ಪುಟ್ಟಣ್ಣ ಕಣಗಾಲ್-ರಾಜ್ ಕುಮಾರ್ ನಡುವೆ ಮನಸ್ತಾಪ ಮೂಡಿದ್ದೇಕೆ ? ಇಬ್ಬರ ನಡುವೆ ವಾಗ್ಯುದ್ದ ನಡೆದಿದ್ದೇಕೆ ?
ಡಾ.ರಾಜ್ ಕುಮಾರ್ ಮತ್ತು ಪುಟ್ಟಣ್ಣ ಕಣಗಾಲ್ .. ಕನ್ನಡ ಚಿತ್ರರಂಗದ ಎರಡು ಪ್ರಮುಖ ಆಧಾರಸ್ತಂಭ. ಕನ್ನಡ ಚಿತ್ರರಂಗಕ್ಕೆ ಇವರಿಬ್ಬರ ಕೊಡುಗೆ ಅಪಾರ. ಒಬ್ಬರದ್ದು ಸಂತ ಗುಣ. ಮತ್ತೊಬ್ಬರದ್ದು ಸ್ಫೋಟ ಗುಣ. ಆದರೆ.. ಚಿತ್ರವೊಂದಕ್ಕೆ ನಿರ್ದೇಶಕ ಮುಖ್ಯ ಎಂಬ ಪುಟ್ಟಣ್ಣ ಅವರ ವಾದವನ್ನ ಡಾ.ರಾಜ್ ಕುಮಾರ್ ಕೂಡ ಒಪ್ಪುತ್ತಿದ್ದರು. ಡಾ.ರಾಜ್ ಕುಮಾರ್ ಅವರ ಮೇಲೆ ಕೂಡ ಅಪಾರ ಅಭಿಮಾನವನ್ನ ಹೊಂದಿದ್ದರು. ಆದರೆ.. ಅದೊಂದು ದಿನ, ಅದೊಂದು ಕ್ಷಣ.. ಇಬ್ಬರ ನಡುವೆ ಉಂಟಾದ ಭಿನ್ನಾಭಿಪ್ರಾಯ, ಇಡೀ ಚಿತ್ರತಂಡದ ತಳಮಳಕ್ಕೆ ಕಾರಣವಾಗಿತ್ತು. ಇದಕ್ಕೆ ವೇದಿಕೆಯಾಗಿದ್ದು ಸತಿ ಶಕ್ತಿ ಚಿತ್ರ.
ಹೌದು, ಆಗ ಇನ್ನೂ ಪುಟ್ಟಣ್ಣ ಕಣಗಾಲ್ ನಿರ್ದೇಶಕರಾಗಿರಲಿಲ್ಲ. ತಮ್ಮ ಅಣ್ಣ ಕಣಗಾಲ್ ಪ್ರಭಾಕರ್ ಶಾಸ್ತ್ರಿ ಅವರ ಬಳಿ ಸಹಾಯಕ ನಿರ್ದೇಶಕರಾಗಿದ್ದರು ಪುಟ್ಟಣ್ಣ. ಆದರೆ ಡಾ.ರಾಜ್ ಕುಮಾರ್ ಅವರಿಗೆ ತಾರಾ ಮೌಲ್ಯ ಆಗಲೇ ಬಂದಿತ್ತು. ಇಂತಹ ಸಂದರ್ಭದಲ್ಲಿ ಆರಂಭವಾದ ಸತಿ ಶಕ್ತಿ ಚಿತ್ರದಲ್ಲಿ ಡಾ.ರಾಜ್ ಕುಮಾರ್ ಅವರದ್ದು ದ್ವೀಪಾತ್ರವಾಗಿತ್ತು. ವಿರೂಪಾಕ್ಷ ಎಂಬ ನಾಯಕ ಮತ್ತು ರಕ್ತಾಕ್ಷ ಎಂಬ ಖಳನಾಯಕ - ಎರಡೂ ಪಾತ್ರಗಳನ್ನು ಅವರು ನಿರ್ವಹಿಸಿದ್ದರು. ಅದೊಂದು ದಿನ ವಿರೂಪಾಕ್ಷನೊಳಗೆ ರಕ್ತಾಕ್ಷ ಪ್ರವೇಶಿಸಿ ವಿರೂಪಾಕ್ಷನು ರಕ್ತಾಕ್ಷನಂತೆ ನಡೆಯುವ ಒಂದು ದೃಶ್ಯ ಭಾಗದ ಚಿತ್ರೀಕರಣ ನಡೆಯುತ್ತಿತ್ತು. ತುಂಬಾ ಉದ್ದದ ಟ್ರ್ಯಾಕ್ ಹಾಕಿ ಟ್ರಾಲಿ ಶಾಟ್ ತೆಗೆಯುವ ವ್ಯವಸ್ಥೆಯಾಗಿತ್ತು.

