"ನಾನು ಸಲ್ಲುನ ತಬ್ಬಿಕೊಂಡಿದ್ದಕ್ಕೆ ರಜನಿ ಸರ್ ಗರಂ ಆಗಿ ಕೂಗಾಡಿದ್ರು.. ಬಿಕ್ಕಿ ಬಿಕ್ಕಿ ಅತ್ತಿದ್ದೆ": ರಂಭಾ
ಒಂದ್ಕಾಲದಲ್ಲಿ ತನ್ನ ಬಿಂದಾಸ್ ನಟನೆಯಿಂದ ನಟಿ ರಂಭಾ ಮೋಡಿ ಮಾಡಿದ್ದು ಗೊತ್ತೇಯಿದೆ. ತೆಲುಗು ಹುಡುಗಿ ಮುಂದೆ ತಮಿಳು, ಕನ್ನಡ, ಹಿಂದಿ ಸಿನಿಮಾಗಳಲ್ಲೂ ನಟಿಸಿ ಗೆದ್ದರು. ಇತ್ತೀಚೆಗೆ ಮದುವೆ ಮಕ್ಕಳು ಅಂತ ಆಕೆ ಚಿತ್ರರಂಗದಿಂದ ದೂರಾಗಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ರಜನಿಕಾಂತ್ ಜೊತೆಗಿನ 'ಅರುಣಾಚಲಂ' ಚಿತ್ರೀಕರಣದ ದಿನಗಳನ್ನು ರಂಭಾ ನೆನಪಿಸಿಕೊಂಡಿದ್ದಾರೆ.
ರಜನಿಕಾಂತ್ ನಟನೆಯ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ 'ಅರುಣಾಚಲಂ' ಚಿತ್ರದಲ್ಲಿ ರಂಭಾ ಅವರು ರಜನಿಕಾಂತ್ ಅವರ ಪಿಎ ನಂದಿನಿ ಪಾತ್ರದಲ್ಲಿ ನಟಿಸಿದ್ದರು. ಚಿತ್ರಕ್ಕೆ ಸುಂದರ್ ಸಿ ಆಕ್ಷನ್ ಕಟ್ ಹೇಳಿದ್ದರು. ಈ ಚಿತ್ರದ ಶೂಟಿಂಗ್ ವೇಳೆ ರಜನಿಕಾಂತ್ ಮಾಡಿದ ಕೆಲಸಕ್ಕೆ ಕಣ್ಣೀರು ಹಾಕಿದ್ದೆ ಎಂದು ನಟಿ ರಂಭಾ ಹೇಳಿದ್ದಾರೆ.

'ಅರುಣಾಚಲಂ' ಚಿತ್ರದಲ್ಲಿ ನಟಿಸುತ್ತಿರುವಾಗಲೇ ಸಲ್ಮಾನ್ ಖಾನ್ ಜೊತೆ 'ಬಂಧನ್' ಎನ್ನುವ ಬಾಲಿವುಡ್ ಸಿನಿಮಾ ಒಪ್ಪಿಕೊಂಡಿದ್ದೆ. ಒಮ್ಮೆ ಎರಡು ಚಿತ್ರಗಳ ಶೂಟಿಂಗ್ ಹೈದರಾಬಾದ್‌ನ ಹೋಟೆಲ್‌ವೊಂದರಲ್ಲಿ ನಡೀತಿತ್ತು. 'ಅರುಣಾಚಲಂ' ಚಿತ್ರಕ್ಕಾಗಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಹಾಗೂ 'ಬಂಧನ್' ಚಿತ್ರಕ್ಕಾಗಿ ಮಧ್ಯಾಹ್ನದಿಂದ ರಾತ್ರಿಯವರೆಗೂ ಚಿತ್ರೀಕರಣದಲ್ಲಿ ಭಾಗಿ ಆಗುತ್ತಿದ್ದೆ. ಒಂದು ದಿನ 'ಬಂಧನ್' ಶೂಟಿಂಗ್ ಸ್ಪಾಟ್‌ನಿಂದ ಸಲ್ಮಾನ್ ಖಾನ್ ಮತ್ತು ಜಾಕಿ ಶ್ರಾಫ್ 'ಅರುಣಾಚಲಂ' ಚಿತ್ರದ ಸೆಟ್‌ಗೆ ರಜನಿಕಾಂತ್ ಅವರನ್ನು ನೋಡಲು ಬಂದರು.
ನಮ್ಮ ಸೆಟ್‌ನಲ್ಲಿ ಅವರಿಬ್ಬರನ್ನು ನೋಡಿದ ಕೂಡಲೇ ನಮ್ಮ ಹೀರೋ ಬಂದ ಎಂಬಂತೆ ನಾನು ಎಲ್ಲಿದ್ದೇನೆ ಅನ್ನೋದನ್ನು ಮರೆತು ಕೂಡಲೇ ಹೋಗಿ ಸಲ್ಮಾನ್ ಖಾನ್‌ನ ಅಪ್ಪಿಕೊಂಡು ವಿಶ್ ಮಾಡಿದೆ. ರಜನಿ ಸರ್ ದೂರದಿಂದ ಇದನ್ನೆಲ್ಲ ನೋಡುತ್ತಿದ್ದರು. ನಂತರ ರಜನಿ ಸರ್ ಮತ್ತು ಸುಂದರ್ ಸಿ. ಎಲ್ಲರೂ ಅವರೊಂದಿಗೆ ಮಾತನಾಡಿದರು. ಬಳಿಕ ಅವರು ಹೊರಟುಬಿಟ್ಟರು.
ಸಲ್ಲು, ಜಾಕಿಶ್ರಾಫ್ ಹೊರಟ ಮೇಲೆ ಅಸಲಿ ಕಥೆ ಶುರುವಾಯಿತು. ಸೆಟ್‌ನಲ್ಲಿ ಗೊಂದಲ ಉಂಟಾಗಿತ್ತು. ರಜನಿಕಾಂತ್ ಸರ್ ಟವೆಲ್ ಎಸೆದು ಸಿಟ್ಟಿನಿಂದ ಮಾತನಾಡಿದರು. ನಿರ್ದೇಶಕರು ನನ್ನತ್ತ ನೋಡಿದರು. ನನಗೇನೂ ಅರ್ಥವಾಗಲಿಲ್ಲ. ಆಗ ಕ್ಯಾಮರಾಮನ್ ಬಂದು, ಏನು ಮೇಡಂ ಹೀಗೆ ಮಾಡಿದ್ದೀರಿ, ಇನ್ನು ಮುಂದೆ ನಿಮ್ಮ ಜೊತೆ ನಟಿಸುವುದಿಲ್ಲ ಎಂದು ರಜಿನಿ ಸಾರ್ ಹೇಳುತ್ತಿದ್ದಾರೆ ಎಂದರು. ನಾನು ಏನು ತಪ್ಪು ಮಾಡಿದೆ ಎಂದು ನಾನು ಅಳಲು ಆರಂಭಿಸಿದೆ.

