twitter
    For Quick Alerts
    ALLOW NOTIFICATIONS  
    For Daily Alerts

    ರಾಜ್ಯಸಭೆಗೆ ವಿಜಯೇಂದ್ರ ಪ್ರಸಾದ್: ಕತೆಗಾರನ ಜೀವನವೇ ಕತೆ!

    |

    'ನಾಯಕಿಯನ್ನು ಮಗುವಿನಂತೆ ಸಾಕುತ್ತಿರುವ ನಾಯಕ, ಆತನನ್ನು ಅರೆಕ್ಷಣವೂ ಬಿಟ್ಟು ಇರಲಾರದ ನಾಯಕಿ ಹೀಗಿದ್ದಾಗ ಆ ನಾಯಕಿಯೇ ನಾಯಕನ ಎದೆಗೆ ಭರ್ಜಿ ಇರಿದರೆ!' ಇದು ಅಸಾಧ್ಯ ಸನ್ನಿವೇಶ ಎನಿಸಬಹುದು. ಮತ್ತೊಂದು ಉದಾಹರಣೆ ಗಮನಿಸುವುದಾದರೆ 'ಭಾರಿ ಶ್ರೀಮಂತ, ಶಕ್ತಿಶಾಲಿ, ಪ್ರಭಾವಿ ಉದ್ಯಮಿ ಆದರೆ ಆತನನ್ನು ಒಂದು ಸಣ್ಣ ನೊಣ ಕೊಲ್ಲುತ್ತದೆ'! ಈ ಕತೆಯನ್ನು ಸಣ್ಣ ಮಕ್ಕಳೂ ಸಹ ನಂಬಲಿಕ್ಕಿಲ್ಲ. ಆದರೆ ಹೀಗೊಂದು ಕತೆಯನ್ನು ಹೆಣೆದವರು ವಿಜಯೇಂದ್ರ ಪ್ರಸಾದ್, ತೆರೆಗೆ ತಂದಿದ್ದು ರಾಜಮೌಳಿ ಎನ್ನುವ ಮಾಂತ್ರಿಕ ನಿರ್ದೇಶಕ.

    ವಿ.ವಿಜಯೇಂದ್ರ ಪ್ರಸಾದ್ ಎಂಬ ಕತೆಗಾರನ ಕಲ್ಪನೆಯೇ ಹೀಗೆ, ಅವರ ಕತೆಯ ಒನ್‌ ಲೈನರ್ ಸಾಮಾನ್ಯ ಎನಿಸಬಹುದು ಆದರೆ ಅವರು ಸೃಷ್ಟಿಸುವ ಸನ್ನಿವೇಶಗಳು ಅತ್ಯದ್ಭುತ. ಭಾರತದ ಅತ್ಯಂತ ಯಶಸ್ವಿ ಹಾಗೂ ಅತ್ಯುತ್ತಮ ಸಿನಿಮಾ ಕತೆಗಾರ ವಿಜೇಂದ್ರ ಪ್ರಸಾದ್ ಅವರ ಸಿನಿಮಾ ಕೃಷಿಯನ್ನು ಗೌರವಿಸಿ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗಿದೆ.

    ಸಂಗೀತ ಮಾಂತ್ರಿಕ ಇಳಯರಾಜ, ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ರಾಜ್ಯಸಭೆಗೆ ನಾಮನಿರ್ದೇಶನಸಂಗೀತ ಮಾಂತ್ರಿಕ ಇಳಯರಾಜ, ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ರಾಜ್ಯಸಭೆಗೆ ನಾಮನಿರ್ದೇಶನ

    ವಿ.ವಿಜಯೇಂದ್ರ ಪ್ರಸಾದ್‌ಗೆ ಕತೆಗಾರನಾಗಬೇಕೆಂದೊ ಅಥವಾ ಸಿನಿಮಾ ರಂಗಕ್ಕೆ ಕಾಲಿಡಬೇಕೆಂದು ಯಾವುದೇ ಆಸೆಗಳಿರಲಿಲ್ಲ. ಎಲ್ಲರಂತೆ ಸಾಮಾನ್ಯ ಬದುಕೊಂದು ಧಕ್ಕಿದರೆ ಸಾಕು ಎಂದುಕೊಂಡಿದ್ದ ಸಾಮಾನ್ಯ ವ್ಯಕ್ತಿ ಅವರು. ಇಂಥಹಾ ಮನಸ್ಥಿತಿ ಮೂಡಲು ಕಾರಣ ಅವರ ಸರಳ ಕೌಟುಂಬಿಕ ಹಿನ್ನೆಲೆ.

