ಯೋಗರಾಜ್ ಭಟ್ರುಗೆ ಅಪ್ಪು ಕಳುಹಿಸಿದ್ದ ಕೊನೆ ಆಡಿಯೋ ಈಗ ವೈರಲ್
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಬರೀ ನಟನಾಗಿ ಮಾತ್ರವಲ್ಲದೇ ತಮ್ಮ ಸರಳ ಸಜ್ಜನ ವ್ಯಕ್ತಿತ್ವದಿಂದ ಎಲ್ಲರಿಗೂ ಹತ್ತಿರವಾಗಿದ್ದರು. ಅಪ್ಪು ಜೊತೆ ಕಳೆದ ದಿನಗಳಲ್ಲಿ ಅವರ ಆಪ್ತರ ಎಂದಿಗೂ ಮರೆಯಲು ಸಾಧ್ಯವಿಲ್ಲ. ಯೋಗರಾಜ್ ಭಟ್ ನಿರ್ದೇಶನದ 'ಪರಮಾತ್ಮ' ಚಿತ್ರದಲ್ಲಿ ಪುನೀತ್ ನಟಿಸಿದ್ದರು.
'ಮುಂಗಾರುಮಳೆ' ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ನಟಿಸಬೇಕಿತ್ತು. ಕಥೆ ಕೇಳಿದ್ದ ಪುನೀತ್ ಹಾಗೂ ರಾಘಣ್ಣ ಹೊಸ ನಟನ ಜೊತೆ ಈ ಸಿನಿಮಾ ಮಾಡುವಂತೆ ಸಲಹೆ ಕೊಟ್ಟಿದ್ದರು. ನನಗಾಗಿ ಈ ಕಥೆಯನ್ನು ಬದಲಿಸುವುದು ಬೇಡ, ಇಮೇಜ್ ಅದು ಇದು ಎಂದು ಹಾಳುಮಾಡದೇ ಹೊಸ ನಟನಿಗೆ ಸಿನಿಮಾ ಮಾಡಿ ಎಂದಿದ್ದರು. ಅವರಿಬ್ಬರು ಹೇಳಿದ ಮಾತು ಭಟ್ಟರಿಗೂ ಸರಿ ಅನ್ನಿಸಿತು. ಬಳಿಕ ಆ ಸಿನಿಮಾ ಗಣೇಶ್ ಪಾಲಾಯಿತು.

ಬಳಿಕ ಯೋಗರಾಜ್ ಭಟ್ ನಿರ್ದೇಶನದ 'ಗಾಳಿಪಟ' ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ನಟಿಸಬೇಕಿತ್ತು. ಕಥೆ ಕೂಡ ಕೇಳಿ ಒಪ್ಪಿದ್ದರು. ಆದರೆ ಆದ 'ಬಿಂದಾಸ್' ಚಿತ್ರದಲ್ಲಿ ನಟಿಸುತ್ತಿದ್ದರು. ಆ ಸಿನಿಮಾ ಮುಗಿದ ಬಳಿಕ ಮಾಡೋಣ ಎಂದಿದ್ದರು. ಆದರೆ ಆಂಧ್ರದಿಂದ ಬಂದಿದ್ದ ನಿರ್ಮಾಪಕರು ತಕ್ಷಣಕ್ಕೆ ಸಿನಿಮಾ ಮಾಡಬೇಕು ಎಂದಾಗ ಮತ್ತೆ ಗಣಿ-ಭಟ್ರು ಒಂದಾಗಿ ಸಿನಿಮಾ ಮಾಡಿದ್ದರು. ಹೀಗೆ ಭಟ್ರು ಹಾಗೂ ಅಪ್ಪು ಎರಡು ಸಿನಿಮಾಗಳನ್ನು ಒಟ್ಟಿಗೆ ಮಾಡುವ ಅವಕಾಶ ಮಿಸ್ ಆಗಿತ್ತು.
ಕೊನೆಗೆ ಯೋಗರಾಜ್ ಭಟ್ ನಿರ್ದೇಶನದ 'ಪರಮಾತ್ಮ' ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಹೀರೊ ಆಗಿ ನಟಿಸಿದ್ದರು. ಸಿನಿಮಾ ಗೆದ್ದಿತ್ತು. ಶೀಘ್ರದಲ್ಲೇ ಚಿತ್ರವನ್ನು ರೀ-ರಿಲೀಸ್ ಮಾಡುವ ಪ್ರಯತ್ನ ನಡೀತಿದೆ. 'ಪರಮಾತ್ಮ' ಚಿತ್ರದ ಸಮಯದಲ್ಲಿ ಪುನೀತ್ ಹಾಗೂ ಯೋಗರಾಜ್ ಭಟ್ ನಡುವೆ ಆತ್ಮೀಯ ಒಡನಾಟ ಬೆಳೆದಿತ್ತು. ಆರ್‌ಜೆ ಸುನೀಲ್ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಅಪ್ಪು ಬಗ್ಗೆ ಯೋಗರಾಜ್ ಭಟ್ ಮಾತನಾಡಿದ್ದಾರೆ.