ವಿಶೇಷ ಅಂದರೆ ಈ ಜವಾಬ್ದಾರಿಯನ್ನು ಪುಟ್ಟಣ್ಣ ಕಣಗಾಲ್ ಅವರು ನಿರ್ವಹಿಸುತ್ತಿದ್ದರು. ನಿರ್ದೇಶಕರು ಸೂಚನೆ ನೀಡಿ ನೋಡುತ್ತಿದ್ದರು. ರಾಜಕುಮಾರ್ ಅವರು ನಾಲ್ಕೈದು ಸಾರಿ ನಡೆದರೂ ಪುಟ್ಟಣ್ಣನವರು ಸರಿಯಿಲ್ಲ ಎಂದು ರೀಟೇಕ್ ಮಾಡುತ್ತಿದ್ದರು. ಒಂದು ಹಂತದಲ್ಲಿ ತಾಳ್ಮೆ ಕಳೆದುಕೊಂಡ ರಾಜಕುಮಾರ್ ಅವರು ನಾನು ನಡೆಯೋದು ಸರಿ ಇಲ್ಲ ಅನ್ನೋದಾದರೆ ನೀವೇ ಒಮ್ಮೆ ನಡೆದು ತೋರಿಸಿ, ಸುಮ್ನೆ ರೀಟೇಕ್ ಆಗೋದು ಬೇಡ ಎಂದರು. ರಾಜ್ ಅವರಾಡಿದ ಈ ಮಾತಿಗೆ ಪುಟ್ಟಣ್ಣನವರು ಕೂಡ ತಕ್ಷಣವೇ ಪ್ರತ್ಯುತ್ತರವನ್ನ ಕೊಟ್ಟರು.ನಾನು ತೋರ‍್ಸೋದಾದ್ರೆ ನೀವ್ಯಾಕೇ ನಟರಾಗಿದ್ದೀರಿ ಎಂದು ಹೇಳಿದರು. ಪುಟ್ಟಣ್ಣ ಅವರಿಂದ ಇದನ್ನ ನಿರೀಕ್ಷೆ ಮಾಡದ ರಾಜಕುಮಾರ್ ಅವರು ಥಟ್ಟನೆ ತೋರ‍್ಸೋಕಾಗಲ್ಲ ಅನ್ನೋದಾದ್ರೆ ನೀವ್ಯಾಕೆ ಸಹನಿರ್ದೇಶಕರಾಗಿದ್ದೀರಿ? ಎಂದು ಹೇಳಿ ಸೆಟ್‌ನಿಂದ ಹೊರನಡೆದು ಬಿಟ್ಟರು.
