Milana Vs Anatharu: ಒಂದೇ ದಿನ 'ಮಿಲನಾ', 'ಅನಾಥರು' ರಿಲೀಸ್: ಯಾವ ಸಿನಿಮಾ ಫಲಿತಾಂಶ ಏನಾಗಿತ್ತು?
ಸರಿಯಾಗಿ 16 ವರ್ಷಗಳ ಹಿಂದೆ ಇದೇ ದಿನ ಕನ್ನಡದ 'ಮಿಲನಾ' ಹಾಗೂ 'ಅನಾಥರು' ಸಿನಿಮಾಗಳು ರಿಲೀಸ್ ಆಗಿತ್ತು. ಪುನೀತ್ ರಾಜ್‌ಕುಮಾರ್, ಪಾರ್ವತಿ ಮೆನನ್ ನಟನೆಯ ರೊಮ್ಯಾಂಟಿಕ್ ಫ್ಯಾಮಿಲಿ ಎಂಟರ್‌ಟೈನರ್ 'ಮಿಲನಾ' ದಾಖಲೆ ಪ್ರದರ್ಶನ ಕಂಡಿತ್ತು. ಉಪೇಂದ್ರ, ದರ್ಶನ್ ನಟನೆಯ 'ಅನಾಥರು' ಸಿನಿಮಾ ಆರಂಭದಲ್ಲಿ ಅಬ್ಬರಿಸಿದರು ಬಳಿಕ ಸೈಲೆಂಟ್ ಆಗಿತ್ತು.
ದಶಕಗಳಿಂದಲೂ ಕನ್ನಡ ಚಿತ್ರರಂಗದಲ್ಲಿ ದೊಡ್ಡ ದೊಡ್ಡ ಸಿನಿಮಾಗಳ ನಡುವೆ ಬಾಕ್ಸಾಫೀಸ್ ಕ್ಲ್ಯಾಶ್ ನಡೀತಾ ಬರ್ತಿದೆ. ಅಂದು 'ಮಿಲನಾ' ಹಾಗೂ 'ಅನಾಥರು' ಸಿನಿಮಾಗಳ ನಡುವೆಯೂ ಬಾಕ್ಸಾಫೀಸ್‌ನಲ್ಲಿ ಪೈಪೋಟಿ ಏರ್ಪಟ್ಟಿತ್ತು. ಆದರೆ 2 ಸಿನಿಮಾಗಳಿಗೆ ಒಳ್ಳೆ ಓಪನಿಂಗ್ ಸಿಕ್ಕಿತ್ತು. 'ಮಿಲನಾ' ಸಿನಿಮಾ ಮಾತ್ರ ಥಿಯೇಟರ್‌ಗಳಲ್ಲಿ ದಾಖಲೆ ಪ್ರದರ್ಶನ ಕಂಡಿತ್ತು. ಅಭಿಮಾನಿಗಳು ಈ ಎರಡೂ ಸಿನಿಮಾಗಳನ್ನು ಇದೀಗ ನೆನೆಪಿಸಿಕೊಳ್ಳುತ್ತಿದ್ದಾರೆ.

ಪ್ರಕಾಶ್ ನಿರ್ದೇಶನದ 'ಮಿಲನಾ' ಸಿನಿಮಾ ಬರೆದ ದಾಖಲೆಗಳು ಒಂದೆರಡಲ್ಲ. ಮುಂದೆ ಮಿಲನಾ ಪ್ರಕಾಶ್ ಅಂತ್ಲೇ ಅವರು ಜನಪ್ರಿಯರಾದರು. ಆಕಾಶ್ ಹಾಗೂ ಅಂಜಲಿಯಾಗಿ ಪುನೀತ್- ಪಾರ್ವತಿ ಜೋಡಿ ಮೋಡಿ ಮಾಡಿತ್ತು. ಮನೋಮೂರ್ತಿ ಸಂಗೀತ ಚಿತ್ರಕ್ಕೆ ದೊಡ್ಡ ಶಕ್ತಿಯಾಗಿತ್ತು. ಇವತ್ತಿಗೂ 'ಮಿಲನಾ' ಸಾಂಗ್ಸ್ ಸಿನಿರಸಿಕರ ಹಾಟ್ ಫೇವರಿಟ್ ಎನಿಸಿಕೊಂಡಿದೆ. ಇಷ್ಟವಿಲ್ಲದ ಮದುವೆಯಾಗುವ ಆಕಾಶ್ ಹಾಗೂ ಅಂಜಲಿ ಮುಂದೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಒಂದಾಗಿ ಬಾಳುವ ಕತೆ ಫ್ಯಾಮಿಲಿ ಅಡಿಯನ್ಸ್ ಮನಗೆದ್ದಿತ್ತು.
137 ಚಿತ್ರಮಂದಿರಗಳಲ್ಲಿ 50 ದಿನ, 50 ಸ್ಕ್ರೀನ್‌ಗಳಲ್ಲಿ 100 ದಿನ, 15 ಥಿಯೇಟರ್‌ಗಳಲ್ಲಿ 'ಮಿಲನಾ' ಸಿನಿಮಾ 200 ದಿನ ಪೂರೈಸಿತ್ತು. ಮಲ್ಟಿಪ್ಲೆಕ್ಸ್‌ನಲ್ಲಿ ಸತತ 500 ದಿನಗಳ ಕಾಲ ಪ್ರದರ್ಶನ ಕಂಡು ಸಿನಿಮಾ ಎಲ್ಲರ ಹುಬ್ಬೇರಿಸಿತ್ತು. ಕೆ. ಎಸ್ ದುಷ್ಯಂತ್ ಈ ಚಿತ್ರವನ್ನು ನಿರ್ಮಿಸಿ ಸಕ್ಸಸ್ ಕಂಡಿದ್ದರು.
ಪೂಜಾ ಗಾಂಧಿ, ದಿಲೀಪ್ ರಾಜ್, ಮುಖ್ಯಮಂತ್ರಿ ಚಂದ್ರು, ಸುಮಿತ್ರಾ 'ಮಿಲನಾ' ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ಲವ್ ಬ್ರೇಕಪ್ ನಂತರ ಕೂಡ ಒಳ್ಳೆ ಜೀವನ ಇದೆ ಎನ್ನುವ ಸಂದೇಶವನ್ನು ಚಿತ್ರ ಹೊತ್ತು ತಂದಿತ್ತು. ಈ ಚಿತ್ರದ ನಟನೆಗಾಗಿ ಪುನೀತ್ ರಾಜ್‌ಕುಮಾರ್‌ಗೆ ಅತ್ಯುತ್ತಮ ನಟ ರಾಜ್ಯಪ್ರಶಸ್ತಿ ಕೂಡ ಸಿಕ್ಕಿತ್ತು.