    ವಿಜಯೇಂದ್ರ ಪ್ರಸಾದ್ 1942 ರ ಮೇ 29 ರಂದು ಪಶ್ಚಿಮ ಗೋಧಾವರಿ ಜಿಲ್ಲೆಯ ಕೊವ್ವೂರಿನಲ್ಲಿ ಜನಿಸಿದರು. ಇವರ ಪೂರ್ಣ ಹೆಸರು ಕೋಡೂರಿ ವಿಶ್ವ ವಿಜಯೇಂದ್ರ ಪ್ರಸಾದ್. ವಿಜಯೇಂದ್ರ ಪ್ರಸಾದ್ ತಂದೆ ತಾಯಿ ವ್ಯವಸಾಯ ಮಾಡುತ್ತಿದ್ದರು. ವಿಜಯೇಂದ್ರ ಪ್ರಸಾದ್‌ಗೆ ಒಟ್ಟು ಆರು ಅಣ್ಣ-ತಮ್ಮಂದಿರು ಒಬ್ಬ ಹಿರಿಯಕ್ಕ. ವಿಜಯೇಂದ್ರ ಪ್ರಸಾದ್ ಹಿರಿಯಣ್ಣನ ದೆಸೆಯಿಂದ ನಿಧಾನಕ್ಕೆ ಕಾಂಟ್ರಾಕ್ಟ್ ಕೆಲಸಗಳು ಸಹ ಈ ಕುಟುಂಬಕ್ಕೆ ಧಕ್ಕಲು ಆರಂಭಿಸಿದವು. ಅದೇ ಸಮಯದಲ್ಲಿ ವಿಜಯೇಂದ್ರ ಪ್ರಸಾದ್‌ರ ತಂದೆ-ತಾಯಿ, ಅಕ್ಕ ಹಾಗೂ ಇನ್ನು ಕೆಲವರು ಕರ್ನಾಟಕದ ರಾಯಚೂರಿನಲ್ಲಿ ಜಮೀನು ಖರೀದಿಸಿ ಇಲ್ಲಿಗೆ ವಲಸೆ ಬಂದರು. ಆದರೆ ವಿಜಯೇಂದ್ರ ಪ್ರಸಾದ್ ರಾಯಚೂರಿಗೆ ಬರದೆ, ವೈಜಾಜಿಗೆ ತೆರಳಿ ತಮ್ಮಿಬ್ಬರು ಅಣ್ಣಂದಿರ ಜೊತೆ ಕಾಂಟ್ರಾಕ್ಟ್ ಕೆಲಸದಲ್ಲಿ ಸಹಾಯ ಮಾಡುತ್ತಿದ್ದರು. ಆದರೆ ವ್ಯವಸ್ಥೆಯಲ್ಲಾದ ಬದಲಾವಣೆಯಿಂದ ಕಾಂಟ್ರಾಕ್ಟ್ ಕೆಲಸಗಳು ಇವರ ಕೈತಪ್ಪಿ ಮೂವರು ಅಣ್ಣ-ತಮ್ಮಂದಿರು ರಾಯಚೂರಿಗೆ ಬಂದು ಅಪ್ಪ-ಅಮ್ಮನ ಜೊತೆ ವ್ಯವಸಾಯದಲ್ಲಿ ತೊಡಗಿಕೊಂಡರು.