ಆಗ ನಿರ್ದೇಶಕರಾದಿಯಾಗಿ ಎಲ್ಲರಿಗೂ ಆತಂಕ. ರಾಜಕುಮಾರ್ ಸಾಮಾನ್ಯವಾಗಿ ಸಿಟ್ಟಾಗಿ ಸೆಟ್ ಬಿಟ್ಟು ಹೋಗುವವರಲ್ಲ. ಆದರೆ ಈಗ ಹೀಗಾಗಿಬಿಟ್ಟಿದೆ. ಏನು ಮಾಡುವುದೆಂದು ಯೋಚಿಸಿ ಅವರನ್ನು ಕರೆತರುವ ಹೊಣೆಯನ್ನು ಇದೇ ಚಿತ್ರಕ್ಕೆ ಮತ್ತೊಬ್ಬ ಸಹಾಯಕ ನಿರ್ದೇಶಕರಾಗಿದ್ದ ಕೆ.ಎಸ್.ಎಲ್.ಸ್ವಾಮಿ ಅವರಿಗೆ ವಹಿಸಲಾಯಿತು. ಅದಕ್ಕೆ ಕಾರಣವೂ ಇತ್ತು. ಕೆ.ಎಸ್.ಎಲ್.ಸ್ವಾಮಿ ಅವರಿಗೆ ರಾಜಕುಮಾರ್ ಅವರ ಜೊತೆ ಸಾಕಷ್ಟು ಸಲಿಗೆಯಿತ್ತು. ಹೀಗಾಗಿಯೇ ರಾಜಣ್ಣ ಬಳಿ ರಾಜಿ ಸಂಧಾನಕ್ಕೆ ಕೆ.ಎಸ್.ಎಲ್.ಸ್ವಾಮಿ ಅವರನ್ನೇ ಕಳಿಸಲಾಯಿತು.

ಸ್ವಾಮಿಯವರು ಸ್ಟುಡಿಯೋ ಸೆಟ್‌ನಿಂದ ಹೊರಬಂದು ನೋಡಿದರು. ರಾಜಕುಮಾರ್ ಒಬ್ಬರೇ ದೂರದಲ್ಲಿ ಒಂದು ಮರದ ಕೆಳಗೆ ನಿಂತಿದ್ದರು. ಸ್ವಾಮಿಯವರು ಹತ್ತಿರ ಬಂದು ಬಾ ರಾಜಣ್ಣ, ಶೂಟಿಂಗ್ ಮುಂದುವರ‍್ಸೋಣ ಎಂದು ಕೇಳಿದರು. ರಾಜಕುಮಾರ್ ವ್ಯಾಕುಲಗೊಂಡಂತೆ ಕಂಡರು. ಏನೂ ಮಾತಾಡಲಿಲ್ಲ.
ಇದರಿಂದ ಇನ್ನೂ ಆತಂಕಕ್ಕೊಳಗಾದ ಪುಟ್ಟಣ್ಣ ನಿನಗೆ ಗೊತ್ತಲ್ಲ, ಒಳ್ಳೆ ಕೆಲಸಗಾರ, ಆದ್ರೆ ಸ್ವಲ್ಪ ಮುಂಗೋಪಿ. ಏನೋ ಅಂದು ಬಿಟ್ಟ. ಮರೆತು ಬಿಡು, ಬಾ ರಾಜಣ್ಣ ಎಂದು ಸ್ನೇಹಪೂರ್ವಕ ಸಲಿಗೆಯ ಒತ್ತಾಯವನ್ನ ಸ್ವಾಮಿಯವರು ಮಾಡಿದರು. ಆಗ ರಾಜಕುಮಾರ್ ಹೇಳಿದ್ದೇನು ಗೊತ್ತೆ? ನೋಡು ರವೀ, ಆತ ಏನೋ ಹಾಗ್ ಮಾತಾಡ್ಬಿಟ್ಟ, ನನ್ ಚಿಂತೆ ಅದಲ್ಲ, ಆತ ಮಾತಾಡಿದ್ ರೀತೀಲೇ ನಾನೂ ಮಾತಾಡ್‌ಬಿಟ್ನಲ್ಲ ಅಂತ ನನ್ ಬಗ್ಗೆ ನನಗೇ ಬೇಜಾರಾಗ್ತಿದೆ ಎಂದು ರಾಜಕುಮಾರ್ ಹೇಳಿದಾಗ ಕೆ.ಎಸ್.ಎಲ್.ಸ್ವಾಮಿ ಅವರಿಗೆ ಮಾತೇ ಹೊರಡಲಿಲ್ಲ.
