ಸಂಭಾವನೆ ಬಗ್ಗೆ ರಮ್ಯಾ ಮಾತು; 'ಲಕ್ಕಿ' ಯಶ್-ರಮ್ಯಾ ಕಿರಿಕ್ ನೆನಪಿಸಿಕೊಂಡ ಫ್ಯಾನ್ಸ್!
ಚಿತ್ರರಂಗದಲ್ಲಿ ಸಂಭಾವನೆ ತಾರತಮ್ಯದ ಬಗ್ಗೆ ಸಾಕಷ್ಟು ಜನ ನಟಿಯರು ಮಾತನಾಡಿದ್ದಾರೆ. ಇದೇ ವಿಚಾರವನ್ನು ಇತ್ತೀಚೆಗೆ ನಟಿ ರಮ್ಯಾ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಸಂವಾದ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದ್ದರು. ತನ್ನ ಜೊತೆ ಕೆಲಸ ಮಾಡಿದ ನಟರಿಗೆ ಮುಂದಿನ ಚಿತ್ರದಲ್ಲಿ ತನಗಿಂತ ಹಲವು ಪಟ್ಟು ಹೆಚ್ಚು ಸಂಭಾವನೆ ಸಿಕ್ಕಿತ್ತು. ಆದರೆ ನನಗೆ ಆ ಮಟ್ಟಿಗೆ ಸಿಗಲಿಲ್ಲ ಎಂದು ರಮ್ಯಾ ಹೇಳಿದ್ದರು.
ನಟಿ ರಮ್ಯಾ ಹೀಗೆ ಸಂಭಾವನೆ ವಿಚಾರದ ಬಗ್ಗೆ ಹೇಳುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಹೊಸ ಚರ್ಚೆ ಶುರುವಾಗಿದೆ. ರಮ್ಯಾ 'ಲಕ್ಕಿ' ಚಿತ್ರದ ವಿಚಾರವನ್ನು ನೆನಪಿಸಿಕೊಂಡು ಯಶ್ ಬಗ್ಗೆ ಮಾತನಾಡಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ತಮ್ಮ ಸಿನಿಕರಿಯರ್‌ನ ಆರಂಭದಲ್ಲೇ ರಮ್ಯಾ ಜೊತೆ ನಟ ಯಶ್ ನಟಿಸಿದ್ದರು. ಅದರ ಬೆನ್ನಲ್ಲೇ ದೊಡ್ಡ ದೊಡ್ಡ ಸಿನಿಮಾಗಳ ಮೂಲಕ ಸ್ಟಾರ್ ಪಟ್ಟಕ್ಕೇರಿದರು. ಮುಂದೆ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದು ಗೊತ್ತೇಯಿದೆ.

'ಲಕ್ಕಿ' ಸಿನಿಆ ಸಮಯದಲ್ಲಿ ಯಶ್ ಹಾಗೂ ರಮ್ಯಾ ನಡುವೆ ಕೊಂಚ ಭಿನ್ನಾಭಿಪ್ರಾಯಗಳು ಏರ್ಪಟ್ಟಿದ್ದು ಸುಳ್ಳಲ್ಲ. ಈ ಬಗ್ಗೆ ಯಶ್ ನೇರಾನೇರ ಮಾತನಾಡಿದ್ದರು. ಆಗ ಸಂಭಾವನೆ ವಿಚಾರವೂ ಚರ್ಚೆಗೆ ಬಂದಿದ್ದು ಸುಳ್ಳಲ್ಲ. 'ಲಕ್ಕಿ' ಸಿನಿಮಾ ಪ್ರಚಾರ ವೇಳೆ ಇಬ್ಬರ ನಡುವೆ ಕೋಳಿ ಜಗಳ ನಡೆದಿತ್ತು. ಇಬ್ಬರದ್ದು ಹಠದ ಸ್ವಭಾವ, ಹಾಗಾಗಿ ಸಣ್ಣ ಪುಟ್ಟ ಜಗಳ ಸರ್ವೇ ಸಾಧಾರಣ ಎಂದು ಸ್ವತಃ ಯಶ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
