"ಪುನೀತ್ ಅವ್ರದ್ದು ಒಳ್ಳೆ ಸಾವು, ಅವ್ರು ದೇವಲೋಕಕ್ಕೆ ಹೋಗಿರ್ತಾರೆ"; ರೂಪ ಅಯ್ಯರ್
ಮೂರು ವರ್ಷಗಳ ನಟ ಪುನೀತ್ ರಾಜ್‌ಕುಮಾರ್ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು. ಅಪ್ಪು ಅಗಲಿಕೆಯ ನೋವು ಅಭಿಮಾನಿಗಳು ಕಾಡುತ್ತಲೇ ಇದೆ. ತಮ್ಮ ಸಿನಿಮಾಗಳು ಹಾಗೂ ಆದರ್ಶಗಳಿಂದ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಹೃದಯ ಸಾಮ್ರಾಜ್ಯದಲ್ಲಿ ವಿರಾಜಮಾನರಾಗಿದ್ದಾರೆ.
ತಂದೆ ರಾಜ್‌ಕುಮಾರ್ ರೀತಿಯಲ್ಲೇ ತಮ್ಮ ಸರಳ ಸಜ್ಜನ ಸಹಾಯ ಗುಣಗಳಿಂದ ಅಪ್ಪು ಎಲ್ಲರಿಗೂ ಮಾದರಿ ಆಗಿದ್ದರು. ಅವರನ್ನು ಕಳೆದುಕೊಂಡ ಅಭಿಮಾನಿಗಳ ನೋವು ಕರಗಿಲ್ಲ. ನಗುವಿನ ಒಡೆಯ ಮತ್ತೆ ಹುಟ್ಟಿ ಬನ್ನಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಪುನೀತ್ ಕೊನೆಯುಸಿರೆಳೆದ ಬಳಿಕ ದೇವಲೋಕಕ್ಕೆ ಹೋಗಿದ್ದಾರೆ ಎಂದು ನಟಿ, ನಿರ್ದೇಶಕಿ ರೂಪಾ ಅಯ್ಯರ್ ಹೇಳಿದ್ದಾರೆ.

ಕನ್ನಡದಲ್ಲಿ ಕೆಲ ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿ, ನಟಿಸಿರುವ ರೂಪ ಅಯ್ಯರ್ ಆಧ್ಯಾತ್ಮದತ್ತ ಒಲವು ಬೆಳೆಸಿಕೊಂಡಿದ್ದಾರೆ. ಗರುಡಪುರಾಣವನ್ನು ನಂಬುತ್ತಾರೆ. ಅದರಲ್ಲಿ ದಾಖಲಾಗಿರುವ ಬಹುತೇಕ ಸಂಗತಿಗಳು ನಿಜ. ಒಬ್ಬರು ಜೀವ ಬಿಟ್ಟ ಬಳಿಕ ಅವರ ಆತ್ಮ ಸ್ವರ್ಗ ಅಥವಾ ನರಕಕ್ಕೆ ಹೋಗುತ್ತದೆ ಎಂದು ಅವರು ಹೇಳುತ್ತಾರೆ. ರಾಜೇಶ್ ಗೌಡ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ. ಈ ವೇಳೆ ಅಪ್ಪು ನಿಧನದ ಬಗ್ಗೆಯೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
"ಪುನೀತ್ ರಾಜ್‌ಕುಮಾರ್ ಅವರು ಜೀವಬಿಟ್ಟ ಬಳಿಕ ಅವರ ಆತ್ಮ ದೇವಲೋಕಕ್ಕೆ ಹೋಗಿರುತ್ತದೆ. ಪುನೀತ್ ಬಾಕಿಯಿದ್ದ ತಮ್ಮ ಕರ್ಮ ಮುಗಿಸಲು ಬಂದಿದ್ದರು. ಅದಕ್ಕೆ ಅಂತಹ ದೊಡ್ಡ ಕಲಾವಿದರ ಮನೆಯಲ್ಲಿ ಕಲಾವಿದನಾಗಿಯೇ ಜನ್ಮ ಪಡೆದಿದ್ದರು. ಅವರಿಗಿದ್ದ ವಿನಮ್ರತೆ ಹೇಗೆ ಬಂತು ಗೊತ್ತಿಲ್ಲ. ನನ್ನ ಪ್ರಕಾರ ಆಧ್ಯಾತ್ಮಿಕವಾಗಿ ಅವರದ್ದು ಒಳ್ಳೆ ಸಾವು" ಎಂದು ರೂಪಾ ಅಯ್ಯರ್ ಹೇಳಿದ್ದಾರೆ.
ಬಳಿಕ ಮಾತು ಮುಂದುವರೆಸಿರುವ ರೂಪಾ "ಇಂತಹ ಸಾವು ಬೇಕೆಂದು ಸಾಕಷ್ಟು ಜನ ವಯಸ್ಸಾದವರು ಬಯಸುತ್ತಾರೆ. ಯಾವುದೇ ಕಾಯಿಲೆ ಇಲ್ಲದೇ ಆಸ್ಪತ್ರೆ ಸೂಜಿ, ಮಾತ್ರೆ, ಸರ್ಜರಿ ಏನು ಇಲ್ಲದೇ ಜೀವಬಿಡಬೇಕು ಎಂದುಕೊಳ್ಳುತ್ತಾರೆ. ಆದರೆ ಪುನೀತ್ ಅವರು ತಮ್ಮ ಹೆಂಡತಿ ಅಶ್ವಿನಿ ಅವರು ತೊಡೆಯ ಮೇಲೆ ಮಲಗಿ ಪ್ರಾಣ ಬಿಟ್ಟರು ಎನ್ನುವುದು ಬಹಳ ಪುಣ್ಯದ ಸಾವು" ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