ರಾಜ್ ಕುಮಾರ್ ಅವರ ಈ ಮಾತುಗಳನ್ನ ಕೇಳಿ, ಬೆಕ್ಕಸ ಬೆರಗಾಗಿ ಕೆ.ಎಸ್.ಎಲ್.ಸ್ವಾಮಿ ಅವರು ನಿಂತಾಗ, ಖುದ್ದು ರಾಜ್ ಕುಮಾರ್ ಅವರೇ ರವಿ ಅವರ ಬಳಿ ಬಂದು ಬಾ ಬಾ ಶೂಟಿಂಗ್ ಶುರು ಮಾಡ್ರಿ, ನನ್ನಿಂದ ತೊಂದರೆ ಆಗ್‌ಬಾರದು ಎಂದು ಕೈ ಹಿಡಿದು ಕರೆದೊಯ್ದರು. ಶೂಟಿಂಗ್‌ಗೆ ಮರಳಿ ನಿರಾಳವಾಗಿ ಕೆಲಸ ಮುಗಿಸಿದರು.ಇದಿಷ್ಟು ವಿವರಗಳನ್ನು ಸ್ವತಃ ಕೆ.ಎಸ್.ಎಲ್.ಸ್ವಾಮಿಯವರೇ ಟಿವಿ ಸಂದರ್ಶನದಲ್ಲಿ ಹಿಂದೊಮ್ಮೆ ಹೇಳಿದ್ದರು.
ಆ ನಂತರ ಪುಟ್ಟಣ್ಣ ಕಣಗಾಲ್ ಮತ್ತು ಕೆ.ಎಸ್.ಎಲ್. ಸ್ವಾಮಿ, ಮುಂದೆ ದೊಡ್ಡ ನಿರ್ದೇಶಕರಾಗಿ ಬೆಳೆದರು. ಪುಟ್ಟಣ್ಣನವರಂತೂ ನಿರ್ದೇಶಕರ ದೊಡ್ಡಣ್ಣ ಎಂಬಂತೆ ಎತ್ತರಕ್ಕೆ ಏರಿದರು. ಕನ್ನಡ ಸಿನಿಮಾರಂಗಕ್ಕೆ 'ಭಾವೋನ್ಮಾದ ಶೈಲಿ'ಯ ಅಪೂರ್ವ ಕೊಡುಗೆ ಕೊಟ್ಟರು.

ಆದರೆ.. ಇಷ್ಟೆಲ್ಲ ಆದರೂ ಪುಟ್ಟಣ್ಣ ಕಣಗಾಲ್ ಸತಿಶಕ್ತಿ ಸಂದರ್ಭದಲ್ಲಾದ ಮಾತಿನ ಚಕಮಕಿಯನ್ನ ಮನಸಿನಲ್ಲಿ ಇಟ್ಟುಕೊಳ್ಳಲಿಲ್ಲ. ರಾಜ್ ಕುಮಾರ್ ಅವರು ಕೂಡ ಆ ವಿಚಾರವನ್ನ ನೆನಪಿನಲ್ಲಿ ಇಡಲಿಲ್ಲ. ಇದಕ್ಕೆ ಕೈಗನ್ನಡಿ ಎನ್ನುವಂತೆ ಪುಟ್ಟಣ್ಣನವರು ನಿರ್ದೇಶಕರಾದ ಮೇಲೆ ರಾಜಕುಮಾರ್ ಅವರು 'ಮಲ್ಲಮ್ಮನ ಪವಾಡ, ಕರುಳಿನ ಕರೆ, ಸಾಕ್ಷಾತ್ಕಾರ ಚಿತ್ರಗಳಲ್ಲಿ ನಾಯಕರಾಗಿ ಅಭಿನಯಿಸಿದರು. ಹಳೆಯದನ್ನು ಅಲ್ಲೇ ಬಿಟ್ಟು ಇಬ್ಬರೂ ದೊಡ್ಡವರಾದರು. ಪರಸ್ಪರ ದೊಡ್ಡ ಮಾತುಗಳನ್ನು ಆಡಿದರು.