2012ರಲ್ಲಿ ಬಂದಿದ್ದ 'ಲಕ್ಕಿ' ಚಿತ್ರವನ್ನು ರಾಧಿಕಾ ಕುಮಾರಸ್ವಾಮಿ ನಿರ್ಮಾಣ ಮಾಡಿದ್ದರು. ಡಾ. ಸೂರಿ ನಿರ್ದೇಶನದ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆದ್ದಿತ್ತು. ಅರ್ಜುನ್ ಜನ್ಯಾ ಸಂಗೀತದ ಹಾಡುಗಳು ಸೂಪರ್ ಹಿಟ್ ಆಗಿ ಚಿತ್ರಕ್ಕೆ ಬಲ ತುಂಬಿತ್ತು. ಈ ಚಿತ್ರದ ಆಡಿಯೋ ಲಾಂಚ್ ವೇದಿಕೆಯಲ್ಲಿ ಟಾಂಗ್ ನೀಡಿದ್ದರು. ಅದಕ್ಕೆ ಅಲ್ಲೇ ಯಶ್ ತಿರುಗೇಟು ಕೊಟ್ಟಿದ್ದರು. ಸುದ್ದಿವಾಹಿನಿವೊಂದರ ಸಂದರ್ಶನ ಸಂಬಂಧ ಯಶ್ ಮೇಲೆ ರಮ್ಯಾ ಗರಂ ಆಗಿ ಟ್ವೀಟ್ ಮಾಡಿ ಅಸಮಾಧಾನ ಹೊರ ಹಾಕಿದ್ದರು.

ಇಬ್ಬರೂ ಕೂಡ ಕಡ್ಡಿ ತುಂಡಾಗುವಂತೆ ಮಾತನಾಡುತ್ತಾರೆ. ಹಾಗಾಗಿ 'ಲಕ್ಕಿ' ಸಿನಿಮಾ ಪ್ರಚಾರದ ವೇಳೆ ಇಬ್ಬರ ನಡುವೆ ಶೀತಲ ಸಮರವೇ ನಡೆದಿತ್ತು. ಸದ್ಯ ಸಂಭಾವನೆ ವಿಚಾರವಾಗಿ ರಮ್ಯಾ ಮಾತನಾಡುತ್ತಿದ್ದಂತೆ ಆ ಕಿರಿಕ್ ಬಗ್ಗೆ ಅಭಿಮಾನಿಗಳು ನೆನಪಿಸಿಕೊಳ್ಳುತ್ತಿದ್ದಾರೆ. ಯಶ್ ಬಗ್ಗೆಯೇ ರಮ್ಯಾ ಪರೋಕ್ಷವಾಗಿ ಹೇಳಿದ್ದಾರೆ ಎಂದು ಭಾವಿಸುತ್ತಿದ್ದಾರೆ.
ಒಂದೊಳ್ಳೆ ಸಿನಿಮಾ ಮಾಡಬೇಕು ಎನ್ನುವ ಕಾರಣಕ್ಕೆ ಯಶ್ ಬಹಳ ತಲೆ ಕೆಡಿಸಿಕೊಳ್ಳುತ್ತಾರೆ. ಕಥೆ, ಚಿತ್ರಕಥೆ, ಪ್ರತಿ ಸನ್ನಿವೇಶದ ಬಗ್ಗೆ ಜಾಗ್ರತೆ ವಹಿಸುತ್ತಾರೆ. ತಮ್ಮ ಆರಂಭದ ದಿನಗಳಿಂದಲೂ ಇದನ್ನ ಮಾಡುತ್ತಾ ಬರುತ್ತಿದ್ದಾರೆ. ಪ್ರಶಾಂತ್ ನೀಲ್ ಹಾಗೂ ಸಂತೋಷ್ ಆನಂದ್‌ರಾಮ್ ಕೂಡ ಈ ಬಗ್ಗೆ ಮಾತನಾಡಿದ್ದಾರೆ. ಒಂದು ಸಿನಿಮಾ ಬಗ್ಗೆ ಯಶ್ ಎಷ್ಟು ಆಲೋಚಿಸುತ್ತಾರೆ, ಸುಮ್ಮನೆ ಬಂದು ನಟಿಸೋ ಹೋಗುವುದಿಲ್ಲ ಎನ್ನುತ್ತಾರೆ. ಆರಂಭದ ದಿನಗಳಲ್ಲಿ ಇದು ಕೆಲವರು ಬೇಸರ ತಂದಿದ್ದು ಇದೆ. ಎಲ್ಲಾ ವಿಚಾರದಲ್ಲಿ ಯಶ್ ಕಿರಿಕ್ ಮಾಡ್ತಾರೆ, ಸಂಭಾವನೆ ವಿಚಾರದಲ್ಲೂ ರಾಜಿ ಆಗಲ್ಲ, ಚಿತ್ರೀಕರಣದ ವೇಳೆಯೂ ಮೂಗು ತೂರಿಸುತ್ತಾರೆ ಎನ್ನುವ ಮಾತುಗಳು ಚಿತ್ರರಂಗದಲ್ಲಿ ಕೇಳಿಬಂದಿತ್ತು.