    ಆಸ್ತಿ ಮಾರಿ ಸಂಕಷ್ಟಕ್ಕೆ ಸಿಲುಕಿದ ಕುಟುಂಬ

    ಆಸ್ತಿ ಮಾರಿ ಸಂಕಷ್ಟಕ್ಕೆ ಸಿಲುಕಿದ ಕುಟುಂಬ

    ಇದೇ ಸಮಯದಲ್ಲಿ ವಿಜಯೇಂದ್ರ ಪ್ರಸಾದ್, ತಾವು ವೈಜಾಜ್‌ನಲ್ಲಿ ಪ್ರೇಮಿಸಿದ್ದ ರಾಜನಂದಿನಿಯನ್ನು ರಾಯಚೂರಿಗೆ ಕರೆತಂದು ವಿವಾಹವಾದರು. ಇವರಿಗೆ ಇಬ್ಬರು ಮಕ್ಕಳು ಅದರಲ್ಲಿ ರಾಜಮೌಳಿ ಒಬ್ಬರು. ರಾಜಮೌಳಿ ಜನಿಸಿದ್ದು ರಾಯಚೂರಿನಲ್ಲಿಯೇ. ಆದರೆ ವಿದ್ಯಾಭ್ಯಾಸಕ್ಕೆ ಅವರನ್ನು ಕೊವ್ವೂರಿಗೆ ಕಳಿಸಿದರು ವಿಜಯೇಂದ್ರ ಪ್ರಸಾದ್. ರಾಜಮೌಳಿ ಜನಿಸುವ ವೇಳೆಗೆ ವಿಜಯೇಂದ್ರ ಪ್ರಸಾದ್ ಕುಟುಂಬ ಬಹಳ ಆರ್ಥಿಕ ಸಂಕಷ್ಟದಲ್ಲಿತ್ತು. ವಿಜಯೇಂದ್ರ ಪ್ರಸಾದ್‌ರ ದೊಡ್ಡಣ್ಣ ಶಿವಶಕ್ತಿದತ್ತ (ಸಂಗೀತ ನಿರ್ದೇಶಕ ಕೀರವಾಣಿಯ ತಂದೆ) ಆಗಿನ ಕನಸಿನ ನಗರಿ ಮದ್ರಾಸ್‌ಗೆ ತೆರಳಿದರು ಸಿನಿಮಾ ನಿರ್ದೇಶಿಸಲು. ಆದರೆ ಹೊಸಬರಾಗಿದ್ದ ಅವರಿಗೆ ನಿರ್ಮಾಪಕ ಸಿಗದೆ ಆಸ್ತಿ ಮಾರಿ ಸಿನಿಮಾ ಮಾಡಿದರು ಅದು ಬಿಡುಗಡೆ ಸಹ ಆಗದೆ ಕುಟುಂಬ ಇನ್ನಷ್ಟು ಆರ್ಥಿಕ ಸಂಕಷ್ಟಗಳಿಗೆ ಸಿಲುಕಿತು.

    ಸಹಾಯಕ ಕತೆಗಾರನಾಗಿ ಕೆಲಸ ಮಾಡಿದ ವಿಜಯೇಂದ್ರ ಪ್ರಸಾದ್

    ಸಹಾಯಕ ಕತೆಗಾರನಾಗಿ ಕೆಲಸ ಮಾಡಿದ ವಿಜಯೇಂದ್ರ ಪ್ರಸಾದ್

    ರಾಯಚೂರಿನಲ್ಲಿದ್ದ ಕೃಷಿ ಭೂಮಿಯನ್ನು ಕಳೆದುಕೊಂಡ ಕಾರಣ ಉದ್ಯೋಗ ಹೀನರಾದ ವಿಜಯೇಂದ್ರ ಪ್ರಸಾದ್ ಉದ್ಯೋಗ ಅರಸಿ ಮದ್ರಾಸ್‌ಗೆ ಹೋದರು. ಅಲ್ಲಿ ಅಣ್ಣ ಶಿವಶಕ್ತಿ ಪ್ರಸಾದ್ ಜೊತೆ ಸೇರಿ ಸಿನಿಮಾಗಳಲ್ಲಿ ಸಣ್ಣ-ಪುಟ್ಟ ಕೆಲಸ ಮಾಡಲು ಆರಂಭಿಸಿದರು. ಕೊನೆಗೆ ಈಗಿನ ಖ್ಯಾತ ನಿರ್ಮಾಪಕ, ನಿರ್ದೇಶಕ ರಾಘವೇಂದ್ರ ರಾವ್ ಅವಕಾಶ ನೀಡಿ ಸಹಾಯಕ ಬರಹಗಾರನನ್ನಾಗಿ ಸೇರಿಸಿಕೊಂಡರು. ವಿಜಯೇಂದ್ರ ಪ್ರಸಾದ್ ಮೊದಲಿಗೆ ತಮ್ಮ ಅಣ್ಣ ಶಿವಶಕ್ತಿ ಪ್ರಸಾದ್ ಜೊತೆ ಸೇರಿ 'ಜಾನಕಿ ರಾಮುಡು' ಸಿನಿಮಾದ ಕತೆ ಬರೆದರು, 1988 ರಲ್ಲಿ ಬಿಡುಗಡೆ ಆದ ಆ ಸಿನಿಮಾ ದೊಡ್ಡ ಹಿಟ್ ಆಯಿತು.