ಇನ್ನು ತಮಿಳಿನ 'ಪಿತಾಮಗನ್' ರೀಮೆಕ್ ಆಗಿದ್ದ 'ಅನಾಥರು' ಸಿನಿಮಾ ಕೂಡ ಪ್ರೇಕ್ಷಕರನ್ನ ರಂಜಿಸಿತ್ತು. ತಮಿಳಿನಲ್ಲಿ ವಿಕ್ರಂ, ಸೂರ್ಯ ಮಾಡಿದ್ದ ಪಾತ್ರಗಳನ್ನು ಕನ್ನಡದಲ್ಲಿ ಉಪೇಂದ್ರ, ದರ್ಶನ್ ನಿಭಾಯಿಸಿದ್ದರು. ಸಾಧು ಕೋಕಿಲ ಚಿತ್ರವನ್ನು ಕಟ್ಟಿಕೊಟ್ಟಿದ್ದರು. ಸ್ಮಶಾನ ಕಾಯುವ ರುದ್ರನ ಪಾತ್ರದಲ್ಲಿ ಉಪ್ಪಿ ನಟನೆ ಎಲ್ಲರ ಹುಬ್ಬೇರಿಸಿತ್ತು. ಸತ್ಯಪ್ರಕಾಶ್ ಆಗಿ ದರ್ಶನ್ ಕೂಡ ಗಮನ ಸೆಳೆದರು.
ಇಬ್ಬರು ಸ್ಟಾರ್‌ಗಳಿದ್ದ 'ಅನಾಥರು' ಮೊದಲಿಗೆ ಬಾಕ್ಸಾಫೀಸ್‌ನಲ್ಲಿ ಸಖತ್ ಸದ್ದು ಮಾಡಿತು. ಆದರೆ ಹೆಚ್ಚು ದಿನ ಪ್ರದರ್ಶನ ಕಾಣಲಿಲ್ಲ. 'ಮಿಲನಾ' ಸಿನಿಮಾ ಮುಂದೆ ಮಂಕಾಗಿತ್ತು. ಆದರೆ ಸಾಧು ನಿರ್ದೇಶನ, ಉಪೇಂದ್ರ ಹಾಗೂ ದರ್ಶನ್ ನಟನೆಗೆ ಮಾತ್ರ ಒಳ್ಳೆ ರೆಸ್ಪಾನ್ಸ್ ಸಿಕ್ಕಿತು. ಇವತ್ತಿಗೂ ಟಿವಿಯಲ್ಲಿ ಈ ಸಿನಿಮಾ ಬಂದರೆ ವೀಕ್ಷಕರು ನೋಡಿ ಮೆಚ್ಚಿಕೊಳ್ಳುತ್ತಾರೆ.
ಮುನಿರತ್ನ 'ಅನಾಥರು' ಚಿತ್ರವನ್ನು ನಿರ್ಮಾಣ ಮಾಡಿದ್ದರು. ರಾಧಿಕಾ ಕುಮಾರಸ್ವಾಮಿ, ಸಾಂಘವಿ, ಹೊನ್ನವಳ್ಳಿ ಕೃಷ್ಣ, ಎಂ. ಪಿ ಶಂಕರ್ ಚಿತ್ರದ ತಾರಾಗಣದಲ್ಲಿದ್ದರು. ಈ ಚಿತ್ರವನ್ನು ಶ್ರೀ ದುರ್ಗಾ ಪರಮೇಶ್ವರಿ ಪ್ರೊಡಕ್ಷನ್ ಬ್ಯಾನರ್‌ನಲ್ಲಿ ಸ್ವತಃ ನಟಿ ರಾಧಿಕಾ ಕುಮಾರಸ್ವಾಮಿ ವಿತರಣೆ ಮಾಡಿದ್ದರು.


Click it and Unblock the Notifications