'ಲಕ್ಕಿ' ಚಿತ್ರದ ಆಡಿಯೋ ಲಾಂಚ್ ವೇಳೆ ಈ ಬಗ್ಗೆ ರಮ್ಯಾ ಬಹಿರಂಗವಾಗಿ ಮಾತನಾಡಿದ್ದರು. "ಸುದೀಪ್ ರೀತಿ ಯಶ್ ಕೂಡ ಸಿಕ್ಕಾಪಟ್ಟೆ ಸ್ಕೋಪ್ ತಗೋತಾನೆ. ತೆರೆಯ ಮೇಲೆ ಹಾಗೂ ತೆರೆಯ ಹಿಂದೆ ಎರಡೂ ಕಡೆ ಹೀಗೆ ಮಾಡ್ತಾನೆ. ಚಿತ್ರೀಕರಣದ ವೇಳೆ ಮೂಗು ತೂರಿಸಿ, ಅದನ್ನು ಹೀಗೆ ಮಾಡಿ, ಇದನ್ನು ಹಾಗೆ ಮಾಡಿ ಅಂತೆಲ್ಲ ಹೇಳುತ್ತಾನೆ" ಎಂದುಬಿಟ್ಟಿದ್ದರು. ಅದೇ ವೇದಿಕೆಯಲ್ಲಿ ಯಶ್ ಕೂಡ ಪರೋಕ್ಷವಾಗಿ ಟಾಂಗ್ ನೀಡಿದ್ದರು.
ಯಶ್ ಮಾತನಾಡಿ "ನಾನು ರಮ್ಯಾ ಅವರಂತೆ ಹುಟ್ಟು ಕಲಾವಿದನಲ್ಲ. ಅವ್ರು ಸತತ 2 ಗಂಟೆಗ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದರೂ, ಶಾಟ್ ರೆಡಿಯಾದಾಗ ಯಾವುದೇ ರಿಹರ್ಸಲ್ ಇಲ್ಲದೇ ಅದ್ಬುತವಾಗಿ ನಟಿಸುತ್ತಾರೆ. ಆದರೆ ದೃಶ್ಯವೊಂದನ್ನು ಇನ್ನಷ್ಟು ಚೆನ್ನಾಗಿ ಮಾಡಲು ನನಗೆ ಸಾಕಷ್ಟು ಪೂರ್ವ ತಯಾರಿ ಬೇಕಾಗುತ್ತದೆ" ಎಂದಿದ್ದರು. ಇದು ರಮ್ಯಾ ಅವರಿಗೆ ಇರಿಸುಮುರಿಸು ತಂದಿದ್ದು ಸುಳ್ಳಲ್ಲ. ಬಳಿಕ ಏನೂ ಆಗಿಲ್ಲ ಎನ್ನುವಂತೆ ಸುಮ್ಮನಾಗಿಬಿಟ್ಟಿದ್ದರು.
