ರಿಷಬ್- ಪ್ರಗತಿ ಕಲ್ಯಾಣೋತ್ಸವ ಹೇಗಿತ್ತು? ರಕ್ಷಿತ್ ಸಂಭ್ರಮ ನೋಡಿದ್ರಾ? ಇಲ್ಲಿದೆ ವೀಡಿಯೋ
ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ 'ಕಾಂತಾರ- 1' ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತಿದೆ. 10ನೇ ದಿನವೂ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಈಗಾಗಲೇ 500 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿ ಸಿನಿಮಾ ಮುನ್ನುಗ್ಗುತ್ತಿದೆ. ಪತ್ನಿ ಪ್ರಗತಿ ಜೊತೆ ರಿಷಬ್ ಶೆಟ್ಟಿ ಸಿನಿಮಾ ಪ್ರಚಾರ ಮುಂದುವರೆಸಿದ್ದಾರೆ.
'ಕಾಂತಾರ' ಸರಣಿ ಚಿತ್ರಗಳಿಗೆ ಪ್ರಗತಿ ಶೆಟ್ಟಿ ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡಿದ್ದಾರೆ. ಹಾಗಾಗಿ ಪತಿ ಜೊತೆ ಸಿನಿಮಾ ಮೇಕಿಂಗ್ ಅನುಭವವನ್ನು ಸಂದರ್ಶನಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಪತಿ, ಪತ್ನಿ ಓಡಾಡುತ್ತಿರುವ ಫೋಟೊ, ವೀಡಿಯೋಗಳು ವೈರಲ್ ಆಗುತ್ತಿದೆ. ಇಬ್ಬರ ಲವ್‌ಸ್ಟೋರಿ, ಮದುವೆ ಬಗ್ಗೆ ಪರಭಾಷಾ ಮಾಧ್ಯಮಗಳಲ್ಲಿ ಚರ್ಚೆ ಆಗುತ್ತಿದೆ. ಇಬ್ಬರ ಮದುವೆ ಫೋಟೊ, ವೀಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

8 ವರ್ಷಗಳ ಹಿಂದೆ ರಿಷಬ್ ಶೆಟ್ಟಿ ಇನ್ನು ನಿರ್ದೇಶಕನಾಗಿ ಮಾತ್ರ ಗುರ್ತಿಸಿಕೊಂಡಿದ್ದರು. ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿದ್ದರೂ ಹೀರೊ ಆಗಿ ಬಡ್ತಿ ಪಡೆದಿರಲಿಲ್ಲ. ಪ್ರಗತಿ ಶೆಟ್ಟಿ ಅವರನ್ನು ಪ್ರೀತಿಸಿ ಪೋಷಕರ ಒಪ್ಪಿಗೆ ಪಡೆದು ಮದುವೆ ಆಗಿದ್ದರು. 2017, ಫೆಬ್ರವರಿ 9ರಂದು ಉಡುಪಿ ಜಿಲ್ಲೆಯ ಕುಂದಾಪುರದ ಸಹನಾ ಕನ್ವೆನ್ಷನ್ ಸೆಂಟರ್‌ನಲ್ಲಿ ಇಬ್ಬರ ಮದುವೆ ನಡೆದಿತ್ತು. ಕೆಲವೇ ಆಪ್ತರು ಈ ಕಲ್ಯಾಣೋತ್ಸವಕ್ಕೆ ಸಾಕ್ಷಿ ಆಗಿದ್ದರು.
ಆಪ್ತ ಸ್ನೇಹಿತ ರಕ್ಷಿತ್ ಶೆಟ್ಟಿ ಬಿಳಿ ಪಂಚೆ, ಬಿಳಿ ಅಂಗಿ, ಶಲ್ಯ ತೊಟ್ಟು ಮದುವೆ ಮನೆಯಲ್ಲಿ ಸಂಭ್ರಮದಿಂದ ಓಡಾಡಿದ್ದರು. ಇನ್ನು ರಿಷಬ್ ಶೆಟ್ಟಿ ಸ್ನೇಹಿತರಾದ ಶೀತಲ್ ಶೆಟ್ಟಿ, ಪ್ರಮೋದ್ ಶೆಟ್ಟಿ ಕೂಡ ಗಮನ ಸೆಳೆದಿದ್ದರು. ರಿಷಬ್ ಮೊದಲಿನಿಂದ ಸುದೀಪ್ ಅಭಿಮಾನಿ. ಕಿಚ್ಚ ಕೂಡ ಈ ಮದುವೆ ಸಮಾರಂಭದಲ್ಲಿ ಭಾಗಿಯಾಗಿ ನವ ಜೋಡಿಗೆ ಶುಭ ಕೋರಿದ್ದರು.
