ಬರೀ ಸಿನಿಮಾ ಅಲ್ಲ.. ಈ ಕಾರಣಗಳಿಗಾಗಿ ಅಭಿಮಾನಿಗಳು ಡಿ ಬಾಸ್ ಅಂದ್ರೆ ಜೀವ ಬಿಡ್ತಾರೆ?
ಬಾಕ್ಸಾಫೀಸ್ ಸುಲ್ತಾನ್ ದರ್ಶನ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ರಾತ್ರಿಯಿಂದಲೂ ಆರ್ ಆರ್ ನಗರದ ನಿವಾಸದಲ್ಲಿ ದರ್ಶನ್ ಹುಟ್ಟುಹಬ್ಬದ ಸಂಭ್ರಮ ಮುಗಿಲು ಮುಟ್ಟಿದೆ. ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿ ನೆಚ್ಚಿನ ನಟನಿಗೆ ಶುಭ ಕೋರುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಬಹಳ ದೊಡ್ಡ ಅಭಿಮಾನಿ ಬಳಗ ಇರುವ ನಟ ದರ್ಶನ್.
ದರ್ಶನ್ ನಟನೆಯ ಸಿನಿಮಾ ಹಿಟ್ ಆಗಲಿ ಫ್ಲಾಪ್ ಆಗಲಿ ಅಭಿಮಾನಿಗಳ ಅಭಿಮಾನ ಮಾತ್ರ ಕಿಂಚಿತ್ತೂ ಕಮ್ಮಿ ಆಗಿಲ್ಲ. ದಿನದಿಂದ ದಿನಕ್ಕೆ ದರ್ಶನ್ ಕ್ರೇಜ್ ಹೆಚ್ಚುತ್ತಲೇ ಸಾಗುತ್ತಿದೆ. ಕಳೆದ 25 ವರ್ಷಗಳಲ್ಲಿ ಎಷ್ಟೇ ಜನ ಹೀರೊಗಳು ಬಂದ್ರು, ಹೋದ್ರು ದರ್ಶನ್ ಅಭಿಮಾನಿಗಳು ಮಾತ್ರ ಬದಲಾಗಲಿಲ್ಲ. ತಮ್ಮ ನೆಚ್ಚಿನ ನಟನನ್ನು ಯಾವುದೇ ಕ್ಷಣದಲ್ಲೂ ಕೈಬಿಡಲಿಲ್ಲ. ಬಿಡುವುದು ಇಲ್ಲ. ಹಾಗ್ ನೋಡಿದ್ರೆ ದರ್ಶನ್ ಸೆನ್ಸೇಷನ್ ಸಿನಿಮಾಗಳನ್ನು ಕೊಟ್ಟಿಲ್ಲ. ಬರೀ ಕಮರ್ಷಿಯಲ್ ಸಿನಿಮಾಗಳಲ್ಲಿ ನಟಿಸಿ ಗೆದ್ದಿದ್ದಾರೆ. ವಿಭಿನ್ನ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಮಾಸ್ ಹೀರೊ ಆಗಿ ಮೆರೆಯುತ್ತಿದ್ದಾರೆ.
ಸಾಕಷ್ಟು ಜನ ಬರೀ ದರ್ಶನ್ ಸಿನಿಮಾಗಳನ್ನು ನೋಡಿ ಅಭಿಮಾನಿಗಳಾದವರಲ್ಲ. ಅವರ ಒಳ್ಳೆಯ ಗುಣಗಳು ಹೆಚ್ಚು ಆಕರ್ಷಿಸಿದೆ. ಇದನ್ನು ಸಾಕಷ್ಟು ಜನ ಅಭಿಮಾನಿಗಳು ಕೂಡ ಒಪ್ಪಿಕೊಳ್ಳುತ್ತಾರೆ. ನಾವು ನಮ್ಮ ಬಾಸ್ ಒಳ್ಳೆಯ ಗುಣಗಳಿಗೆ ಅಭಿಮಾನಿಗಳಾಗಿದ್ದೇನೆ ಎನ್ನುತ್ತಾರೆ.