'ಡಾ. ರಾಜಕುಮಾರ್ ಅವರ ಬಗ್ಗೆ ನನಗೆ ಅಪಾರ ಅಭಿಮಾನವಿದೆ. ಅವರೊಬ್ಬ ಮಹಾನ್ ಕಲಾವಿದ. ಅವರ ಕರ್ತವ್ಯ ನಿಷ್ಠೆ, ಕಾಲಪ್ರಜ್ಞೆ, ಶಿಸ್ತು ಅಸಾಮಾನ್ಯವಾದದ್ದು ಎಂದು ಪುಟ್ಟಣ್ಣ ಅವರು ಡಾ.ರಾಜ್ ಬಗ್ಗೆ ಹೇಳಿದರೆ, ಪುಟ್ಟಣ್ಣನವರೊಬ್ಬ ಮಹಾನ್ ಕಲಾವಿದ ಹಾಗೂ ಅತಿಶ್ರೇಷ್ಠ ಸೃಜನಾತ್ಮಕ ನಿರ್ದೇಶಕ ಮತ್ತು ಕಠಿಣ ಪರಿಶ್ರಮದ ಒಬ್ಬ ನಿಷ್ಠುರ ಸಾಧಕ. ಅವರು ಕನ್ನಡಕ್ಕೆ ಅನರ್ಘ್ಯ ಚಲನಚಿತ್ರ ರತ್ನಗಳನ್ನೇ ನೀಡಿ ಗೌರವ ತಂದವರು. ಅಸಂಖ್ಯ ಕಲಾವಿದರನ್ನು ರೂಪಿಸಿದ ರೂವಾರಿ ಎಂದು ಡಾ.ರಾಜ್ ಕುಮಾರ್ ಹೇಳಿದರು. ಡಿ.ಬಿ.ಬಸವೇಗೌಡ ಅವರು ಬರೆದಿರುವ ಬೆಳ್ಳಿತೆರೆಯ ಭಾವಶಿಲ್ಪಿ ಎಂಬ ಪುಸ್ತಕದಲ್ಲಿ ಈ ಬಗ್ಗೆ ಉಲ್ಲೇಖ ಇದೆ.
ಆದರೂ.. ಕೆಲ ಹಿತ ಶತ್ರುಗಳು ಕಾಲ ಕ್ರಮೇಣ ಡಾ,ರಾಜ್ ಕುಮಾರ್ ಮತ್ತು ಪುಟ್ಟಣ್ಣ ಕಣಗಾಲ್ ಅವರ ನಡುವೆ ಇದ್ದ ಆತ್ಮೀಯ ಸಂಬಂಧದಲ್ಲಿ ಹುಳಿ ಹಿಂಡುವಲ್ಲಿ ಯಶಸ್ವಿಯಾದರು. ಆ ನಂತರ ಡಾ.ವಿಷ್ಣುವರ್ಧನ್ ಮತ್ತು ಪುಟ್ಟಣ್ಣ ಕಣಗಾಲ್ ಅವರನ್ನೂ ಕೂಡ ದೂರ ಮಾಡಿ ಸಂಭ್ರಮಿಸಿದರು. ಇದಕ್ಕೆ ಕೈಗನ್ನಡಿ ಎನ್ನುವಂತೆ ನಾಗರಹಾವು ನಂತರ ಪುಟ್ಟಣ್ಣ ಮತ್ತು ಡಾ.ವಿಷ್ಣುವರ್ಧನ್ ಒಂದಾದ ಇನ್ನೊಂದು ಚಿತ್ರ ಬರಲೇ ಇಲ್ಲ. ಅಂತೆಯೇ 'ಸಾಕ್ಷಾತ್ಕಾರದ' ನಂತರ ರಾಜಕುಮಾರ್ ಮತ್ತು ಪುಟ್ಟಣ್ಣ ಜೋಡಿಯ ಮತ್ತೊಂದು ಚಿತ್ರವೂ ಬರಲಿಲ್ಲ.


Click it and Unblock the Notifications










