ಅತ್ಯಾಚಾರಿಗಳನ್ನು ಹುಡುಕಿ-ಹುಡುಕಿ ಕೊಲ್ಲುತ್ತಿದ್ದಾನೆ ನಿಜ ಜೀವನದ 'ಅನ್ನಿಯನ್'
ವಿಕ್ರಂ ಅಭಿನಯದ ಸೂಪರ್ ಹಿಟ್ ತಮಿಳು ಸಿನಿಮಾ 'ಅನ್ನಿಯನ್' ಅನ್ನು ಬಹುತೇಕರು ನೋಡಿಯೇ ಇರುತ್ತಾರೆ. ಸಿನಿಮಾದ ನಾಯಕ ಛದ್ಮ ವೇಷಧಾರಿಯಾಗಿ ತಪ್ಪು ಮಾಡಿದವರನ್ನು ಕೊಂದು, ಅವರ ಪಾಪಗಳನ್ನು ಬರೆದಿಡುತ್ತಿರುತ್ತಾನೆ. ತೆಲುಗಿನಲ್ಲಿ ಇದೇ ಸಿನಿಮಾ 'ಅಪರಿಚಿತುಡು' ಆಗಿ ತೆರೆಕಂಡಿತ್ತು.
ನಿಜ ಜೀವನದಲ್ಲೂ ಇಂಥಹವನೇ ಒಬ್ಬ ವ್ಯಕ್ತಿಯಿದ್ದಾನೆ. ಅತ್ಯಾಚಾರಿಗಳನ್ನು ಕೊಲ್ಲುವ ಕಾಯಕದಲ್ಲಿ ಕೆಲ ವರ್ಷಗಳಿಂದಲೂ ನಿರತನಾಗಿದ್ದಾನೆ. ಈವರೆಗೆ ಪೊಲೀಸರು ಆತನನ್ನು ಬಂಧಿಸಲಾಗಿಲ್ಲ!
ಹೌದು, ನಿಜ ಜೀವನದ 'ಅನ್ನಿಯನ್' ತನ್ನನ್ನು ತಾನು 'ಬಾಂಗ್ಲಾದೇಶ್ ಹರ್ಕ್ಯುಲಸ್' ಎಂದು ಕರೆದುಕೊಳ್ಳುತ್ತಾನೆ. ಅತ್ಯಾಚಾರ ಆರೋಪಿಗಳನ್ನು ಕೊಂದು, ಅವರ ಹೆಣದ ಮೇಲೆ ಪತ್ರವೊಂದನ್ನು ಇಟ್ಟು ಹೋಗುತ್ತಾನೆ.

ಅತ್ಯಾಚಾರ ಆರೋಪಿಗಳನ್ನು ಕೊಲ್ಲುವ ಹರ್ಕುಲಸ್!
ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಪ್ರಕರಣಗಳು ಬಾಂಗ್ಲಾದೇಶದಲ್ಲಿ ಹೆಚ್ಚಿವೆ. ಹೆಚ್ಚಿನ ಪಾಲು ಆರೋಪಿಗಳಿಗೆ ಅಲ್ಲಿನ ಸಡಿಲ ನ್ಯಾಯವ್ಯವಸ್ಥೆಯ ಅಡಿ ಶಿಕ್ಷೆ ಆಗುವುದಿಲ್ಲ. ಅಂಥಹವರನ್ನೇ ಗುರಿ ಮಾಡಿಕೊಳ್ಳುವ 'ಬಾಂಗ್ಲಾದೇಶ್ ಹರ್ಕ್ಯುಲಸ್' ಅಂಥವರನ್ನು ಕ್ರೂರವಾಗಿ ಕೊಲ್ಲುತ್ತಾನೆ.

2019 ರ ಜನವರಿಯಿಂದ ಕೊಲೆ ಸರಣಿ ಆರಂಭ
2019 ರ ಆರಂಭದಲ್ಲಿ ಈತನ 'ನ್ಯಾಯವಿತರಣೆ(?!)' ಆರಂಭವಾಗಿದೆ. 2019 ರ ಜನವರಿ 7 ರಂದು 18 ರ ಯುವತಿಯ ಮೇಲೆ ಅತ್ಯಾಚಾರವಾಗುತ್ತದೆ. ಆ ನಂತರ ಕೆಲವೇ ದಿನದಲ್ಲಿ ಅತ್ಯಾಚಾರ ಆರೋಪಿಯನ್ನು ಕೊಂದಿದ್ದಾನೆ 'ಬಾಂಗ್ಲಾದೇಶ್ ಹರ್ಕ್ಯುಲಸ್'. ಶವದ ಮೇಲೂ ಪತ್ರವೊಂದು ದೊರೆತಿದೆ. ಅದರಲ್ಲಿ ಎಚ್ಚರಿಕೆಯನ್ನೂ ನೀಡಿದ್ದ 'ಹರ್ಕ್ಯುಲಸ್'.

