ಇದೆಂಥಾ ಭಾವೈಕ್ಯ? ಅವತ್ತು ಪುರಿ ಜಗನ್ನಾಥ ದೇವಸ್ಥಾನ ಪ್ರವೇಶಿಸದೇ ವಾಪಸ್ ಬಂದಿದ್ದ ಅಪ್ಪು
ಅಭಿಮಾನಿಗಳ ಪ್ರೀತಿಯ ಅಪ್ಪು, ಸರಳತೆ ಹಾಗೂ ಸೇವೆಯ ಪ್ರತಿರೂಪವಾಗಿ ಮಾನವೀಯತೆಯ ಪ್ರತೀಕವಾಗಿ ಜನಮಾನಸದಲ್ಲಿ ಅಚ್ಚಳಿಯದೇ ಉಳಿದುಬಿಟ್ಟಿದ್ದಾರೆ. ತಮ್ಮ ಚಿತ್ರಗಳು, ಸೇವೆಯ ಮೂಲಕ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ ಬಾಲ್ಯದಲ್ಲೇ ಚಿತ್ರರಂಗ ಪ್ರವೇಶಿಸಿ ಮುಂದೆ ಹೀರೊ ಆಗಿ ಕೂಡ ಗೆದ್ದವರು ಪುನೀತ್ ರಾಜ್‌ಕುಮಾರ್.
ಅಪ್ಪು ಇಂದು ದೈಹಿಕವಾಗಿ ನಮ್ಮೊಂದಿಗೆ ಇಲ್ಲ. ಆದರೆ ಮಾನಸಿಕವಾಗಿ ಅಭಿಮಾನಿಗಳ ಹೃದಯದ ಸಿಂಹಾಸನದಲ್ಲಿ ರಾಜರತ್ನನಾಗಿ ರಾರಾಜಿಸುತ್ತಲೇ ಇರುತ್ತಾರೆ. ಅವರ ಸರಳತೆ, ನಗು ಮತ್ತು ಮಾನವೀಯತೆ ಎಂದೆಂದಿಗೂ ಜೀವಂತ. ಬಾಲ್ಯದಲ್ಲೇ ತಾನೊಬ್ಬ ಅದ್ಭುತ ನಟ ಎನ್ನುವುದನ್ನು ಮಾಸ್ಟರ್ ಪುನೀತ್ ಸಾಬೀತುಪಡಿಸಿದ್ದರು. ಅವರು ಶಾಲೆಗೆ ಹೋಗಿದ್ದಕ್ಕಿಂತ ಸಿನಿಮಾ ಸೆಟ್‌ನಲ್ಲಿ ಕಲಿತಿದ್ದೆ ಹೆಚ್ಚು. ಅಪ್ಪನ ಜೊತೆ ಜೊತೆಗೆ ಕೆಲ ಸಿನಿಮಾಗಳಲ್ಲಿ ನಟಿಸಿದ್ದ ಪುನೀತ್ 'ಬೆಟ್ಟದ ಹೂವು' ಚಿತ್ರಕ್ಕಾಗಿ ಅತ್ಯುತ್ತಮ ಬಾಲನಟ ರಾಷ್ಟ್ರಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು.

5ನೇ ಅಂತರಾಷ್ಟ್ರೀಯ ಮಕ್ಕಳ ಚಿತ್ರೋತ್ಸವಕ್ಕೆ 'ಬೆಟ್ಟದ ಹೂವು' ಸಿನಿಮಾ ಕೂಡ ಆಯ್ಕೆ ಆಗಿತ್ತು. ಒಡಿಶಾದ ಭುವನೇಶ್ವರದಲ್ಲಿ ಚಿತ್ರೋತ್ಸವ ನಡೆದಿತ್ತು. ಹಾಗಾಗಿ ಒಂದೆರಡು ದಿನ ಅಲ್ಲಿಗೆ ಮಾಸ್ಟರ್ ಪುನೀತ್ ಹೋಗಿದ್ದರು. ಚಿತ್ರೋತ್ಸವ ಮುಗಿದ ಬಳಿಕ ಅಲ್ಲಿನ ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವಾಸ ಹೋಗಿದ್ದರು. ಪುರಿ ಜಗನ್ನಾಥ ದೇವಸ್ಥಾನಕ್ಕೂ ಕರೆದುಕೊಂಡು ಹೋಗಿದ್ದರು. ಆದರೆ ಅಪ್ಪು ದೇವಸ್ಥಾನ ಪ್ರವೇಶಿಸದೇ ವಾಪಸ್ ಬಂದಿದ್ದರು. ಅವರು ಕೊಟ್ಟ ಕಾರಣ ಎಲ್ಲರ ಅಚ್ಚರಿಗೆ ಕಾರಣವಾಗಿತ್ತು. ಮುಗ್ಧ ಬಾಲಕನ ದಿಟ್ಟ ಆಲೋಚನೆ ಅವತ್ತಿಗೆ ಸುದ್ದಿಯಾಗಿತ್ತು. ಈ ವಿಚಾರವನ್ನು ಹಿರಿಯ ಸಿನಿಮಾ ಪತ್ರಕರ್ತರೊಬ್ಬರು ಮೆಲುಕು ಹಾಕಿದ್ದಾರೆ.
"ಪುರಿ ಜಗನ್ನಾಥ ದೇವಸ್ಥಾನಕ್ಕೆ ಹಿಂದೂಗಳಿಗೆ ಮಾತ್ರ ಪ್ರವೇಶ" ಎಂದು ಹೇಳಿದಾಗ ಮಾಸ್ಟರ್ ಪುನೀತ್‌ಗೆ ಬೇಸರವಾಗಿತ್ತಂತೆ. "ಇದು ರಾಷ್ಟ್ರೀಯ ಭಾವೈಕ್ಯಕ್ಕೆ ವಿರೋಧವಾಗಿದೆ" ಎಂದು ಹೇಳಿ ದೇವಸ್ಥಾನ ಪ್ರವೇಶಿಸದೇ ಹೊರ ಬಂದಿದ್ದರು. ಅವರ ದಿಟ್ಟತನ, ಭಾವೈಕ್ಯ ದೃಷ್ಟಿಕೋನವನ್ನು ಅಲ್ಲಿದ್ದವರು ಮೆಚ್ಚಿದ್ದರು. 'ಬೆಳೆಯುವ ಸಿರಿ ಮೊಳಕೆಯಲ್ಲಿ' ಎನ್ನುವುದು ಅಂದೇ ಸಾಬೀತಾಗಿತ್ತು.

