ನಿಮ್ಮ ಸಂಗಾತಿ ಕೋಪಗೊಂಡಾಗ ಏನು ಮಾಡಬೇಕು ಗೊತ್ತೆ? ಸಕತ್ ಟಿಪ್ಸ್ ಇಲ್ಲಿವೆ ನೋಡಿ
ಮನೆ, ಸಂಬಂಧ ಎಂದ ಮೇಲೆ ಕೋಪ, ತಾಪ, ಜಗಳ ಕಾಮನ್ ಬಿಡಿ. ಆದರೆ, ಕೆಲವೊಮ್ಮೆ ಇದು ಅತಿರೇಕಕ್ಕೆ ಹೋಗಿಬಿಡುತ್ತದೆ. ಕೋಪದಲ್ಲಿ ಮುಖ ಊದಿಸಿಕೊಂಡಿರುವ ತನ್ನ ಸಂಗಾತಿಯನ್ನು ಸಮಾಧಾನ ಮಾಡುವುದು ಹೇಗೆ...? ಅವರ ಜೊತೆ ಮಾತು ಶುರು ಮಾಡುವುದು ಹೇಗೆ ಎಂಬ ಯೋಚನೆಯಲ್ಲೇ ತಲೆನೋವು ಶುರುವಾಗಿರುತ್ತೆ.
ಇದೊಂದು ಸವಾಲಿನ ಕೆಲಸ ಕೂಡ ಹೌದು. ಕೋಪಗೊಂಡವರ ಜೊತೆಗೆ ನಾವು ಕೋಪದಿಂದ ವರ್ತಿಸಿದರೇ ಸಂಬಂಧವೇ ಹಾಳಾಗಲಿದೆ. ಇಬ್ಬರ ನಡುವೆ ಅಂತರ, ಅಗೌರವ ಹೆಚ್ಚಾಗಲಿದೆ. ಹೀಗಾಗಿಯೇ ತನ್ನ ಸಂಗಾತಿಯೊಂದಿಗೆ ಹೇಗೆ ವ್ಯವಹರಿಸಬೇಕು ಎಂಬ ಕೆಲವು ಟಿಪ್ಸ್ ಗಳನ್ನು ಇಲ್ಲಿ ನೀಡಲಾಗಿದೆ. ಇದು ಇಬ್ಬರ ನಡುವಿನ ಉತ್ತಮ ಸಂಬಂಧಕ್ಕೆ ಸೇತುವೆಯಾದರೂ ಆಗಬಹುದು.

ಮುಖ ಕೆಂಪು ಮಾಡಿಕೊಂಡ ಸಂಗಾತಿಯ ಕೋಪ ಹೀಗೆ ಕಡಿಮೆ ಮಾಡಿ
1. ಉತ್ತಮ ಮಾತುಕತೆ
ವ್ಯಕ್ತಿಗಳ ನಡುವಿನ ಆರೋಗ್ಯಕರ ಸಂಬಂಧಗಳು ಮುಕ್ತ ಸಂವಹನವನ್ನು ಅವಲಂಬಿಸಿವೆ. ಮುಕ್ತವಾಗಿ ಮಾತನಾಡುವುದು, ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಒಂದು ಸ್ಪೇಸ್ ನೀಡಿ. ಕೋಪಕ್ಕೆ ಕಾರಣವೇನು ಎಂಬುದನ್ನು ಚರ್ಚಿಸಿ, ಇದರಲ್ಲಿ ಕೋಪ ಇರದೇ ಅವರ ಬಗ್ಗೆ ಸಹಾನುಭೂತಿ ಮತ್ತು ಪ್ರೀತಿ ವ್ಯಕ್ತವಾಗಲಿ.
2. ಕೋಪಕ್ಕೆ ಮೂಲವೇನು?
ಸಾಮಾನ್ಯವಾಗಿ ಕೋಪ ಬರುವುದು ಒಬ್ಬರ ಅಗತ್ಯಗಳನ್ನು ಸರಿಯಾಗಿ ಪೂರೈಸದ ಕಾರಣದಿಂದ. ಅದರೆ, ಅದನ್ನು ಬಾಯಿಬಿಟ್ಟು ಹೇಳಲಾಗದೆ ಬೇರೆ ವಿಷಯಗಳಲ್ಲಿ ಕೋಪ ತೀರಿಸುತ್ತೇವೆ. ಹೀಗಾಗಿ ತನ್ನ ಸಂಗಾತಿ ಕೋಪ ಮಾಡಿಕೊಳ್ಳಲು ಮೂಲ ಕಾರಣವೇನು ಎಂಬುದನ್ನು ಅರ್ಥಮಾಡಿಕೊಳ್ಳಿ. ಅದರ ಬಗ್ಗೆ ಮಾತನಾಡಿ.
3. ಊಹೆಗಳನ್ನು ಮನಸ್ಸಿನಿಂದ ತೆಗೆದುಹಾಕಿ
ತಪ್ಪಾದ ವ್ಯಾಖ್ಯಾನಗಳು ವಾದಗಳಿಗೆ ಕಾರಣವಾಗಬಹುದು. ಊಹಿಸುವ ಬದಲು, ಸ್ಪಷ್ಟೀಕರಣಕ್ಕಾಗಿ ಕೇಳಿ. ವಿಶ್ವಾಸಾರ್ಹ ಸಂಬಂಧದಲ್ಲಿ ಮುಕ್ತ ಮತ್ತು ಪ್ರಾಮಾಣಿಕ ಸಂವಹನವನ್ನು ಪ್ರೋತ್ಸಾಹಿಸಿ.

