'ಅಭಿ'ಗೆ 20 ವರ್ಷ: "ಈಗ ನಂಗೆ ಚಾನ್ಸ್ ಕೊಡ್ತೀರಾ?" ಎಂದು ವಜ್ರೇಶ್ವರಿ ಕಚೇರಿಗೆ ನುಗ್ಗಿ ರಾಘಣ್ಣನನ್ನು ಕೇಳಿದ್ದ ರಮ್ಯಾ
ಪುನೀತ್ ರಾಜ್‌ಕುಮಾರ್ ಹಾಗೂ ರಮ್ಯಾ ನಟನೆಯ 'ಅಭಿ' ಸಿನಿಮಾ 20 ವರ್ಷ ಪೂರೈಸಿದೆ. ಅಂದ್ರೆ ರಮ್ಯಾ ಸಿನಿಕಿರಿಯರ್‌ಗೂ 20 ವರ್ಷ ತುಂಬಿದಂತಾಗಿದೆ. ದಿನೇಶ್ ಬಾಬು ನಿರ್ದೇಶನದ ರೊಮ್ಯಾಂಟಿಕ್ ಫ್ಯಾಮಿಲಿ ಎಂಟರ್‌ಟೈನರ್ 'ಅಭಿ' ಸಿನಿಮಾ 2003, ಜನವರಿ 25ರಂದು ತೆರೆಗೆ ಬಂದಿತ್ತು. ಸತತ 150 ದಿನ ಪ್ರದರ್ಶನ ಕಂಡು ಸದ್ದು ಮಾಡಿತ್ತು. ಸಿನಿಮಾ ತೆಲುಗಿಗೂ ರೀಮೆಕ್ ಆಗಿತ್ತು.
ದಿನೇಶ್ ಬಾಬು ನಿರ್ದೇಶನದ 'ಅಭಿ' ಚಿತ್ರದಲ್ಲಿ ಅಭಿ ಜೋಡಿ ಭಾನು ಆಗಿ ರಮ್ಯಾ ಮಿಂಚಿದ್ದರು. ಮೊದಲ ನೋಟದಲ್ಲೇ ಈ ಜೋಡಿ ಪ್ರೇಕ್ಷಕರ ಮನಗೆದ್ದಿತ್ತು. ಗುರುಕಿರಣ್ ಸಂಗೀತ ಚಿತ್ರಕ್ಕೆ ಮತ್ತೊಂದು ಪ್ಲಸ್ ಪಾಯಿಂಟ್ ಆಗಿತ್ತು. ಮುಂದೆ ತೆಲುಗು ರೀಮೆಕ್‌ನಲ್ಲೂ ರಮ್ಯಾ ನಾಯಕಿಯಾಗಿ ಮಿಂಚಿದ್ದರು. 'ಅಭಿ' ಸಕ್ಸಸ್ ನಂತರ ಆಕೆಗೆ ಸಾಕಷ್ಟು ಅವಕಾಶಗಳನ್ನು ತಂದುಕೊಟ್ಟಿತ್ತು. ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಮುಂದೆ ಸ್ಯಾಂಡಲ್‌ವುಡ್ ಕ್ವೀನ್ ಆಗಿ ಮೆರೆಯುವಂತಾಯಿತು.

