'ಅವನೇ ಶ್ರೀಮನ್ನಾರಾಯಣ' ಸಿನಿಮಾ ನಾನೇ ನಿರ್ದೇಶನ ಮಾಡಬೇಕಿತ್ತು; ರಿಷಬ್ ಶೆಟ್ಟಿ
ಎಣಿಸಿದಂತೆ ಜೀವನದಲ್ಲಿ ಏನು ನಡೆಯಲ್ಲ. ಯಾರು ಏನು ಮಾಡಬೇಕೋ ಅದೇ ಮಾಡುತ್ತಾರೆ, ಯಾರಿಗೆ ಏನು ಧಕ್ಕಬೇಕೋ ಅದೇ ಧಕ್ಕುತ್ತದೆ. ಚಿತ್ರರಂಗದಲ್ಲಿ ಅವಕಾಶಗಳು ಕೂಡ ಯಾರ ಕೈಯಿಂದ ಮತ್ಯಾರಿಗೋ ಕೈಗೋ ಹೋಗುತ್ತದೆ. ಗೆದ್ದ ಬಳಿಕ ಎಲ್ಲರೂ ಆ ಬಗ್ಗೆ ಮಾತನಾಡುತ್ತಾರೆ. ಸೋತಾಗ ಮಾತನಾಡುವುದು ಕಮ್ಮಿ. ಅವನೇ 'ಶ್ರೀಮನ್ನಾನಾರಾಯಣ' ಚಿತ್ರ ನಾನೇ ನಿರ್ದೇಶನ ಮಾಡಬೇಕಿತ್ತು ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.
ರಕ್ಷಿತ್ ಶೆಟ್ಟಿ ನಟಿಸಿದ್ದ 'ಶ್ರೀಮನ್ನಾನಾರಾಯಣ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ಆದರೆ ತಂಡದ ಪ್ರಯತ್ನಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಇವತ್ತಿಗೂ ಆ ಚಿತ್ರವನ್ನು ಕೆಲವರು ನೆನಪಿಸಿಕೊಳ್ಳುತ್ತಾರೆ. ಆ ಚಿತ್ರಕ್ಕಾಗಿ ರಕ್ಷಿತ್ ಎರಡ್ಮೂರು ವರ್ಷ ವ್ಯಯಿಸಿದ್ದರು. ಅವರ ಆಪ್ತ ಬಳಗದಲ್ಲಿ ಗುರ್ತಿಸಿಕೊಂಡಿದ್ದ ಸಚಿನ್ ರವಿ ಆಕ್ಷನ್ ಕಟ್ ಹೇಳಿದ್ದರು.

'ಶ್ರೀಮನ್ನಾನಾರಾಯಣ' ಚಿತ್ರದಲ್ಲಿ ಕೌಬಾಯ್ ಕೃಷ್ಣ ಆಗಿ ರಿಷಬ್ ಶೆಟ್ಟಿ ಕೂಡ ಗೆಸ್ಟ್ ಅಪಿಯರೆನ್ಸ್ ಮಾಡಿದ್ದರು. ಭಾರತೀಯ ಚಿತ್ರರಂಗದ ಮಟ್ಟಿಗೆ ಅದು ಬಹಳ ವಿಭಿನ್ನ ಸಿನಿಮಾ. ಪುಷ್ಕರ್ ಮಲ್ಲಿಕಾರ್ಜುನಯ್ಯ, ರಕ್ಷಿತ್ ಶೆಟ್ಟಿ ಹಾಗೂ ಹೆಚ್. ಕೆ ಪ್ರಕಾಶ್ ಈ ವೆಸ್ಟರ್ಸ್ ಫ್ಯಾಂಟಸಿ ಅಡ್ವೆಂಚರಸ್ ಕಾಮಿಡಿ ಚಿತ್ರವನ್ನು ನಿರ್ಮಾಣ ಮಾಡಿದ್ದರು. 'ಕಿರಿಕ್ ಪಾರ್ಟಿ' ಸಕ್ಸಸ್ ಸಂಭ್ರಮದಲ್ಲೇ ಈ ಸಿನಿಮಾ ಬಗ್ಗೆ ರಕ್ಷಿತ್ ಸುಳಿವು ಕೊಟ್ಟಿದ್ದರು. 2017ರಲ್ಲಿ ಶುರುವಾಗಿದ್ದ ಸಿನಿಮಾ ಎರಡು ವರ್ಷಗಳ ಬಳಿಕ ತೆರೆಗೆ ಬಂದಿತ್ತು.