ಶವದ ಮೇಲೆ ಪತ್ರಗಳು ದೊರೆತಿವೆ
ಶವದ ಮೇಲೆ ದೊರೆತ ಪತ್ರದಲ್ಲಿ, 'ನಾನು (ಆರೋಪಿಯ ಹೆಸರು) ಅತ್ಯಾಚಾರ ಮಾಡಿದ್ದನ್ನು ಒಪ್ಪಿಕೊಂಡಿದ್ದೇನೆ, ಈಗ ಶಿಕ್ಷೆ ಅನುಭವಿಸಿದ್ದೇನೆ' ಎಂದಿರುತ್ತದೆ. ಆ ನಂತರ ಕೆಲವೇ ವಾರಗಳಲ್ಲಿ ನಾಲ್ಕು ಮಂದಿ ಅತ್ಯಾಚಾರ ಆರೋಪಿಗಳನ್ನು ಕೊಂದು ಶವದ ಮೇಲೆ ಇಂಥಹುದೇ ಪತ್ರಗಳು ಇಡಲಾಗಿದೆ.

2019 ರ ಫೆಬ್ರವರಿ ತಿಂಗಳಲ್ಲಿ ಇಬ್ಬರನ್ನು ಕೊಂದಿದ್ದಾನೆ
2019 ರ ಫೆಬ್ರವರಿ ತಿಂಗಳಲ್ಲಿ ಇಬ್ಬರು ಅತ್ಯಾಚಾರ ಆರೋಪಿಗಳನ್ನು ಕೊಂದಿದ್ದಾನೆ 'ಬಾಂಗ್ಲಾದೇಶ್ ಹರ್ಕ್ಯುಲಸ್' ಕ್ರೂರವಾಗಿ ಕೊಂದು ಶವವನ್ನು ನೇಣುಹಾಕುತ್ತಾನೆ ಆತ, ಕೊರಳಿಗೆ ಪತ್ರವನ್ನು ನೇತುಹಾಕುತ್ತಾನೆ. ಬಹುತೇಕ ಕೊಲೆಗಳು ಇದೇ ಮಾದರಿಯಲ್ಲಿಯೇ ಆಗಿವೆ. ಕೆಲವು ದೇಹಗಳಲ್ಲಿ ಬಂದೂಕಿನ ಗುಂಡುಗಳು ದೊರೆತಿವೆ.

ಬಾಂಗ್ಲಾದೇಶ್ ಹರ್ಕ್ಯುಲಸ್‌ಗಾಗಿ ಪೊಲೀಸರ ಹುಡುಕಾಟ
ಬಾಂಗ್ಲಾದೇಶಿ ಪೊಲೀಸರು 'ಬಾಂಗ್ಲಾದೇಶ್ ಹರ್ಕ್ಯುಲಸ್' ಗಾಗ ಹುಡುಕಾಟ ನಡೆಸುತ್ತಿದ್ದಾರೆ. ಆದೇ ವೇಳೆ ಸ್ಥಳೀಯರಿಂದ ಹರ್ಕ್ಯುಲಸ್‌ಗೆ ಭಾರಿ ಬೆಂಬಲವೂ ವ್ಯಕ್ತವಾಗುತ್ತಿದೆ. ಹಾಗಾಗಿ ಕೊಲೆಗಾರನ ಬಗ್ಗೆ ಪೊಲೀಸರಿಗೆ ಯಾವುದೇ ಸುಳಿವು ಸಿಕ್ಕಿಲ್ಲ. ಆದರೆ ಫೆಬ್ರವರಿಯಲ್ಲಿ ಆದ ಕೊಲೆಗಳ ನಂತರ ಈತನಿಂದ ಯಾವುದೇ ಕೊಲೆಗಳಾಗಿಲ್ಲ ಎನ್ನಲಾಗಿದೆ.


Click it and Unblock the Notifications