"ಪುನೀತ್ ರಾಜ್‌ಕುಮಾರ್ ತಮ್ಮ ಸಿನಿಮಾಗಳ ಮೂಲಕ, ತಮ್ಮ ಸಹಾಯ ಗುಣಗಳಿಂದ ಎಲ್ಲರನ್ನು ಇವತ್ತಿಗೂ ಪ್ರೇರೇಪಿಸುತ್ತಲೇ ಇದ್ದಾರೆ. ಚಿಕ್ಕಂದಿನಿಂದಲೇ ಒಳ್ಳೆ ಗಾಯಕರಾಗಿದ್ದರು. ಡ್ಯಾನ್ಸ್, ಆಕ್ಟಿಂಗ್ ಎಲ್ಲದರಲ್ಲೂ ಮುಂದಿದ್ದರು. ಎಲ್ಲರಿಗೂ ಸಂತೋಷ, ಉಲ್ಲಾಸ ಕೊಟ್ಟ ವ್ಯಕ್ತಿ. ಅವರಿಗೆ ಯಾರಿಗೂ ಶಾಪ ಹಾಕುವುದಕ್ಕೆ ಆಗೋಲ್ಲ, ಆದರೆ ಇಷ್ಟು ಜನರನ್ನು ಸಂತೋಷಪಡಿಸಿದ ಅಪ್ಪು ಅವರಿಗೆ ಬಹಳ ಆಶೀರ್ವಾದ ಸಿಕ್ಕಿತ್ತು. ತಮ್ಮ ಎಲ್ಲಾ ಜವಾಬ್ದಾರಿ ನಿಭಾಯಿಸಿ, ಒಳ್ಳೆ ಜೀವನ ನಡೆದಿ ಒಂದು ದಿನ ದಿಢೀರನೆ ಹೊರಟುಬಿಟ್ಟರು. ದೇವರು ನಿಜಕ್ಕೂ ಬಂದು ಅವರನ್ನು ಸ್ವಾಗತಿಸಿ ದೇವಲೋಕಕ್ಕೆ ಕರೆದುಕೊಂಡು ಹೋಗಿರುತ್ತಾರೆ. ಅಲ್ಲಿರುವುದಕ್ಕೆ ಅವರು ಅರ್ಹರು" ಎಂದು ರೂಪಾ ಅಯ್ಯರ್ ತಿಳಿಸಿದ್ದಾರೆ.
"ನನ್ನ ಪ್ರಕಾರ ಅಪ್ಪು ದೇವಲೋಕದಲ್ಲೇ ಇರಬೇಕು, ಮತ್ತೆ ಹುಟ್ಟಿ ಬಾ ಎಂದು ಹೇಳುವುದು ನನಗೆ ಬೇಡ ಎನಿಸುತ್ತದೆ. ಈ ಲೋಕದ ಕಷ್ಟ ಅನುಭವಿಸಲು ಅವ್ರು ಮತ್ತೆ ಯಾಕೆ ಬರಬೇಕು. ನನ್ನ ಪ್ರಕಾರ ಅವ್ರು ಇನ್ನು ಬದುಕಿರಬೇಕಿತ್ತು, ಏನಾದರೂ ಹೆಚ್ಚು ಕಮ್ಮಿ ಆಗಿ ಅವರನ್ನು ನೋಡಲು ನನಗೆ ಇಷ್ಟವಿಲ್ಲ. ಅವ್ರು ತಮ್ಮ ಸುಂದರ ದೇಹವನ್ನು ಅದೇ ರೀತಿ ತೆಗೆದುಕೊಂಡು ಹೋದರು. ಅಂತಹ ಸಾವನ್ನು ಬಹಳ ಜನ ಬಯಸುತ್ತಾರೆ. ಹಾಗಂತ ಅವರು ಸತ್ತಿದ್ದು ಸರಿ ಅಂತಲ್ಲ, ಅವರು ಉತ್ತಮ ರೀತಿ ಜೀವನ ಸಾಗಿಸಿ ಹೋಗಿದ್ದಾರೆ" ಎಂದು ರೂಪಾ ಅಯ್ಯರ್ ವಿವರಿಸಿದ್ದಾರೆ.


Click it and Unblock the Notifications