ಆಗ ಪ್ರಗತಿ ಶೆಟ್ಟಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದರು. ರಕ್ಷಿತ್ ಶೆಟ್ಟಿ ಅಭಿಮಾನಿ ಆಗಿದ್ದರು. ರಿಷಬ್ ಶೆಟ್ಟಿ ನಿರ್ದೇಶನದ 'ರಿಕ್ಕಿ' ಚಿತ್ರವನ್ನು ಸ್ನೇಹಿತೆಯರ ಜೊತೆ ಪ್ರಗತಿ ನೋಡಲು ಹೋಗಿದ್ದರು. ಆಗ ಚಿತ್ರತಂಡ ಕೂಡ ಚಿತ್ರಮಂದಿರಕ್ಕೆ ಭೇಟಿ ನೀಡಿತ್ತು. ಅಲ್ಲೇ ಮೊದಲಬಾರಿಗೆ ರಿಷಬ್- ಪ್ರಗತಿ ಭೇಟಿ ಆಗಿತ್ತು. ಎಲ್ಲರೂ ರಕ್ಷಿತ್ ಶೆಟ್ಟಿ ಜೊತೆ ಫೋಟೊ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದಿದ್ದರು. ಅಲ್ಲೇ ಪಕ್ಕದಲ್ಲಿ ಇದ್ದ ರಿಷಬ್ ಶೆಟ್ಟಿ ಚಿತ್ರದ ನಿರ್ದೇಶಕ ಎಂದು ಗೊತ್ತಾಗಿ ಅವರೊಟ್ಟಿಗೆ ಪ್ರಗತಿ ಫೋಟೊ ಹಿಡಿದುಕೊಂಡಿದ್ದರು.
ಬಳಿಕ ಫೇಸ್‌ಬುಕ್‌ನಲ್ಲಿ ಪ್ರಗತಿ ಶೆಟ್ಟಿ ಅವರನ್ನು ಹುಡುಕಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ರಿಷಬ್ ಶೆಟ್ಟಿ ಪರಿಚಯ, ಸ್ನೇಹ ಮುಂದುವರೆಸಿದ್ದರು. ಒಂದೇ ವರ್ಷದಲ್ಲಿ ಪ್ರಪೋಸ್ ಮಾಡಿ ಇಬ್ಬರು ಪೋಷಕರಿಗೆ ವಿಷಯ ತಿಳಿಸಿ ಒಪ್ಪಿಸಿ ಹಸೆಮಣೆ ಏರಿದ್ದರು. ದಂಪತಿಗೆ ಒಂದು ಗಂಡು, ಒಂದು ಹೆಣ್ಣು ಮಗುವಿದೆ. 5 ವರ್ಷಗಳ ಕಾಲ 'ಕಾಂತಾರ' ಸರಣಿ ಚಿತ್ರಗಳಿಗಾಗಿ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದಾರೆ.
ಸಾಫ್ಟ್‌ವೇರ್ ಕಂಪನಿ ಕೆಲಸ ಬಿಟ್ಟು ಪ್ರಗತಿ ಶೆಟ್ಟಿ ಕಾಸ್ಟ್ಯೂಮ್ ಡಿಸೈನರ್ ಆಗಿ ಗುರ್ತಿಸಿಕೊಂಡಿದ್ದಾರೆ. 'ಕಾಂತಾರ' ಚಿತ್ರಗಳಿಗೆ ಆಕೆ ಕಾಸ್ಟ್ಯೂಮ್ ಡಿಸೈನ್ ಮಾಡಿ ಸೈ ಎನಿಸಿಕೊಂಡಿದ್ದಾರೆ. ಅವರ ಕೆಲಸದ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಚಿತ್ರದ ಸ್ಕ್ರಿಪ್ಟ್ ರೈಟಿಂಗ್ ಕೆಲಸದಿಂದ ಎಲ್ಲವನ್ನು ಹತ್ತಿರದಿಂದ ನೋಡಿದ್ದಾರೆ. ಪತಿ ರಿಷಬ್ ಶೆಟ್ಟಿ ಕಲ್ಪನೆಯ ಚಿತ್ರಕ್ಕೆ ಪೋಷಾಕು ತೊಡಿಸಿದ್ದಾರೆ. ನಟ, ನಟಿ, ಪೋಷಕ ಪಾತ್ರಗಳು ಸೇರಿದಂತೆ ನೂರಾರು ಸಹ ಕಲಾವಿದರಿಗೆ ಕಾಸ್ಟ್ಯೂಮ್ ಡಿಸೈನ್ ಮಾಡಿ ಸೈ ಎನಿಸಿಕೊಂಡಿದ್ದಾರೆ.


Click it and Unblock the Notifications











