ರಕ್ಷಿತ್ ಶೆಟ್ಟಿ ರಿಯಲ್ ಲೈಫ್ ಲವ್ ಸ್ಟೋರಿ: ಆಪ್ತ ಸ್ನೇಹಿತನಿಂದಲೇ ದೋಖಾ
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟನೆಯ 'ಸಪ್ತ ಸಾಗರದಾಚೆ ಎಲ್ಲೋ' ಸೈಡ್- B ಬಿಡುಗಡೆಗೆ ಸಿದ್ಧವಾಗಿದೆ. ಕನ್ನಡ ಜೊತೆಗೆ ತೆಲುಗು, ತಮಿಳು, ಮಲಯಾಳಂನಲ್ಲೂ ಸಿನಿಮಾ ಏಕಕಾಲಕ್ಕೆ ತೆರೆಗಪ್ಪಳಿಸ್ತಿದೆ. ಈಗಾಗಲೇ ಸಿನಿಮಾ ಟ್ರೈಲರ್, ಸಾಂಗ್ಸ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ರಕ್ಷಿತ್ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.
ಹೇಮಂತ್ ರಾವ್ ನಿರ್ದೇಶನದ ರೊಮ್ಯಾಂಟಿಕ್ ಲವ್ ಸ್ಟೋರಿ ಸಿನಿಮಾ ಸೀಕ್ವೆಲ್ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಮೊದಲ ಭಾಗಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. 20 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು. ಓಟಿಟಿಗೂ ಬಂದು ವೀಕ್ಷಕರ ಮನಗೆದ್ದಿದೆ. ಮನು - ಪ್ರಿಯಾ ಲವ್ ಸ್ಟೋರಿಗೆ ಪ್ರೇಕ್ಷಕರ ಫಿದಾ ಆಗಿದ್ದರು. 'ಸಪ್ತ ಸಾಗರದಾಚೆ ಎಲ್ಲೋ' ಎರಡನೇ ಭಾಗ ನೋಡುವುದಕ್ಕೆ ಕೆಲವರು ಬಹಳ ಉತ್ಸುಕರಾಗಿದ್ದಾರೆ. ರಕ್ಷಿತ್ ತಮ್ಮದೇ ಪರಂವಃ ಸ್ಟುಡಿಯೋ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣ ಮಾಡಿದ್ದಾರೆ.

'ಸಪ್ತ ಸಾಗರದಾಚೆ ಎಲ್ಲೋ' ಸೈಡ್- A ಕನ್ನಡದಲ್ಲಿ ಹಿಟ್ ಆದ ಬಳಿಕ ತೆಲುಗಿಗೆ ಡಬ್ ಆಗಿ ರಿಲೀಸ್ ಆಗಿತ್ತು. ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿತ್ತು. ಸ್ವತಃ ರಕ್ಷಿತ್ ತೆಲುಗು ಸಂದರ್ಶನಗಳಲ್ಲಿ ಮಾತನಾಡಿ ಸುದ್ದಿಗೋಷ್ಠಿಗಳನ್ನು ನಡೆಸಿ ಸಿನಿಮಾ ಪ್ರಚಾರ ಮಾಡಿದ್ದರು. ಇದೀಗ ಸೈಡ್- B ರಿಲೀಸ್‌ಗೂ ಬೇರೆ ಬೇರೆ ನಗರಗಳಿಗೆ ಭೇಟಿ ಕೊಟ್ಟು ಪ್ರಚಾರ ಮಾಡುತ್ತಿದ್ದಾರೆ. ತೆಲುಗು ಸಂದರ್ಶನಗಳಲ್ಲಿ ಮಾತನಾಡುತ್ತಾರೆ. ತೆಲುಗು ಫಿಲ್ಮ್ ನಗರ್ ಯೂಟ್ಯೂಬ್ ಚಾನಲ್‌ನಲ್ಲಿ ತಮ್ಮ ಕಾಲೇಜು ದಿನಗಳ ಲವ್ ಸ್ಟೋರಿಯನ್ನು ಸಿಂಪಲ್ ಸ್ಟಾರ್ ಬಿಚ್ಚಿಟ್ಟಿದ್ದಾರೆ.
ಲವ್ ಲೆಟರ್ ಬಗ್ಗೆ ಹೇಳಿ. ಯಾರಿಗಾದರೂ ಲವ್ ಲೆಟರ್ ಬರೆದಿದ್ರಾ? ಎನ್ನುವ ಪ್ರಶ್ನೆಗೆ ರಕ್ಷಿತ್ ತಾವು ಜೀವನದಲ್ಲಿ ಮರೆಯಲಾಗದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. "ನಾನು ಎರಡು ಲವ್ ಲೆಟರ್ ಬರೆದಿದ್ದೆ. ಅದರಲ್ಲಿ ಒಂದನ್ನು ಮರೆಯೋಕೆ ಸಾಧ್ಯವಿಲ್ಲ. ಇಂಜಿನಿಯರ್ ಮಾಡುವ ಸಮಯದಲ್ಲಿ ನಾನು ಒಂದು ಹುಡುಗಿಯನ್ನು ಇಷ್ಟಪಟ್ಟಿದ್ದೆ. ನಾನು ಲವ್ ಲೆಟರ್ ಬರೆದು ನನ್ನ ಸ್ನೇಹಿತನಿಗೆ ಕೊಟ್ಟು ಅವಳಿಕೆ ಕೊಡೋಕೆ ಹೇಳಿದ್ದೆ"