ಎಲ್ಲಾ ಅಂದುಕೊಂಡಂತೆ ಆಗಿದ್ರೆ 'ಅಭಿ'ಗೂ ರಮ್ಯಾ 'ಅಪ್ಪು' ಚಿತ್ರದಲ್ಲಿ ನಟಿಸಬೇಕಿತ್ತು. ಪುನೀತ್ ರಾಜ್‌ಕುಮಾರ್ ಮೊದಲ ಚಿತ್ರಕ್ಕೆ ರಮ್ಯಾ ಕೂಡ ಅವಕಾಶ ಕೇಳಿಕೊಂಡು ಹೋಗಿದ್ದರಂತೆ. ಆದರೆ ಕೊನೆ ಕ್ಷಣದಲ್ಲಿ ಆ ಅವಕಾಶ ರಕ್ಷಿತಾ ಪಾಲಾಗಿತ್ತು. ನಾಯಕಿ ಪಾತ್ರಕ್ಕೆ ರಮ್ಯಾ ಸಂಪೂರ್ಣವಾಗಿ ಮೇಕ್ ಓವರ್ ಆಗಿರಲಿಲ್ಲ ಎನ್ನುವ ಕಾರಣಕ್ಕೆ ಆಕೆಯನ್ನು ರಿಜೆಕ್ಟ್ ಮಾಡಿದ್ದರಂತೆ. ಈ ಬಗ್ಗೆ ಚಿತ್ರದ ಸಹ ನಿರ್ದೇಶಕರಾಗಿದ್ದ ಮಹೇಶ್ ಬಾಬು ಈ ಹಿಂದೆ ಮಾಧ್ಯಮವೊಂದರ ಸಂದರ್ಶನದಲ್ಲಿ ಹೇಳಿದ್ದರು.
'ಅಭಿ' ಚಿತ್ರಕ್ಕಾಗಿ ನಾಯಕಿಯ ಹುಡುಕಾಟದಲ್ಲಿ ಇದ್ದಾಗ ಒಮ್ಮೆ ರಮ್ಯಾ ವಜ್ರೇಶ್ವರಿ ಸಂಸ್ಥೆಯ ಕಚೇರಿಗೆ ನುಗ್ಗಿದ್ದರಂತೆ. ಏಕ್‌ದಮ್ ರಾಘಣ್ಣನ ಮುಂದೆ ನಿಂತು "ಈಗ ನಂಗೆ ಚಾನ್ಸ್ ಕೊಡ್ತೀರಾ?" ಕೇಳಿದ್ದರಂತೆ. ಅಲ್ಲಿದ್ದವರಿಗೆಲ್ಲಾ ಶಾಕ್ ಆಗಿತ್ತು. ನಂತರ ಈಕೆ ಯಾರು ಎಂದಾದ ಓಹ್, ದಿವ್ಯಾ ಸ್ಪಂದನಾ ಎಂದು ಗೊತ್ತಾಗಿದೆ. ಅಷ್ಟರಲ್ಲಿ ನಾಯಕಿ ಆಗಲು ರಮ್ಯಾ ಮೇಕ್ ಓವರ್ ಆಗಿ ಬಂದಿದ್ದರಂತೆ. ಕೂಡಲೇ ರಾಘಣ್ಣ ಫೋಟೊಶೂಟ್ ಮಾಡಿಸೋಣ ಎಂದರಂತೆ. ಫೋಟೊಶೂಟ್ ಮಾಡಿದ ಮೇಲೆ ಎಲ್ಲರೂ ಒಪ್ಪಿ ಸಿನಿಮಾ ಶುರುವಾಯಿತು.

ಆಡಿಷನ್ ಏನು ಇಲ್ಲದೇ ಬರೀ ಫೋಟೊಶೂಟ್ ಮಾಡಿ ರಮ್ಯಾ ಅವರನ್ನು 'ಅಭಿ' ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳಲಾಗಿತ್ತು. ಮುಸ್ಲಿಂ ಹುಡುಗಿಯ ಪಾತ್ರದಲ್ಲಿ ರಮ್ಯಾ ನಟಿಸಿ ಗಮನ ಮಾಡಿದರು. ಪುನೀತ್- ರಮ್ಯಾ ಜೋಡಿ ಹಾಡುಗಳಲ್ಲೂ ಮೋಡಿ ಮಾಡಿತ್ತು. ಅಪ್ಪು ಜೊತೆ ಮುಂದೆ 'ಆಕಾಶ್', 'ಅರಸು' ಸಿನಿಮಾಗಳಲ್ಲಿ ರಮ್ಯಾ ನಟಿಸಿದರು. ಪುನೀತ್ ಜೊತೆ 3 ಸಿನಿಮಾಗಳಲ್ಲಿ ನಟಿಸೋ ಅವಕಾಶ ಸಿಕ್ಕಿದ್ದು ಈಕೆಗೆ ಮಾತ್ರ. ಮೊದಲಿನಿಂದಲೂ ಅಂದುಕೊಂಡಿದ್ದನ್ನು ಸಾಧಿಸಬೇಕು, ತನ್ನ ಪಾಲು ಕೇಳಿ ಪಡೆಯಬೇಕು ಎನ್ನುವುದು ರಮ್ಯಾ ಪಾಲಿಸಿ. ಅದೇ ಆಕೆಯನ್ನು ಸ್ಟಾರ್ ನಟಿಯನ್ನಾಗಿ ಮಾಡಿತು.