ಬಹಳ ವಿಭಿನ್ನ ಜಾನರ್ ಸಿನಿಮಾ ಎಲ್ಲಾ ವರ್ಗದ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿತ್ತು. 'ಭಕ್ತಪ್ರಹ್ಲಾದ' ಚಿತ್ರದಲ್ಲಿ ಪ್ರಹ್ಲಾದನಾಗಿದ್ದ ಪುನೀತ್ ರಾಜ್‌ಕುಮಾರ್ ಹೇಳುವ 'ಅವನೇ ಶ್ರೀಮನ್ನಾರಾಯಣ' ಎನ್ನುವ ಡೈಲಾಗ್ ಪದಗಳನ್ನೇ ಸಿನಿಮಾ ಟೈಟಲ್ ಮಾಡಿದ್ದರು. ಲಾಜಿಕ್ ಪಕ್ಕಕ್ಕಿಟ್ಟು ಪ್ರೇಕ್ಷಕರನ್ನು ರಂಜಿಸುವ ಪ್ರಯತ್ನ ಮಾಡಲಾಗಿತ್ತು. 'ಆಪರೇಷನ್ ಸಕ್ಸಸ್, ಪೇಷಂಟ್ ಡೆಡ್' ಎನ್ನುವಂತೆ ಬಾಕ್ಸಾಫೀಸ್‌ನಲ್ಲಿ ಸಿನಿಮಾ ಸೋಲುಂಡಿತ್ತು.
ಪ್ರೈಂ ವಿಡಿಯೋದಲ್ಲಿ ಬಂದಿದ್ದ 'ದಿ ರಾಣಾ ದಗ್ಗುಬಾಟಿ ಶೋ' ಕಾರ್ಯಕ್ರಮದಲ್ಲಿ ರಿಷಬ್ ಶೆಟ್ಟಿ ಭಾಗಿ ಆಗಿದ್ದರು. ಕನ್ನಡದಲ್ಲೇ ಮಾತನಾಡಿದ್ದರು. ಈ ವೇಳೆ ತಮ್ಮ ಸಿನಿ ಜರ್ನಿ ಮೆಲುಕು ಹಾಕುತ್ತಾ 'ಅವನೇ ಶ್ರೀಮನ್ನಾರಾಯಣ' ಸಿನಿಮಾ ವಿಚಾರ ಪ್ರಸ್ತಾಪಿಸಿದ್ದಾರೆ. "ಮೊದಲ ಸಿನಿಮಾ 'ರಿಕ್ಕಿ' ನಕ್ಸಲ್ ಬ್ಯಾಕ್‌ಗ್ರೌಂಡ್ ಇತ್ತು. ಈ ಊರಿನಲ್ಲಿ ನಕ್ಸಲ್ ಚಟುವಟಿಕೆ ನಡೀತಿತ್ತು. ಅದನ್ನೇ ಸಿನಿಮಾ ಮಾಡಿದ್ದೆವು. ಬಳಿಕ 'ಕಿರಿಕ್ ಪಾರ್ಟಿ' ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಕಾಲೇಜ್ ಜರ್ನಿ, ಅದಕ್ಕೆ ನಮ್ಮ ತಂಡದ ಸದಸ್ಯರ ಕಾಲೇಜು ಅನುಭವಗಳನ್ನು ಸೇರಿಸಿ ಕಥೆ ಮಾಡಿದ್ದೆವು. ಅದು ನನ್ನ ಲಿಸ್ಟ್‌ನಲ್ಲಿ ಇರಲಿಲ್ಲ. ನಾನು 'ಅವನೇ ಶ್ರೀಮನ್ನಾನಾರಾಯಣ' ಸಿನಿಮಾ ನಿರ್ದೇಶನ ಮಾಡಬೇಕಿತ್ತು. ಹಾಗಾಗಿ ನನ್ನ ಶೈಲಿಯಲ್ಲಿ 2ನೇ ಸಿನಿಮಾ ಮಾಡಬೇಕು ಅಂತ ಮಾಡಿದ್ದು 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ' ಎಂದು ರಿಷಬ್ ವಿವರಿಸಿದ್ದಾರೆ.
ನಮ್ಮ ಊರಿನ ಕಥೆ, ನಮ್ಮ ಹಿನ್ನೆಲೆಯ ಕಥೆಗಳನ್ನು ನಾನು ಹೆಚ್ಚು ಸಿನಿಮಾ ಮಾಡಬೇಕು ಎಂದುಕೊಂಡಿದ್ದೆ. ಅದೇ ಪ್ರಯತ್ನ ನಡೀತಿದೆ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ. ಅವರ ಮಾತು ಕೆಲವರು 'ಅವನೇ ಶ್ರೀಮನ್ನಾನಾರಾಯಣ' ಸಿನಿಮಾ ನೀವೇ ನಿರ್ದೇಶನ ಮಾಡಿದ್ದರೆ ಚೆನ್ನಾಗಿರುತ್ತಿತ್ತು ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಸದ್ಯ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ 'ಕಾಂತಾರ- 1' ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತಿದೆ. ಈಗಾಗಲೇ 700 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿರುವ ಅಂದಾಜಿದೆ. ಶೀಘ್ರದಲ್ಲೇ ಸಿನಿಮಾ 1000 ಕೋಟಿ ರೂ. ಗಡಿ ದಾಟುವ ಲೆಕ್ಕಾಚಾರ ಶುರುವಾಗಿದೆ.


Click it and Unblock the Notifications











