂದರು, ಯಾಕಂದರೆ ನನ್ನ ಬಗ್ಗೆ ಬೇರೆ ಯಾರೋ ಏನೋ ಹೇಳಿದ್ದರಲ್ಲ, ಅದನ್ನು ಕೇಳಿ ಆ ರೀತಿ ಹೇಳಿದ್ದರು"
"ಕೂಡಲೇ ನಾನು ಹೌದು ಅಣ್ಣಾ, ಕಾಲು ಪೆಟ್ಟಾಗಿದೆ ನೋಡಿ. ಅದಕ್ಕೆ ಬರೋಕೆ ಆಗಲಿಲ್ಲ ಎಂದೆ. ಕೂಡಲೇ ಅಣ್ಣಾವ್ರು ಗಳಗಳನೆ ಅಳುವುದಕ್ಕೆ ಶುರು ಮಾಡಿದ್ದರು. ನನಗೂ ಇದೇ ರೀತಿ ಒಮ್ಮೆ ಕಾಲಿಗೆ ಪೆಟ್ಟಾಗಿತ್ತು ಎಂದು 'ಭೂದಾನ' ಚಿತ್ರದ ಶೂಟಿಂಗ್ ವೇಳೆ ನಡೆದ ಘಟನೆಯನ್ನು ಹೇಳಿದ್ರು. ಒಮ್ಮೆ ರಾಜ್‌ಕುಮಾರ್ ಕೂರಲು ಹೋದಾಗ ಕಲ್ಯಾಣ್ ಕುಮಾರ್ ಚೇರ್ ಅನ್ನು ಎಳೆದುಬಿಟ್ಟಿದ್ದರಂತೆ. ರಾಜ್‌ಕುಮಾರ್ ಕೆಳಗೆ ಬಿದ್ದುಬಿಟ್ಟಿದ್ದರು. ಅವರಿಗೆ ನೋವಾಗಿತ್ತು. ಆದರೆ ಆ ನೋವನ್ನು ಹೇಳಿಕೊಳ್ಳದೇ ಮನಸ್ಸಿನಲ್ಲಿಟ್ಟಿಕೊಂಡಿದ್ದರು. ಅದನ್ನು ನನಗೆ ಹೇಳಿದ್ದರು" ಎಂದು ಸುಂದರ್ ರಾಜ್ ವಿವರಿಸಿದ್ದರು.
ಅಂದಿನಿಂದ ನನ್ನ ಹಾಗೂ ರಾಜ್‌ಕುಮಾರ್ ಸ್ನೇಹ ಮತ್ತಷ್ಟು ಗಾಢವಾಯಿತು. ಬಳಿಕ ಅಣ್ಣಾವ್ರ ಕೆಲ ಸಿನಿಮಾಗಳಲ್ಲಿ ನಾನು ನಟಿಸಿದೆಎಂದು ಸುಂದರ್ ರಾಜ್ ಹೇಳಿದ್ದರು. ಗೋಪಾಲಕೃಷ್ಣ ಹಾಗೂ ಜಿ.ವಿ ಅಯ್ಯರ್ ನಿರ್ದೇಶನದ 'ಭೂದಾನ' ಚಿತ್ರಕ್ಕೆ ಜಿ. ಕೆ ವೆಂಕಟೇಶ್ ಸಂಗೀತ ಸಂಯೋಜನೆ ಮಾಡಿದ್ದರು. ಕುಮಾರತ್ರಯರು ಮೂರು ಜನ ನಟಿಸಿದ ಏಕೈಕ ಸಿನಿಮಾ ಇದಾಗಿತ್ತು. 'ಗಾಳಿಗೋಪುರ' ಚಿತ್ರದಲ್ಲೂ ಮೂವರು ನಟಿಸಿದ್ದರು. ಆದರೆ ಆ ಚಿತ್ರದಲ್ಲಿ ಉದಯ್ ಕುಮಾರ್ ಅವರದ್ದು ಸಣ್ಣ ಪಾತ್ರವಾಗಿತ್ತು.


Click it and Unblock the Notifications