    ಸ್ವಂತ ಕತೆ ಬರೆಯಲು 9 ವರ್ಷ ಕಾದ ವಿಜಯೇಂದ್ರ ಪ್ರಸಾದ್

    ಸ್ವಂತ ಕತೆ ಬರೆಯಲು 9 ವರ್ಷ ಕಾದ ವಿಜಯೇಂದ್ರ ಪ್ರಸಾದ್

    ಆ ನಂತರವು ಹಲವು ವರ್ಷ ಅಸಿಸ್ಟೆಂಟ್ ಕತೆಗಾರನಾಗಿಯೇ ಉಳಿವ ವಿಜಯೇಂದ್ರ ಪ್ರಸಾದ್ ಸ್ವತಂತ್ರ್ಯ ಕತೆಗಾರನಾಗಿದ್ದು 1994 ರಲ್ಲಿ. ನಟ ಬಾಲಕೃಷ್ಣಗಾಗಿ 'ಬೊಬ್ಬಿಲಿ ಸಿಂಹಂ' ಕತೆ ಬರೆದ ಬಳಿಕ ವಿಜಯೇಂದ್ರ ಪ್ರಸಾದ್ ವೃತ್ತಿ ಜೀವನ ಭಿನ್ನ ತಿರುವು ಪಡೆದುಕೊಂಡಿತು. ತೆಲುಗು ಚಿತ್ರರಂಗದ ಬೇಡಿಕೆಯ ಕತೆಗಾರರಾದರು ವಿಜಯೇಂದ್ರ ಪ್ರಸಾದ್. ಸ್ವಂತ ಕತೆ ಬರೆಯುವ ಮುನ್ನ 9 ವರ್ಷ ಅವರು ಸಹಾಯಕ ಬರಹಗಾರನಾಗಿ ಕೆಲಸ ಮಾಡಿದರು. 'ಬೊಬ್ಬಿಲಿ ಸಿಂಹಂ' ಬಳಿಕ ವರ್ಷಕ್ಕೆ ಎರಡು-ಮೂರು ಸಿನಿಮಾಗಳಿಗೆ ಕತೆ ಬರೆಯಲಾರಂಭಿಸಿದರು.

    ಕನ್ನಡದ ಕೆಲವು ಸಿನಿಮಾಗಳಿಗೂ ಕತೆ ಒದಗಿಸಿದ್ದಾರೆ

    ಕನ್ನಡದ ಕೆಲವು ಸಿನಿಮಾಗಳಿಗೂ ಕತೆ ಒದಗಿಸಿದ್ದಾರೆ

    ಅದೇ ಸಮಯದಲ್ಲಿ ವಿಷ್ಣುವರ್ಧನ್ ನಟಿಸಿದ್ದ ಕನ್ನಡದ 'ಅಪ್ಪಾಜಿ' ಸಿನಿಮಾಕ್ಕೆ ಕತೆ ಬರೆದರು ಅದು ಸೂಪರ್ ಹಿಟ್ ಆಯಿತು. ಬಳಿಕ ಶಿವರಾಜ್ ಕುಮಾರ್ ನಟನೆಯ 'ಕುರುಬನ ರಾಣಿ' ಸಿನಿಮಾಕ್ಕೂ ಕತೆ ಬರೆದರು ಅದೂ ಸೂಪರ್ ಹಿಟ್. ರವಿಚಂದ್ರನ್ ನಟನೆಯ 'ಪಾಂಡು ರಂಗ ವಿಠಲ' ಸಿನಿಮಾಕ್ಕೆ ಕತೆ ಒದಗಿಸಿದರು. ತಮ್ಮ ಪುತ್ರ ರಾಜಮೌಳಿ ನಿರ್ದೇಶಕನಾದ ಬಳಿಕ ಅವರು ಕತೆ ಬರೆಯುವ ವಿಧಾನವೂ ಹೆಚ್ಚು ಬದಲಾವಣೆ ಆಯಿತು. ಹೊಸ ತಲೆಮಾರಿನ ಭಾವಕ್ಕೆ ತಕ್ಕಂತೆ ಕತೆ ಹೆಣೆಯುವುದನ್ನು ಶೀಘ್ರವೇ ಕರಗತ ಮಾಡಿಕೊಂಡ ವಿಜಯೇಂದ್ರ ಪ್ರಸಾದ್, 'ಸೈ' ಅಂಥಹಾ ಕಾಲೇಜು ಕತೆಗಳನ್ನು, 'ಯಮದೊಂಗ', 'ವಿಕ್ರಮಾರ್ಕುಡು' ರೀತಿಯ ಕತೆಗಳನ್ನು ಬರೆದು ಯಶಸ್ವಿಯಾದರು.

