ರಣವಿಕ್ರಮನಿಗೆ 8 ವರ್ಷ: ಅಲ್ಲು ಅರ್ಜುನ್ vs ಅಪ್ಪು ಫೈಟ್; ಫಸ್ಟ್ ಡೇ ರೆಕಾರ್ಡ್ ಬ್ರೇಕಿಂಗ್ ಕಲೆಕ್ಷನ್!
2015ರ ಏಪ್ರಿಲ್ 10ರಂದು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹಾಗೂ ಪವನ್ ಒಡೆಯರ್ ಕಾಂಬಿನೇಶನ್‌ನ ರಣವಿಕ್ರಮ ಚಿತ್ರ ಬಿಡುಗಡೆಗೊಂಡಿತ್ತು. ಟೀಸರ್ ಹಾಗೂ ಚಿತ್ರೀಕರಣದ ಸ್ಟಿಲ್‌ಗಳಿಂದಲೇ ದೊಡ್ಡ ಮಟ್ಟದ ಕ್ರೇಜ್ ಹಾಗೂ ನಿರೀಕ್ಷೆಯನ್ನು ರಣವಿಕ್ರಮ ಹುಟ್ಟುಹಾಕಿತ್ತು. ಅದೇ ಮೊದಲ ಬಾರಿಗೆ ಸ್ಟಾರ್ ನಟನಿಗೆ ಆಕ್ಷನ್ ಕಟ್ ಹೇಳಿದ್ದ ನಿರ್ದೇಶಕ ಪವನ್ ಒಡೆಯರ್ ಅಪ್ಪು ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.
ಪೊಲೀಸ್ ಆಗಬೇಕೆಂಬ ಗುರಿ ಹೊಂದಿದ್ದ ಯುವಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಪುನೀತ್ ರಾಜ್‌ಕುಮಾರ್ ಫ್ಲಾಷ್‌ಬ್ಯಾಕ್‌ನಲ್ಲಿ ಸ್ವತಂತ್ರಪೂರ್ವದ ಕಾಡು ಜನರ ನಾಯಕನ ಪಾತ್ರದಲ್ಲಿಯೂ ಸಹ ಅತ್ಯುತ್ತಮವಾಗಿ ನಟಿಸಿದ್ದರು. ಪುನೀತ್ ರಾಜ್‌ಕುಮಾರ್ ಚಿತ್ರದಲ್ಲಿ ಮಾಡಿದ್ದ ಅಭೂತಪೂರ್ವ ನಟನೆಗೆ ಫಿಲ್ಮ್‌ಫೇರ್ ಹಾಗೂ ಸೈಮಾ ಎರಡರಲ್ಲಿಯೂ ಸಹ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿತ್ತು.

ಸಾಮಾನ್ಯ ಸಿನಿ ರಸಿಕರಿಂದ ಓಕೆ ಓಕೆ ಎಂಬ ವಿಮರ್ಶೆಯನ್ನು ಪಡೆದುಕೊಂಡಿದ್ದ ರಣವಿಕ್ರಮ ಆಕ್ಷನ್ ಪ್ರಿಯರಿಂದ ಬಹುಪರಾಕ್ ಪಡೆದುಕೊಂಡಿತ್ತು. ಆಕ್ಷನ್ ಸೀಕ್ವೆನ್ಸ್‌ನಲ್ಲಿ ನಿಸ್ಸೀಮರಾಗಿದ್ದ ಪುನೀತ್ ರಾಜ್‌ಕುಮಾರ್ ಕೈಗೆ ವಿಶೇಷವಾಗಿ ರಚಿಸಲಾಗಿದ್ದ ಹತ್ತು ಕೆಜಿಯ ಗನ್ ಬೇರೆ ಸಿಕ್ಕಿತ್ತು. ಪುನೀತ್ ರಾಜ್‌ಕುಮಾರ್ ಆ ಗನ್ ಹಿಡಿದು ಶೂಟ್ ಮಾಡಿದ್ದ ದೃಶ್ಯಕ್ಕೆ ಚಿತ್ರಮಂದಿರಗಳು ಕ್ರಿಕೆಟ್ ಮೈದಾನವಾಗಿದ್ದವು. ಇದು ಆಗಿನ 'ದೊಡ್ಡಮ್ಮ' ಸೀನ್ ಎಂದೇ ಹೇಳಬಹುದು. ಕ್ಲೈಮ್ಯಾಕ್ಸ್ ಟ್ರೈನ್ ಫೈಟ್‌ನಲ್ಲಿ ಪುನೀತ್ ಸಿಕ್ಸ್ ಪ್ಯಾಕ್‌ನಲ್ಲಿ ದರ್ಶನ ನೀಡಿ ಅಭಿಮಾನಿಗಳಿಗೆ ಸರ್‌ಪ್ರೈಸ್ ನೀಡಿದ್ದರು.
ಹೀಗೆ ಪುನೀತ್ ರಾಜ್‌ಕುಮಾರ್ ಒನ್‌ಮ್ಯಾನ್ ಶೋನಿಂದ ಚಿತ್ರ ಹಿಟ್ ಎನಿಸಿಕೊಂಡಿತ್ತು. ಇನ್ನು ಅಪ್ಪು ಅಭಿನಯದ ಈ ಚಿತ್ರ ಬಿಡುಗಡೆಯಾಗುವುದಕ್ಕೂ ಮುನ್ನ ಹಿಂದಿನ ದಿನ ( ಏಪ್ರಿಲ್ 9 ) ತೆಲುಗು ನಟ ಅಲ್ಲು ಅರ್ಜುನ್ ಹಾಗೂ ತ್ರಿವಿಕ್ರಮ್ ಶ್ರೀನಿವಾಸ್ ಕಾಂಬಿನೇಶನ್‌ನ ಸನ್ ಆಫ್ ಸತ್ಯಮೂರ್ತಿ ಸಹ ಬಿಡುಗಡೆಯಾಗಿತ್ತು. ಅಲ್ಲು ಅರ್ಜುನ್‌ಗೆ ಬೆಂಗಳೂರಿನಲ್ಲಿ ದೊಡ್ಡ ಸಂಖ್ಯೆಯಲ್ಲಿಯೇ ಅಭಿಮಾನಿ ಬಳಗ ಇದ್ದರಿಂದ ಹಾಗೂ ಚಿತ್ರದಲ್ಲಿ ಕನ್ನಡದ ನಟ ರಿಯಲ್ ಸ್ಟಾರ್ ಉಪೇಂದ್ರ ಅಭಿನಯಿಸಿದ್ದರಿಂದ ಚಿತ್ರ ಬೆಂಗಳೂರಿನಲ್ಲಿಯೂ ಸಹ ದೊಡ್ಡ ಬಿಡುಗಡೆ ಕಂಡಿತ್ತು.

