ಹೆಸರು ಬದಲಿಸಿಕೊಂಡರೆ ಯಶಸ್ಸು ಸಿಗುತ್ತಾ? ಕನ್ನಡ ಈ ಸ್ಟಾರ್ ನಟರ ಮೊದಲ ಹೆಸರೇನು?
ಕಲರ್‌ಫುಲ್ ದುನಿಯಾದಲ್ಲಿ ಸ್ಟಾರ್‌ಗಳಾಗಬೇಕು ಅಂತ ಕನಸು ಕಾಣುವ ಮಂದಿ ಕಡಿಮೆಯೇನಿಲ್ಲ. ಹೀರೊ ಆಗಬೇಕು. ಹೀರೊಯಿನ್ ಆಗಬೇಕು ಅನ್ನೋ ಕನಸು ಹೊತ್ತು ಚಿತ್ರರಂಗಕ್ಕೆ ಬರುತ್ತಲೇ ಇರುತ್ತಾರೆ. ಇವರಿಗೆ ಕೆಲವರಿಗೆ ಯಶಸ್ಸು ಸಿಗುತ್ತೆ. ಮತ್ತೆ ಕೆಲವರಿಗೆ ಸಿಗೋದಿಲ್ಲ.
ಒಂದಿಷ್ಟು ವರ್ಷ ಅಲೆದಾಡಿ, ಪರದಾಡಿ ಒಂದು ಅವಕಾಶವನ್ನು ಗಿಟ್ಟಿಸಿಕೊಳ್ಳುತ್ತಾರೆ. ಸಿಕ್ಕ ಒಂದು ಚಾನ್ಸ್ ಅನ್ನ ಬಳಸಿಕೊಂಡು ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರಿ ಸೂಪರ್ ಸ್ಟಾರ್ ಪಟ್ಟಕ್ಕೆ ಹೋಗಿದ್ದಾರೆ. ಇಂತಹ ಜರ್ನಿಯಲ್ಲಿ ಅವರ ಮೂಲ ಹೆಸರು ಬದಲಾಗಿರುತ್ತೆ.
ಸಿನಿಮಾಗೆ ಎಂಟ್ರಿ ಕೊಡುವ ಸಲುವಾಗಿಯೇ ಹೆಸರನ್ನು ಬದಲಿಸಿಕೊಂಡ ಅದೆಷ್ಟೋ ನಟರು ಸೂಪರ್‌ಸ್ಟಾರ್‌ಗಳಾಗಿ ಮೆರೆದಿದ್ದಾರೆ. ಎಲ್ಲಾ ಚಿತ್ರರಂಗದಲ್ಲೂ ಹೆಸರಿನ ಮೇಲೆ ಇಂತಹದ್ದೊಂದು ಪ್ರಯೋಗ ನಡೆದಿದೆ. ಅದರಲ್ಲೂ ಸ್ಯಾಂಡಲ್‌ವುಡ್‌ನಲ್ಲಿ ಸಾಕಷ್ಟು ಸ್ಟಾರ್ ನಟರ ಮೂಲಕ ಬೇರೆನೇ ಇದೆ. ಹೀಗೆ ಹೆಸರು ಬದಲಿಸಿಕೊಂಡು ಚಿತ್ರರಂಗಕ್ಕೆ ಯಶಸ್ಸು ಗಿಟ್ಟಿಸಿಕೊಂಡು ನಟರ ಪೈಕಿ ಹೊಸ ಸೇರ್ಪಡೆ ರಿಷಬ್ ಶೆಟ್ಟಿ.

ಪ್ರಶಾಂತ್ ಶೆಟ್ಟಿ ರಿಷಬ್ ಆಗಿ ಎಂಟ್ರಿ
'ಕಾಂತಾರ' ಸಿನಿಮಾ ಮೂಲಕ ದೇಶಾದ್ಯಂತ ಹೆಸರು ಮಾಡಿರುವ ನಟ ರಿಷಬ್ ಶೆಟ್ಟಿ. ಹೆಸರು ಮೂಲ ಹೆಸರು ಪ್ರಶಾಂತ್ ಶೆಟ್ಟಿ ಅನ್ನೋದು ಈಗಾಗಲೇ ಗೊತ್ತಿದೆ. ಸಿನಿರಂಗದಲ್ಲಿ ಯಶಸ್ಸಿಗಾಗಿ ಪರದಾಡುತ್ತಿದ್ದಾಗ ತಮ್ಮ ಹೆಸರು ಬದಲಿಸಿಕೊಳ್ಳಲು ಮುಂದಾಗಿದ್ದರು. ಆಗ ಅವರ ತಂದೆ ಭಾಸ್ಕರ್ ಶೆಟ್ಟಿಯವರೇ ಆರ್ ಅಕ್ಷರದಿಂದ ಹೆಸರಿಟ್ಟುಕೊಳ್ಳುವಂತೆ ಸಲಹೆ ನೀಡಿದ್ದರು. ಅದರಂತೆ ಪ್ರಶಾಂತ್ ಶೆಟ್ಟಿಯಾಗಿದ್ದವರು ರಿಷಬ್ ಆಗಿ ಬದಲಾಗಿದ್ದರು. ಈಗ ಯಶಸ್ಸು ಅವರನ್ನೇ ಹಿಂಬಾಲಿಸಿಕೊಂಡು ಬಂದಿದೆ.