ನಾನು ಅಳುವುದನ್ನು ನೋಡಿದ ರಜನಿ ಸರ್ ಹೆದರಿ ಓಡಿ ಬಂದರು. ಏನಾಯ್ತು ಸರ್ ಎಂದು ಕೇಳಿದೆ. ತಕ್ಷಣ ಶೂಟಿಂಗ್ ಸ್ಪಾಟ್‌ನಲ್ಲಿದ್ದವರನ್ನೆಲ್ಲ ಕರೆದು.. ಎದುರು ನಿಲ್ಲಿಸಿ, ಬೆಳಗ್ಗೆ ಸಲ್ಮಾನ್ ಖಾನ್ ಬಂದಾಗ ರಂಭಾ ಹೇಗೆ ಓಡಿ ಹೋಗಿ ತಬ್ಬಿಕೊಂಡರು ಎಂದು ನಟನೆ ಮಾಡಿ ತೋರಿಸಿದರು. ಆದರೆ ನಮ್ಮ ಚಿತ್ರದ ಸೆಟ್‌ನಲ್ಲಿ ಗುಡ್ ಮಾರ್ನಿಂಗ್ ಸರ್ ಎಂದು ಹೇಳಿ ಹೊರಟುಬಿಡುತ್ತಾರೆ ಎಂದರು.
ನಾನು ರಜನಿ ಸರ್‌ನ ಎಂದೂ ಹಾಗೆ ನೋಡಿರಲಿಲ್ಲ. ಸಲ್ಮಾನ್ ಖಾನ್ ಅವರನ್ನು ತಬ್ಬಿಕೊಂಡಿದ್ದಕ್ಕಾಗಿ ಅವರು ಕೋಪಗೊಂಡರು. ತಕ್ಷಣ ನಾನು ಏನಾಯಿತು ಎಂದು ವಿವರಣೆ ಕೊಟ್ಟೆ. ಅದು ಉತ್ತರ ಭಾರತದ ಸಂಸ್ಕೃತಿ ಅಂತ ಹೇಳಿದೆ. ತಕ್ಷಣ ನಾಳೆಯಿಂದ ಯೂನಿಟ್‌ನಲ್ಲಿ ಎಲ್ಲರೂ ಲೈನಿನಲ್ಲಿ ನಿಲ್ಲಬೇಕು. ರಂಭಾ ಬಂದು ಎಲ್ಲರನ್ನೂ ಅಪ್ಪಿಕೊಂಡು ಗುಡ್ ಮಾರ್ನಿಂಗ್ ಹೇಳುತ್ತಾಳೆ ಎಂದು ಗೋಳು ಹುಯ್ದುಕೊಂಡರು. ಆ ಇಡೀ ತಂಡ ಅದೇ ರೀತಿ ಪದೇ ಪಡೆ ಸೆಟ್‌ನಲ್ಲಿ ಎಲ್ಲರನ್ನು ಗೋಳು ಹುಯ್ದುಕೊಳ್ಳುತ್ತಿತ್ತು ಎಂದು ರಂಭಾ ಹೇಳಿದ್ದಾರೆ.


Click it and Unblock the Notifications











