ರಾಧಿಕಾಗೆ ನಾನು ಕೆಜಿಗಟ್ಟಲೆ ಚಿನ್ನ ಕೊಡ್ಸಿದ್ದೀನಿ; ಯಶ್‌ನ ಕೇಳಿ ನಾನು ಸಿನ್ಮಾ ಮಾಡ್ಬೇಕಂತಿಲ್ಲ; ಪುಷ್ಪಾ
ನಿರ್ಮಾಪಕಿ ಪುಷ್ಪಾ ಅರುಣ್‌ಕುಮಾರ್ ಈಗ ಸುದ್ದಿಯಲ್ಲಿದ್ದಾರೆ. ಅವರು ಮಾತನಾಡುವ ಮಾತುಗಳು ಪದೇ ಪದೆ ಟ್ರೋಲ್ ಆಗಿ ನಾನಾ ಅರ್ಥ ಪಡೆದುಕೊಳ್ಳುತ್ತಿರುತ್ತದೆ. ಆಕೆಯ ಮಾತುಗಳನ್ನು ಬಹುತೇಕರು ಅರ್ಥ ಮಾಡಿಕೊಳ್ಳುತ್ತಿಲ್ಲ. 'ಕೊತ್ತಲವಾಡಿ' ಚಿತ್ರದ ಪ್ರಚಾರಕ್ಕೆ ಯಶ್ ಬಂದಿಲ್ಲ ಎನ್ನುವ ಕಾರಣಕ್ಕೆ ಏನೇನೋ ಊಹಾಪೋಹ ಹರಿದಾಡುತ್ತಿದೆ.
ಯಶ್ ಹಾಗೂ ತಾಯಿ ಪುಷ್ಪಾ ಅವರ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಅದನ್ನು ಈಗಾಗಲೇ ಅವರು ಸ್ಪಷ್ಟಪಡಿಸಿದ್ದಾರೆ. ಯಶ್ ತಮ್ಮ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಹಾಗಾಗಿ 'ಕೊತ್ತಲವಾಡಿ' ಸಿನಿಮಾ ಪ್ರಚಾರ ಮಾಡಲು ನಾನು ಕರೆಯುತ್ತಿಲ್ಲ. ಅವನು ಮಾತ್ರ ನೋಡಿದರೆ ಸಿನಿಮಾ ಗೆಲ್ಲಲ್ಲ, ಪ್ರೇಕ್ಷಕರು ಸಿನಿಮಾ ನೋಡಿ ಗೆಲ್ಲಿಸಬೇಕು ಎಂದು ಹೇಳುತ್ತಾ ಬರ್ತಿದ್ದಾರೆ.

ಸಿನಿಮಾ ನಿರ್ಮಾಣ ನಿರ್ಧಾರ, ಜವಾಬ್ದಾರಿ ಎಲ್ಲವೂ ನನ್ನದೇ ಎಂದು ನಿರ್ಮಾಪಕಿ ಪುಷ್ಪಾ ಹೇಳುತ್ತಾ ಬರ್ತಿದ್ದಾರೆ. ಇತ್ತೀಚೆಗೆ Insightrush News ಯೂಟ್ಯೂಬ್ ಸಂದರ್ಶನದಲ್ಲಿ ಕೂಡ ಇದೇ ಮಾತನ್ನು ಅವರು ಹೇಳಿದ್ದಾರೆ. "ಯಶ್‌ಗೆ ಸಿನಿಮಾ ಹಾಳು ಮಾಡುವವರನ್ನು ಕಂಡರೆ ಅವನಿಗೆ ಆಗಲ್ಲ, ಅದು ನಾನೇ ಆಗಿದ್ದರೂ ಹೇಳ್ತಾನೆ. ಅವನು ಸಪೋರ್ಟ್ ಮಾಡಲ್ಲ, ಅಂತಲ್ಲ ಮಾಡ್ತಾನೆ" ಎಂದಿದ್ದಾರೆ.
ಇದೇ ಸಂದರ್ಶನದಲ್ಲಿ "ನಾನು ನಮ್ಮ ರಾಧಿಕಾಗೆ ಕೆಜಿಗಟ್ಟಲೆ ಚಿನ್ನ ಕೊಡ್ಸಿದ್ದೀನಿ. ಆ ಕೆಜಿಗಟ್ಟಲೆ ಚಿನ್ನ ತರಲು ನಾನೇ ಹೋಗಿದ್ದೆ. ಯಶ್ ಬಂದಿರಲಿಲ್ಲ, ರಾಧಿಕಾ ತಾಯಿ ಮಾತ್ರ ಬಂದಿದ್ರು. ಕೊಡ್ಸಿದ್ದು ನಾವೇ, ಆದರ ಒಂದಿಪ್ಪತ್ತು ಜನರನ್ನು ಚಿನ್ನಾಭರಣ ಖರೀದಿಸಲು, ಸೆಲೆಕ್ಟ್ ಮಾಡಲು ಕರ್ಕೊಂಡ್ ಹೋಗ್ಲಿಲ್ಲ. ನಾನು ಸಿನಿಮಾ ಮಾಡುವಾಗಲೂ ಯಶ್‌ನ ಕೇಳಿ, ಹಣ ತಗೊಂಡು, ಯಶ್‌ಗೆ ಭಯಭಕ್ತಿಯಾಗಿ ಮಾಡ್ಬೇಕು ಎನ್ನುವುದಿಲ್ಲ. ನಾನು, ಯಜಮಾನ್ರು ಡಿಸೈಡ್ ಮಾಡಿದ್ವಿ. ಹಾಗಂತ ಯಶ್‌ಗೆ ಗೊತ್ತಿಲ್ಲ ಅಂತಲ್ಲ" ಎಂದಿದ್ದಾರೆ.