ದರ್ಶನ್ ಮೂಲ ಹೆಸರು ಬೇರೆ
ತೂಗುದೀಪ ಶ್ರೀನಿವಾಸ್ ತಮ್ಮ ಮಗನಿಗೆ ಇಟ್ಟಿದ್ದ ಹೆಸರು ಬೇರೆನೇ ಇತ್ತು. ಸಿನಿಮಾರಂಗಕ್ಕೆ ಎಂಟ್ರಿಕೊಡುವ ಮುನ್ನ ಹೆಸರನ್ನು ಬದಲಾಯಿಸಲಾಗಿತ್ತು. ಮೊದಲ ಸಿನಿಮಾ 'ಮೆಜೆಸ್ಟಿಕ್' ಶುರುವಾಗುವ ವೇಳೆ ಹೇಮಂತ್ ಕುಮಾರ್ ಆಗಿದ್ದವರು ದರ್ಶನ್ ಆಗಿ ಬದಲಾಗಿದ್ದರು. ದರ್ಶನ್ ಈಗ ಕನ್ನಡ ಚಿತ್ರರಂಗದ ಸೂಪರ್‌ಸ್ಟಾರ್‌ಗಳಲ್ಲಿ ಒಬ್ಬರು. ಇವರಿಗೆ ಇರೋ ಫ್ಯಾನ್ ಫಾಲೋವಿಂಗ್ ಅವರ ಯಶಸ್ಸನ್ನು ಹೇಳುತ್ತೆ.

ರಾಕಿ ಭಾಯ್ ಅಸಲಿ ಹೆಸರು ಯಶ್ ಅಲ್ಲ
ಹೆಸರಿನಲ್ಲಿಯೇ ಯಶಸ್ಸು ಇರುತ್ತೆ ಅನ್ನೋದು ಹಲವರ ವಾದ. ಅದಕ್ಕೆ ಈ ಸೂಪರ್‌ಸ್ಟಾರ್‌ಗಳೇ ಸಾಕ್ಷಿ. ಯಶ್ ಈಗ ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್. ಈಗ ಇವರನ್ನು ನವೀನ್ ಕುಮಾರ್ ಗೌಡ ಅಂತ ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಯಶ್ ಕೂಡ ಚಿತ್ರರಂಗಕ್ಕೆ ಬರುವ ಮುನ್ನವೇ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದರು. ಧಾರಾವಾಹಿ ಹಾಗೂ ಸಿನಿಮಾ ಎರಡರಲ್ಲೂ ಯಶ್ ಆಗಿ ಮಿಂಚಿರೋ ನಟನಿಗೆ ದೊಡ್ಡ ಯಶಸ್ಸು ಸಿಕ್ಕಿದೆ.

ಪುನೀತ್, ಅಪ್ಪು ಅಲ್ಲ ಮೂಲ ಹೆಸರು ಲೋಹಿತ್
ಪವರ್‌ಸ್ಟಾರ್ ಪುನೀತ್ ರಾಜ್‌ಕಮಾರ್ ಹೆಸರನ್ನುಕುಟುಂಬವೇ ಬದಲಾಯಿಸಿತ್ತು. ಅಸಲಿಗೆ ಅಪ್ಪುಗೆ ಬಾಲ್ಯದಲ್ಲಿ ಇಟ್ಟ ಹೆಸರು ಲೋಹಿತ್. ಈ ಹೆಸರನ್ನು ಬದಲಾಯಿಸಿದ್ದು ಯಾಕೆ ಅನ್ನೋದಕ್ಕೆ ಅವರು ಅಗಲಿದ ಬಳಿಕ ಒಂದೊಂದು ಕಥೆ ಹುಟ್ಟುಕೊಂಡಿದೆ. ಆದರೆ, ಲೋಹಿತ್‌ಗಿಂತ ಪುನೀತ್ ಹೆಸರೇ ಬಹಳಷ್ಟು ಚಿರಪರಿಚಿತವಾಗಿದೆ.

ದಿಗ್ಗಜರ ಹೆಸರು ಹಿಂದಿದೆ ಸಕ್ಸಸ್ ಸೂತ್ರ
ಸಿನಿಮಾಗಾಗಿ ಹೆಸರು ಬದಲಾಯಿಸಿಕೊಂಡವರ ಪಟ್ಟಿ ದೊಡ್ಡದಿದೆ. ವಿಶೇಷ ಅಂದ್ರೆ, ಬಹುತೇಕ ಮಂದಿಗೆ ಸೂಪರ್ ಸಕ್ಸಸ್ ಸಿಕ್ಕಿದೆ. ಮುತ್ತುರಾಜು ಆಗಿದ್ದವರು ಡಾ.ರಾಜ್‌ಕುಮಾರ್ ಆದರು, ಸಂಪತ್ ಕುಮಾರ್ ಆಗಿದ್ದವರು ಡಾ.ವಿಷ್ಣುವರ್ಧನ್ ಆದರು, ಅಮರ್‌ನಾಥ್ ಆಗಿದ್ದವರು ಡಾ. ಅಂಬರೀಶ್ ಆದರು, ಈಶ್ವರ್ ಗೌಡ ಈಗ ಜಗ್ಗೇಶ್, ನಾಗರಾಜು ಶಿವ ಪುಟ್ಟಸ್ವಾಮಿ ಈಗ ಶಿವರಾಜ್‌ಕುಮಾರ್, ಹೀಗೆ ಹೆಸರು ಬದಲಿಸಿಕೊಂಡವರ ದೊಡ್ಡ ಪಟ್ಟಿಯೇ ಇದೆ. ಇವರಲ್ಲಿ ಶೇ.90ರಷ್ಟು ಮಂದಿಗೆ ಯಶಸ್ಸು ಸಿಕ್ಕಿರೋದು ಮತ್ತೊಂದು ವಿಶೇಷ.


Click it and Unblock the Notifications