    ಸಲ್ಮಾನ್ ಖಾನ್, ಕಂಗನಾ, ನಿಖಿಲ್ ಕುಮಾರಸ್ವಾಮಿ ಸಿನಿಮಾಗಳಿಗೂ ಕತೆ

    ಸಲ್ಮಾನ್ ಖಾನ್, ಕಂಗನಾ, ನಿಖಿಲ್ ಕುಮಾರಸ್ವಾಮಿ ಸಿನಿಮಾಗಳಿಗೂ ಕತೆ

    ಪುತ್ರ ರಾಜಮೌಳಿ ಸಿನಿಮಾಗಳಿಗೆ ಮಾತ್ರವೇ ಅಲ್ಲದೆ ಹಲವಾರು ನಾಯಕ ನಟರಿಗಾಗಿ ವಿಜಯೇಂದ್ರ ಪ್ರಸಾದ್ ಕತೆ ಬರೆದಿದ್ದಾರೆ. ಸಲ್ಮಾನ್ ಖಾನ್‌ಗಾಗಿ 'ಭಜರಂಗಿ ಭಾಯಿಜಾನ್', ನಿಖಿಲ್ ಕುಮಾರಸ್ವಾಮಿಯ ಮೊದಲ ಸಿನಿಮಾ 'ಜಾಗ್ವಾರ್‌'ಗೆ ಕತೆ ಬರೆದವರೂ ವಿಜಯೇಂದ್ರ ಪ್ರಸಾದ್ ಅವರೇ. ವಿಜಯ್‌ಗಾಗಿ 'ಮರ್ಸೆಲ್', ಕಂಗನಾ ರನೌತ್‌ಗಾಗಿ 'ಮಣಿಕರ್ಣಿಕಾ' ಹಾಗೂ 'ತಲೈವಿ' ಹೀಗೆ ಹಲವು ಬೇರೆ ಬೇರೆ ನಟರಿಗಾಗಿ, ಬೇರೆ ಭಾಷೆಯ ಸಿನಿಮಾಗಳಿಗಾಗಿ ಕತೆಗಳನ್ನು ನೀಡಿ ಹಿಟ್ ಕೊಟ್ಟವರು ವಿಜಯೇಂದ್ರ ಪ್ರಸಾದ್.

    ಸಾಕಷ್ಟು ಬ್ಯುಸಿಯಾಗಿದ್ದಾ ವಿಜಯೇಂದ್ರ ಪ್ರಸಾದ್

    ಸಾಕಷ್ಟು ಬ್ಯುಸಿಯಾಗಿದ್ದಾ ವಿಜಯೇಂದ್ರ ಪ್ರಸಾದ್

    ಈಗಲೂ ಅವರು ಭಾರತದ ಅತ್ಯಂತ ಬ್ಯುಸಿ ಕತೆಗಾರ. 'ಸೀತಾ' ಹೆಸರಿನ ಸಿನಿಮಾವನ್ನು ಅವರೇ ನಿರ್ದೇಶನ ಮಾಡಲು ತಯಾರಾಗಿದ್ದಾರೆ. ಸಲ್ಮಾನ್ ಖಾನ್‌ಗಾಗಿ 'ಪವನ ಪುತ್ರ ಭಾಯಿಜಾನ್' ಕತೆ ಬರೆದು ನೀಡಿದ್ದಾರೆ, 'ಅಪರಜಿತ ಅಯೋಧ್ಯ' ಕತೆ ಬರೆದಿದ್ದಾರೆ. 'ವಿಕ್ರಮಾರ್ಕುಡು 2', 'ನಾಯಕ್ 2' ಸಿನಿಮಾಗಳಿಗೆ ಕತೆ ಬರೆದಿದ್ದಾರೆ. ರಾಜಮೌಳಿ ನಿರ್ದೇಶಿಸಿ, ಮಹೇಶ್ ಬಾಬು ನಟಿಸುತ್ತಿರುವ ಹೊಸ ಸಿನಿಮಾಕ್ಕೆ ಕತೆ ಬರೆದಿದ್ದಾರೆ.

    ಸಂಸತ್ತಿನ ಮೊಗಸಾಲೆಯಿಂದ ಕತೆಗಳನ್ನು ಹೆಕ್ಕುವುದು ಗ್ಯಾರೆಂಟಿ!

    ಸಂಸತ್ತಿನ ಮೊಗಸಾಲೆಯಿಂದ ಕತೆಗಳನ್ನು ಹೆಕ್ಕುವುದು ಗ್ಯಾರೆಂಟಿ!