ನೇರ ನಿಷ್ಠುರ ವ್ಯಕ್ತಿತ್ವ
ಹೌದು ನಟ ದರ್ಶನ್ ತಮ್ಮ ನೇರ ನಡೆ ನುಡಿಯಿಂದ ಹೆಚ್ಚು ಎಲ್ಲರನ್ನು ಸೆಳೆಯುತ್ತಾರೆ. ಒಳಗೊಂದು ಹೊರಗೊಂದು ಅವರಲ್ಲಿ ಇಲ್ಲ. ಏನೇ ಇದ್ದರೂ ಕಡ್ಡಿ ತುಂಡು ಮಾಡಿದಂತೆ ಮಾತನಾಡುತ್ತಾರೆ. ಆದರೆ ಒಮ್ಮೆ ಯಾರಿಗಾದರೂ ಮಾತು ಕೊಟ್ಟರೆ ಮುಗೀತು. ಅದನ್ನು ಎಂದೂ ಮರೆಯುವುದಿಲ್ಲ. ತಮ್ಮ ಫಿಲ್ಟರ್ ಇಲ್ಲದ ಮಾತುಗಳಿಂದ ಕೆಲವೊಮ್ಮೆ ಟ್ರೋಲ್ ಕೂಡ ಆಗಿದ್ದಾರೆ. ಆದರೆ ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳುವುದಿಲ್ಲ. ನಾನು ಇರೋದೇ ಹೀಗೆ ಎನ್ನುವ ಜಾಯಮಾನ ಅವರದ್ದು. ಆನೇ ನಡೆದದ್ದೇ ದಾರಿ ಎನ್ನುತ್ತಾರಲ್ಲ ಹಾಗೆ.

ಸಹಾಯ ಮಾಡುವ ಗುಣ
ಸಹಾಯ ಮಾಡುವುದರಲ್ಲೂ ದರ್ಶನ್ ಸದಾ ಮುಂದೆ ನಿಲ್ಲುತ್ತಾರೆ. ಬಲಗೈಯಲ್ಲಿ ಮಾಡಿದ್ದು ಎಡಗೈಗೆ ಗೊತ್ತಾಗಬಾರದು ಎನ್ನುವುದು ದರ್ಶನ್ ಪಾಲಿಸಿ. ಸ್ಯಾಂಡಲ್‌ವುಡ್ 'ಒಡೆಯ'ನಿಂದ ಸಾಕಷ್ಟು ಜನ ಸಹಾಯ ಪಡೆದುಕೊಂಡಿದ್ದಾರೆ. ಇನ್ನು ಚಿತ್ರರಂಗದಲ್ಲೂ ತಾನು ಬೆಳೆದು ತನ್ನವರನ್ನು ಬೆಳೆಸುವ ಗುಣ ದರ್ಶನ್ ಅವರಲ್ಲಿದೆ. ಹೊಸ ಕಲಾವಿದರ ಬೆಂಬಲಕ್ಕೆ ಸದಾ ನಿಲ್ಲುತ್ತಾರೆ. ಸಾಂಗ್, ಟೀಸರ್ ಲಾಂಚ್ ಎಲ್ಲದಕ್ಕೂ ಹೋಗಿ ಚಿತ್ರವನ್ನು ಗೆಲ್ಲುಸುವಂತೆ ಮನವಿ ಮಾಡುತ್ತಾರೆ.