'ಅಭಿ' 20 ವರ್ಷ ಪೂರೈಸಿರುವುದನ್ನು ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ನೆನಪಿಸಿಕೊಂಡಿದ್ದಾರೆ. "ನನ್ನ ಮೊದಲ ಚಿತ್ರ ,ಅಪ್ಪು ಅವರ ಜೊತೆಗಿನ 'ಅಭಿ' ಬಿಡುಗಡೆ ಆಗಿ ಇಂದಿಗೆ 20 ವರ್ಷಗಳು. ನನ್ನ ಅಭಿಮಾನಿಗಳ ಹಾಗೂ ಹಿತೈಷಿಗಳ ನಿರಂತರ ಪ್ರೀತಿಗೆ ನನ್ನ ಹೃದಯವು ಕೃತಜ್ಞತೆಯಿಂದ ತುಂಬಿದೆ.ನನಗೆ ಅವಕಾಶ ಕೊಟ್ಟ ರಾಜ್ ಕುಟುಂಬಕ್ಕೆ ಸದಾ ಚಿರಋಣಿ ಮತ್ತು ನನ್ನ ಸಿನಿ ಪಯಣದಲ್ಲಿ ನನ್ನೊಂದಿಗೆ ಕೆಲಸ ಮಾಡಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು " ಎಂದು ಬರೆದುಕೊಂಡಿದ್ದಾರೆ.

ತಮ್ಮ ಮೊದಲ ಚಿತ್ರಕ್ಕೆ ಸಂಬಂಧಿಸಿದಂತೆ 4 ಫೋಟೊಗಳನ್ನು ಹಂಚಿಕೊಂಡಿರುವ ರಮ್ಯಾ, ಅವುಗಳ ಹಿನ್ನೆಲೆ ತಿಳಿಸಿದ್ದಾರೆ. ಆರಂಭದ ದಿನದ ಚಿತ್ರೀಕರಣ, 'ಈ ನನ್ನ ಕಣ್ಣಾಣೆ' ಹಾಡಿನ ಚಿತ್ರೀಕರಣ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಇನ್ನು ರಮ್ಯಾ ಅವರ ತಂದೆ ಆಪ್ತರಿಗಾಗಿ ಚಿತ್ರದ ವಿಶೇಷ ಪ್ರದರ್ಶನವನ್ನು ಏರ್ಪಡಿಸಿದ್ದರು. ಅಂದು ಕೇಸರಿ ಬಣ್ಣದ ಸೀರೆಯಲ್ಲಿ ರಮ್ಯಾ ಮಿಂಚಿದ್ದರು. ಇನ್ನು 'ಅಭಿ' ಚಿತ್ರದ ಶತದಿನೋತ್ಸವ ಸಮಯದಲ್ಲಿ ಡಾ. ರಾಜ್‌ಕುಮಾರ್ ಆಶೀರ್ವಾದ ಪಡೆದ ಫೋಟೊವನ್ನು ಕೂಡ ಹಂಚಿಕೊಂಡಿದ್ದಾರೆ.


Click it and Unblock the Notifications