4. ನಿಮ್ಮ ಸಂಗಾತಿಯನ್ನು ಅರ್ಥಮಾಡಿಕೊಳ್ಳುವುದು
ಮನುಷ್ಯರು ಒಬ್ಬರಿಗಿಂತ ಒಬ್ಬರು ವಿಭಿನ್ನ. ಹೀಗಾಗಿಯೇ ಅವರನ್ನು ಅರ್ಥಮಾಡಿಕೊಳ್ಳುವುದು ಕೂಡ ಒಂದು ಕಲೆ. ನಿಮ್ಮ ಸಂಗಾತಿಯ ವ್ಯಕ್ತಿತ್ವ, ಪ್ರತಿಕ್ರಿಯೆಗಳು ಮತ್ತು ಆದ್ಯತೆಗಳನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯ. ಉತ್ತಮ ಸಂಬಂಧವನ್ನು ಕಟ್ಟಬೇಕು ಎಂದರೇ ಸಂಗಾತಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವುದು ಕೂಡ ಅಷ್ಟೇ ಅವಶ್ಯಕ.
5. ಕೋಪ ಮಾಡಿಕೊಂಡವರ ಜೊತೆ ಜಗಳ ಬೇಡ
ಒಂದು ವಿಷಯಕ್ಕೆ ನಿಮ್ಮ ಸಂಗಾತಿ ಸಿಟ್ಟು ಮಾಡಿಕೊಂಡಿದ್ದಾರೆ ಎಂದರೆ ಅವರ ಮೇಲೆ ಕೋಪ ತೋರಿಸಬೇಡಿ. ಕೋಪದಿಂದ ಏನು ಬದಲಾಗುವುದಿಲ್ಲ. ಹೀಗಾಗಿ ತಾವು ಯಾವುದಕ್ಕೆ ಸಮಯ ಕೊಡುತ್ತಿದ್ದೇವೆ...? ಈಗ ಜಗಳ ಮಾಡುವಷ್ಟು ಆ ವಿಷಯ ಮಹತ್ವದ್ದೇ?. ಅದು ಚರ್ಚೆಗೆ ಅರ್ಹವಾಗಿದೆಯೇ ಎಂಬುದನ್ನು ಚಿಂತಿಸಬೇಕು. ಇಲ್ಲದಿದ್ದರೇ ನಿಮ್ಮ ಸಂಬಂಧವೇ ಕೊನೆಯಾಗಬಹುದು.
6. ಸಂಗಾತಿಗೆ ಸ್ಪೇಸ್ ನೀಡಿ
ಒಂದು ಸಂಬಂಧದಲ್ಲಿ ಇರುವ ವ್ಯಕ್ತಿಗೂ ಅವರದ್ದೇ ಆದ ಒಂದು ವೈಯಕ್ತಿಕ ಜೀವನವಿರುತ್ತದೆ. ಹೀಗಾಗಿಯೇ ಅವರಿಗೆ ಸ್ಪೇಸ್ ನೀಡುವುದು ಸಂಬಂಧ ಉತ್ತಮವಾಗಲು ಸಹಕಾರಿಯಾಗುತ್ತದೆ. ಇಲ್ಲದಿದ್ದರೇ ಅದೇ ಒತ್ತಡಕ್ಕೆ ಅವರ ಕೋಪ ಹೆಚ್ಚಾಗಬಹುದು.
7. ಸಮರ್ಥನೆ ಮತ್ತು ಗೌರವ
ಸಂಬಂಧಗಳು ಹಸಿರಾಗಿರುವುದು ಪರಸ್ಪರ ನೀಡುವ ಗೌರವದ ಮೇಲೆ. ಹೀಗಾಗಿ ನಿಮ್ಮ ಸಂಗಾತಿಯ ಭಾವನೆಗಳು ಮತ್ತು ಆಸೆಗಳನ್ನು ಗೌರವಿಸಿ. ನಿಮ್ಮ ಅಗತ್ಯಗಳನ್ನು ವ್ಯಕ್ತಪಡಿಸುವಲ್ಲಿ ವಿಶ್ವಾಸ ಮತ್ತು ಪ್ರಾಮಾಣಿಕತೆಯು ಪರಿಣಾಮಕಾರಿಯಾಗಿರುತ್ತದೆ. ಇದರಿಂದ ಜಗಳ, ಕೋಪ ಕಡಿಮೆಯಾಗುತ್ತದೆ.
8. ಸಂಗಾತಿಯ ಕೋಪಕ್ಕೆ ನೀವೇ ಕಾರಣ ಅಗಿರಬೇಕಿಲ್ಲ
ಕೆಲವೊಮ್ಮೆ ನಿಮ್ಮ ಸಂಗಾತಿಯ ಕೋಪಕ್ಕೆ ಕಾರಣ ನೀವೇ ಆಗಿರಬೇಕು ಎಂದೇನಿಲ್ಲ. ಅದು ಬೇರೆ ವಿಷಯಗಳಿಗೂ ಸಂಬಂಧಿಸಿರಬಹುದು ಎಂಬುದನ್ನು ಅರ್ಥಮಾಡಿಕೊಳ್ಳಿ. ಅವರ ಭಾವನೆಗಳ ಮೇಲೆ ಪರಿಣಾಮ ಬೀರುವ ಆಳವಾದ ಸಮಸ್ಯೆಗಳು ಇರಬಹುದು. ಹೀಗಾಗಿಯೇ ಅವರನ್ನು ಪ್ರೀತಿ ಮತ್ತು ತಾಳ್ಮೆಯಿಂದ ಮಾತನಾಡಿಸಿ. ನಿಮ್ಮ ಆಸಕ್ತಿಗಳು ಬೇರೆ ಬೇರೆಯಾಗಿರುವ ಕ್ಷೇತ್ರಗಳಲ್ಲಿ ರಾಜಿ ಮಾಡಿಕೊಳ್ಳಿ.


Click it and Unblock the Notifications