ದರ್ಶನ್ ಪ್ರಾಣಿ ಪಕ್ಷಿ ಪ್ರೀತಿ
ಭಾರತೀಯ ಚಿತ್ರರಂಗದಲ್ಲೇ ನಟ ದರ್ಶನ್ ಎಲ್ಲಾ ಸ್ಟಾರ್ ಕಲಾವಿದರಿಗಿಂತ ಪ್ರತ್ಯೇಕವಾಗಿ ನಿಲ್ಲುವುದು ತಮ್ಮ ಪ್ರಾಣಿ ಪಕ್ಷಿ ಪ್ರೀತಿಯಿಂದ. ದರ್ಶನ್‌ಗೆ ಬಾಲ್ಯದಿಂದಲೂ ಪ್ರಾಣಿ ಪಕ್ಷಿ ಅಂದರೆ ಅಚ್ಚುಮೆಚ್ಚು. ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ಸಾಕಷ್ಟು ಪ್ರಾಣಿ ಪಕ್ಷಿಗಳನ್ನು ಸಾಕುತ್ತಿದ್ದಾರೆ. ಮೈಸೂರು ಮೃಗಾಲಯದಲ್ಲೂ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುತ್ತಾರೆ. ಬರೀ ತಾವು ಮಾತ್ರ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವುದಲ್ಲ. ತಮ್ಮ ಆಪ್ತರಿಗೂ, ಅಭಿಮಾನಿಗಳಿಗೂ ಸಲಹೆ ನೀಡುತ್ತಾರೆ. ಅರಣ್ಯ ಇಲಾಖೆಯ ರಾಯಭಾರಿ ಕೂಡ ಆಗಿರುವ ದರ್ಶನ್‌ಗೆ ವೈಲ್ಡ್‌ಲೈಫ್ ಫೋಟೊಗ್ರಫಿ ಆಸಕ್ತಿಯೂ ಇದೆ. ತಮ್ಮ ಫೋಟೊಗ್ರಫಿಯಿಂದ ಬರುವ ಹಣವನ್ನು ಅರಣ್ಯ ಇಲಾಖೆಗೆ ನೀಡುತ್ತಾರೆ.

ಅಭಿಮಾನಿಗಳ ಮೇಲಿನ ಪ್ರೀತಿ
ಖಳ ನಟ ತೂಗುದೀಪ ಶ್ರೀನಿವಾಸ್ ಮಗನಾದರೂ ಬಹಳ ಕಷ್ಟಪಟ್ಟು ದರ್ಶನ್ ಚಿತ್ರರಂಗದಲ್ಲಿ ನೆಲೆ ನಿಂತರು. ಕ್ಯಾಮರಾ ಅಸಿಸ್ಟೆಂಟ್ ಕೆಲಸ ಆರಂಭಿಸಿದರವು ಇಂದು ಬಾಕ್ಸಾಫೀಸ್ ಸುಲ್ತಾನ್ ಆಗಿ ಮೆರೆಯುತ್ತಿದ್ದಾರೆ. ದರ್ಶನ್ ಸಾಧನೆಯೇ ಸಾಕಷ್ಟು ಅಭಿಮಾನಿಗಳಿಗೆ ಸ್ಫೂರ್ತಿಯಾಗಿದೆ. ಬರೀ ಅಭಿಮಾನಿಗಳು ದರ್ಶನ್ ಅಂದ್ರೆ ಜೀವ ಬಿಡಲ್ಲ. ದರ್ಶನ್ ಕೂಡ ಅಭಿಮಾನಿಗಳು ಅಂದ್ರೆ ಜೀವ ಬಿಡ್ತಾರೆ. ತಮ್ಮ ಅಭಿಮಾನಿಗಳನ್ನು ಸೆಲೆಬ್ರೆಟೀಸ್ ಎಂದು ಕರೆಯುತ್ತಾರೆ. ಇತ್ತೀಚೆಗೆ 'ನನ್ನ ಪ್ರೀತಿಯ ಸೆಲೆಬ್ರೆಟೀಸ್ ' ಎಂದು ಎದೆ ಮೇಲೆ ಟ್ಯಾಟೂ ಹಾಕಿಸಿಕೊಂಡು ನೀವು ನನ್ನ ಎದೆಯಲ್ಲಿದ್ದೀರಾ ಎಂದು ದರ್ಶನ್ ಸಾರಿ ಹೇಳಿದ್ದರು. ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳನ್ನು ಬಹಳ ಅಕ್ಕರೆಯಿಂದ ಕಾಣುತ್ತಾರೆ. ಈ ಎಲ್ಲಾ ಕಾರಣಗಳಿಂದ ದರ್ಶನ್‌ಗೆ ದೊಡ್ಡ ಅಭಿಮಾನಿಗಳ ಬಳಗ ಇದೆ.


Click it and Unblock the Notifications











