ಎಲ್ಲವನ್ನೂ ಸಾಧಿಸಿ ಭೇದಿಸಿದ ರಜಿನಿಕಾಂತ್‌ಗೆ ಈ ಕನಸು ನನಸು ಮಾಡಿಕೊಳ್ಳಲು ಸಾಧ್ಯವಾಗಲೇ ಇಲ್ಲ..!
ರಜಿನಿಕಾಂತ್ ಭಾರತದ ಸೂಪರ್ ಸ್ಟಾರ್. ಇಡೀ ವಿಶ್ವಕ್ಕೆ ಗೊತ್ತಿರುವ ಮಹಾನಾಯಕ. ಚೆನ್ನೈ-ಬೆಂಗಳೂರು ಸೇರಿದಂತೆ ಭಾರತದ ಮೆಟ್ರೋಪಾಲಿಟನ್ ಸಿಟಿಗಳಲ್ಲಿ ರಜಿನಿ ಒಡೆತನದ ಆಸ್ತಿಗಳಿವೆ. ಇಡೀ ಜಗತ್ತಿನಲ್ಲಿ ರಜನಿಗೆ ಹೊಂದಿರುವ ಅಗಣಿತ ಆಸ್ತಿಯ ಬಗ್ಗೆ ಸ್ವತಃ ಅವರಿಗೇ ಲೆಕ್ಕ ಗೊತ್ತಿದೆಯೋ ಇಲ್ಲವೋ? ಗೊತ್ತಿಲ್ಲ.
ಇಳಿ ವಯಸ್ಸಿನಲ್ಲಿಯೂ ಒಪ್ಪಿಕೊಂಡ ಪಾತ್ರ ಮತ್ತು ಚಿತ್ರಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡು ಇಂದಿನ ಹದಿ ಹರೆಯದ ಹೀರೋಗಳೂ ಕೂಡ ನಾಚುವಂತೆ ಅದ್ಭುತವಾಗಿ ಅಭಿನಯಿಸುವ ರಜಿನಿಕಾಂತ್ ಜೊತೆಗೆ ಹೋಲಿಕೆ ಮಾಡೋದಕ್ಕೆ ಬೇರಾವುದೇ ಸ್ಟಾರ್ ಗಳಿಗಿರಲಿ ಬೇರೆ ಚಿತ್ರೋದ್ಯಮಗಳಿಗೂ ಆಗೋದಿಲ್ಲ. ಒಂದು ಸಿನಿಮಾ ಇಂಡಸ್ಟ್ರಿ ಒಂದು ವರ್ಷವಿಡಿ ದುಡಿಯೋದನ್ನ ರಜಿನಿ ನಾಮಬಲದ ಒಂದೇ ಒಂದು ಸಿನಿಮಾ ದುಡಿಯುತ್ವೆ. ಅದು, ರಜಿನಿ ಎಂಬ ಹೆಸರಿಗಿರುವ ಶಕ್ತಿ.

ತಮ್ಮ 74 ವರ್ಷದ ಈ ಬದುಕಿನ ಪ್ರಯಾಣದಲ್ಲಿ ಎಲ್ಲವನ್ನೂ ಸಾಧಿಸಿ, ಭೇದಿಸಿ ಮುಗಿಸಿರೋ ರಜಿನಿಕಾಂತ್
ಪಾಲಿಗೂ ಅದೊಂದು ಕನಸು ಮಾತ್ರ ಹಾಗೇ ಉಳಿದುಕೊಂಡುಬಿಟ್ಟಿದೆ. ಅದು ರಜಿನಿ ಈಗ ಅಲ್ಲ ತಮ್ಮ ವೃತ್ತಿ ಬದುಕಿನ ಉತ್ತುಂಗದಲ್ಲಿದ್ದಾಗಲೇ ಕಂಡ ಕನಸು. ತಮಿಳುನಾಡಿನ ಮುಖ್ಯಮಂತ್ರಿಯಾಗುವ ಕನಸು.
ಹೌದು, ಅದು 1990ರ ದಶಕ.. ರಜಿನಿ ಆವಾಗ ವೃತ್ತಿಜೀವನದ ಉತ್ತುಂಗದಲ್ಲಿದ್ದರು. ತಮಿಳುನಾಡಿನ ನಂ.1 ಸ್ಟಾರ್ ಆಗಿದ್ದರು.ತಮಿಳುನಾಡಿನಾದ್ಯಂತ ರಜಿನಿ ಅಭಿಮಾನಿ ಸಂಘಗಳು ಇದ್ವು. ರಜಿನಿ ಬಂದ್ರೆ ಸಾಕು ಅವರನ್ನ ನೋಡೋದಕ್ಕೆ ಜನ ಪ್ರವಾಹೋಪಾದಿಯಲ್ಲಿ ಬರ್ತಿದ್ದರು. ಆಗಲೇ ರಜಿನಿಕಾಂತ್ ಅವರಲ್ಲಿ ಆಸೆಯೊಂದು ಚಿಗುರೊಡೆಯಿತು. ನಾನ್ಯಾಕೆ ರಾಜಕೀಯಕ್ಕೆ ಬರಬಾರದು ಎಂಬ ಆಸೆ ಅದು. ತಮಿಳುನಾಡಿನಲ್ಲಿ ಇಷ್ಟೊಂದು ಜನಬೆಂಬಲ ಇರೋ ನಾನು ಈ ಜನರ ಬೆಂಬಲದೊಂದಿಗೆ ಯಾಕೆ ಸಿ.ಎಂ ಆಗಬಾರದು ಎಂದು ರಜಿನಿಗೆ ಅನಿಸಲು ಶುರುವಾಯಿತು. ರಜಿನಿ ಜೊತೆಗಾರರು ಕೂಡ ಆ ಐಡಿಯಾವನ್ನ ಮೆಚ್ಚಿಕೊಂಡು ಒಪ್ಪಿಗೆ ನೀಡಿದರು. ಕೂಡಲೇ ರಜಿನಿ ತಮ್ಮ ಇಷ್ಟ ದೈವ ರಾಯರ ಆಶಿರ್ವಾದ ಪಡೆದು ರಾಜಕೀಯದ ಪ್ಲಾನಿಂಗ್ ನಲ್ಲಿ ತೊಡಗಿಕೊಂಡರು. ತಮಿಳುನಾಡಿನ ರಾಜಕೀಯವೂ ರಜಿನಿಕಾಂತ್ ರಾಜಕೀಯಕ್ಕೆ ಪೂರಕವಾಗಿಯೇ ಇತ್ತು ಅನ್ನಿ.
