'ದ್ವಾರಕೀಶ್'ಗಿಂತ ಮೊದಲು ''ಆಪ್ತಮಿತ್ರ'' ಮಾಡಬೇಕೆಂದುಕೊಂಡಿದ್ದರು 'ರವಿಚಂದ್ರನ್'...!
ಚಿತ್ರರಂಗಕ್ಕೆ ತನು..ಮನ.. ಧನ ಅರ್ಪಿಸಿದವರು ದ್ವಾರಕೀಶ್. ತಮ್ಮ ಜೀವಿತಾವಧಿಯಲ್ಲಿ 52 ಚಿತ್ರಗಳನ್ನ ನಿರ್ಮಾಣ ಮಾಡಿದ್ದ ದ್ವಾರಕೀಶ್ ಗೆದ್ದಿದ್ದಕ್ಕಿಂತ ಸೋತಿದ್ದೇ ಹೆಚ್ಚು. ಆದರೂ.. ದ್ವಾರಕೀಶ್ ಸೋತಾಗ ಕುಗ್ಗಲಿಲ್ಲ. ಚಿತ್ರರಂಗದ ಸಹವಾಸವೇ ಬೇಡ ಎಂದು ಓಡಿಯೂ ಹೋಗಲಿಲ್ಲ. ಬದಲಿಗೆ ಕಳೆದುಕೊಂಡ ಜಾಗದಲ್ಲೇ ಮತ್ತೆ ಎಲ್ಲ ಪಡೆದುಕೊಂಡರು. ಪಡೆದುಕೊಂಡ ಜಾಗದಲ್ಲಿಯೇ ಮತ್ತೆ ಎಲ್ಲವನ್ನೂ ಕಳೆದುಕೊಂಡರು.
ಇಂಥ ದ್ವಾರಕೀಶ್, ವೃತ್ತಿ ಬದುಕಿನ ವಿಶೇಷವಾದ ಸಿನಿಮಾ ಆಪ್ತಮಿತ್ರ. ದ್ವಾರಕೀಶ್ ಜೊತೆ ಸಾಹಸಸಿಂಹ ವಿಷ್ಣುವರ್ಧನ್ ಮಾಡಿದ್ದ ಕೊನೆಯ ಸಿನಿಮಾ.
ಆ ಹೊತ್ತಿಗಾಗಲೇ ಸಿನಿಮಾಗಳನ್ನು ನಿರ್ಮಾಣ ಮಾಡಿ ಮಾಡಿ ತೀರಾ ನೆಲಕಚ್ಚಿದ್ದ ದ್ವಾರಕೀಶ್ ಅವರ ಪಾಲಿಗೆ ಆಪ್ತಮಿತ್ರ ನಿರ್ಣಾಯಕವಾಗಿತ್ತು. ನೂರೆಂಟು ವಿಘ್ನಗಳ ನಡುವೆಯೇ ಸಿನಿಮಾ ರಿಲೀಸ್ ಕೂಡಾ ಆಯಿತು. ಆದರೆ, ಯಾರೂ ಊಹಿಸಲಾರದಂಥಾ ಗೆಲುವು ಕಂಡು, ಚಿತ್ರರಂಗದಲ್ಲಿ ದಾಖಲೆ ನಿರ್ಮಿಸಿತು. ನಂತರ ಇದೇ ಚಿತ್ರ ತಮಿಳು ಸೇರಿದಂತೆ ಭಾರತದ ಬಹುತೇಕ ಭಾಷೆಗಳಿಗೆ ರಿಮೇಕ್ ಆಯಿತು

ಹೀಗೆ ದ್ವಾರಕೀಶ್ ಪಾಲಿಗೆ ವರವಾದ ಆಪ್ತಮಿತ್ರ ಚಿತ್ರವನ್ನ, ಕನ್ನಡದ ಕನಸುಗಾರ ಡಾ.ವಿ.ರವಿಚಂದ್ರನ್ ಮೊದಲು ನಿರ್ಮಾಣ ಮಾಡುವ ಕನಸನ್ನ ಕಂಡಿದ್ದರು ಅನ್ನುವ ವಿಚಾರ ನಿಮಗೆ ಗೊತ್ತಾ..? ಖುದ್ದು, ಡಾ.ವಿ.ರವಿಚಂದ್ರನ್ ಅವರೇ ಈ ಮಾತನ್ನ ದ್ವಾರಕೀಶ್ ಅವರ ಎದುರು ಹೇಳಿದ್ದರು.
ಹೌದು, ಅದು.. ದ್ವಾರಕೀಶ್ ಅವರ ಚಿತ್ರಜೀವನದ ಐವತ್ತನೇ ವರ್ಷದ ಕೊಡುಗೆಯಾಗಿ ಬಂದ ಆಯುಶ್ಮಾನ್ ಭವದ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ರವಿಚಂದ್ರನ್ ಅವತ್ತು ತಾವು ಕಂಡಿದ್ದ ಆಪ್ತಮಿತ್ರನ ಕನಸನ್ನ ಹಂಚಿಕೊಂಡಿದ್ದರು.
ಅವತ್ತು ವೇದಿಕೆ ಮೇಲೆ ಮಾತನಾಡಿದ್ದ ರವಿಚಂದ್ರನ್, ಆಪ್ತಮಿತ್ರ ಇನ್ನೇನು ಶುರುವಾಗಬೇಕು ಅನ್ನೋದಕ್ಕೆ ಮುಂಚೆ ಯೋಗಿ ದ್ವಾರಕೀಶ್ ಅವರು ಅಬ್ಬಯ್ಯನಾಯ್ಡು ಸ್ಟುಡಿಯೋದಲ್ಲಿ ಸಿಕ್ಕಿದ್ದರು. ಆಗ ನಾನು ತುಂಬಾ ಚನ್ನಾಗಿದೆ ಟೈಟಲ್ಲು ಮಾಡು. ಈ ಸಿನಿಮಾ ಸೂಪರ್ ಹಿಟ್ ಆಗತ್ತೆ ಅಂದಿದ್ದೆ. ಯಾಕೆಂದರೆ ಆ ಸಿನಿಮಾವನ್ನು ನಾನು ಮಾಡಬೇಕಿತ್ತು. ನನ್ನ ಆಶಯ ಕೂಡಾ ಫಲಿಸಿತು. ಆಪ್ತಮಿತ್ರನಾಗಿ ಬಂದ ಸಿನಿಮಾವನ್ನು ಜನ ಬಿಗಿದಪ್ಪಿಕೊಂಡರು. ಆ ಮೂಲಕ ದ್ವಾರಕೀಶ್ ಅವರ ಕಷ್ಟ ತೀರಿತು. ಕಷ್ಟ-ನಷ್ಟ ಸಹಜ ಆದರೆ, ಸಿನಿಮಾವನ್ನೇ ನಂಬಿದವರನ್ನು ಸಿನಿಮಾ ಯಾವತ್ತೂ ಕೈ ಬಿಡೋದಿಲ್ಲ. ಅದಕ್ಕೆ ದ್ವಾರಕೀಶ್ ಒಂದು ಉದಾಹರಣೆಯಷ್ಟೇ ಎಂದು ಹೇಳಿದ್ದರು.