ಇವತ್ತಿಗೂ ಯೋಗರಾಜ್ ಭಟ್ ತಮ್ಮ ಮೊಬೈಲ್ ಫೋನ್ ಅಲ್ಲಿ ಪುನೀತ್ ರಾಜ್‌ಕುಮಾರ್ ಅವರ ನಂಬರ್ ಸೇವ್ ಮಾಡಿ ಇಟ್ಟುಕೊಂಡಿದ್ದಾರೆ. ಕೊನೆಯದಾಗಿ ಶಿವಣ್ಣ ಹಾಗೂ ಅಪ್ಪು ಇಬ್ಬರನ್ನು ಭೇಟಿ ಮಾಡಿ ಒಂದು ಕಥೆ ಹೇಳಿ ಸಿನಿಮಾ ಮಾಡೋಕೆ ಒಪ್ಪಿಸಿದ್ದೆ. ಅದೇ ಕೊನೆ ಅಪ್ಪು ಸರ್‌ನ ಭೇಟಿ ಮಾಡಿದ್ದು ಎಂದು ಭಟ್ರು ನೆನಪಿಸಿಕೊಂಡಿದ್ದಾರೆ.
ಶಿವಣ್ಣ ಹಾಗೂ ಅಪ್ಪು ಕಾಂಬಿನೇಷನ್‌ನಲ್ಲಿ ನಾನು ಒಂದು ಸಿನಿಮಾ ಮಾಡಬೇಕಿತ್ತು. ಅಪ್ಪು ಸರ್ ಕಥೆ ಕೇಳಿ ಮೆಚ್ಚಿದ್ದರು. ಮಾಡೋಕೆ ಒಪ್ಪಿದ್ದರು. ಶಿವಣ್ಣ ಕಥೆಯಲ್ಲಿ ಮತ್ತಷ್ಟು ಬದಲಾವಣೆ ಮಾಡೋಕೆ ಹೇಳಿದ್ದರು. ಸರಿ ಎಂದು ನಾನು ಅದಕ್ಕೆ ಒಪ್ಪಿಕೊಂಡಿದ್ದೆ ಎಂದು ಯೋಗರಾಜ್ ಭಟ್ ಆ ದಿನವನ್ನು ನೆನಪಿಸಿಕೊಂಡಿದ್ದಾರೆ. 'ಪರಮಾತ್ಮ' ಸಿನಿಮಾ 9 ವರ್ಷ ಪೂರೈಸಿದ ದಿನ ಅಪ್ಪು ಸರ್ ನನಗೆ ಒಂದು ವಾಯ್ಸ್ ಮೆಸೇಜ್ ಕಳುಹಿಸಿದ್ದರು. ಅದು ಇನ್ನು ನನ್ನ ಬಳಿ ಇದೆ ಎಂದು ಭಟ್ರ ಕೇಳಿಸಿದ್ದಾರೆ.
ಅಕ್ಟೋಬರ್ 29ರಂದು ನಟ ಪುನೀತ್ ರಾಜ್‌ಕುಮಾರ್ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು. ಅಕ್ಟೋಬರ್ 6ರಂದು 'ಪರಮಾತ್ಮ' ಸಿನಿಮಾ 9 ವರ್ಷ ಪೂರೈಸಿತ್ತು. ಈ ಸಂಭ್ರಮದಲ್ಲಿ "ಸರ್, ಪರಮಾತ್ಮ ಚಿತ್ರಕ್ಕೆ 9 ವರ್ಷ. ಬಹಳ ಖುಷಿಯಾಯಿತು. ಈ ಅದ್ಭುವ ಅನುಭವಕ್ಕೆ ಧನ್ಯವಾದಗಳು ಸರ್" ಎಂದು ನಿರ್ದೇಶಕ ಯೋಗರಾಜ್ ಭಟ್ ಅವರಿಗೆ ಅಂದು ಅಪ್ಪು ವಾಯ್ಸ್ ಮೆಸೇಜ್ ಕಳುಹಿಸಿದ್ದರು.
ಅಭಿಮಾನಿಗಳು ಪುನೀತ್ ರಾಜ್‌ಕುಮಾರ್ ಅವರ ವಾಯ್ಸ್ ಕೇಳಿ ಬೇಸರಗೊಂಡಿದ್ದಾರೆ. ಅಪ್ಪು ಜೊತೆಗೆ ಕಳೆದ ಆ ದಿನಗಳನ್ನು ಯೋಗರಾಜ್ ಭಟ್ ಮೆಲಕು ಹಾಕಿದ್ದಾರೆ. ಸದ್ಯ ಯೋಗರಾಜ್ ಭಟ್ ನಿರ್ದೇಶನದ 'ಮನದ ಕಡಲು' ಸಿನಿಮಾ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.


Click it and Unblock the Notifications