ಮಾತು ಮುಂದುವರೆಸಿರುವ ಪುಷ್ಪಾ "ಅಮ್ಮ ಏನೋ ಮಾಡ್ತಾರೆ ಮಾಡಲಿ ಎಂದು ಯಶ್ ಇದ್ದಾನೆ. ಈಗ ಅವನು ಏನ್ ಮಾಡ್ತಿದ್ರು ನಾವು ಕೇಳೋಕೆ ಹೋಗಲ್ಲ. ಅವನಿಗೆ ತಿಳುವಳಿಕೆ ಇದೆ ತುಂಬಾ ಚೆನ್ನಾಗಿ ಮಾಡ್ತಾನೆ. ದಿನಾ ಬೆಳಗ್ಗೆ ಆ ವಿಷಯ ಮಾತನಾಡಿ ಟೈಂ ವೇಸ್ಟ್ ಮಾಡಲ್ಲ" ಎಂದು ತಿಳಿಸಿದ್ದಾರೆ.
'ಕೊತ್ತಲವಾಡಿ' ಸಿನಿಮಾ ಬಗ್ಗೆಯೂ ಪುಷ್ಪಾ ಅರುಣ್‌ಕುಮಾರ್ ಮಾತನಾಡಿದ್ದಾರೆ. ಸಿನಿಮಾ ಚೆನ್ನಾಗಿ ಬಂದಿದೆ. ಇಡೀ ತಂಡವಾಗಿ ಎಲ್ಲರೂ ಕೆಲಸ ಮಾಡಿದ್ದಾರೆ. ನಮಗೂ ಸಿನಿಮಾ ಟೇಸ್ಟ್ ಇದೆ. ಅದಕ್ಕೆ ತಕ್ಕಂತೆ ಏನು ಬೇಕೋ ಎಲ್ಲಾ ಕೊಟ್ಟು ಸಿನಿಮಾ ಮಾಡಿದ್ದೀವಿ. ಇವತ್ತು ಬಂದು ನಾಳೆ ಹೋಗುವುದಕ್ಕೆ ನಾವು ಬಂದಿಲ್ಲ. ಚಿತ್ರದ ಎಲ್ಲಾ ಕ್ರೆಡಿಟ್ಟು ತಂಡಕ್ಕೆ ಹೋಗಬೇಕು ಎಂದಿದ್ದಾರೆ.
ಪೃಥ್ವಿ ಅಂಬರ್ ಹಾಗೂ ಕಾವ್ಯಾ ಶೈವ ನಟನೆಯ 'ಕೊತ್ತಲವಾಡಿ' ಸಿನಿಮಾ ಆಗಸ್ಟ್ 1ರಂದು ತೆರೆಗೆ ಬಂದಿತ್ತು. ಆದರೆ ದೊಡ್ಡದಾಗಿ ಗೆಲ್ಲಲಿಲ್ಲ. ಚಿತ್ರದ ಬಗ್ಗೆ ಕೆಲವರು ಮೆಚ್ಚುಗೆ ಮಾತನಾಡಿದ್ದರು. ಇನ್ನು ಥಿಯೇಟರ್ ಸಮಸ್ಯೆಯಿಂದಲೂ ನಮ್ಮ ಚಿತ್ರಕ್ಕೆ ಹಿನ್ನೆಡೆಯಾಗಿತು. ಕಾರ್ತಿಕ್ ನಮಗೆ ಥಿಯೇಟರ್ ವಿಚಾರದಲ್ಲಿ ಸಮಸ್ಯೆ ಮಾಡಿದ್ದ ಎಂದು ಮತ್ತೊಂದು ಸಂದರ್ಶನದಲ್ಲಿ ಪುಷ್ಪಾ ಹೇಳಿದ್ದಾರೆ.
'ಕೊತ್ತಲವಾಡಿ' ಬಳಿಕ ಶರಣ್ ಹೀರೊ ಆಗಿ ಪಿಎ ಪ್ರೊಡಕ್ಷನ್ಸ್ ಸಂಸ್ಥೆ ಮತ್ತೊಂದು ಸಿನಿಮಾ ನಿರ್ಮಾಣಕ್ಕೆ ಮುಂದಾಗಿದೆ. ಶೀಘ್ರದಲ್ಲೇ ಆ ಸಿನಿಮಾ ಶುರುವಾಗಲಿದೆ. ಶ್ರೀರಾಜ್ ಆ ಚಿತ್ರಕ್ಕೂ ಆಕ್ಷನ್ ಕಟ್ ಹೇಳುತ್ತಾರೆ ಎನ್ನಲಾಗ್ತಿದೆ.


Click it and Unblock the Notifications