ಬಳಿಕ 'ಲಕ್ಕಿ' ಚಿತ್ರದ ಪ್ರಚಾರಕ್ಕಾಗಿ ಇಬ್ಬರು ಸುದ್ದಿವಾಹಿನಿಗಳ ಸಂದರ್ಶನ ಕಾರ್ಯಕ್ರಮಗಳಲ್ಲಿ ಭಾಗಿ ಆಗಿದ್ದರು. ಈ ವೇಳೆ ಮತ್ತೊಮ್ಮೆ ಕಿರಿಕ್ ಉಂಟಾಗಿತ್ತು. ಒಂದು ವಾಹಿನಿಯ ಸಂದರ್ಶನಕ್ಕೆ ಯಶ್ ಹೋಗಿದ್ದರಂತೆ. ಆದರೆ ರಮ್ಯಾ ಬರುವುದು ತಡವಾಗಿತ್ತು. ಹಾಗಾಗಿ ಯಶ್ ತಾವು ಊಟ ಮಾಡಿ ಬರುವುದಾಗಿ ಎದ್ದು ಹೋಗಿದ್ದರು. ಬಳಿಕ ರಮ್ಯಾ ಬಂದು ಸಂದರ್ಶನ ಮುಗಿಸಿ ಬಂದಿದ್ದರು. ಅಲ್ಲಿಂದ ಮತ್ತೊಂದು ವಾಹಿನಿ ಸಂದರ್ಶನಕ್ಕೆ ಇಬ್ಬರು ಹೋಗಬೇಕಿತ್ತು.
ಒಂದು ಸಂದರ್ಶನ ಮುಗಿಸಿ ರಮ್ಯಾ ಬೇಗ ಮತ್ತೊಂದು ವಾಹಿನಿ ಸಂದರ್ಶನಕ್ಕೆ ಹೋಗಿದ್ದಾರೆ. ಆದರೆ ಊಟಕ್ಕೆ ಹೋಗಿದ್ದ ಯಶ್ ಪುನಃ ಬಂದು ಆ ವಾಹಿನಿ ಸಂದರ್ಶನ ಮುಗಿಸಿ ಇಲ್ಲಿಗೆ ಬರುವಷ್ಟರಲ್ಲಿ ತಡವಾಗಿತ್ತು. ನಾನು ಕಾಯುವುದಕ್ಕೆ ಆಗುವುದಿಲ್ಲ. ನನ್ನನ್ನು ಮೊದಲು ಮಾತನಾಡಿಸಿ ಕಳುಹಿಸಿ ಎಂದು ರಮ್ಯಾ ಸಂದರ್ಶನಕ್ಕೆ ಕೂತು ಎದ್ದು ಬಂದಿದ್ದಾರೆ. ಬಳಿಕ ಯಶ್ ಬಂದು ಮಾತನಾಡಿದ್ದಾರೆ. ಇಬ್ಬರದ್ದು ಒಟ್ಟಿಗೆ ಸರಿಯಾಗಿ ಹಾಕಿ ಎಂದಿದ್ದಾರೆ. ಆದರೆ ಸೆಕೆಂಡ್ ಸೆಗ್‌ಮೆಂಟ್ ಅಲ್ಲಿ ನಿಮ್ಮದು ಇರುತ್ತದೆ ಎಂದಾಗ ಯಶ್ ಬೇಸರಗೊಂಡಿದ್ದಾರೆ. ನನ್ನದು ತಪ್ಪಿಲ್ಲ, ನಾನು ಕಾಯಲು ಹೇಳಿದರೂ ಕಾಯದೇ ನೀವು ಸಂದರ್ಶನ ಶುರು ಮಾಡಿದ್ದೀರಾ. ಕಾಟಚಾರಕ್ಕೆ ನನ್ನ ಸಂದರ್ಶನ ಹಾಕುವಂತಿದ್ದರೆ ಹಾಕಬೇಡಿ ಎಂದಿದ್ದರಂತೆ.
ಯಶ್ ಹೇಳಿದ್ದು ರಮ್ಯಾ ಅವರ ಕಿವಿಗೆ ಬಿದ್ದು ಮತ್ತೆ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು. ಟ್ವೀಟ್ ಮಾಡಿ ಯಶ್ ಬಗ್ಗೆ ಅಸಮಾಧಾನ ಹೊರ ಹಾಕಿದ್ದರು. "ಗೌರವ ಹಾಗೂ ಕೃತಜ್ಞತೆಯೇ ಇಲ್ಲದವರ ಸಂಗ ಮಾಡಬಾರದು, ಅಂತವರಿಗೆ ಸಹಾಯ ಮಾಡಲೇಬಾರದು. ಆ ವ್ಯಕ್ತಿಗಳು ತಮ್ಮ ಅಹಂ ಅನ್ನು ಬಿಡೋದಿಲ್ಲ, ಅದನ್ನೇ ಉಸಿರಾಡುತ್ತಿರುತ್ತಾರೆ. ನನಗಂತೂ ಇದರಿಂದ ಒಳ್ಳೆಯ ಪಾಠ ಸಿಕ್ಕಿದೆ. ಯಶ್ ಬಗ್ಗೆ ನಾನು ತಪ್ಪಾಗಿ ತಿಳಿದುಕೊಂಡಿದ್ದೆ" ಎಂದು ಟ್ವೀಟ್ ಮಾಡಿದ್ದರು.