"ಅವಳು ಮಂಗಳೂರಿನಲ್ಲಿದ್ದಳು. ನಾನು ಹಾಸ್ಟೆಲ್‌ನಲ್ಲಿದ್ದೆ. ಅವಳು ಬಸ್‌ನಲ್ಲಿ ಓಡಾಡುತ್ತಿದ್ದಳು. ನನ್ನ ಫ್ರೆಂಡ್ ಕೂಡ ಅದೇ ಬಸ್‌ನಲ್ಲಿ ಓಡಾಡುತ್ತಿದ್ದ. ಹಾಗಾಗಿ ಅವನಿಗೆ ಕೊಟ್ಟು ಅವಳಿಗೆ ಕೋಡೋಕೆ ಹೇಳಿದ್ದೆ. ಅವನು ಆ ಲೆಟರ್ ಅವಳಿಗೆ ಕೊಡಲೇಯಿಲ್ಲ. ಅದನ್ನು ಅವನು ಎರಡು ವರ್ಷ ಆದ್ಮೇಲೆ ಹೇಳಿದ. ನಾನು ಅವಳಿಗೆ ಲವ್ ಲೆಟರ್ ಕೊಟ್ಟಿಲ್ಲ ಅಂತ".
"ನಾನು ಲೆಟರ್ ಬರ್ದು ಕೊಟ್ಟಮೇಲೆ ಏನ್ ಆಗುತ್ತೆ ಅಂತ ಏನೇನೋ ಊಹಿಸಿಕೊಂಡಿದ್ದೆ. ಅವಳು ಉತ್ತರ ಕೊಡ್ತಾಳೆ ಅಂದ್ಕೊಂಡೆ. ಆದರೆ ಅವಳಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ. ಕೋಪ, ದ್ವೇಷ ಇಲ್ಲ, ಏನು ಇಲ್ಲ. ವಿಶೇಷ ಸಂಗತಿ ಏನು ಅಂದ್ರೆ ಅವರಿಬ್ಬರು ಈಗ ಮದುವೆ ಆಗಿದ್ದಾರೆ" ಎಂದು ಹೇಳಿ ರಕ್ಷಿತ್ ಶೆಟ್ಟಿ ನಕ್ಕಿದ್ದಾರೆ. ರಕ್ಷಿತ್ ಮಾತನ್ನು ಕೇಳಿ ಪಕ್ಕದಲ್ಲೇ ಇದ್ದ ನಟಿಯರಾದ ರುಕ್ಮಿಣಿ ವಸಂತ್, ಚೈತ್ರಾ ಆಚಾರ್ ಶಾಕ್ ಆಗಿದ್ದಾರೆ.
ರುಕ್ಮಿಣಿ ವಸಂತ್ ಅವನು ಮಿತ್ರದೋಹ್ರಿ ಎಂದಿದ್ದಾರೆ. ರಕ್ಷಿತ್ ಶೆಟ್ಟಿ ಲವ್ ಸ್ಟೋರಿ ಕೇಳಿ ಎಲ್ಲರೂ ನಕ್ಕಿದ್ದಾರೆ. "ಈಗಲೂ ನಾವು ಸ್ನೇಹಿತರೆಲ್ಲಾ ಪ್ರವಾಸಕ್ಕೆ ಹೋದಾಗ ಆ ವಿಚಾರ ಮಾತಾಡಿಕೊಂಡು ನಗುತ್ತೇವೆ" ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ. ಇದೇ ಶುಕ್ರವಾರ 'ಸಪ್ತ ಸಾಗರದಾಚೆ ಎಲ್ಲೋ' ಸೈಡ್- B ಪ್ರೇಕ್ಷಕರ ಮುಂದೆ ಬರ್ತಿದೆ. ಇನ್ನು ಈ ಸಿನಿಮಾ ಬಳಿಕ ರಕ್ಷಿತ್ ಶೆಟ್ಟಿ ಬಹುನಿರೀಕ್ಷಿತ 'ರಿಚರ್ಡ್ ಆಂಟನಿ' ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ.


Click it and Unblock the Notifications