ಆದರೆ ರಣವಿಕ್ರಮ ತೆರೆಕಂಡ ಬೆನ್ನಲ್ಲೇ ಅಷ್ಟಕ್ಕಷ್ಟೇ ಎನಿಸಿಕೊಂಡಿದ್ದ ಸನ್ ಆಫ್ ಸತ್ಯಮೂರ್ತಿ ಹವಾ ಬೆಂಗಳೂರಿನಲ್ಲಿ ಕ್ಷೀಣಿಸಿತ್ತು. ಇನ್ನು ಸನ್ ಆಫ್ ಸತ್ಯಮೂರ್ತಿಗೆ ಸಿಲಿಕಾನ್ ಸಿಟಿಯಲ್ಲಿ ಹಿನ್ನಡೆಯಾಗುವಂತೆ ಮಾಡಿದ ರಣವಿಕ್ರಮ ಬಿಡುಗಡೆ ದಿನ 3.5 ಕೋಟಿ ಗಳಿಸುವ ಮೂಲಕ ರಿಲೀಸ್ ದಿನ ಅತಿಹೆಚ್ಚು ಗಳಿಕೆ ಮಾಡಿದ ಕನ್ನಡ ಸಿನಿಮಾ ಎನಿಸಿಕೊಂಡಿತ್ತು. ಈ ಹಿಂದೆ ರಾಕಿಂಗ್ ಸ್ಟಾರ್ ಯಶ್ ನಟನೆಯ ಮಿಸ್ಟರ್ ಅಂಡ್ ಮಿಸ್ಸಸ್ ರಾಮಾಚಾರಿ 3 ಕೋಟಿ ಗಳಿಸುವ ಮೂಲಕ ಬಿಡುಗಡೆ ದಿನ ಅತಿಹೆಚ್ಚು ಗಳಿಕೆ ಮಾಡಿದ ಕನ್ನಡ ಚಿತ್ರ ಎಂಬ ದಾಖಲೆಯನ್ನು ಹೊಂದಿತ್ತು.
ಹೀಗೆ ಮೊದಲ ದಿನ ರೆಕಾರ್ಡ್ ಬ್ರೇಕಿಂಗ್ ಕಲೆಕ್ಷನ್ ಮಾಡಿದ್ದ ಈ ಚಿತ್ರ ಮೊದಲ ಮೂರು ದಿನಗಳಲ್ಲಿ 8 ಕೋಟಿ ಗಳಿಕೆ ಮಾಡಿತ್ತು. ಅಲ್ಲದೇ ದೊಡ್ಮನೆ ಹುಡ್ಗ ಚಿತ್ರದ ಬಳಿಕ ಟ್ವಿಟರ್‌ನಲ್ಲಿ ಟ್ರೆಂಡ್ ಆದ ಕನ್ನಡದ ಎರಡನೇ ಸಿನಿಮಾ ಎಂಬ ಖ್ಯಾತಿಯನ್ನೂ ಸಹ ರಣವಿಕ್ರಮ ಹೊಂದಿದೆ. ಸದ್ಯ ಈ ಚಿತ್ರ ತೆರೆಗೆ ಬಂದು ಇಂದಿಗೆ 8 ವರ್ಷಗಳು ಕಳೆದಿದ್ದು ಟ್ವಿಟರ್‌ನಲ್ಲಿ ಪುನೀತ್ ರಾಜ್‌ಕುಮಾರ್ ಫ್ಯಾನ್ಸ್ ಈ ಚಿತ್ರದ ಬಗ್ಗೆ ಪೋಸ್ಟ್ ಮಾಡಿ ಚಿತ್ರ ಮಾಡಿದ್ದ ದಾಖಲೆಗಳ ಮೆಲುಕು ಹಾಕುತ್ತಿದ್ದಾರೆ.


Click it and Unblock the Notifications