ಮರುದಿನವೇ ಈ ಟ್ವೀಟ್ ಡಿಲೀಟ್ ಮಾಡಿ ಯಶ್ ಬಹಳ ಒಳ್ಳೆಯ ಹುಡುಗ ಎಂದು ಹೊಗಳಿ ಅಟ್ಟಕ್ಕೇರಿಸಿ ಮತ್ತೊಂದು ಟ್ವೀಟ್ ಮಾಡಿದ್ದರು. ಒಟ್ಟಾರೆ ಆ ಬಳಿಕ ಮತ್ತೆ ಇಬ್ಬರು ಒಟ್ಟಿಗೆ ನಟಿಸಲಿಲ್ಲ. ಅಲ್ಲಿಂದ ಮುಂದೆ ರಮ್ಯಾ ಸಿನಿಮಾಗಳಲ್ಲಿ ನಟಿಸೋದೆ ಕಮ್ಮಿ ಆಯಿತು. ಒಂದೆರಡು ಸಿನಿಮಾಗಳಲ್ಲಿ ನಟಿಸಿ ರಾಜಕೀಯರಂಗದತ್ತ ಮುಖ ಮಾಡಿದರು. ಇದೀಗ ಮತ್ತೆ ಯೋಗರಾಜ್ ಭಟ್‌ರ ನಿರ್ದೇಶನದಲ್ಲಿ ಕಂಬ್ಯಾಕ್ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ. 'ಲಕ್ಕಿ' ಬಳಿಕ ಯಶ್ 'ಜಾನು' ಚಿತ್ರದಲ್ಲಿ ನಟಿಸಿ ಗೆದ್ದರು. ಅಲ್ಲಿಂದ ಮುಂದೆ ಅವರ ಸಕ್ಸಸ್ ಗ್ರಾಫ್ ಏರುತ್ತಾ ಹೋಯಿತು.
ಸಂಭಾವನೆ ಹೆಚ್ಚು ಕೇಳುತ್ತೀರಂತೆ, ರಮ್ಯಾ ಜೊತೆ ಕಿರಿಕೆ ಅಂತೆ ಎನ್ನುವ ಪ್ರಶ್ನೆಗಳಿಗೆ ಯಶ್ ಬಳಿಕ ಸ್ಪಷ್ಟನೆ ನೀಡಿದ್ದರು. "ನನ್ನ ಯೋಗ್ಯತೆಗೆ ತಕ್ಕ ಸಂಭಾವನೆ ಕೊಡ್ತಾರೆ. ನಾನು ಕೋಟಿ ಕೋಟಿ ಸಂಭಾವನೆ ಕೇಳ್ತಿಲ್ಲ" ಎಂದಿದ್ದರು. "ರಮ್ಯಾ ಜನಪ್ರಿಯ ತಾರೆ. ಅದರಿಂದ ನನಗೆ ಏನೂ ಆಗಬೇಕಾಗಿಲ್ಲ. ನಾನು ನನ್ನ ಅಪ್ಪ-ಅಮ್ಮನ ಮಾತನ್ನು ಮಾತ್ರವೇ ಕೇಳುತ್ತೇನೆ" ಎಂದು ಹೇಳಿದ್ದರು.
'ಡ್ರಾಮಾ', 'ಗೂಗ್ಲಿ', 'ರಾಜಾಹುಲಿ', 'ಗಜಕೇಸರಿ', 'Mr & Mrs ರಾಮಾಚಾರಿ' ಸಿನಿಮಾಗಳು ಭರ್ಜರಿ ಯಶಸ್ಸು ಸಾಧಿಸಿದವು. 'KGF' ಚಾಪ್ಟರ್ 1 ಹಾಗೂ ಚಾಪ್ಟರ್ 2 ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದರು.


Click it and Unblock the Notifications