ಇದೇ ಮಕ್ಕಳ ಚಿತ್ರೋತ್ಸವ ಸಮಯದಲ್ಲಿ ಮಾಸ್ಟರ್ ಮಂಜುನಾಥ್ ಕೂಡ ಭುವನೇಶ್ವರಕ್ಕೆ ಹೋಗಿದ್ದರು. ಈ ವೇಳೆ ಇಬ್ಬರ ನಡುವೆ ಆತ್ಮೀಯ ಒಡನಾಟ ಬೆಳೆದಿತ್ತು. ಈ ವಿಚಾರವನ್ನು ಮಂಜುನಾಥ್ ಸಾಕಷ್ಟು ಸಂದರ್ಭಗಳಲ್ಲಿ ನೆನಪಿಸಿಕೊಂಡಿದ್ದರು. 'ಮಾಲ್ಗುಡಿ ಡೇಸ್' ಧಾರಾವಾಹಿಗಾಗಿ ಮಂಜುನಾಥ್ ನಟಿಸಿದ್ದರು. ಹಾಗಾಗಿ ಅವರು ಅಲ್ಲಿಗೆ ತೆರಳಿಸಿದ್ದರು. ಇಬ್ಬರನ್ನು ಒಂದೇ ಹೋಟೆಲ್ ರೂಮ್‌ಗಳಲ್ಲಿ ಇರಿಸಲಾಗಿತ್ತು.
ಅಕ್ಕಪಕ್ಕದ ರೂಮ್‌ಗಳಲ್ಲೇ ಇದ್ದಿದ್ದರಿಂದ ಇಬ್ಬರೂ ಕನ್ನಡದವರು ಆಗಿದ್ದರಿಂದ ಇಬ್ಬರ ನಡುವೆ ಆತ್ಮೀಯತೆ ಬೆಳೆದಿತ್ತು. ಇಡೀ ದಿನ ಚಿತ್ರೋತ್ಸವದಲ್ಲಿ ಇಬ್ಬರೂ ಓಡಾಡಿ ಸಂಜೆ ವಾಪಸ್ ಹೋಟೆಲ್ ಸೇರುತ್ತಿದ್ದರು. ಇಬ್ಬರು ಎರಡು ಬೇರೆ ಬೇರೆ ರೂಮ್‌ಗಳಲ್ಲಿ ಇರುವ ಬರಲು ಒಂದೇ ರೂಮ್‌ನಲ್ಲಿ ಕಾಲ ಕಳೆಯುತ್ತಿದ್ದರು. ಚಿತ್ರೋತ್ಸವದಲ್ಲಿ ಮಂಜುನಾಥ್ ಪ್ರಶಸ್ತಿ ಸ್ವೀಕರಿಸುಲು ವೇದಿಕೆ ಏರುತ್ತಿದ್ದಂತೆ ಅಪ್ಪು ಶಿಳ್ಳೆ, ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದರು. ಭುವನೇಶ್ವರದಲ್ಲಿ ಗುರುತು ಪರಿಚಯ ಇಲ್ಲದ ಊರಿನಲ್ಲಿ ಯಾರಪ್ಪ ಈ ರೀತಿ ಸಂಭ್ರಮಿಸುತ್ತಿದ್ದಾರೆ ಎಂದು ಸಭಿಕರ ಸಾಲಿನಲ್ಲಿ ನೋಡಿದಾಗ ಅಪ್ಪು ಕಾಣಿಸಿದ್ದರು.
ಸಾಕಷ್ಟು ವಿಚಾರಗಳನ್ನು ಅಪ್ಪು ಅವರಿಂದ ಕಲಿತಿದ್ದಾಗಿ ಮಾಸ್ಟರ್ ಮಂಜುನಾಥ್ ಹೇಳಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಹೇಗಿರಬೇಕು, ಮಾಧ್ಯಮದವರ ಜೊತೆ ಹೇಗೆ ಮಾತನಾಡಬೇಕು ಎನ್ನುವುದನ್ನೆಲ್ಲಾ ಅಪ್ಪು ನೋಡಿ ಕಲಿತಿದ್ದರು. ಅಷ್ಟು ಚಿಕ್ಕ ವಯಸ್ಸಿನಲ್ಲಿ ಪುನೀತ್ ಎಲ್ಲಾ ವಿಷಯಗಳನ್ನು ಕರಗತ ಮಾಡಿಕೊಂಡಿದ್ದರು. ಆ ಚಿತ್ರೋತ್ಸವ ಮುಗಿದ ಬಳಿಕ ಕೂಡ ಯಾವುದೇ ಸಭೆ, ಸಮಾರಂಭಗಳಲ್ಲಿ ಭೇಟಿಯಾದರೆ ಪುನೀತ್- ಮಂಜುನಾಥ್ ನಡುವೆ ಅದೇ ಸ್ನೇಹ, ಆತ್ಮೀಯತೆ ಇತ್ತು.


Click it and Unblock the Notifications