    ವಿಜಯೇಂದ್ರ ಪ್ರಸಾದ್ ಸ್ವಭಾವತಃ ಮೌನಿ, ಅವಶ್ಯಕತೆ ಇದ್ದಷ್ಟೆ ಮಾತು ಅವರದ್ದು, ಅಪ್ರತಿಮ ಕುತೂಹಲಿ, ಮಾತನಾಡುವುದಕ್ಕಿಂತಲೂ ಗಮನಿಸುವುದು ಹೆಚ್ಚು. ಈ ಗಮನಿಕೆಯಿಂದಲೇ ತಮ್ಮ ಹಲವು ಕತೆಗಳು ಹುಟ್ಟಿದ್ದಾಗಿ ಸ್ವತಃ ವಿಜಯೇಂದ್ರ ಪ್ರಸಾದ್ ಹೇಳಿಕೊಂಡಿದ್ದಾರೆ. ವಿಜಯವಾಡದ ಇಬ್ಬರು ಕುಖ್ಯಾತ ರೌಡಿ ಮತ್ತು ರಾಜಕೀಯ ವ್ಯಕ್ತಿಗಳಾಗಿದ್ದ ದೇವಿನೇನಿ ನೆಹರು ಹಾಗೂ ರಂಗ ಒಂದೇ ರೈಲು ನಿಲ್ದಾಣಕ್ಕೆ ಬಂದಾಗ ಹೇಗೆ ಪೊಲೀಸರು ಭಾರಿ ಬಂದೋಬಸ್ತ್ ಏರ್ಪಡಿಸಿದ್ದರು, ನಗರವೆಲ್ಲ ಹೇಗೆ ಅಂದು ಆತಂಕದಲ್ಲಿತ್ತು ಎಂಬುದನ್ನು ಕೇಳಿ ಅದರಿಂದ ಸ್ಪೂರ್ತಿ ಪಡೆದು 'ನರಸಿಂಹ ರೆಡ್ಡಿ' ಕತೆ ಮಾಡಿದ್ದರು ವಿಜಯೇಂದ್ರ ಪ್ರಸಾದ್. ಹಸುವೊಂದು ಬೈಕ್ ಸವಾರನ ಮೇಲೆ ದ್ವೇಷ ತೀರಿಸಿಕೊಳ್ಳುವ ಸುದ್ದಿಯೊಂದನ್ನು ಓದಿ 'ಈಗ' ಕತೆ ಹೊಳೆದಿತ್ತು, ಕಮಲ್ ಹಾಸನ್‌-ಶ್ರೀದೇವಿಯ 'ಮೂಂಡ್ರಂ ಪಿರೈ' ಸಿನಿಮಾ ನೋಡಿ 'ಸಿಂಹಾದ್ರಿ' ಕತೆ ಮಾಡಿದರು, ಚಿರಂಜೀವಿಯ 'ಪಸಿವಾಡಿ ಪ್ರಾಣಂ' ಕತೆಯಿಂದ ಸ್ಪೂರ್ತಿ ಪಡೆದು 'ಬಜರಂಗಿ ಭಾಯಿಜಾನ್' ಕತೆ ಬರೆದರು. ಹೀಗೆ ನೋಡುವ, ಕೇಳಿಸಿಕೊಳ್ಳುವ ಯಾವುದರಿಂದಲೇ ಸ್ಪೂರ್ತಿ ಪಡೆವ ಗುಣ ವಿಜಯೇಂದ್ರ ಪ್ರಸಾದ್ ಅವರದ್ದು. ಇಂಥಹಾ ವ್ಯಕ್ತಿ ಈಗ ರಾಜಸಭೆಗೆ ಆಯ್ಕೆ ಆಗಿದ್ದಾರೆ. ಸಂಸತ್ತಿನ ಮೊಗಸಾಲೆಯಿಂದ ಇನ್ನಷ್ಟು ಕತೆಗಳನ್ನು ವಿಜಯೇಂದ್ರ ಪ್ರಸಾದ್ ಬಸಿದು ತರುವುದು ಗ್ಯಾರೆಂಟಿ ಎಂಬುದು ಸಿನಿ ಪ್ರಿಯರ ನಂಬಿಕೆ.

    English summary
    Ace director Rajamouli's father story writer KV Vijayendra Prasad biography. He nominated to Rajya Sabha from central government.
    Thursday, July 7, 2022, 15:17
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X