ಇನ್ನೂ ದ್ವಾರಕೀಶ್ ಅವರ ಛಲ, ಹಠ, ಸಿನಿಮಾ ಪ್ರೀತಿಯ ಬಗ್ಗೆಯೂ ಅವತ್ತು ಮಾತನಾಡಿದ್ದ ರವಿಚಂದ್ರನ್, ದ್ವಾರಕೀಶ್ ಅವರು ಚಿತ್ರರಂಗಕ್ಕೆ ಬಂದು ಐವತ್ತು ವರ್ಷಗಳಾಗಿವೆ. ಅವರು ನಿರಂತರ ಹದಿನೆಂಟು ಸಿನಿಮಾಗಳ ಸೋಲು ಕಂಡಿವೆ. ಈಗ ಗೆದ್ದಿದ್ದೀನಿ ಅನ್ನುತ್ತಾರೆ. ಅದು ತಪ್ಪು. ಐವತ್ತು ವರ್ಷಗಳ ಹಿಂದೆ ಯಾವಾಗ ಅವರು ಸಿನಿಮಾ ನಿರ್ಮಾಣ ಮಾಡಲು ಶುರು ಮಾಡಿದರೋ ಅವತ್ತೇ ಅವರು ಗೆದ್ದುಬಿಟ್ಟರು ಎಂದಿದ್ದರು. ಹದಿನೆಂಟು ಸಿನಿಮಾ ಸೋತರೂ ಮುಂದುವರೆಯುವ ತಾಕತ್ತಿರೋದರಿಂದಲೇ ದೇವರು ಅವರಿಗೆ ಆ ಪರೀಕ್ಷೆ ನೀಡಿದ್ದು. ಕರ್ನಾಟಕದ ಮ್ಯಾಪಿನಲ್ಲಿ ಈ ಮೂತಿ ಘರ್ಜಿಸಿದ್ದು ಇವತ್ತಿನ ವರೆಗೂ ಕೇಳಿಸುತ್ತಲೇ ಇದೆ ಎಂದು ತಮ್ಮದ ಮಾತನ್ನ ಹಂಚಿಕೊಂಡಿದ್ದರು.
ಇದರ ಜೊತೆ ನಾನೇನಾದ್ರೂ ಸಾಧನೆ ಮಾಡಿದ್ದೀನಿ. ಇಲ್ಲೀತನಕ ಬಂದು ನಿಂತಿದ್ದೀನಿ ಅಂದರೆ ಅದಕ್ಕೆ ಅವರೂ ಕಾರಣ ಎಂದಿದ್ದ ರವಿಚಂದ್ರನ್, ದ್ವಾರಕೀಶ್ ಅವರ ತೊಡೆ ಮೇಲೆ ಕೂತು ಆಟ ಆಡಿಕೊಂಡು ಬೆಳೆದವನು ನಾನು ಎಂದಿದ್ದರು. ಎಷ್ಟೇ ಸೋತರೂ ಹಿಂದಕ್ಕೆ ಹೋಗದೇ ಮುಂದೇನು ಅಂತಲೇ ಯೋಚಿಸಿದ್ದಕ್ಕೋ ಏನೋ ದ್ವಾರಕೀಶ್ ಅವರನ್ನು ಒಂದೇ ಒಂದು ಆಪ್ತಮಿತ್ರ ಮತ್ತೆ ಅವರನ್ನು ಮೇಲಕ್ಕೆತ್ತಿತು ಎಂದು ಹೇಳಿ ಆಯುಶ್ಮಾನ್ ಭವ ಚಿತ್ರಕ್ಕೂ ಶುಭಾಶಯವನ್ನ ಕೋರಿದ್ದರು ರವಿಚಂದ್ರನ್


Click it and Unblock the Notifications