ಆದರೆ ರಜಿನಿ ರಾಜಕೀಯ ಪ್ರವೇಶಿಸಿದ್ರೆ ತಮಗೆ ಉಳಿಗಾಲವಿಲ್ಲ ಅನ್ನೋದು ಜಯಲಲಿತಾ ಮತ್ತು ಕರುಣಾನಿಧಿ ಇಬ್ಬರಿಗೂ ಗೊತ್ತಿತ್ತು. ಹೀಗಾಗಿಯೇ ತಾವು ಆಕ್ಟಿವ್ ಆಗಿರೋವಷ್ಟು ಕಾಲ ರಜಿನಿಯನ್ನ ರಾಜಕೀಯದತ್ತ ಬರೋದಕ್ಕೆ ಈ ಇಬ್ಬರೂ ತಮಿಳು ನಾಡಿನ ಅತಿರಥರು ಬಿಡಲಿಲ್ಲ.ಕೊನೆಯಲ್ಲಿ ರಜಿನಿಕಾಂತ್ ರಾಜಕೀಯ ದೊಂಬರಾಟಗಳನ್ನ ನೋಡಿ ತಮ್ಮ ಸಿ.ಎಂ ಕನಸನ್ನ ಮರೆತೆಬಿಟ್ಟಿದ್ದರು.
ಕೆಲ ವರ್ಷಗಳ ಹಿಂದೆ ತಮ್ಮ ಈ ಹಿಂದಿನ ಕನಸಿಗೆ ರಜಿನಿ ಮರು ಜೀವ ತುಂಬಿದ್ದರಾದ್ರೂ ಅದು ಅಷ್ಟೇ ಬೇಗ ಕೊನೆಯಾಯ್ತು. ಕನಸನ್ನ ನನಸು ಮಾಡಿಕೊಳ್ಳುವ ದಿಸೆಯಲ್ಲಿ ರಜಿನಿಕಾಂತ್ ಹೆಜ್ಜೆ ಇಟ್ಟಿದ್ದರಾದ್ರೂ ದೇಹ ಹಾಗೂ ಆರೋಗ್ಯ ರಜಿನಿಯ ಕನಸಿಗೆ ಬೆಂಬಲ ನೀಡಲಿಲ್ಲ. ಹೀಗಾಗಿಯೇ ರಾಜಕೀಯಕ್ಕೆ ಬಂದು ಇನ್ನೇನು ತಮಿಳುನಾಡು ಸಿ.ಎಂ ಆಗೇಬಿಡ್ತಾರೆ ಅಂತ ಭರವಸೆ ಮೂಡಿಸಿದ್ದ ರಜಿನಿ ಆಟ ಶುರುವಾಗುವ ಮುನ್ನವೇ ಸೋಲೊಪ್ಪಿಕೊಂಡರು. ವಿಪರ್ಯಾಸವೆಂದ್ರೆ ಆವತ್ತಿಗೆ ರಜಿನಿಕಾಂತ್ ಅಂದ್ರೆ ಇಡಿ ತಮಿಳುನಾಡೇ ಅವರ ಹಿಂದೆ ಬರ್ತಿತ್ತು.ಆದರೂ ಕೂಡ ಅಂದು ತಲೈವಾ ಕಂಡ ಕನಸು ನನಸಾಗಲಿಲ್ಲ. ಮನುಷ್ಯ ಮನಸ್ಸು ಮಾಡಿದ್ರೆ ಏನು ಬೇಕಾದ್ರೂ ಸಾಧಿಸಬಹುದು ಎನ್ನುವುದಕ್ಕೆ ಜ್ವಲಂತ ಉದಾಹರಣೆಯಂತೆ ಇರುವ ರಜಿನಿಕಾಂತ್ ಅವರಿಗೆ ತಮ್ಮ ರಾಜಕೀಯದ ಕನಸನ್ನು ನನಸು ಮಾಡಿಕೊಳ್ಳಲು ಸಾಧ್ಯವಾಗಲೇ ಇಲ್ಲ.


Click it and Unblock the Notifications











